ಮಂಗಳವಾರ, ಮೇ 11, 2021
24 °C

ಧರಂ, ರೇವಣ್ಣ ವಿರುದ್ಧ ತನಿಖೆಗೆ ಕೋರ್ಟ್ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂ ಹಗರಣ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಅವರ ಅತ್ತಿಗೆ ಕವಿತಾ ಬಾಲಕೃಷ್ಣೇಗೌಡ ಮತ್ತಿತರರ ವಿರುದ್ಧ ತುರುವೇಕೆರೆಯ ರವಿಕುಮಾರ್ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಮೇ 21ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.ಬನಶಂಕರಿ ಆರನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಉತ್ತರಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ 10.17 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂದು ರವಿಕುಮಾರ್ ಶನಿವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.`ಬಿಡಿಎ ವಶದಲ್ಲಿದ್ದ 10.17 ಎಕರೆ ಭೂಮಿಯಲ್ಲಿ 2.20 ಎಕರೆಯನ್ನು ಕವಿತಾ ಅವರು 50 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಆಗ ಸಚಿವರಾಗಿದ್ದ ರೇವಣ್ಣ ಅವರ ಶಿಫಾರಸಿನ ಆಧಾರದಲ್ಲಿ 10.17 ಎಕರೆಯನ್ನೂ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರು 2005ರ ಡಿಸೆಂಬರ್ 5ರಂದು ಆದೇಶ ಹೊರಡಿಸಿದ್ದರು. ನಂತರ 2.20 ಎಕರೆಯನ್ನು ನಾಲ್ಕು ಕೋಟಿ ರೂಪಾಯಿಗೆ ಕವಿತಾ ಅವರು ಶೋಭಾ ಡೆವಲಪರ್ಸ್‌ಗೆ ಮಾರಾಟ ಮಾಡಿದ್ದರು. ಉಳಿದ ಭೂಮಿಯನ್ನೂ ಮೂಲ ಮಾಲೀಕರು ಶೋಭಾ ಡೆವಲಪರ್ಸ್‌ಗೆ ಮಾರಾಟ ಮಾಡಿದ್ದರು. ಈ ಎಲ್ಲ ಪ್ರಕ್ರಿಯೆ ಕಾನೂನುಬಾಹಿರವಾಗಿ ನಡೆದಿದೆ~ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ದೂರನ್ನು ವಿಚಾರಣೆಗೆ ಅಂಗೀಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಮೇ 21ರ ಒಳಗೆ ವರದಿ ಸಲ್ಲಿಸುವಂತೆ ಸೋಮವಾರ ಆದೇಶ ಹೊರಡಿಸಿದರು. ಧರ್ಮಸಿಂಗ್, ರೇವಣ್ಣ, ಕವಿತಾ ಮತ್ತು ಇತರೆ 10 ಜನರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.