ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಸೊಬಗಿನ ಅಂಬುತೀರ್ಥ

ಸುತ್ತಾಣ
Last Updated 22 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಶರಾವತಿ ನದಿ ಉಗಮ ಸ್ಥಾನ ಅಂಬುತೀರ್ಥ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ಜೋಗ ಜಲಪಾತ ಸೃಷ್ಟಿಸಿರುವ ಈ ನದಿ ಹುಟ್ಟಿರುವ ಜಾಗದ  ಸುತ್ತಮುತ್ತಲೂ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಒಂದು ದಿನದಲ್ಲಿ ಇವೆಲ್ಲವುಗಳನ್ನು ನೋಡಿಕೊಂಡು ಬರಬಹುದು.

‘ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ... ಇರೋದ್ರಲ್ಲಿ ಒಮ್ಮೆ  ನೋಡು ಜೋಗದ ಗುಂಡಿ’ ಎಂಬ ಮೂಗೂರು ಮಲ್ಲಪ್ಪ ಅವರ ಪದ್ಯ ವಿಶ್ವವಿಖ್ಯಾತ ಜೋಗ ಜಲಪಾತ ನೋಡಿದಾಗಲೆಲ್ಲ ನೆನಪಾಗುತ್ತದೆ. ಜೋಗದ ರಮಣೀಯ ಸೌಂದರ್ಯ ಎಂತಹವರನ್ನೂ ಬೆರಗುಗೊಳಿಸುತ್ತದೆ. ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ ಅದು ಸೃಷ್ಟಿಸುವ ಅನನ್ಯತೆಯನ್ನು ಬಣ್ಣಿಸಲು ಸಾಧ್ಯವಿಲ್ಲ.

ಈ ಜೋಗ ಜಲಪಾತವನ್ನು ನಿರ್ಮಿಸಿರುವ ನದಿಯೇ ಶರಾವತಿ. ಕನ್ನಡ ನಾಡಿನ ಭಾಗೀರಥಿ ಎಂತಲೂ, ನಾಡಿಗೆ ಬೆಳಕು ನೀಡುವ ನದಿ ಎಂದೂ ಇದು ಪ್ರಸಿದ್ಧವಾಗಿದೆ. ಉತ್ತರ ಕನ್ನಡದ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಇದು ಹರಿಯುವ ಉದ್ದ ಸುಮಾರು 128 ಕಿ.ಮೀ. ಶರಾವತಿ ನದಿ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುತ್ತದೆ.

ಅಂಬುತೀರ್ಥ ಎಲ್ಲಿದೆ?
ತೀರ್ಥಹಳ್ಳಿಯಿಂದ ಹೊಸನಗರಕ್ಕೆ ತೆರಳುವ ಮಾರ್ಗದಲ್ಲಿದೆ ಅಂಬುತೀರ್ಥ. ಇದು ತೀರ್ಥಹಳ್ಳಿಯಿಂದ 20 ಕಿ.ಮೀ. ದೂರದಲ್ಲಿದೆ.   ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 80 ಕಿ.ಮೀ. ಹಾಗೂ ಬೆಂಗಳೂರಿನಿಂದ 323 (ರಾಷ್ಟ್ರೀಯ  ಹೆದ್ದಾರಿ 206ರ ಮೂಲಕ) ಕಿ.ಮೀ. ದೂರದಲ್ಲಿದೆ.

ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿಗೆ ಜೋಗಕ್ಕೆ ಬರುವ ಮಧ್ಯದಲ್ಲಿ ಸಣ್ಣ ಸಣ್ಣ ಉಪನದಿಗಳು ಸೇರಿ ದೊಡ್ಡ  ನದಿಯಾಗಿ ರೂಪ ಪಡೆದಿದೆ. ಅಂಬುತೀರ್ಥದಲ್ಲಿ ಸಣ್ಣಗೆ ಒಸರುವ ನೀರಿನ ಝರಿ ಸಮೀಪದ ಕಲ್ಯಾಣಿಗೆ ಸೇರುತ್ತದೆ. ಅಲ್ಲಿಂದ ಹೊಸನಗರ ಮೂಲಕ ಜೋಗ ತಲುಪುತ್ತದೆ.

ಐತಿಹಾಸಿಕ ಮಹತ್ವ
ಶರಾವತಿ ನದಿ ಉಗಮ ಸ್ಥಾನ ಅಂಬುತೀರ್ಥಕ್ಕೆ ಐತಿಹಾಸಿಕ ಮಹತ್ವವಿದೆ. ಅರಣ್ಯವಾಸದಲ್ಲಿದ್ದ  ಶ್ರೀರಾಮಚಂದ್ರ ಈ ಪ್ರದೇಶಕ್ಕೆ ಒಮ್ಮೆ ಬಂದು ನೆಲೆಸಿದ್ದ. ಸ್ನಾನ ಸಂಧ್ಯಾದಿ ಕಾರ್ಯಕ್ಕೆ ನೀರು ಬೇಕಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವ ಆಯಿತಂತೆ. ಅಂಬು ಎಂದರೆ ಬಾಣ, ಬಾಣ ಬಿಟ್ಟಾಗ ಹುಟ್ಟಿದ ತೀರ್ಥದ ಸ್ಥಳವೇ ಅಂಬುತೀರ್ಥ ಆಗಿದೆ. 

ಶ್ರೀರಾಮನ ಶರದಿಂದ ಹುಟ್ಟಿದ ನದಿ ಶರಾವತಿ ಎಂಬ ಹೆಸರು ಪಡೆದಿದೆ ಎಂಬ ಉಲ್ಲೇಖ ಪುರಾಣ ಪುಣ್ಯ ಕಥೆಗಳಲ್ಲಿದೆ. ವನವಾಸದಲ್ಲಿದ್ದ ಸೀತೆಗೆ ಬಾಯಾರಿಕೆಯಾದಾಗ ಶ್ರೀರಾಮ ಅಂಬನ್ನು (ಬಾಣ) ಭೂಮಿಗೆ ಬಿಟ್ಟಾಗ ತೀರ್ಥ ಚಿಮ್ಮಿತು. ಆದ್ದರಿಂದ ಈ ಸ್ಥಳವನ್ನು ಅಂಬುತೀರ್ಥ ಎನ್ನಲಾಗುತ್ತದೆ. ಅಂಬುತೀರ್ಥದಲ್ಲಿ ರಾಮೇಶ್ವರ ದೇವಾಲಯವೊಂದಿದೆ. ಶಿವನ ಪಾದದ ಬಳಿಯೇ ನದಿ ಹುಟ್ಟುತ್ತದೆ.

ಅಚ್ಚಕನ್ಯೆ ಜಲಪಾತ
ಅಂಬುತೀರ್ಥದಿಂದ ನಾಲ್ಕು ಕಿ.ಮೀ. ದೂರದಲ್ಲಿ ಕಿರಿದಾದ ಜಲಪಾತವನ್ನು ಶರಾವತಿ ನದಿ ಸೃಷ್ಟಿಸಿದೆ. 15ರಿಂದ 20 ಅಡಿ ಎತ್ತರದಿಂದ ಧುಮುಕುವ ಈ ಸುಂದರ ಜಲಪಾತಕ್ಕೆ ‘ಅಚ್ಚಕನ್ಯೆ’ ಎಂದು ಕರೆಯುತ್ತಾರೆ. ಇಲ್ಲಿಗೆ ಅರಳಸುರಳಿ ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಿಂದಲೂ ತೆರಳಬಹುದು. ಇದಕ್ಕೆ ಅಕ್ಕ ತಂಗಿಯರ ಗುಂಡಿ ಎಂದೂ ಕರೆಯಲಾಗುತ್ತಿತ್ತು.

‘ಅಚ್ಚಕನ್ಯೆ’ ಜಲಪಾತ ವೀಕ್ಷಿಸಲು ಆಗಸ್ಟ್‌ನಿಂದ ಜನವರಿವರೆಗೆ ಸೂಕ್ತ ಸಮಯ. ಬೇಸಿಗೆಯಲ್ಲಿ ಭೇಟಿ ನೀಡಿದರೆ ಕಲ್ಲುಗಳ ದರ್ಶನ ಮಾತ್ರ ಮಾಡ ಬೇಕಾಗುತ್ತದೆ.

ಹೋಗುವುದು ಹೇಗೆ?
ಅಂಬುತೀರ್ಥಕ್ಕೆ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರದಿಂದ ಹೋಗಬಹುದು. ಉತ್ತಮ ರಸ್ತೆ ಸಂಪರ್ಕವಿದೆ. ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಿ ತೀರ್ಥಹಳ್ಳಿಗೆ ಹೋಗಬಹುದು. ಇಲ್ಲವೇ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಚಿಕ್ಕಮಗಳೂರು, ಬಾಳೆಹೊನ್ನೂರು ಮೂಲಕ ತೀರ್ಥಹಳ್ಳಿ ತಲುಪಬಹುದು.

ಅಂಬುತೀರ್ಥದ ಸುತ್ತಮುತ್ತ ದಟ್ಟ ಕಾಡು ಎಂತಹವರನ್ನೂ ಮನಸೊರೆಗೊಳ್ಳುತ್ತದೆ. ಮಲೆನಾಡ ಮಡಿಲ ಈ ಭಾಗದಲ್ಲಿರುವ ಹಚ್ಚಹಸಿರು, ಪ್ರಕೃತಿಯ ರಮಣೀಯತೆ ಬೆರಗುಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT