ಮಂಗಳವಾರ, ಮಾರ್ಚ್ 2, 2021
29 °C

ನಿಕೋಲ್ ನಿಲುವು

– ಇ.ಎಸ್‌. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ನಿಕೋಲ್ ನಿಲುವು

‘ಪಾತ್ರಗಳಿಗೆ ನಾನು ಹೊಂದಿಕೊಳ್ಳುವುದಕ್ಕಿಂತ ನನ್ನ ಸ್ವಭಾವ ಹಾಗೂ ಫಿಗರ್‌ಗೆ ಹೊಂದುವ ಪಾತ್ರಗಳಲ್ಲಿ ನಟಿಸಲು ನನ್ನದೇನೂ ತಕರಾರು ಇಲ್ಲ’ ಎಂದು ನಕ್ಕು ಮಾತಿಗಿಳಿದರು ‘ಮಿಸ್‌ ಅರ್ಥ್‌ 2010’ರ ವಿಜೇತೆ, ಕಿಂಗ್‌ಫಿಷರ್‌ ಕ್ಯಾಲೆಂಡರ್‌ನ ರೂಪದರ್ಶಿ, ನಟಿ ಹಾಗೂ ಬೆಂಗಳೂರಿನ ಬೆಡಗಿ ನಿಕೊಲ್‌ ಫರಿಯಾ.ಬೆಂಗಳೂರಿಗರು ನಿರ್ಮಿಸಿರುವ ‘ಸ್ಟೇಷನ್‌’ ಹಿಂದಿ ಚಿತ್ರದ ಟ್ರೈಲರ್‌ ಬಿಡುಗಡೆಗಾಗಿ ಮಲ್ಟಿಪ್ಲೆಕ್ಸ್‌ ಒಂದಕ್ಕೆ ಬಂದಿದ್ದ ಅವರು ‘ಮೆಟ್ರೊ’ದೊಂದಿಗೆ ಮಾತನಾಡಿದರು.‘ಬಾಲ್ಯದಿಂದಲೂ ನಟಿಯಾಗಬೇಕೆಂಬುದು ನನ್ನ ಆಸೆಯಾಗಿತ್ತು. ಶಾಲಾ ಕಾಲೇಜು ವೇದಿಕೆಯಲ್ಲಿ ನೃತ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದೆ. ಮುಂದೆ ರೂಪದರ್ಶಿಯಾಗಬೇಕೆಂದು ಮನಸ್ಸಾಯಿತು. ಅದಕ್ಕಾಗಿ ದೇಹವನ್ನು ದಂಡಿಸಿದೆ. ಅದರಲ್ಲೂ ಯಶಸ್ವಿಯಾದೆ. ಅದೇ ಅರ್ಹತೆ ನನ್ನನ್ನು ಈಗ ನನ್ನ ಇಷ್ಟದ ಕ್ಷೇತ್ರಕ್ಕೆ ತಂದು ನಿಲ್ಲಿಸಿದೆ’ ಎಂದು ತಮ್ಮ ಪೂರ್ವವೃತ್ತಾಂತವನ್ನು ನಿಕೋಲ್‌ ಬಿಚ್ಚಿಟ್ಟರು.ಬೆಂಗಳೂರು ಮೂಲದವರಾಗಿ ಹಿಂದಿ ಚಿತ್ರದಲ್ಲಿ ನಟಿಸುವುದು ಕಷ್ಟವೆನಿಸಿತೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ನಿಕೋಲ್‌, ‘ನಾನು ಓದುವಾಗ ಫ್ರೆಂಚ್‌ ಅನ್ನು ಭಾಷೆಯಾಗಿ ಕಲಿತೆ. ಹೀಗಾಗಿ ಹಿಂದಿಯ ಸರಾಗ ಉಚ್ಚಾರ ಕಷ್ಟವಾಗಿತ್ತು. ಆದರೂ ‘ಯಾರಿಯಾ’ ಚಿತ್ರದ ಅವಕಾಶಕ್ಕಾಗಿ ಆಡಿಷನ್‌ನಲ್ಲಿ ಪಾಲ್ಗೊಂಡೆ. ನನ್ನ ಸ್ನೇಹಿತೆಯರು ಆಗ ನನಗೆ ಸಹಕರಿಸಿದ್ದನ್ನು ನಾನು ನೆನೆಯಲೇಬೇಕು’ ಎಂದರು ಅವರು.ಮಾಡೆಲಿಂಗ್‌ ಹಾಗೂ ಸಿನಿಮಾ ನಡುವಿನ ವ್ಯತ್ಯಾಸವನ್ನು ನಿಕೋಲ್‌ ಕಂಡ ಪರಿಯನ್ನು ವಿವರಿಸಿದ ಅವರು, ‘ಆಯಾ ವೃತ್ತಿ ಅದರದ್ದೇ ಆದ ಸವಾಲುಗಳನ್ನು ಹೊಂದಿರುತ್ತದೆ. ಉತ್ತಮ ರೂಪದರ್ಶಿಯಾದವರಿಗೆ ನಟನೆ ಬರಬೇಕೆಂದೇನೂ ಇಲ್ಲ. ಆದರೆ ನಾನು ಅದೃಷ್ಟವಂತೆ. ನನಗೆ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿದೆ. ರ್‍್ಯಾಂಪ್‌ ಮೇಲೆ ನಡೆಯುವುದು ಆ ಕ್ಷಣಕ್ಕಷ್ಟೇ ಸೀಮಿತವಾಗಿತ್ತು.ಆದರೆ ಸಿನಿಮಾ ಮಾಡುವುದೆಂದರೆ ನಿಗದಿತ ಸಮಯದಲ್ಲಿ ಒಂದಿಷ್ಟನ್ನೂ ವ್ಯಯ ಮಾಡದಂತೆ ಚಿತ್ರೀಕರಿಸಬೇಕಾದ ಜವಾಬ್ದಾರಿ ತಂಡದ ಪ್ರತಿಯೊಬ್ಬರ ಮೇಲೂ ಇರುತ್ತದೆ. ಯೋಚಿಸಲು, ಆಲೋಚಿಸಲು, ಚರ್ಚಿಸಲು ಮುಕ್ತ ಅವಕಾಶ ಸಿಗುತ್ತದೆ. ನಮ್ಮನ್ನು ನಾವು ಹೆಚ್ಚು ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಅವಕಾಶವೂ ಲಭಿಸುತ್ತದೆ. ಹೀಗಾಗಿ ಸಿನಿಮಾ ಕ್ಷೇತ್ರದಲ್ಲೇ ಏನನ್ನಾದರೂ ಸಾಧಿಸಲು ಮನಸ್ಸು ಮಾಡಿದೆ’ ಎನ್ನುವುದು ಅವರ ನಿಲುವು.ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಮುಂಬೈನಲ್ಲಿ ನೆಲೆಸಿರುವ ನಿಕೋಲ್‌ಗೆ ಈ ನಗರವನ್ನು ಮರೆಯಲು ಸಾಧ್ಯವಿಲ್ಲವಂತೆ. ‘ಈ ನಗರದಲ್ಲೊಂದು ಕಾಂತಿ ಇದೆ. ಅದರ ಪ್ರಭೆ ಪ್ರತಿಯೊಬ್ಬರ ಮೇಲೂ ಬೀಳುತ್ತದೆ. ಹೀಗಾಗಿ ಬೆಂಗಳೂರಿಗರಲ್ಲಿ ಸಹಜವಾಗಿ ಮನೋಸ್ಥೈರ್ಯ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಮನೋಭಾವ ಹೆಚ್ಚಿರುತ್ತದೆ. ಅದಕ್ಕೆ ನಾನು ಹಾಗೂ ನನ್ನಂತೆ ಅನೇಕ ನಟ ನಟಿಯರೇ ಉದಾಹರಣೆ.ಹೀಗಾಗಿ ತಾತ್ಕಾಲಿಕವಾಗಿ ಮುಂಬೈನಲ್ಲಿ ನೆಲೆಸಿದ್ದರೂ ಬೆಂಗಳೂರಿನೊಂದಿಗೆ ನನ್ನ ಸಂಪರ್ಕ ಕಡಿದುಕೊಂಡಿಲ್ಲ. ಪೋಷಕರು ಇಲ್ಲೇ ಇದ್ದಾರೆ. ಹದಿನೈದು ದಿನಗಳಿಗೊಮ್ಮೆ ಅಥವಾ ನೆನಪಾದಾಗಲೆಲ್ಲಾ ಬೆಂಗಳೂರಿಗೆ ಹಾರಿ ಬರುತ್ತೇನೆ’ ಎಂದು ನಗರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.ಬೆಂಗಳೂರಿಗೆ ಆಗಾಗ ಬರುವ ಅವರು ಹೊರಗೆ ಸುತ್ತಾಡುವುದೇ ಕಡಿಮೆಯಂತೆ. ಪೋಷಕರು, ಸ್ನೇಹಿತರ ಜತೆಗೂಡಿ ಒಂದಷ್ಟು ಮಾತನಾಡಿ, ಜತೆಗೂಡಿ ಊಟ ಮಾಡುತ್ತಾರಂತೆ. ಹೀಗಾಗಿ ಬೆಂಗಳೂರಿನ ರೆಸ್ಟೋರೆಂಟ್‌ ಅಥವಾ ಆಹಾರ ಕೇಂದ್ರಗಳ ಕುರಿತು ಹೆಚ್ಚು ತಿಳಿದಿಲ್ಲ ಎಂದರು. ತಮ್ಮ 15ನೇ ವಯಸ್ಸಿಗೆ ಮಾಡೆಲಿಂಗ್‌ ಕ್ಷೇತ್ರದ ನಂಟು ಬೆಳೆಸಿಕೊಂಡ ನಿಕೋಲ್‌ಗೆ ಈವರೆಗೂ ನೆರವಾಗಿದ್ದು ಅವರ ಫಿಟ್‌ ಆಗಿರುವ ದೇಹವಂತೆ. ಜಿಮ್‌, ಯೋಗ ಹಾಗೂ ಉತ್ತಮ ಆಹಾರ ಸೇವನೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರಂತೆ. ಹಿಂದಿ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸಿರುವ ಅವರು ಬೇರೆ ಭಾಷೆಗಳಲ್ಲಿ ನಟಿಸುವ ಮುನ್ನ ಬಾಲಿವುಡ್‌ನಲ್ಲಿ ಉತ್ತಮ ಅವಕಾಶ ಗಿಟ್ಟಿಸಿಕೊಳ್ಳುವುದರತ್ತ ಗಮನ ಕೇಂದ್ರೀಕರಿಸಿದ್ದಾರಂತೆ.ತಮ್ಮ ಯೋಜನೆ, ಸದ್ಯದ ಸಿನಿಮಾಗಳ ಕುರಿತು ಮಾತನಾಡುವವರೆಗೂ ಕಾದು ನಿಂತಿದ್ದ ತಮ್ಮ ತಂದೆಯ ತೋಳುಗಳಲ್ಲಿ ತೋಳು ಬೆಸೆದು ನಿಕೋಲ್‌ ಅಲ್ಲಿಂದ ಹೊರಟರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.