ಮಂಗಳವಾರ, ಜೂನ್ 15, 2021
23 °C
ಪಿ.ಕೆ.ನಾರಾಯಣ ಜನ್ಮಶತಾಬ್ದಿ

ಪ್ರಕಟಣೆಗೆ ಬಾಕಿ ಉಳಿದ 30ಕ್ಕೂ ಹೆಚ್ಚು ಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪಿ.ಕೆ. ನಾರಾಯಣ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗದೇ ಉಳಿದಿದ್ದು ಮುಂದಿನ ದಿನಗಳಲ್ಲಾದರೂ ಅವುಗಳು ಬೆಳಕು ಕಾಣುವಂತಾಗಲಿ ಎಂದು ಡಾ. ವರದಾ ಶ್ರೀನಿವಾಸ್‌ ಹೇಳಿದರು.ಅವರು ಭಾನುವಾರ ಬೆಸೆಂಟ್‌ ಮಹಿಳಾ ಕಾಲೇಜಿನಲ್ಲಿ ನಡೆದ ದಿ. ಪಿ.ಕೆ. ನಾರಾಯಣ ಜನ್ಮ ಶತಾಬ್ದಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಗೋಕುಲಾನಂದ ಮುಂತಾದ ನಾಟಕಗಳು, ನೃತ್ಯರೂಪಕ, ಛಾಯಾ ರೂಪಕ, ಗೀತ ರೂಪಕ ಮುಂತಾಗಿ ಹಲವಾರು ಕೃತಿಗಳು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಣೆಗೆ ಬಾಕಿ ಇವೆ.  ಸಾವಿರಾರು ಕವನಗಳು ಇದ್ದು ಅವುಗಳಲ್ಲಿ ಆಯ್ದ ಕವನಗಳನ್ನಾದರೂ ಪ್ರಕಟಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.ಸಮಾರಂಭವನ್ನು ಉದ್ಘಾಟಿಸಿದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ಪಿ.ಕೆ. ನಾರಾಯಣ ಅವರು, ಸಮಾಜ ಸೇವೆ, ಸಾಹಿತ್ಯ ಸೇವೆಯ ಜತೆಗೆ ಗಾಂಧೀಜಿಯವರ ಅನುಯಾಯಿಯಾಗಿದ್ದರು. ಭೂ ಸುಧಾರಣೆಯ ಸಂದರ್ಭದಲ್ಲಿ ಭೂಮಿ ಕಳೆದುಕೊಂಡಿದ್ದರೂ ಅವರು ಮಕ್ಕಳಿಗೆ ವಿದ್ಯೆ ಕೊಡಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಅವರಿಗೆ ವೈರಿಗಳಿಲ್ಲ ಎನ್ನುವುದೇ ಅವರ ವ್ಯಕ್ತಿತ್ವದ ದೊಡ್ಡಸ್ತಿಕೆಯಾಗಿತ್ತು. ಸರ್ವಮಾನ್ಯ­ರಾಗಿದ್ದ ಪಿ.ಕೆ. ನಾರಾಯಣ ಅವರ ಬದುಕಿನ ಅನು­ಭವಗಳು ಶ್ರೀಮಂತವಾದವು ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು, ಶ್ರೀ ವಾಲ್ಮೀಕಿ ರಾಮಾಯಣ ಕಥೆ ಮತ್ತು ಕನ್ನಡ ಸೇನಾನಿ ಶ್ರೀ ಪಿ.ಕೆ. ನಾರಾಯಣ ಎಂಬ ಕೃತಿಗಳನ್ನು ಬಿಡುಗಡೆ ಮಾಡಿದರು. ಕಾರ್ಯ­ಕ್ರಮದ ಅಧ್ಯಕ್ಷತೆಯನ್ನು ಕಾರ್ನಾಡು ಸದಾಶಿವ ರಾವ್‌ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾದ ಪ್ರಮೋದಾ ಬಿ. ಶೆಟ್ಟಿ ವಹಿಸಿದ್ದರು. ಕೆಪಿಸಿಸಿ ಸದಸ್ಯ ಸುರೇಶ್‌ ಬಲ್ಲಾಳ್‌, ಬೆಸೆಂಟ್‌ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮನೋರಮಾ ಬಾಯಿ ಮುಖ್ಯ ಅತಿಥಿಗಳಾಗಿದ್ದರು.

ಕನ್ನಡದ ಅವಜ್ಞೆ

ಕನ್ನಡ ವ್ಯಾಕರಣ, ಭಾಷಾ ಶುದ್ಧಿ ಎನ್ನುವುದರ ಬಗ್ಗೆ ಇತ್ತೀಚೆಗೆ ಮಕ್ಕಳಿಗೆ ಜ್ಞಾನ­ವಿಲ್ಲ ಎಂದು ಹೇಳುತ್ತೇವೆ. ಆದರೆ ವಾಸ್ತವದಲ್ಲಿ ಪ್ರಾಧ್ಯಾಪಕರಿಗೇ ಅವುಗಳನ್ನು ಕಲಿಯುವ ಮತ್ತು ಮಕ್ಕಳಿಗೆ ಕಲಿಸುವ ಆಸಕ್ತಿ ಇಲ್ಲ. ಹಿಂದಿನ ಕಾಲದಲ್ಲಿ ಕನ್ನಡ ಸಾಹಿತ್ಯದ ಕೆಲಸಗಳನ್ನು ಬಹುಪಾಲು ಅಧ್ಯಾಪನ ವೃತ್ತಿಯವರೇ ಮಾಡು­ತ್ತಿದ್ದರು. ಆದರೆ ಇಂದು ದೊಡ್ಡ ಮೊತ್ತದ ಸಂಬಳ ಪಡೆಯುವ ಅಧ್ಯಾಪಕ ವರ್ಗ ಕನ್ನಡ ಸಾಹಿತ್ಯವನ್ನು ಅವಜ್ಞೆ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಬೇಸರ ವ್ಯಕ್ತ­ಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.