ಗುರುವಾರ , ಆಗಸ್ಟ್ 6, 2020
27 °C
108 ಹೆಂಚಿನ ಮನೆಗಳ ದುರಸ್ತಿಗೆ ಪ್ರಸ್ತಾವ ಸಲ್ಲಿಕೆ

ಪೊಲೀಸ್ ವಸತಿ ಗೃಹಗಳ ಸಮಸ್ಯೆಗೆ ಮುಕ್ತಿ!

ಪ್ರಜಾವಾಣಿ ವಾರ್ತೆ / ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಪೊಲೀಸ್ ವಸತಿ ಗೃಹಗಳ ಸಮಸ್ಯೆಗೆ ಮುಕ್ತಿ!

ದಾವಣಗೆರೆ: `ನನ್ನ ವಯಸ್ಸು 43. ಇಷ್ಟು ವರ್ಷಗಳಲ್ಲಿ ಅದೆಷ್ಟೋ ಮಂದಿಗೆ ಆಶ್ರಯ ನೀಡಿದ್ದೇನೆ. ನನ್ನನ್ನು ನಂಬಿ ಬಂದವರಿಗೆ ಮೋಸ ಮಾಡಿಲ್ಲ. ಇಲ್ಲಿ ಓದಿದ ಎಷ್ಟೋ ಮಕ್ಕಳು ಉನ್ನತ ಹುದ್ದೆ ಪಡೆದಿದ್ದಾರೆ. ಕಷ್ಟ- ಇಷ್ಟ ಎಲ್ಲವನ್ನೂ ಕಂಡಿದ್ದೇನೆ. ಜಗಳ- ಸಂತೋಷ ಕೂಟದಲ್ಲಿ ಭಾಗಿಯಾಗಿದ್ದೇನೆ. ಆದರೆ, ಈಗ ನನ್ನದು ಮಾಸಿದ ಬಣ್ಣ... ಸೋರುವ ಮಾಳಿಗೆ... ಸಮಸ್ಯೆಗಳ ಸೂರು...'ಇಂತಹ ನೂರಾರು ಕಥೆಗಳನ್ನು ಹೇಳುತ್ತಾ ನಿಂತಿವೆ ದುರಸ್ತಿ ಕಾಣದ ದಾವಣಗೆರೆ ಪೊಲೀಸ್ ವಸತಿ ಗೃಹಗಳು. ಈ ಸಮಸ್ಯೆಗಳಿಗೆ ಮುಕ್ತಿ ಸಿಗುವ ಕಾಲ ಬಂದಿದೆ.ನಗರದಲ್ಲಿ ಒಟ್ಟು 473 ವಸತಿ ಗೃಹಗಳಿವೆ. ಹಾಳಾದ ಮನೆಗಳಿಗೆ ಕಾಯಕಲ್ಪ ನೀಡಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈಗಾಗಲೇ 63 ಮನೆಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಉಳಿದ 108 ಮನೆಗಳ ದುರಸ್ತಿ ಕಾರ್ಯಕ್ಕೆ ಕಳೆದ ತಿಂಗಳು ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ.ಎಲ್ಲರನ್ನೂ ಕಾವಲು ಕಾಯುವ ಪೊಲೀಸರು ಮನೆಯಲ್ಲಿ ಜೋರು ಮಳೆ ಬಂದರೆ ಹೆದರದೆ, ಹಂದಿ ಕಾಟ ಇಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡುವ ಕಾಲ ಸನ್ನಿಹಿತವಾಗಿದೆ!ಅರುಣಾ ಚಿತ್ರಮಂದಿರ ಪಕ್ಕದ ಪೊಲೀಸ್ ವಸತಿಗೃಹದ ಆವರಣಕ್ಕೆ ಒಮ್ಮೆ ಭೇಟಿ ನೀಡಿದರೆ ಅಲ್ಲಿ  ಹತ್ತಾರು ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ. ವಿಲೇವಾರಿಯಾಗದ ಕಸದ ರಾಶಿ, ಎಲ್ಲೆಂದರಲ್ಲಿ ಸಂಚರಿಸುವ ಹಂದಿಗಳು, ಕಾಂಕ್ರೀಟ್ ಕಾಣದ ರಸ್ತೆಗಳು, ಮುರಿದು ಹೋದ ಶೌಚಾಲಯದ ಬಾಗಿಲು, ಸೋರುವ ಹೆಂಚಿನ ಮನೆಗಳ ಮೇಲೆ ಪ್ಲಾಸ್ಟಿಕ್ ಹೊದಿಕೆ...ಆದರೆ, ಅಲ್ಲಿನ ಗೃಹಿಣಿಯರು ಹಾಗೂ ಸಿಬ್ಬಂದಿಯನ್ನು ಕೇಳಿದರೆ ಸಮಸ್ಯೆಗಳು ಇದ್ದರೂ ಬಾಯಿ ಬಿಡುವುದಿಲ್ಲ. `ಹೊಂದಿಕೊಂಡಿದ್ದೇವೆ ಸರ್. ದುರಸ್ತಿಗೆ ಬರೆದುಕೊಂಡು ಹೋಗಿದ್ದಾರೆ' ಎಂಬುದಷ್ಟೆ ಅವರ ಉತ್ತರ. ಕೆಲವು ಮನೆಗಳನ್ನು ಸಿಬ್ಬಂದಿಯೇ ತಮ್ಮ ಖರ್ಚಿನಲ್ಲಿ ದುರಸ್ತಿ ಮಾಡಿಸಿಕೊಂಡ ಉದಾಹರಣೆಗಳೂ ಇಲ್ಲಿವೆ.`ಹೆಂಚಿನ ಮನೆಗಳನ್ನೇ ಪದೇ ಪದೇ ದುರಸ್ತಿಗೊಳಿಸುವ ಬದಲಿಗೆ ಆರ್‌ಸಿಸಿ ಗೃಹಗಳನ್ನು ನಿರ್ಮಿಸಿದರೆ ಅನುಕೂಲ' ಎಂಬುದು ಸಿಬ್ಬಂದಿಯೊಬ್ಬರ ಅನಿಸಿಕೆ.ಆರು ಬ್ಲಾಕ್‌ಗಳ 63 ಮನೆಗಳನ್ನು ದುರಸ್ತಿ ಮಾಡಲಾಗಿದೆ. ಅಡುಗೆ ಮನೆಗೆ ಟೈಲ್ಸ್, ಗೋಡೆಗೆ ಸಾರಣಿಗೆ, ಸುಣ್ಣ- ಬಣ್ಣ, ಶೌಚಾಲಯ ದುರಸ್ತಿ, ಸಜ್ಜೆ ನಿರ್ಮಾಣ, ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 108 ಮನೆಗಳಿಗೆ ಹೊಸ ಹೆಂಚು ಜೋಡಣೆ, ಶೌಚಾಲಯ ದುರಸ್ತಿ, ಗೇಟ್‌ಗಳ ಮರುಜೋಡಣೆ, ತಡೆಗೋಡೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತವೆ ಮೂಲಗಳು.

ರೂ 2.12 ಕೋಟಿಗೆ ಪ್ರಸ್ತಾವ

ಡಿಎಆರ್ ಆವರಣದಲ್ಲಿರುವ ವಸತಿಗೃಹ ಆವರಣಕ್ಕೆ ಈಚೆಗೆ ಭೇಟಿ ನೀಡಿದ್ದೇನೆ.ರೂ2.12 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಹಿಂದೆ ಜೋರು ಮಳೆಯಲ್ಲಿ ವಸತಿ ಗೃಹಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು.

ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಶೀಘ್ರವೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು.

- ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ .

`ಗಮನಕ್ಕೆ ತರಲಾಗುವುದು'

`ಪೊಲೀಸ್ ವಸತಿ ಗೃಹಗಳು ಉತ್ತಮವಾಗಿರಬೇಕು ಎಂಬುದು ನಮ್ಮ ಉದ್ದೇಶ. ಹಂದಿ, ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆಯಿದೆ. ಪಾಲಿಕೆಯ ಗಮನಕ್ಕೂ ತರಲಾಗಿದೆ. ಇನ್ನೂ ಕ್ರಮ ಕೈಗೊಂಡಿಲ್ಲ.

ನಮ್ಮ ಇಲಾಖೆಯ ಮೇಲಧಿಕಾರಿ ಗಮನಕ್ಕೆ ತಂದು ಪರಿಹರಿಸಲಾಗುವುದು' ಎಂದು ಹೇಳುತ್ತಾರೆ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ವಸತಿ ಗೃಹಗಳ ಉಸ್ತುವಾರಿ ವಹಿಸಿರುವ ಜಿ.ಎನ್.ಕುಮಾರಸ್ವಾಮಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.