ಶುಕ್ರವಾರ, ಮೇ 14, 2021
35 °C

ಪುಟ್ಟ ಚೆಂಡಿನ ಆಟಕ್ಕೆ ಬೇಕು ಗಟ್ಟಿ ನೆಲೆ

-ಗಿರೀಶ ದೊಡ್ಡಮನಿ . Updated:

ಅಕ್ಷರ ಗಾತ್ರ : | |

ಪುಟ್ಟ ಚೆಂಡಿನ ಆಟಕ್ಕೆ ಬೇಕು ಗಟ್ಟಿ ನೆಲೆ

`ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತದವರೆಗೆ ತಲುಪಿದ ಏಕೈಕ ಭಾರತೀಯ ಆಟಗಾರ ಕೆ. ನಾಗರಾಜ್ ಅವರೊಬ್ಬರೇ. 70ರ ದಶಕದಲ್ಲಿ ಮೈಸೂರಿನ ರೈಲ್ವೆ ವಿಭಾಗದ ಅಧಿಕಾರಿಯಾಗಿದ್ದ ನಾಗರಾಜ್ ಅವರ ಸಾಧನೆ ಕನ್ನಡಿಗರೆಲ್ಲರೂ ಹೆಮ್ಮೆಪಡುವ ಸಂಗತಿ. ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಟೂರ್ನಿಯಲ್ಲಿ ಅಚಂತಾ ಶರತ್ ಕಮಲ್ ಪದಕ ಗೆದ್ದಿದ್ದರೂ ನಾಗರಾಜ್ ಸಾಧನೆಗೆ ಅದು ಸಮವಲ್ಲ'-ಮೈಸೂರು ಟೇಬಲ್ ಟೆನಿಸ್ ಟ್ರೈನಿಂಗ್ ಸೆಂಟರ್ (ಎಂಟಿಟಿಸಿ) ಆಶ್ರಯದಲ್ಲಿ ನಡೆದ `ಎನ್. ರಾಮು ಸ್ಮಾರಕ ರಾಜ್ಯ ರ‍್ಯಾಂಕಿಂಗ್   ಟೇಬಲ್ ಟೆನಿಸ್ ಟೂರ್ನಿಯ ಸಂಘಟನಾ ಕಾರ್ಯದರ್ಶಿ  ಕೆ.ವಿ.ಕೆ.  ಮೂರ್ತಿ ಆ ದಿನಗಳನ್ನು ನೆನೆದು ಭಾವುಕರಾದರು.60 ಮತ್ತು 70ರ  ದಶಕದಲ್ಲಿ  ಭಾರತದ  ಟೇಬಲ್ ಟೆನಿಸ್ ಆಟದಲ್ಲಿ ದಕ್ಷಿಣ ಭಾರತದ  ಆಟಗಾರರದ್ದೇ ಪ್ರಾಬಲ್ಯ.  ಅದರಲ್ಲೂ  ಕನ್ನಡಿಗರ  ಛಾಪು ಗಮನಾರ್ಹವಾಗಿತ್ತು. ಆದರೆ 1980ರ ನಂತರ ಪಶ್ಚಿಮ ಬಂಗಾಳದಲ್ಲಿ ನಡೆದ `ಟಿಟಿ ಕ್ರಾಂತಿ'ಯ ಮುಂದೆ ದಕ್ಷಿಣ ಭಾರತ ಮಂಕಾಯಿತು. ಅದರಲ್ಲೂ ವಿಶ್ವಮಟ್ಟದ ಆಟಗಾರರನ್ನು ನಾಡಿಗೆ ನೀಡಿದ ರಾಜ್ಯದಲ್ಲಿ ಈಗ ಸಬ್ ಜೂನಿಯರ್, ಜೂನಿಯರ್, ಯೂತ್ ವಿಭಾಗಗಳಲ್ಲಿ ಪ್ರತಿಭೆಗಳು ತುಂಬಿ ತುಳುಕುತ್ತವೆ.

ಆದರೆ ಸೀನಿಯರ್ ವಿಭಾಗದತ್ತ ಕಣ್ಣು ಹಾಯಿಸಿದರೆ ಹೊರರಾಜ್ಯದ  ಹುಡುಗರನ್ನು ಕರೆಸಿ, ರಾಜ್ಯಕ್ಕಾಗಿ  ಆಡಿಸುವ ಪರಿಸ್ಥಿತಿ ಇದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುತ್ತಿರುವವರ ಸಂಖ್ಯೆಯೂ ವಿರಳವಾಗುತ್ತಿದೆ. ರಾಷ್ಟ್ರೀಯ ತಂಡದಲ್ಲೂ ಕರ್ನಾಟಕದ ಆಟಗಾರರ ಹೆಸರು ಕಾಣುವುದೂ ಅಪರೂಪ. ಅಂತರರಾಷ್ಟ್ರೀಯಮಟ್ಟದ ಸಾಧನೆಯಂತೂ ಬಲು ದೂರ.ರಾಜ್ಯದಲ್ಲಿ ಟಿಟಿ ಆಟದ ತರಬೇತಿ ಸೌಲಭ್ಯಗಳು. ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ರಾಜಧಾನಿಯಲ್ಲಿ ಮಾತ್ರ. ಪ್ರತಿವರ್ಷವೂ ನಡೆಯುವ ರಾಜ್ಯ ರ‍್ಯಾಂಕಿಂಗ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರ ಪಟ್ಟಿಯ ಮೇಲೆ ಒಂದು ಬಾರಿ ಕಣ್ಣಾಡಿಸಿದರೆ ಬೆಂಗಳೂರು ಆಟಗಾರರ ಪ್ರಾಬಲ್ಯ ಕಾಣುತ್ತದೆ.ಮೈಸೂರು, ಬೆಳಗಾವಿ, ಧಾರವಾಡದಿಂದ ಬೆರಳೆಣಿಕೆಯಷ್ಟು ಆಟಗಾರರು ಈ ಪಟ್ಟಿಯಲ್ಲಿ ಕಾಣುವುದು ಸಮಾಧಾನದ ವಿಷಯ. ಪ್ರತಿ ವರ್ಷ ಬೆಳಗಾವಿಯಲ್ಲಿ ಎರಡು, ಧಾರವಾಡ, ಹುಬ್ಬಳ್ಳಿಯಲ್ಲಿ ತಲಾ ಒಂದು ಮತ್ತು ಮೈಸೂರಲ್ಲಿ ಮೂರು ರಾಜ್ಯ ರ‍್ಯಾಂಕಿಂಗ್  ಟೂರ್ನಿಗಳು ನಡೆಯುತ್ತಿರುವುದು ಇದಕ್ಕೆ ಕಾರಣ.ಆದರೆ ಉನ್ನತ ದರ್ಜೆಯ ತರಬೇತಿಗಾಗಿ ಈ  ಬೆಂಗಳೂರಿನತ್ತಲೇ ಮುಖ ಮಾಡಬೇಕು. ಜೂನಿಯರ್ ಬಾಲಕರ ವಿಭಾಗದ ನಾಲ್ಕನೇ ಶ್ರೇಯಾಂಕದ ಆಟಗಾರ ರಕ್ಷಿತ್ ಆರ್. ಬಾರಿಗಿಡದ್ ಧಾರವಾಡದ ಹುಡುಗ. ಆದರೆ ಹೆಚ್ಚಿನ ತರಬೇತಿಗಾಗಿ ಬೆಂಗಳೂರಿಗೆ ಹೋಗಿ ನೆಲೆಸಿದ್ದಾರೆ.  ಬೆಳಗಾವಿಯ ಅಗ್ರಶ್ರೇಯಾಂಕದ ಆಟಗಾರ್ತಿ ಮೈತ್ರೇಯಿ   ಬೇಲೂರ್‌ಗೆ,  ಹಿರಿಯ ಆಟಗಾರ ರಾಗಿರುವ ತಂದೆ ಸಂಗಮ್ ಬಹಳಷ್ಟು ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿಯ ಹುಡುಗ ಅಮೋಘ್, ಹುಬ್ಬಳ್ಳಿಯ ಗಾಯತ್ರಿ ಟಂಕಸಾಲಿ, ಸಹನಾ ಕುಲಕರ್ಣಿ ಕೂಡ ಪ್ರತಿಭಾನ್ವಿತರು. ಸೌಲಭ್ಯ ಸಿಕ್ಕರೆ ಅವರೂ ಹೆಚ್ಚಿನ ಸಾಧನೆ ಮಾಡಬಲ್ಲರು. ಮೂರು ಜಿಲ್ಲೆಗಳನ್ನು ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ ಆಟಗಾರರೇ ಇಲ್ಲವೇ ಎಂಬ ಪ್ರಶ್ನೆ ಕಾಡುವುದು ಸಹಜ. ಬೀದರ್‌ನಿಂದ ಕೋಲಾರದವರೆಗೂ ಪ್ರತಿಭೆಗಳು ಇವೆ. ಆದರೆ ಇಲ್ಲಿ ಒಳಾಂಗಣ ಸೌಲಭ್ಯ ಮತ್ತು ತರಬೇತುದಾರರ ಕೊರತೆ ಇರುವುದನ್ನು ಕರ್ನಾಟಕ ಟಿಟಿ ಸಂಸ್ಥೆ ಪದಾಧಿಕಾರಿಗಳು ಅಲ್ಲಗಳೆಯುವುದಿಲ್ಲ. ಅಲ್ಲಲ್ಲಿ  ಕೆಲವು  ಶಾಲೆಗಳು  ಟೇಬಲ್ ಹಾಕಿ ಮಕ್ಕಳಿಗೆ ತರಬೇತಿ ಕೊಡುತ್ತವೆ.

ಅದರೆ ಅವು ಇಲಾಖಾ ಸ್ಪರ್ಧೆಗಳಿಗೆ ಮಾತ್ರ ಸೀಮಿತವಾದ ತರಬೇತಿಗಳು. ಸದ್ಯದ ಪರಿಸ್ಥಿತಿಯಲ್ಲಿ ತಾಂತ್ರಿಕವಾಗಿ ಮತ್ತು ಆಟದ ರೀತಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಉಪಯೋಗಿಸುವ  ರ್‍ಯಾಕೆಟ್, ಚೆಂಡು, ಟೇಬಲ್, ಬೆಳಕಿನ ಪ್ರಮಾಣಗಳನ್ನು ವೈಜ್ಞಾನಿಕವಾಗಿ ರೂಪಿಸಲಾಗಿದೆ. ಅಂತಹ ಸೌಲಭ್ಯಗಳು ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಸಿಗುತ್ತಿಲ್ಲ.ವೃತ್ತಿಪರ ಕೋರ್ಸ್‌ಗಳ ಆಸೆ

ಸಬ್ ಜೂನಿಯರ್, ಜೂನಿಯರ್ ವಿಭಾಗಗಳಲ್ಲಿ ತಮ್ಮ ಮಕ್ಕಳನ್ನು ಆಡಿಸಲು ಪಾಲಕರು ಹಾತೊರೆಯುತ್ತಾರೆ. ರ‍್ಯಾಂಕಿಂಗ್ ಟೂರ್ನಿಗಳಲ್ಲಿ ತಮ್ಮ ಮಕ್ಕಳಿಗೆ ಅವರೇ ಪ್ರೇಕ್ಷಕರು ಮತ್ತು ಮಾರ್ಗದರ್ಶಕರು!ಎಸ್ಸೆಸ್ಸೆಲ್ಸಿಯವರೆಗೆ ಪ್ರತಿದಿನವೂ ತಪ್ಪದೇ ಟಿಟಿ ಕ್ಲಬ್‌ಗೆ ಬರುವ ಹುಡುಗ-ಹುಡುಗಿಯರು ನಂತರ ಟಿಟಿ ರ್‍ಯಾಕೆಟ್  ಕೈಬಿಟ್ಟು ಪುಸ್ತಕ ಹಿಡಿದು ಮನೆ ಸೇರಿಬಿಡುತ್ತಾರೆ. ಪಿಯುಸಿ ಹಂತದಲ್ಲಿಯೂ ಓದಿನ ಒತ್ತಡದಲ್ಲಿ ಆಟವನ್ನು ಮರೆತೇ ಬಿಡುತ್ತಾರೆ. ವೃತ್ತಿಪರ ಕೋರ್ಸ್‌ಗಳಲ್ಲಿ ಕ್ರೀಡಾಕೋಟಾದ ಸಹಾಯ ಸಿಕ್ಕರೆ ಸಾಕು ಎನ್ನುವ ಪಾಲಕರ ಮನೋಭಾವಕ್ಕೆ ಮಕ್ಕಳು ಆಟದಿಂದ ವಿಮುಖರಾಗುತ್ತಾರೆ. ನಂತರ ವೃತ್ತಿಪರ ಸೀಟು ಸಿಕ್ಕ ಮೇಲೆ ತಮ್ಮ ಕಾಲೇಜು ತಂಡಕ್ಕೆ ಎಷ್ಟು ಅಗತ್ಯವೋ ಅಷ್ಟು ಆಡಿ ಸುಮ್ಮನಾಗುವವರೇ ಹೆಚ್ಚು.`ಭಾರತೀಯ ರೈಲ್ವೆ, ಪೆಟ್ರೊಲಿಯಂ ಕಂಪೆನಿಗಳು, ಬ್ಯಾಂಕುಗಳಲ್ಲಿ ಉದ್ಯೋಗಾವಕಾಶಗಳು ಇವೆ. ಅದನ್ನು ಬಳಸಿಕೊಳ್ಳುವವರ ಸಂಖ್ಯೆ ಕಡಿಮೆ. ಹೀಗಾಗಿ ಹೊರರಾಜ್ಯಗಳಿಂದ ಉತ್ತಮ ಆಟಗಾರರನ್ನು ತಂದು ಆಡಿಸಬೇಕಾಗುತ್ತದೆ. ನಮ್ಮಲ್ಲಿ ಎಲ್ಲರೂ ವೃತ್ತಿಪರ ಕೋರ್ಸ್‌ಗಳಿಗೆ ಹೋಗುವುದೇ ಹೆಚ್ಚು. ಆದರೆ ಬಳಸಿಕೊಳ್ಳುವವರು ಕಡಿಮೆ.

ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳಲ್ಲಿ ಟಿಟಿ ಆಟಗಾರರು ಶೇ 90ಕ್ಕಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಆಟದಿಂದ ಅವರ ಓದಿಗೆ ತೊಂದರೆಯಾಗಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ಆದರೂ ಆಟದಿಂದ ವಿಮುಖರಾಗುತ್ತಾರೆ' ಎಂದು ಕೆಟಿಟಿಎ ಕಾರ್ಯದರ್ಶಿ ವಸಂತಕುಮಾರ್ ಹೇಳುತ್ತಾರೆ.ಮೈಸೂರಿನ ಟೂರ್ನಿಯಲ್ಲಿ ಜೂನಿಯರ್, ಯೂತ್ ಹಂತದಲ್ಲಿ ಆಡಿದ ಆಟಗಾರರೇ ಸೀನಿಯರ್ ವಿಭಾಗದಲ್ಲಿ ಭಾಗವಹಿಸಿದ್ದರು. ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮಲ್ಲೇಶ್ವರಂನ ಅರ್ಚನಾ ಕಾಮತ್, ಸಬ್ ಜೂನಿಯರ್‌ನಲ್ಲಿ ಅಗ್ರಶ್ರೇಯಾಂಕ,  ಜೂನಿಯರ್ ಮತ್ತು ಯೂತ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ.

ಸಬ್ ಜೂನಿಯರ್ ಮತ್ತು ಜೂನಿಯರ್ ವಿಭಾಗಗಳ ಆಟಗಾರ್ತಿಯಾಗಿರುವ ಮೈಸೂರಿನ ಎಂ.ವಿ. ಸ್ಪೂರ್ತಿ ಕೂಡ ಸೀನಿಯರ್ ವಿಭಾಗದಲ್ಲಿ ಆಡಿದರು. ವಿ. ಖುಷಿ, ಸೌಮ್ಯ ಅರಸ್, ಪುರುಷರ ವಿಭಾಗದಲ್ಲಿ ಆಡುವ ವಿ. ಪ್ರದೀಪ್ ಕೂಡ ಜೂನಿಯರ್ ಆಟಗಾರನಾಗಿದ್ದಾರೆ.`ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಸಂಸ್ಥೆಯ ಅಡಹಾಕ್ ಕಮಿಟಿ (ಮಧ್ಯಂತರ ಸಮಿತಿ) ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಎಲ್ಲ ಗೊಂದಲ ಗಳೂ ಪರಿಹಾರವಾಗಿವೆ. ರಾಜ್ಯದಲ್ಲಿ ಆಟದ ಬೆಳವಣಿಗೆಗೆ ಹಲವು ಕಾರ್ಯಕ್ರಮಗಳನ್ನು ಸಿದ್ಧಪಡಿಸ ಲಾಗಿದೆ. ಪ್ರತಿಯೊಂದು ಜಿಲ್ಲೆಗೂ ಮೂಲ ಸೌಲಭ್ಯಗಳನ್ನು ಒದಗಿಸಿ, ಮಕ್ಕಳಿಗೆ ವಿಶೇಷ ತರಬೇತಿ ನೀಡುವ ಯೊಜನೆ ಇದೆ.

ಕಳೆದ ವರ್ಷದಂತೆ ಈ ಬಾರಿಯೂ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನ ಆತಿಥ್ಯ ಕರ್ನಾಟಕಕ್ಕೆ ಸಿಕ್ಕಿದೆ. ಇದರಿಂದ ಮಕ್ಕಳಿಗೆ ಹೆಚ್ಚಿನ ಸ್ಪೂರ್ತಿ ಸಿಗುತ್ತದೆ' ಎಂದು ಅವರು ಹೇಳುತ್ತಾರೆ.ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿರುವ ಹೊಸ ಟಿಟಿ ಸಂಸ್ಥೆಯೂ ಇತ್ತೀಚೆಗೆ ಅಧಿಕಾರಕ್ಕೆ ಬಂದಿದೆ. ಆದರೆ ರಾಜಧಾನಿಯಿಂದ ಹೊರಗೆ ರಾಜ್ಯದ ಕಟ್ಟಕಡೆಯ ಊರಿನ ಟೇಬಲ್ ಮೇಲೂ ಪುಟ್ಟ ಚೆಂಡು ಪುಟಿಯುವಂತೆ ಮಾಡಿ, ಕನ್ನಡನಾಡಿನ ಟೇಬಲ್ ಟೆನಿಸ್ ಗತವೈಭವವನ್ನು ಮರಳಿ ತರುವ ಸವಾಲು ಸಂಸ್ಥೆಯ ಮುಂದೆ ಇದೆ.

-ಗಿರೀಶ ದೊಡ್ಡಮನಿ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.