ಶುಕ್ರವಾರ, ಜೂನ್ 25, 2021
29 °C

ನೀರಿಗೆ ತತ್ವಾರ; ಬೇಸಿಗೆ ಆರಂಭದಲ್ಲೇ ಹಾಹಾಕಾರ...

ಸಿದ್ದಯ್ಯ ಹಿರೇಮಠ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಬರಗಾಲದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಬೇಸಿಗೆ ಈಗಷ್ಟೇ ಆರಂಭವಾಗಿದೆ. ಆದರೂ, ಜಿಲ್ಲೆಯ ಅನೇಕ ಕಡೆ ಈಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿದೆ.ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ, ಆಂಧ್ರದ ಗಡಿಯಲ್ಲಿ, ಹಗರಿ (ವೇದಾವತಿ) ನದಿಯ ದಂಡೆಯಲ್ಲಿರುವ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ. ಊಳೂರು, ಉತ್ತನೂರು, ಮಾಟಸುಗೂರು, ಕೂರಿಗನೂರು ಮತ್ತಿತರ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯೇ ಬಗೆಹರಿದಿಲ್ಲ.ಗ್ರಾಮದಿಂದ ಒಂದು ಕಿಲೋಮೀಟರ್ ದೂರವಿರುವ ಹಗರಿ ನದಿಗೆ ತೆರಳಿ, ಒರತೆ ತೋಡಿ ನೀರು ತುಂಬಿಕೊಂಡು ಬಂದು ಕುಡಿಯುವ ಅನಿವಾರ್ಯತೆ ಗ್ರಾಮಸ್ಥರೆಲ್ಲರಿಗೂ ಇದೆ.

ಗ್ರಾಮ ಪಂಚಾಯಿತಿಯವರು ಅಲ್ಲಲ್ಲಿ ಕೊಳವೆ ಬಾವಿ ಕೊರೆಯಿಸಿ ಪಂಪ್‌ಸೆಟ್ ಮೂಲಕ ನೀರು ಪೂರೈಸುತ್ತಿದ್ದರೂ ಅದರಲ್ಲಿ ಫ್ಲೋರೈಡ್ ಅಂಶ ಇರುವುದರಿಂದ ಜನರು ಕಷ್ಟವಾದರೂ ಚಿಂತೆಯಿಲ್ಲ ಒರತೆಯ ನೀರನ್ನೇ ತಂದು ಕುಡಿಯುತ್ತಿದ್ದಾರೆ.ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರು ಬೆಳಗಾಗುತ್ತಿದ್ದಂತೆಯೇ  ನದಿಯತ್ತ ತೆರಳಿ, ಬಟ್ಟಲಿಂದ ಕೊಡ ತುಂಬಿಸಿಕೊಂಡು ಮನೆಯತ್ತ ತೆರಳುತ್ತಾರೆ. ಬಿಸಿಲು ನೆತ್ತಿಗೇರುವ ಮೊದಲೇ ಕುಡಿಯಲು ನೀರು ಹೊತ್ತೊಯ್ಯಬೇಕು. ಇಲ್ಲದಿದ್ದರೆ ಬಿಸಿಲು ಕಡಿಮೆಯಾದ ನಂತರ ಸಂಜೆ ಒರತೆಯತ್ತ ಸಾಗಬೇಕು.ಕೆರೆಯೇ ಇಲ್ಲ: ಉತ್ತನೂರು ಗ್ರಾಮದ ಜನ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಕೊನೆಗಾಣಿಸಬೇಕು ಎಂಬ ಮನವಿಯ ಮೇರೆಗೆ ಜಿಲ್ಲಾ ಪಂಚಾಯಿತಿಯು `ಊರಲ್ಲಿ ಒಂದು ಕೆರೆ ಕಟ್ಟಿಸಲಾಗುವುದು~ ಎಂದು ತಿಳಿಸಿ ಹತ್ತಾರು ವರ್ಷಗಳೇ ಕಳೆದಿವೆ.ಕೆರೆ ಕಟ್ಟಿಸಲು ಅಗತ್ಯವಿರುವ 12 ಎಕರೆ ಜಮೀನನ್ನು ಖರೀದಿಸಬೇಕೆಂದರೆ, ದರ ಅತ್ಯಂತ ಕಡಿಮೆ ಎಂಬ ಕಾರಣದಿಂದಾಗಿ ರೈತರು ಜಮೀನು ನೀಡಲು ಒಪ್ಪುತ್ತಿಲ್ಲ. ಎಕರೆಗೆ ರೂ 50000, 60000 ನೀಡುವುದಾಗಿ ಹೇಳುತ್ತಿರುವುದರಿಂದ ರೈತರು ಅಷ್ಟು ಕಡಿಮೆ ದರಕ್ಕೆ ಜಮೀನು ಕೊಡುವುದು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಬದಲಿಗೆ ರೂ 2 ಲಕ್ಷ ನೀಡುವಂತೆ ಕೋರುತ್ತಿದ್ದಾರೆ. ಆದರೆ ಸರ್ಕಾರ ಅಷ್ಟು ಹಣ ನೀಡಿ ಖರೀದಿಸಲು ಮನಸು ಮಾಡದ್ದರಿಂದ ಗ್ರಾಮಸ್ಥರ ನೀರಿನ ಬವಣೆ ಮುಂದುವರಿದೇ ಇದೆ.ಸದ್ಯ ಹಗರಿ ನದಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ಕಾಲುವೆಯ ನೀರನ್ನೇ ಪಂಪ್‌ಸೆಟ್ ಅಳವಡಿಸಿ ಗ್ರಾಮಕ್ಕೆ ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ನೀರೆಲ್ಲ ಕಡಿಮೆ ಯಾಗುವುದರಿಂದ ನೀರಿಗೆ ಮತ್ತಷ್ಟು ಹಾಹಾಕಾರ ಶುರುವಾಗುತ್ತದೆ. ಅಲ್ಲದೆ, ಈಗ ಪೂರೈಸುತ್ತಿರುವ ನೀರು ಶುದ್ಧವಿಲ್ಲದ ಕಾರಣ ಯಾರೂ ಕುಡಿಯಲು ಮನಸ್ಸು ಮಾಡುವುದಿಲ್ಲ.ಅದರ ಬದಲಿಗೆ, ನದಿಯಲ್ಲಿ ಒರತೆ ತೋಡಿ ನೀರು ಹೊತ್ತು ತರುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ  ಬಿ.ಹನುಮಯ್ಯ ಹಾಗೂ ವೈ.ವೆಂಕಟೇಶ ತಿಳಿಸುತ್ತಾರೆ.ಕೆರೆಗಾಗಿ ಜಮೀನು ನೀಡುವಂತೆ ರೈತರ ಮನ ಒಲಿಸುವ ಕೆಲಸವನ್ನೂ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಡುತ್ತಿಲ್ಲ. ಇದರಿಂದಾಗಿ ಕೆಲವರು ಒರತೆ ನೀರನ್ನೂ, ಇನ್ನು ಕೆಲವರು ಫ್ಲೋರೈಡ್ ಅಂಶವಿರುವ ಕೊಳವೆ ಬಾವಿ ನೀರನ್ನೂ ಕುಡಿಯುತ್ತಿದ್ದಾರೆ. ಸಿರುಗುಪ್ಪ ಮತ್ತು ಬಳ್ಳಾರಿಗಳಿಗೆ ದೂರವಿರುವ ಈ ಗ್ರಾಮವನ್ನು ನಿರ್ಲಕ್ಷಿಸಲಾಗಿದೆ ಎಂದೂ ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.