ಮಂಗಳವಾರ, ಮಾರ್ಚ್ 9, 2021
30 °C
ನಾದ ಲೋಕ

ನುಡಿಸಿದಂತೆ ನಡೆದ ರಾಗಧಾರಿ

ಶ್ರೀದೇವಿ ಕಳಸದ Updated:

ಅಕ್ಷರ ಗಾತ್ರ : | |

ನುಡಿಸಿದಂತೆ ನಡೆದ ರಾಗಧಾರಿ

ಅದೊಂದು ಮೆದುವಾದ ಅಖಾಡ; ಮಣ್ಣಿರಲಿಲ್ಲ ಹದನೆಲವಿತ್ತು. ಎದುರಾಳಿತನವಿರಲಿಲ್ಲ ಪಟ್ಟುಗಳಿದ್ದವು. ಹೂಂಕಾರವಿರಲಿಲ್ಲ ಝೇಂಕಾರವಿತ್ತು. ಹುರಿದುಂಬಿಸುವವರಿದ್ದರು ದುಂಬಿಗಳು ಸ್ಪರ್ಧೆಗಿಳಿದಿರಲಿಲ್ಲ. ಪರಾಕ್ರಮ ತೋರಲಿಲ್ಲ ‘ಸುಶಿರ’ ಪ್ರಿಯರು ಜಯವಂತರಾದರು. ಹೀಗೆ ಈ ನಾದದ ಗುದಮುರಿಗೆಯೊಳಗೆ ಮಳಲಿ ತೇಲಿದ್ದೇ ‘ಕೃಷ್ಣಧ್ವನಿ’.       ಬಾನ್ಸುರಿ ಕಲಾವಿದ ಪಂ.ವೆಂಕಟೇಶ ಗೋಡ್ಖಿಂಡಿ ಸ್ಮರಣಾರ್ಥ ಚೌಡಯ್ಯ ಸ್ಮಾರಕ ಭವನದಲ್ಲಿ ‘ಸಂಜೋಗ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾನ್ಸುರಿ ಮೇರು ಕಲಾವಿದ ಪಂಡಿತ್‌ ಹರಿಪ್ರಸಾದ್ ಚೌರಾಸಿಯಾ ಅವರಿಗೆ ‘ಕೃಷ್ಣಧ್ವನಿ’ ಪ್ರಶಸ್ತಿ ನೀಡಲಾಯಿತು. ಕವಿ ಕೆ. ಎಸ್. ನಿಸಾರ್ ಅಹಮ್ಮದ್ ಅವರು ಸನ್ಮಾನಿಸಿ ಅಭಿನಂದಿಸಿದರು.ಪಲ್ಲಟವೇ ಪಲ್ಲವಿ

ಇನ್ನೆರಡು ವರ್ಷಗಳಿಗೆ ಎಂಬತ್ತು ತುಂಬುವ ಚೌರಾಸಿಯಾ ಎನ್ನುವ ಜೀವವೀಗ ಕೂತಲ್ಲೇ ಕೂತು ಆಟವಾಡಿಕೊಳ್ಳುವ ಎಳೆಮಗುವಿನಂತೆ. ಆದರೆ ಅವರೊಳಗಿನ ಉತ್ಸಾಹ, ಕ್ರಿಯಾಶೀಲತೆ, ರಸಿಕತನ ಮಾತ್ರ ತ್ರಿಲೋಕಸಂಚಾರವನ್ನೂ ಮೀರಿದ್ದು. ಪಾಪ, ನಡುಗುವ ಕೈಗಳು ಎಷ್ಟೊತ್ತು ನುಡಿಸ್ಯಾವು ಎಂದುಕೊಂಡರೆ ಅದು ನಮ್ಮ ಅಲ್ಪತನ. ಆದರೆ ಅವರು ಬರೋಬ್ಬರಿ ಒಂದೂವರೆಗಂಟೆ ಕಾಲ ಸುಮಾರು ಒಂದೂವರೆ ಸಾವಿರ ಜನರನ್ನು ಹಿಡಿದಿಟ್ಟರೆಂದರೆ...!ರಾತ್ರಿಯ ನೀರವತೆಗೆ ಶಾಂತ, ಗಂಭೀರಗಮನೆಯಾಗಿ ಭಕ್ತಿಯಿಂದ ಶರಣಾಗುವವಳು ‘ಭೂಪಾಲಿ’. ಆದರೆ ಆ ಸಂಪ್ರದಾಯ ಪಲ್ಲಟಿಸಿ, ಅವಳನ್ನು ಚಂಚಲಚಿತ್ತಳನ್ನಾಗಿಸಿ ನೆರೆದವರೆದೆಯೊಳಗೆ ಚಿಣ್ಣಾಟವಾಡಿಸಿಬಿಟ್ಟರು ಚೌರಾಸಿಯಾ. ಪರಂಪರೆಯ ಪರಿಧಿಯೊಳಗಾಡುವುದಕ್ಕಿಂತ ವಿಶಾಲಹೃದಯದೊಳಗಾಡುವ ಮಾರ್ಮಿಕ ಪರಿಯೇ ಅವರ ವೈಶಿಷ್ಟ್ಯ.

ಕಾಲುಗಂಟೆ ‘ಜೋಡ್’ ನುಡಿಸಿದಾಗ, ನಾಲ್ಕು ಮಾತ್ರೆಗಳ ಲಯವಿನ್ಯಾಸದೊಂದಿಗೆ, ಕೇವಲ ಡಗ್ಗಾಸಾಥ್ ನೀಡಿದವರು ಖ್ಯಾತ ತಬಲಾವಾದಕ ಪಂ. ವಿಜಯ್ ಘಾಟೆ. ತಂತ್ರಕಾರಿ ಶೈಲಿಯಲ್ಲಿ ಜೋಡ್ ಆರಂಭವಾಗುತ್ತಿದ್ದಂತೆ ತಬಲಾ ಕೂಡ ಜತೆಯಾಯಿತು.ಝಾಲಾದೊಳಗೆ ಇವರಿಬ್ಬರೂ ‘ಭೂಪಾಲಿ’ಯನ್ನು ಆಡಿಸುವ ಹೊತ್ತಿಗೆ ಶ್ರೋತೃವೃಂದ ಚೆಂದನೆಯ ಹುಚ್ಚೊಂದನ್ನು ಹೊದ್ದುಕೊಂಡಿತ್ತು. ರೂಪಕ ಮತ್ತು ಧೃತ್ ತೀನ್ ತಾಲ ನುಡಿಸುತ್ತ, ಕಾಯ್ದಾ, ಚಕ್ರಧಾರ ಸುತ್ತಿ ಸಮ್ಮಿಗೆ ಬರುವ ಜಾಗದಲ್ಲಿ ವಿಜಯ್ ಅವರು ಒಮ್ಮೆಲೆ ‘ಕೈ’ ಎತ್ತಿ ಖಾಲೀತನ ಸೃಷ್ಟಿಸುವ ರೀತಿ ಮೊದಮೊದಲು ‘ಅಜಬ್’ ಎನ್ನಿಸಿದರೂ ಪುನರಾವರ್ತನೆ ಪುಳಕ ಮರೆಯಿಸಿತು.

ಬಾನ್ಸುರಿಯ ಸವಾಲ್‌ಗೆ ಜವಾಬ್ ಕೊಡುವಾಗ, ಚರ್ಮವಾದ್ಯದ ಮಿತಿಯನ್ನು ಅವರು  ಆಂಗಿಕವಾಗಿ ಅಭಿವ್ಯಕ್ತಿಸಿ ರಸಪೋಷಣೆ ಸಂಪೂರ್ಣಗೊಳಿಸಿದ್ದು ಸೌಜನ್ಯವೂ ಸೃಜನಶೀಲತೆಯೂ ಮತ್ತು ಶ್ರೋತೃಗಳನ್ನು ಹಿಡಿದಿಡುವ ವಿಶಿಷ್ಟ ತಂತ್ರವೂ ಆಗಿತ್ತು.ಜವಾಬ್‌ಗೆ ಪ್ರತಿ ಸವಾಲ್ ಎಸೆಯುತ್ತ ದಿಗಂತಮುಖಿಯಾಗುತ್ತಿದ್ದ ಚೌರಾಸಿಯಾ ಅವರ ಆ ಭಾವಭಂಗಿ, ಆಟಿಕೆಯೊಂದನ್ನು ತನ್ನದಾಗಿಸಿಕೊಂಡು ಕ್ಷಣಕಾಲ ಬೀಗುವ ಮುಗ್ಧಮಗುವಿನ ಮುಖ ನೆನಪಿಸುವಂತಿತ್ತು. ಹೀಗೆ ಭೂಪಾಲಿ ತುಂಟತನದ ಹಾದಿಯಲ್ಲೇ ಭಕ್ತಿಯ ಪರಾಕಾಷ್ಠೆಗೆ ತಲುಪಿ ಶಾಂತಳಾದಾಗ ಶ್ರೋತೃವೃಂದ ಎದ್ದುನಿಂತಿದ್ದು ಚಪ್ಪಾಳೆಮಳೆಯೊಂದಿಗೆ.

ಎರಡು ನಿಮಿಷಗಳಾದರೂ ಆ ಕರತಾಡನ ನಿಲ್ಲದಾದಾಗ ಚೌರಾಸಿಯಾ, ಮುಂದೇನು? ಎಂದರು. ‘ಹಂಸಧ್ವನಿ’ ಎಂದು ಕೆಲವರು, ‘ಪಹಾಡಿ’ ಎಂದು ಹಲವರು. ಹೃದಯದತಕ್ಕಡಿ ತೂಗಿದ್ದು ಕೆಹರವಾದಲ್ಲಿ ಪಹಾಡಿಯನ್ನೇ. ಶಿಷ್ಯರಾದ ಕೆ.ಎಸ್‌. ರಾಜೇಶ್ ಮತ್ತು ವಿವೇಕ್ ಸೋನಾರ್‌ ಕಛೇರಿಯುದ್ದಕ್ಕೂ ಬಾನ್ಸುರಿಯಲ್ಲಿ ಜತೆಯಾದರು. ಚಂಚಲತೆಯ ರಹಸ್ಯ

ಅಂದಹಾಗೆ ಭೂಪಾಲಿಯ ಚಂಚಲ ನಡೆಗೆ ಕಾರಣವಾಗಿದ್ದು ಚೌರಾಸಿಯಾ ಅವರ ತಾರಕಸ್ಥಾಯಿ ಕೊಳಲು. ಮಾಧುರ್ಯದ ಹಿನ್ನೆಲೆಯಲ್ಲಿ ಸುಗಮ ಸಂಗೀತಕ್ಕೆ ಮಾತ್ರ ಈ ಕೊಳಲನ್ನು ಬಳಸುತ್ತಾರೆ. ಆದರೆ ವಯಸ್ಸಾದ ಕಾರಣ ಅವರು ಸುಮಾರು ಎರಡು ವರ್ಷಗಳಿಂದ ತಾರಕಸ್ಥಾಯಿ ಕೊಳಲಿನಲ್ಲಿ ಕೇವಲ ಅರ್ಧಗಂಟೆಗೆ ತಮ್ಮ ಕಛೇರಿ ಸಂಪನ್ನಗೊಳಿಸುತ್ತ ಬಂದಿದ್ದಾರೆ. ಆದರೆ ಜನರ ಅಭಿಮಾನದ ಫಲವಾಗಿ ಅವರ ಲಹರಿ ಒಂದೂವರೆ ಗಂಟೆಯಷ್ಟು ವಿಸ್ತೃತಗೊಂಡಿದ್ದು ಅಚ್ಚರಿಯೇ! ರಾಮಕಲ್ಯಾಣವೂ ಅಮೀರ್‌ ಖಾನರೂ

ಚೌರಾಸಿಯಾ ಅವರು ತಂತ್ರಕಾರಿ ಶೈಲಿಯಲ್ಲಿ ಮನಸೂರೆಗೊಂಡರೆ, ಪಂ ಪ್ರವೀಣ ಗೋಡ್ಖಿಂಡಿ ಅವರು ಗಾಯಕಿ ಮತ್ತು ತಂತ್ರಕಾರಿ ಶೈಲಿಗಳನ್ನು ಮಿಳಿತಗೊಳಿಸಿ ಗಮನ ಸೆಳೆದರು. ಹೌದೆನ್ನುವಂತೆ ಜೊತೆಯಾಗಿದ್ದು ಇವರ ಮಗ ಷಡ್ಜ. ಅಪ್ಪ ಮಗ ಧಾರೆ ಎರೆದದ್ದು ಅಪರೂಪದ ರಾಗ ‘ರಾಮಕಲ್ಯಾಣ್’.

ಕರ್ನಾಟಕ ಸಂಗೀತದ ‘ರಾಮಪ್ರಿಯಾ’ ರಾಗವೇ ಹಿಂದೂಸ್ತಾನಿಯ ರಾಮಕಲ್ಯಾಣ್. ಪೂರ್ವಾಂಗದಲ್ಲಿ ‘ಪೂರಿಯಾ ಕಲ್ಯಾಣ’ವೆನ್ನಿಸಿದರೆ, ಉತ್ತರಾಂಗದಲ್ಲಿ ‘ಹೇಮಾವತಿ’ ಮತ್ತು ಕಾಫಿ ಥಾಟದ ರಾಗಗಳ ಛಾಯೆಯನ್ನು ಇದು ಹರವುತ್ತದೆ.

ಶೃಂಗಾರ, ಭಕ್ತಿ ಮತ್ತು ಕರುಣಾ ರಸಗಳನ್ನು ಹೊಂದಿದ ಮಿಶ್ರಭಾವರಾಗವಾದ್ದರಿಂದ, ಯಾವ ಭಾವದಲ್ಲಿ ಪ್ರಸ್ತುತಪಡಿಸಬೇಕು ಎನ್ನುವ ಗೊಂದಲ ಕಲಾವಿದರಿಗಾಗುವುದು ಸಹಜ. ಅದಕ್ಕೇ ಘರಾಣೆದಾರರ ಆಯ್ಕೆ ಪಟ್ಟಿಯಿಂದ ಇದು ದೂರಸರಿದಿದೆ. ಆದರೆ ಉಸ್ತಾದ್ ಅಮೀರ್ ಖಾನ್ ಸಾಹೇಬರ ಧ್ವನಿಮುದ್ರಿಕೆಯಲ್ಲಿ ಈ ರಾಗ ಕೇಳಬಹುದಾಗಿದೆ.ಆಲಾಪ, ಲಯಕಾರಿಯನ್ನು ಗಾಯಕಿ ಪದ್ಧತಿಯಲ್ಲಿ ನುಡಿಸಿದ ಪ್ರವೀಣ ಮತ್ತು ಷಡ್ಜ, ಗಮಕ ಮತ್ತು ಮೀಂಡ್‌ಗಳನ್ನು ಭಿನ್ನ ಸ್ಥಾಯಿಯಲ್ಲಿ ಏಕಕಾಲಕ್ಕೆ ನುಡಿಸಿದ್ದಾಗಲೀ, ಝಾಲಾ ಸಂಯೋಜನೆಯಾಗಲೀ ತಂತಿ ಮೇಲಿನ ನಡಿಗೆಯಂತೆ ಇತ್ತು. ಆದರೆ ತಂತ್ರಕಾರಿ ಮತ್ತು ಗಾಯಕಿ ಶೈಲಿಯನ್ನು ಎಲ್ಲಿ ಹೇಗೆ ಅಳವಡಿಸಿಕೊಂಡು ನುಡಿಸಿದರೆ ಸೂಕ್ತ ಎನ್ನುವ ಪ್ರಜ್ಞೆಯಿಂದಲಯ ಮತ್ತು ಸ್ವರದ ಸುಖವನ್ನು ಅತೀ ಕಡಿಮೆ ಸಮಯದಲ್ಲಿ ಒಮ್ಮೆಲೇ ನೀಡುವಲ್ಲಿ ಇವರಿಬ್ಬರೂ ಯಶಸ್ವಿಯಾದರು.ವಿಲಂಬಿತಕ್ಕೆ ಮತ್ ತಾಳ ಮತ್ತು ಧೃತ್‌ಗೆ ತೀನ್ ತಾಲ್ ಪ್ರಸ್ತುತಿಗೆ ಕಿರಣ್ ಗೋಡ್ಖಿಂಡಿ ತಬಲಾದಲ್ಲಿ ಜತೆಯಾದರು.ಕಾರ್ಯಕ್ರಮದ ಆರಂಭದಲ್ಲಿ ಪ್ರವೀಣ ಗೋಡ್ಖಿಂಡಿ ಅವರ ಮೂವತ್ತೊಂದು ಜನ ಶಿಷ್ಯರು ಒಟ್ಟಾಗಿ ನುಡಿಸಿದ ಭೂಪರಾಗವೇ ಚೌರಾಸಿಯಾ ಅವರ ‘ಭೂಪಾಲಿ’ಗೆ ಸ್ಫೂರ್ತಿ.

ಸಭಾಂಗಣದ ವೇದಿಕೆ, ಕುರ್ಚಿ, ನೆಲ, ಕಿಟಕಿ, ಗೋಡೆ ಬಾಗಿಲುಗಳಿಗೆಲ್ಲ ಆತು ಜೋತು ನಿಂತು ಕುಂತ ಶ್ರೋತೃವೃಂದ, ಚೌರಾಸಿಯಾರ ಮುರಳಿವೈಭವಕ್ಕೆ ಎದ್ದುನಿಂತು ಚಪ್ಪಾಳೆ ತಟ್ಟಿದಾಗ,‘ಅರೆ ಅಭಿ ಶುರು ಹುವಾ ಹೈ, ಆಪ್ ಲೋಗ್ ಜಾರಹೆಂಹೆ ಕ್ಯೂಂ? ಠೀಕ್ ಹೈ, ಅಗಲೆ ಸಾಲ್ ಮಿಲೇಂಗೆ’ ಚೌರಾಸಿಯಾ ನವಿರಾಗಿ ಹೇಳಿದಾಗ ವಾರಾಂತ್ಯವೊಂದು ಮೃದುಭಾವದೊಂದಿಗೆ ಸಾರ್ಥಕ್ಯ ಪಡೆದಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.