ಶನಿವಾರ, ಆಗಸ್ಟ್ 15, 2020
21 °C

ನಗರಸಭೆ ಅಧ್ಯಕ್ಷೆಯ ಚಪ್ಪಲಿ ಪುರಾಣ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರಸಭೆ ಅಧ್ಯಕ್ಷೆಯ ಚಪ್ಪಲಿ ಪುರಾಣ...

ಬೀದರ್: ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ತಕರಾರು ತೆಗೆದ ಆಡಳಿತ ಪಕ್ಷದ ಸದಸ್ಯರಿಗೆ            (ಜೆಡಿಎಸ್) ಅಧ್ಯಕ್ಷೆ ಶ್ರೀದೇವಿ ಕರಂಜಿ ಅವರು ಚಪ್ಪಲಿ ಕೈಗೆ ತೆಗೆದುಕೊಂಡು ತೋರಿಸಿದ ಘಟನೆ ಬೀದರ್ ನಗರಸಭೆಯ ವಿಶೇಷ ಸಭೆಯಲ್ಲಿ ಸೋಮವಾರ ನಡೆಯಿತು.ಬೆಳಿಗ್ಗೆ 11 ಗಂಟೆಗೆ ಸಭೆಯು ಆರಂಭವಾಯಿತು. ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ರಘುನಾಥರಾವ್ ಮಲ್ಕಾಪುರೆ ಅವರನ್ನು  ಸನ್ಮಾನಿಸಿದ ಬಳಿಕ ಅಧ್ಯಕ್ಷೆ ಶ್ರೀದೇವಿ ಕರಂಜಿ `ಈಗ ಬಜೆಟ್ ಮಂಡನೆಯಾಗಲಿದೆ~ ಎಂದು ಪ್ರಕಟಿಸುತ್ತಿದ್ದಂತೆ ಈ ಬೆಳವಣಿಗೆ ನಡೆಯಿತು.ಜೆಡಿಎಸ್ ಸದಸ್ಯರಾದ ಮಾರ್ಕಸ್ ಉಪಾಧ್ಯಾಯ, ಮನೋಹರ ದಂಡೆ ಮತ್ತು ಶಿವಕುಮಾರ ಭಾವಿಕಟ್ಟಿ ಬಜೆಟ್ ಮಂಡನೆಗೆ ತಕರಾರು ತೆಗೆದರು. `ನಮಗೆ ಬಜೆಟ್‌ನ ಪೂರ್ಣ ಮಾಹಿತಿ ಇಲ್ಲ. ತರಾತುರಿಯಲ್ಲಿ ಬಜೆಟ್ ಮಂಡಿಸಬೇಡಿ~ ಎಂದು ಎದ್ದು ನಿಂತರು.ಈಗಾಗಲೇ ನಿಗದಿ ಪಡಿಸಿರುವಂತೆ ಬಜೆಟ್ ಮಂಡನೆಯಾಗಲಿದೆ ಎಂದು ಅಧ್ಯಕ್ಷೆ ಪ್ರತಿಕ್ರಿಯಿಸಿದರು. ತಕರಾರು ತೆಗೆದಿದ್ದ ಜೆಡಿಎಸ್ ಸದಸ್ಯರು ಕೂಡಲೇ ಅಧ್ಯಕ್ಷರ ಪೀಠದ ಎದುರಿಗೆ ಧಾವಿಸಿ ಏರಿದ ದನಿಯಲ್ಲಿ ವಾಗ್ವಾದಕ್ಕೆ ನಿಂತರು.ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಕಾಲಿನಲ್ಲಿದ್ದ ಚಪ್ಪಲಿಯನ್ನು ಬಲಗೈನಲ್ಲಿ ತೆಗೆದುಕೊಂಡ ಶ್ರೀದೇವಿ ಕರಂಜಿ ಅವರು ಸದಸ್ಯರಿಗೆ ಚಪ್ಪಲಿ ತೋರಿಸುತ್ತಾ ವಾಗ್ವಾದಕ್ಕೆ ನಿಂತರು. ಇದು ಸದಸ್ಯರನ್ನು ಇನ್ನಷ್ಟು ಕೆರಳಿಸಿತು.ಅಧ್ಯಕ್ಷೆ ಚಪ್ಪಲಿಯನ್ನು ಕೈಗೆ ತೆಗೆದುಕೊಂಡ ಕ್ರಮವನ್ನು ಖಂಡಿಸಿದ ಸದಸ್ಯರು ಜಗಳಕ್ಕೆ ಮುಂದಾದರು. ಸಿಬ್ಬಂದಿ, ಇತರ ಸದಸ್ಯರು ಸಮಾಧಾನಪಡಿಸಲು ಮುನ್ನುಗ್ಗಿದಾಗ ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳದ ಸ್ಥಿತಿ ನಿರ್ಮಾಣವಾಯಿತು.ಬಜೆಟ್‌ಗೆ ಅನುಮೋದನೆ:  ಗದ್ದಲದ ನಡುವೆ ನಗರಸಭೆಯ ಬಜೆಟ್ ಅನುಮೋದಿಸಲಾಯಿತು. ಬಜೆಟ್ ಅನುಮೋದನೆ ಆಯಿತು ಎಂಬುದನ್ನು ದೃಢಪಡಿಸಿದ ಆಯುಕ್ತ ರಾಮದಾಸ್, `ಚರ್ಚೆ ಆಗಲಿಲ್ಲ. ಸದಸ್ಯರಿಗೆ ಒಂದು ವಾರದ ಹಿಂದೆಯೇ ಪ್ರತಿ ಕಳುಹಿಸಿರುತ್ತೇವೆ. ಹೀಗಾಗಿ, ಚರ್ಚೆ ಆಗಲಿಲ್ಲ. ಅನುಮೋದನೆ ಆಯಿತು~ ಎಂದರು. ಆದರೆ, ಬಜೆಟ್ ಮಂಡನೆಯಾಯಿತು ಎಂಬುದು ಹೆಚ್ಚಿನ ಸದಸ್ಯರ ಗಮನಕ್ಕೆ ಬಾರಲಿಲ್ಲ. ಇತ್ತ, ಅಧ್ಯಕ್ಷೆ ಚಪ್ಪಲಿ ತೆಗೆದುಕೊಂಡ ಕಾರಣದಿಂದ ಮೂಡಿದ ಗೊಂದಲದ ವಾತಾವರಣದಿಂದಾಗಿ ಸಭೆಯನ್ನು ಮುಂದುವರಿಸಲಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.