ಭಾನುವಾರ, ಮೇ 22, 2022
21 °C

ನತಾಶಾಳ ಕೈ ಹಿಡಿಯಲಿರುವ ಗೌತಮ್ ಗಂಭೀರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಆಕರ್ಷಕ 97 ರನ್ ಗಳಿಸಿ ಭಾರತ ಚಾಂಪಿಯನ್ ಆಗಲು ಕಾರಣರಾಗಿದ್ದ ಗೌತಮ್ ಗಂಭೀರ್ ಈಗ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಕ್ರೀಡಾಂಗಣದ ಹೊರಗೆ...!



ಕಾರಣ ಆರಂಭಿಕ ಬ್ಯಾಟ್ಸ್‌ಮನ್ ಗಂಭೀರ್ ಅಕ್ಟೋಬರ್ 28ರಂದು ದೆಹಲಿ ಹುಡುಗಿ ನತಾಶಾ ಜೈನ್ ಅವರ ಕೈ ಹಿಡಿಯಲಿದ್ದಾರೆ. ಈ ವಿವಾಹ ಸಮಾರಂಭ ಗುಡಗಾಂವ್‌ನಲ್ಲಿ ನಡೆಯಲಿದೆ.



`ವಿವಾಹ ಕಾರಣ ಗಂಭೀರ್ ಟ್ವೆಂಟಿ-20 ಪಂದ್ಯದಲ್ಲಿ ಆಡುತ್ತಿಲ್ಲ~ ಎಂದು ಬಿಸಿಸಿಐ ಕೂಡ ತಿಳಿಸಿದೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯ ಅ.29ರಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅವರ ಬದಲಿಗೆ ಕರ್ನಾಟಕದ ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ನೀಡಲಾಗಿದೆ.



ಈ ವಿವಾಹ ಸಮಾರಂಭಕ್ಕೆ ಭಾರತ ತಂಡದ ಕೆಲ ಆಟಗಾರರು ತೆರಳಲು ಸಾಧ್ಯವಾಗುತ್ತಿಲ್ಲ. ಕಾರಣ ಮರುದಿನವೇ ಕ್ರಿಕೆಟ್ ಪಂದ್ಯವಿದೆ. ಆದರೆ ಆಪ್ತ ಸ್ನೇಹಿತ ವೀರೇಂದ್ರ ಸೆಹ್ವಾಗ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.

29 ವರ್ಷ ವಯಸ್ಸಿನ ಗಂಭೀರ್ ಮಂಗಳವಾರ ನಡೆಯಲಿರುವ ಐದನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಡಲು ಸದ್ಯ ಕೋಲ್ಕತ್ತದಲ್ಲಿದ್ದಾರೆ. ಅವರು ಬುಧವಾರ ಬೆಳಿಗ್ಗೆ ನವದೆಹಲಿಗೆ ಹಿಂತಿರುಗಲಿದ್ದಾರೆ.



27ರ ಹರೆಯದ ನತಾಶಾ ದೆಹಲಿಯ ಪ್ರಸಿದ್ಧ ಉದ್ಯಮಿ ರವೀಂದ್ರ ಜೈನ್ ಅವರ ಪುತ್ರಿ. ಐದು ತಿಂಗಳ ಹಿಂದೆಯೇ ಇವರಿಬ್ಬರ ನಡುವೆ ಪರಿಚಯವಾಗಿತ್ತು ಎನ್ನಲಾಗಿದೆ. ಆದರೆ ಭಾರತ ತಂಡದ ಉಪನಾಯಕ ಕೂಡ ಆಗಿರುವ ಗೌತಿ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ.



ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 5-0ರಲ್ಲಿ ಗೆದ್ದು ಗಂಭೀರ್‌ಗೆ ಉಡುಗೊರೆ ನೀಡಲು ಸಹ ಆಟಗಾರರು ಈಗ ಎದುರು ನೋಡುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.