ಬುಧವಾರ, ಜನವರಿ 29, 2020
28 °C

ಪಾದ ಪ್ರೀತಿ

–ರಶ್ಮಿ ಎಸ್‌. Updated:

ಅಕ್ಷರ ಗಾತ್ರ : | |

‘ಯೇ ಪೈರ್‌ ಜಮೀಂ ಪರ್‌ ಮತ್‌ ರಖಿಯೆ’ ಪಾಕೀಜಾ ಚಿತ್ರದಲ್ಲಿ ರಾಜ್ ಕುಮಾರ್ ಮೀನಾಕುಮಾರಿಗೆ ಪ್ರೀತಿ ಮತ್ತು ಕಾಳಜಿಯಿಂದ ಕೇಳಿಕೊಳ್ಳುತ್ತಾನೆ. ತಾಜ್‌ ಮಹಲ್‌ ಚಿತ್ರದಲ್ಲಿ ಮೊಹ್ಮದ್‌ ರಫಿ ಹಾಗೂ ಲತಾ ಮಂಗೇಷ್ಕರ್‌ ಹಾಡಿರುವ ಹಾಡೊಂದಿದೆ ‘ಪಾಂವ್‌ ಛೂಲೇನೆ ದೊ ಫೂಲೊಂಕೊ ಇನಾಯತ್‌ ಹೋಗಿ...’... ಸುಂದರ ಪಾದಗಳ ಒಡತಿಯರಿಗೆ ಹೇಳುವ ಈ ಹಾಡುಗಳೆಲ್ಲ ಹಳತಾದರೂ ಭಾವ ನವನವೀನ.ಸೌಂದರ್ಯ ಅಡಗಿರುವುದೇ ಪಾದಗಳಲ್ಲಿ ಎಂದು ಹೇಳುತ್ತಾರೆ. ಅಂದದ ಪಾದ ಎನ್ನುವುದಕ್ಕಿಂತಲೂ ಸ್ವಚ್ಛ ಹಾಗೂ ಸುಂದರ ಪಾದಗಳಿಂದಲೇ ಒಬ್ಬ ವ್ಯಕ್ತಿ ತನ್ನ ಬಗ್ಗೆ ಹೊಂದಿರುವ ಅಸ್ಥೆಯನ್ನು ಅಳೆದುಬಿಡಬಹುದು. ಪಾದಗಳನ್ನು ನೋಡಿಯೇ ಅವರು ಪರಿಶ್ರಮಿಗಳೇ, ಸೋಮಾರಿಗಳೇ ಎನ್ನುವುದನ್ನೂ ತಿಳಿಯಬಹುದು. ದೇಹದ ಇಡೀ ಭಾರವನ್ನು ಹೊರುವ ಈ ಪುಟ್ಟ ಪಾದಗಳ ಬಗ್ಗೆ ಅಕ್ಕರೆ ಇರದಿದ್ದರೆ ಹೇಗೆ?ಚಳಿಗಾಲದಲ್ಲಂತೂ ಪಾದಗಳ ಆರೋಗ್ಯದೆಡೆಗೆ ಆರೈಕೆ ಮಾಡದೇ ಇದ್ದರೆ ಒಡೆದ ಹಿಮ್ಮಡಿ, ಕಾಲು ನೋವು ಮುಂತಾದ ಎಲ್ಲವೂ ಕಾಣಿಸಿಕೊಳ್ಳುತ್ತವೆ. ಮಧುಮೇಹಿಗಳಂತೂ ಸದಾ ಕಾಲವೂ ಪಾದಗಳ ಸಂರಕ್ಷಣೆ ಮಾಡಿಕೊಳ್ಳಲೇಬೇಕು. ಅದು ಸೌಂದರ್ಯಕ್ಕೆ ಮಾತ್ರವಲ್ಲ, ಸ್ವಾಸ್ಥ್ಯಕ್ಕಾಗಿಯೂ. ದೇಹದ ಭಾರವನ್ನು ಹೊರುವುದರಿಂದ ಪಾದಗಳ ಮೇಲೆ ಸಹಜವಾಗಿಯೇ ಒತ್ತಡ ಹೆಚ್ಚಾಗಿರುತ್ತದೆ. ಪಾದಗಳ ಆರೈಕೆಗೆ ಮಸಾಜ್‌ ಜೊತೆಗೆ ಪೆಡಿಕ್ಯೂರ್ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.ಎಚ್ಚರಗಳು

ಪಾದಗಳ ಆರೈಕೆಗೆ ಸೂಕ್ತ ತರಬೇತಿ ಹೊಂದಿದವರ ಬಳಿಯೇ ಹೋಗಬೇಕು.ಚರ್ಮ ಹದವಾಗಿದ್ದಾಗ ಒಣ ಚರ್ಮ ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆಯುವ ಭರದಲ್ಲಿ ಕೆಲವೊಮ್ಮೆ ಚರ್ಮದ ಮೇಲ್ಪದರಕ್ಕೂ ಘಾಸಿಯಾಗುವ ಸಾಧ್ಯತೆ ಇರುತ್ತದೆ.ಸಲೂನ್‌ಗಳಲ್ಲಿ ಮಾಡಿಸಿಕೊಳ್ಳುವುದಾದರೆ ಅವರು ಬಳಸುವ ನೀರು, ಕಾಲಿಡುವ ಟಬ್, ಸ್ಕ್ರಬ್ಬರ್‌ ಮುಂತಾದವುಗಳು ಸ್ವಚ್ಛವಾಗಿವೆಯೇ ಎಂಬುದನ್ನು ಪರಿಶೀಲಿಸುವುದು ಒಳಿತು. ಪಾದಗಳಿಗೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಈ ಎಚ್ಚರ ತೆಗೆದುಕೊಳ್ಳುವುದು ಅಗತ್ಯ.ಹೊರ ಹೋಗಲು ಇಷ್ಟವಿಲ್ಲದಿದ್ದಲ್ಲಿ ಮನೆಯಲ್ಲಿಯೇ ಉಗುರು ಬಿಸಿ ನೀರಿಗೆ ಹರಳುಪ್ಪು ಸೇರಿಸಿ, ಕಾಲು ನೆನೆಸಿಟ್ಟುಕೊಂಡರೂ ಆದೀತು. ನಂತರ ಪಾದಗಳನ್ನು ತಿದ್ದಿ, ಮಾಯಿಶ್ಚರೈಸರ್‌ ಕ್ರೀಮ್‌ನಿಂದ ಮಸಾಜ್‌ ಮಾಡಿಕೊಂಡರೂ ಆಗುತ್ತದೆ.ನಮ್ಮ ಕಾಲಿಗೆ ನಾವೇ ಆರೈಕೆ ಮಾಡಿಕೊಳ್ಳುವುದು ಸರಳ ಹಾಗೂ ಸುಲಭ ಉಪಾಯ. ಆದರೆ ತರಬೇತಿ ಪಡೆದ ಕೈಗಳಿಂದ ಕಾಲುಗಳಿಗೆ ಅಕ್ಕರಾಸ್ಥೆಯಿಂದ ಮಸಾಜ್‌ ಮಾಡಿಸಿಕೊಳ್ಳುವ ಅನುಭವವೇ ಬೇರೆ.ತಜ್ಞರು ಏನು ಹೇಳ್ತಾರೆ?

ನಗರದ ಸಿನೋರಾ ಸಲೂನ್‌ ಸ್ಪಾದ ಸಂಸ್ಥಾಪಕಿ ಶೋಭಾ ಪ್ರಕಾರ ಪಾದಗಳ ಆರೈಕೆಗೆ ಸಾಕಷ್ಟು ಆಯ್ಕೆಗಳು ಲಭ್ಯ ಇವೆ. ಆದರೆ ಯಾವುದೂ ಮೇಲಿಂದ ಮೇಲೆ ಮಾಡಿಸಿಕೊಳ್ಳಬಾರದು. ಇಲ್ಲದಿದ್ದರೆ ಚರ್ಮದ ಮೇಲ್ಪದರ ಹಾನಿಗೊಳ್ಳುವ ಸಾಧ್ಯತೆ ಇರುತ್ತದೆ. ಪಾದಗಳು ತೀರ ಹದಗೆಟ್ಟಿದ್ದರೆ ತಿಂಗಳಿಗೆ ಒಮ್ಮೆಯಾದರೂ ಅಗತ್ಯವಿರುವ ಪೆಡಿಕ್ಯುರ್‌ ಮಾಡಿಸಿಕೊಳ್ಳುವುದು ಒಳಿತು. ನಂತರ ನಿಯಮಿತವಾಗಿ ಪಾದಗಳ ಶುದ್ಧತೆಗೆ ಒತ್ತು ನೀಡಿದರೂ ಸಾಕಾಗುತ್ತದೆ.ಒಮ್ಮೆ ಪೆಡಿಕ್ಯುರ್‌ ಮಾಡಿಸಿಕೊಂಡ ನಂತರ ಚರ್ಮದ ಕೋಮಲ ಅಂಶ ಕಾಪಾಡಿಕೊಳ್ಳುವಂತೆ ಗಮನವಹಿಸಬೇಕು. ಆಲಿವ್‌ ಆಯಿಲ್‌ ಬಿಸಿ ಮಾಡಿಕೊಂಡು ಪಾದಗಳಿಗೆ ಲೇಪಿಸಿ, ಸ್ನಾನ ಮಾಡಬಹುದು. ಮಾಯಿಶ್ಚರೈಸರ್‌ ಲೇಪನದಿಂದಲೂ ಪಾದ ಒಣಗುವುದನ್ನು ತಡೆಯಬಹುದು ಎನ್ನುತ್ತಾರೆ ಅವರು.ಮಧುಮೇಹ ಉಳ್ಳವರಂತೂ ಈ ಬಗ್ಗೆ ಹೆಚ್ಚಿನ ಗಮನ ತೆಗೆದುಕೊಳ್ಳಬೇಕು. ತರಬೇತಿ ಪಡೆದವರಲ್ಲಿಯೇ ಪಾದಗಳನ್ನು ಸ್ವಚ್ಛಗೊಳಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಮನೆಯ ಆರೈಕೆಯೇ ಉತ್ತಮ ಪರಿಹಾರವಾಗಬಲ್ಲದು.ಪೆಡಿಕ್ಯುರ್‌ ಮಾಡಿಸುವ ಸಮಯದಲ್ಲಿ ಉಗುರಿನ ಸುತ್ತಲಿರುವ ಚರ್ಮವನ್ನು ಹದಗೊಳಿಸಿ ಹಿಂದಕ್ಕೆ ಒತ್ತಬೇಕು. ಇಲ್ಲದಿದ್ದಲ್ಲಿ ಗಾಯವಾಗುತ್ತದೆ.ಹೆಚ್ಚಿನ ಮಾಹಿತಿಗೆ: 98804 26096

 

ಪ್ರತಿಕ್ರಿಯಿಸಿ (+)