ಭಾನುವಾರ, ಮೇ 22, 2022
21 °C

ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಪರಿಸರ ಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ನಾಗರಿಕರು ಆದ್ಯತೆ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಟಿ. ಚಂದ್ರಶೇಖರ್ ಸಲಹೆ ನೀಡಿದರು.ನಗರದಲ್ಲಿ ಸೋಮವಾರ ಮೈಸೂರಿನ ಗಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಸ್ನೇಹ ಮಹಿಳಾ ಸಂಘ ಮತ್ತು ಮೇದಕೇತೇಶ್ವರ ಯುವಕರ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇದರಬೀದಿಯಲ್ಲಿ ನಿರ್ಮಿಸಿರುವ ಸಮೂಹ ಶೌಚಾಲಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಅಶಕ್ತರಿಗೆ ಸಹಾಯ ಮಾಡುವ ಮಂದಿಯಲ್ಲಿ ದೇವರನ್ನು ಕಾಣಬಹುದು. ಇಂದಿಗೂ ಸಮಾಜದಲ್ಲಿ ಜಾತಿ ಪದ್ಧತಿ ಬೇರುಬಿಟ್ಟಿದೆ. ಇಂಥ ಅನಿಷ್ಟ ಪದ್ಧತಿಗಳು ನಿರ್ಮೂಲನೆಯಾಗಬೇಕಿದೆ. ಪ್ರತಿ ಕುಟುಂಬವೂ ಶೌಚಾಲಯ ನಿರ್ಮಿಸಿ ಕೊಳ್ಳಬೇಕು’ ಎಂದು ಹೇಳಿದರು. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಲವು ಸವಲತ್ತು ಸಿಗುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಚರಂಡಿ ಸ್ವಚ್ಛತೆ ಮಾಡಬೇಕು. ನೈರ್ಮಲ್ಯ ಕಾಪಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದರು.ಗಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಸಹಾಯಕ ನಿರ್ದೇಶಕಿ ಸರಸ್ವತಿ ಮಾತನಾಡಿ, ಆರ್‌ಎಲ್‌ಎಚ್‌ಪಿ ಸಂಸ್ಥೆಯು 56 ಕೊಳಚೆ ಪ್ರದೇಶ ಹಾಗೂ 27 ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಜನರ ಆರೋಗ್ಯ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ, ಬೀದಿಮಕ್ಕಳ ಪುನರ್ವಸತಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.ಮೇದರಬೀದಿಯಲ್ಲಿ ಮಹಿಳಾ ಸಂಘ ರಚಿಸಲಾಗಿದೆ. ಹಲವು ತರಬೇತಿ ನೀಡಿ ಬದುಕುವ ಸಾಮರ್ಥ್ಯ ಕಲಿಸಲಾಗಿದೆ. ಪ್ರಸ್ತುತ ಇಲ್ಲಿನವರ ಉಪಯೋಗಕ್ಕೆ 32 ಶೌಚಾಲಯ ನಿರ್ಮಿಸಿ ಕೊಡಲಾಗಿದೆ ಎಂದು ಹೇಳಿದರು. ನಗರಸಭೆ ಪೌರಾಯುಕ್ತ ಬಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರೀನ್ ಹೋಟೆಲ್‌ನ ವ್ಯವಸ್ಥಾಪಕ ನಂದೀಶ್, ನಗರಸಭೆಯ ಪರಿಸರ ಎಂಜಿನಿಯರ್ ಕೆ.ಎಸ್. ಲಕ್ಷ್ಮೀಶ್ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.