ಮಂಗಳವಾರ, ಏಪ್ರಿಲ್ 13, 2021
25 °C

ಪೆಟ್ಟಿಗೆಯಲ್ಲಿ ಜೇನು ಸುರಕ್ಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ ತಾಲ್ಲೂಕಿನ ಅತ್ತಿಕೆರೆ ಗ್ರಾಮದ ರೈತ ಸುರೇಶ್ ಎಂಬುವರು ಕಡಿಮೆ ವೆಚ್ಚದಲ್ಲಿ ಮಣ್ಣಿನ ಮಡಕೆ ಹಾಗೂ ಖಾಲಿ ಡಬ್ಬಾಗಳಲ್ಲಿ ಜೇನು ಸಾಕುವ ವಿಧಾನ ಕುರಿತು ಲೇಖನವೊಂದು (ಫೆ.17) ಕೃಷಿ ಪುರವಣಿಯಲ್ಲಿ ಪ್ರಕಟವಾಗಿದೆ. ಸಾಗುವಾನಿ ಮರದ ಜೇನು ಪೆಟ್ಟಿಗೆಗಳನ್ನು ಕೊಳ್ಳಲು ಆಗದವರು ಮಡಕೆ, ಡಬ್ಬಾಗಳಲ್ಲಿ ಜೇನು ಸಾಕಬಹುದು ಎಂಬುದು ಲೇಖನದ ಆಶಯ.ಜೇನು ಸಾಕಲು ಬಯಸುವ ಸಾಮಾನ್ಯ ಜನರೂ ಈ ವಿಧಾನ ಅನುಸರಿಸಬಹುದು. ಸುರೇಶ್ ಆಸಕ್ತರಿಗೆ ಬೇಕಾದ ಮಾಹಿತಿ ನೀಡಿ ಮಾರ್ಗದರ್ಶನ ಮಾಡುತ್ತಾರೆ ಎಂದು ಲೇಖನದಲ್ಲಿ ಹೇಳಲಾಗಿದೆ. ಜೇನು ಸಾಕುವವರಿಗೆ ಹೆಚ್ಚಿನ ಮಾಹಿತಿ ನೀಡುವ ಪ್ರಯತ್ನ ಸ್ವಾಗತಾರ್ಹ. ಆದರೆ ಸುರೇಶ್ ಅವರು ಅನುಸರಿಸುತ್ತಿರುವ ವಿಧಾನ ಸೂಕ್ತವೇ, ಅವೈಜ್ಞಾನಿಕವೇ?ಮಣ್ಣಿನ ಮಡಕೆ  ಹಾಗೂ ಖಾಲಿ ಡಬ್ಬಗಳಲ್ಲಿ ಜೇನು ಕುಟುಂಬಗಳನ್ನು ಇರಿಸುವುದು ಹೊಸ ಅನ್ವೇಷಣೆ ಅಲ್ಲ. ಮಡಕೆಗಳಿಗೆ ಜೇನು ಮೇಣ ಸವರಿ ನೈಸರ್ಗಿಕವಾಗಿ ಜೇನು ಕುಟುಂಬಗಳನ್ನು ಆಕರ್ಷಿಸಬಹುದು. ಮಣ್ಣು ಸವರಿದ ಬುಟ್ಟಿಗಳಿಗೆ ಜೇನು ಕುಟುಂಬಗಳನ್ನು ಆಕರ್ಷಿಸುವ ಪ್ರಯತ್ನ ಹೊಸದಲ್ಲ. ಇಂತಹ ಕ್ರಮಗಳು ಬಹಳ ಹಿಂದಿನಿಂದ ರೂಢಿಯಲ್ಲಿವೆ. ಸುರೇಶ್ ಅವರು ಅನುಸರಿಸಿದ ವಿಧಾನಗಳನ್ನು ಹೊಸ ಆವಿಷ್ಕಾರ ಎಂಬಂತೆ ಬಿಂಬಿಸಲಾಗಿದೆ.ಜೇನು ಹುಳುಗಳನ್ನು ಸಾಕಲು ಮರದ ಪೆಟ್ಟಿಗೆಗಳೇ ಎಲ್ಲ ಕಾಲಕ್ಕೂ ಹೆಚ್ಚು ಸೂಕ್ತ. ಜೇನು ಕುಟುಂಬಗಳನ್ನು ಮಡಕೆ ಮುಂತಾದವುಗಳಿಗೆ ಆಕರ್ಷಿಸಿ ನಂತರ ಸೂಕ್ತ ಸಮಯದಲ್ಲಿ ಅವನ್ನು ಪೆಟ್ಟಿಗೆಗಳಿಗೆ ವರ್ಗಾಯಿಸಬಹುದು. ಜೇನು ಕುಟುಂಬಗಳಿಗೆ ಬೇಕಾದ ಸೌಲಭ್ಯಗಳನ್ನು ವೈಜ್ಞಾನಿಕವಾಗಿ ಒದಗಿಸುವುದೇ ನಿಜವಾದ ಜೇನು ಸಾಕಣೆ. ಉದಾಹರಣೆಗೆ ಜೇನು ಮೇಣದ ಹಾಳೆ ಹಾಗೂ ಆಹಾರದ ಕೊರತೆ ಇದ್ದಾಗ ಅದನ್ನು ಒದಗಿಸುವುದು ಮತ್ತು ಏರಿಗಳನ್ನು ಬದಲಿಸುವುದು, ಆಗಾಗ ಪರಿಶೀಲಿಸುವುದು ಮತ್ತು ಶುದ್ಧವಾದ ಜೇನು ತುಪ್ಪವನ್ನು ಯಂತ್ರಗಳ ಸಹಾಯದಿಂದ ತೆಗೆದು ಸಂಸ್ಕರಿಸುವುದು ಬಹಳ ಮುಖ್ಯವಾಗುತ್ತದೆ. ಮಡಕೆ, ಡಬ್ಬಾಗಳಲ್ಲಿ ಜೇನು ಸಾಕಿದರೆ ಈ ಅನುಕೂಲಗಳಿಲ್ಲ.ಮಡಕೆಯಲ್ಲಿ ಜೇನು ಕುಟುಂಬಗಳನ್ನು ಖಾಯಂ ಆಗಿ ಇರಿಸುವುದು ಸರಿಯಲ್ಲ. ಅದು ಜೇನು ಕುಟುಂಬಗಳನ್ನು ಆಕರ್ಷಿಸುವುದಕ್ಕಷ್ಟೇ ಸೀಮಿತವಾಗಬೇಕು. ಅಲ್ಲದೆ ಮಡಕೆಯಲ್ಲಿ ಸಾಕಿದ ಜೇನುಗಳಿಂದ ಶುದ್ಧ ತುಪ್ಪ ತೆಗೆಯಲು ಸಾಧ್ಯವೇ ಇಲ್ಲ. ಕೈಯಿಂದ ಹಿಂಡಿ ಸ್ವಲ್ಪ ಪ್ರಮಾಣದ  ತುಪ್ಪ ಪಡೆಯಬಹುದಷ್ಟೆ.ಇತ್ತೀಚಿನ ದಿನಗಳಲ್ಲಿ ಜೇನು ಕುಟುಂಬಗಳು ವಿರಳವಾಗುತ್ತಿವೆ. ಥಾಯಿಷಾಕ್‌ಬ್ರೂಡ್ ಎಂಬ ವೈರಸ್‌ಗಳು ಜೇನು ಕುಟುಂಬಗಳಿಗೆ ಹಾನಿ ಮಾಡುತ್ತಿವೆ. ಕಾಡು ನಾಶ, ತೋಟದ ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳ ಸಿಂಪಡಣೆ, ಜೇನು ಕುಟುಂಬಗಳಿಗೆ ಆಹಾರದ ಕೊರತೆ ಇತ್ಯಾದಿಗಳಿಂದ ಜೇನು ಕುಟುಂಬಗಳು ಅಪಾಯಕ್ಕೆ ಸಿಲುಕಿವೆ. ಈಗ ಅಲ್ಪ ಸ್ವಲ್ಪ ಜೇನುತುಪ್ಪ ಸಿಕ್ಕರೂ ಅದೇ ದೊಡ್ಡ ಇಳುವರಿ ಎಂದುಕೊಂಡು ಸಂಭ್ರಮ ಪಡುವ

ಪರಿಸ್ಥಿತಿ ಸಾಕಣೆದಾರರದು.ಮಳೆಗಾಲದಲ್ಲಿ ಹೆಚ್ಚು ಮಳೆ ಇದ್ದಾಗ ಹುಳುಗಳಿಗೆ ಆಹಾರದ ಅಭಾವ ಉಂಟಾಗುತ್ತದೆ. ಸೂಕ್ತ ಪರ್ಯಾಯ ಆಹಾರ ದೊರೆಯದೆ ಜೇನು ಕುಟುಂಬಗಳು ಚೆದುರಿ ಹೋಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಜೇನು ಹುಳುಗಳನ್ನು ಕೇವಲ ಪೆಟ್ಟಿಗೆಗಳಲ್ಲಿ ಇರಿಸಿ ಪರ್ಯಾಯ ಆಹಾರ ಪೂರೈಸಿ ಅವನ್ನು ಪೋಷಣೆ ಮಾಡಬೇಕು. ಮಡಕೆ, ಡಬ್ಬಾ ಇತ್ಯಾದಿ ಸಿಕ್ಕ ಸಿಕ್ಕ ವಸ್ತುಗಳಲ್ಲಿ ಜೇನುಗಳನ್ನು ಇರಿಸಿ ಸಾಕುವ ಕ್ರಮ ಅವೈಜ್ಞಾನಿಕವಾದುದು. ಜೇನು ಸಾಕಣೆ ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ತಪ್ಪು ಮಾರ್ಗದರ್ಶನದಿಂದ ಜೇನು ಸಾಕಣೆಗೆ ಹಿನ್ನಡೆ ಆಗುತ್ತದೆ.ಇಂದು ಮಲೆನಾಡು ಪ್ರದೇಶದಲ್ಲಿ ರೈತರು ಒಂದೆರಡು ಜೇನು ಕುಟುಂಬಗಳನ್ನು ದೊರಕಿಸಿಕೊಳ್ಳುವುದಕ್ಕೆ ಪ್ರಯಾಸ ಪಡುತ್ತಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಅತ್ತಿಕೆರೆ ಗ್ರಾಮದ ಪರಿಸರದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿರಬಹುದು. ಆದರೆ ರಾಜ್ಯದ ಅನೇಕ ಕಡೆಗಳಲ್ಲಿ ಇದೇ ಪರಿಸ್ಥಿತಿ ಇಲ್ಲ. ಲಭ್ಯವಿರುವ ಜೇನು ಕುಟುಂಬಗಳನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಜೇನು ಸಾಕುವ ಅನಿವಾರ್ಯ ಪರಿಸ್ಥಿತಿ ಈಗ ಇದೆ.ಜೇನು ಕುಟುಂಬಗಳು ನೈಸರ್ಗಿಕವಾಗಿಯೇ ಪ್ರಸರಣಗೊಳ್ಳುವಂತಿರಬೇಕು. ಅದು ಸಾಧ್ಯವಾಗಬೇಕಾದರೆ ಜೇನುಗಳನ್ನು ಪೆಟ್ಟಗೆಗಳಲ್ಲಿ ಇರಿಸಿ ಸಾಕುವುದಕ್ಕೆ ಹೆಚ್ಚು ಗಮನ ಕೊಡಬೇಕು. ಇದನ್ನು ಜೇನು ಸಾಕುವವರು ಗಮನದಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಜೇನು ಸಾಕಲು ಸಾಗುವಾನಿ ಮರದ ಪೆಟ್ಟಿಗೆಗಳೇ ಆಗಬೇಕೆಂದಿಲ್ಲ. ಸಾಮಾನ್ಯ ಮರಮುಟ್ಟುಗಳಿಂದ ತಯಾರಿಸಿದ ಸುಲಭ ಬೆಲೆಗೆ ಸಿಗುವ ಪೆಟ್ಟಿಗೆಗಳಲ್ಲಿ ಜೇನು ಸಾಕಬಹುದು. ಸರ್ಕಾರ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ ಜೇನು ಸಾಕಣೆಗೆ ಉತ್ತೇಜನ ನೀಡುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.