ಶನಿವಾರ, ಮೇ 21, 2022
28 °C

ಪ್ರತಿಷ್ಠೆಗಾಗಿ ಪೊಲೀಸ್ ಬೆಂಗಾವಲು ಪಡೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಶೇ 90ರಷ್ಟು ಶಾಸಕರು ಪೊಲೀಸ್ ರಕ್ಷಣೆಯಲ್ಲಿದ್ದಾರೆಂದು ಗೃಹ ಸಚಿವ ಆರ್. ಅಶೋಕ ಈಚೆಗೆ ಬಹಿರಂಗ ಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಶೇ 60ರಷ್ಟು ಪೊಲೀಸ್ ಸಿಬ್ಬಂದಿ ಇಲ್ಲಿಯ ಜನಪ್ರತಿನಿಧಿಗಳ ರಕ್ಷಣೆಗೆ ಮೀಸಲಾಗಿದ್ದಾರೆ!ವಾರಕ್ಕೆ ಎರಡು ಸಲ, ತಪ್ಪಿದರೆ ಕೊನೆ ಪಕ್ಷ ಒಂದು ಸಲವಾದರೂ ಭೇಟಿ ನೀಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಾರದಲ್ಲಿ ಐದು ದಿವಸವೂ ಶಿವಮೊಗ್ಗ ನಗರದಲ್ಲೇ ಠಿಕಾಣಿ ಹೂಡುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ವಾರಕ್ಕೆ ಮೂರು ದಿವಸ ಬೀಡು ಬಿಡುವ ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಶಿಕಾರಿಪುರ-ಶಿವಮೊಗ್ಗ ಮಧ್ಯೆ ದಿನಂಪ್ರತಿ ಓಡಾಡುವ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಜಿಲ್ಲೆಯ 10ಕ್ಕೂ ಹೆಚ್ಚು ಗಣ್ಯ ಜನಪ್ರತಿನಿಧಿಗಳಿಗೆ ಪೊಲೀಸ್ ರಕ್ಷಣೆ ನೀಡಬೇಕಾಗಿದೆ. ಇವರು ಹೋದಲ್ಲಿ ಬಂದಲ್ಲಿ ಪೊಲೀಸ್ ಬೆಂಗಾವಲು ಪಡೆ ಇವರ ಹಿಂದೆ-ಮುಂದೆ ಇರಬೇಕಾದದ್ದು ಕಡ್ಡಾಯವಾಗಿದೆ.ಕೆಎಸ್‌ಐಐಡಿಸಿ ಅಧ್ಯಕ್ಷ ಕೆ. ದಿವಾಕರ್, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ, ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಟಿ. ರಾಮಾನಾಯಕ್ ಇವರೆಲ್ಲ ಶಿವಮೊಗ್ಗಕ್ಕೆ ವಾರದ ಕಾಯಂ ಅತಿಥಿಗಳು. ಇವರೆಲ್ಲರಿಗೂ ಒಂದೊಂದು ಪೊಲೀಸ್ ಬೆಂಗಾವಲು ಪಡೆ ವಾಹನ ಇರಲೇಬೇಕು. ಇವರಲ್ಲದೆ, ಆಗಾಗ್ಗೆ ಭೇಟಿ ನೀಡುವ ಜಿಲ್ಲೆಯ ಮೂಲದವರಾದ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ರಾಮಕೃಷ್ಣ ಅವರ ಜೊತೆಯೂ ಬೆಂಗಾವಲು ಪಡೆ ವಾಹನ ತಿರುಗಾಡುತ್ತಲೇ ಇರಬೇಕು.ಆದರೆ, ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್. ಆನಂದ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್ ಅವರು ಇದಕ್ಕೆ ಅಪವಾದವಾಗಿದ್ದಾರೆ. ಬೆಂಗಾವಲು ಪಡೆ ಇರಲೇಬೇಕೆಂಬ ಒತ್ತಾಯ ಇವರಿದ್ದಿಲ್ಲ.ಮುಖ್ಯಮಂತ್ರಿಗಳ ಜಿಲ್ಲೆ ಎಂಬ ಕಾರಣಕ್ಕಾಗಿ ಪದೇ ಪದೇ ಇಲ್ಲಿ ಭೇಟಿ ನೀಡುವ ಅನೇಕ ಸಚಿವರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಿ ಪೊಲೀಸ್ ಬೆಂಗಾವಲು ಪಡೆಯನ್ನು ನಿಯೋಜಿಸಿಕೊಳ್ಳುವ ಪರಿಪಾಠವಿದೆ.ಇದರಿಂದ ನಿಜಕ್ಕೂ ಪರದಾಟಕ್ಕೆ ಒಳಗಾಗುವವರು ಜನಸಾಮಾನ್ಯರು. ಈಗ ಜಿಲ್ಲೆಯಲ್ಲಿ ಬೆಂಗಾವಲು ಪಡೆಯ ಸೈರನ್ ಶಬ್ದ ಕೇಳುತ್ತಿದ್ದಂತೆ ರಸ್ತೆಯಲ್ಲಿದ್ದ ಜನ ದಿಕ್ಕಾಪಾಲಾಗುತ್ತಾರೆ. ಆಂಬ್ಯುಲೆನ್ಸ್ ಸೈರನ್‌ಗಿಂತ ಒಂದು ಪಟ್ಟು ಹೆಚ್ಚು ಶಬ್ದ ಮಾಡುವ ಬೆಂಗಾವಲು ಪಡೆಯ ಸೈರನ್‌ಗಳಿಂದಾಗಿ ಜನ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದಿರಲಿ, ಓಡಾಡುವುದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ.ಪ್ರತಿ ಮುಂಜಾನೆ ಷಟಲ್ ಕಾಕ್ ಮೈದಾನದಿಂದ ಹಿಡಿದು, ವಿವಿಧ ದೇವಸ್ಥಾನ, ಪಕ್ಷದ ಕಚೇರಿಗೆ ಭೇಟಿ ನೀಡುವ ಕೆ.ಎಸ್. ಈಶ್ವರಪ್ಪ ಮತ್ತು ಅವರ ಶಿಷ್ಯರ ಪಡೆಗೆ ದಾರಿ ತೋರಿಸಲು ಬೆಂಗಳೂರಿಂದ ಒಂದು ಬೆಂಗಾವಲು ಪಡೆ ಸಿದ್ಧವಾಗಿದ್ದರೆ, ಶಿವಮೊಗ್ಗದಲ್ಲಿ ಮತ್ತೊಂದು ಬೆಂಗಾವಲು ಪಡೆ ರಕ್ಷಣೆ ನೀಡುತ್ತದೆ. ಒಟ್ಟಾರೆ ಡಬಲ್ ರಕ್ಷಣೆಯ ಧಮಾಕಾ ಈಶ್ವರಪ್ಪ ಅವರಿಗೆ ಸಿಕ್ಕಿದೆ. ಉಳಿದ ಗಣ್ಯರಿಗೆ ಡಬಲ್ ಯೋಗ ಇಲ್ಲದಿದ್ದರೂ ಒಂದು ಬೆಂಗಾವಲು ಪಡೆ ಹಿಂದೆಯೋ ಮುಂದೆಯೋ ಇರುತ್ತದೆ.ಶಿವಮೊಗ್ಗದಲ್ಲಿ ನಕ್ಸಲ್ ಚಟುವಟಿಕೆ ಬಿಟ್ಟರೆ ಅಪರಾಧ ಪ್ರಕರಣಗಳು ದಾಖಲಾಗುವುದು ಬಹಳ ಕಡಿಮೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಕ್ಸಲ್ ಚಟುವಟಿಕೆ ತಗ್ಗಿ, ಅಪರಾಧ ಪ್ರಕರಣಗಳು ಹೆಚ್ಚಿವೆ. ಪ್ರತಿ ತ್ರೈಮಾಸಿಕ ಅವಲೋಕನದಲ್ಲೂ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಸತ್ಯನಾರಾಯಣರಾವ್ ಈ ಬಗ್ಗೆ ಎಚ್ಚರಿಕೆ ಕೊಡುತ್ತಲೇ ಬಂದಿದ್ದಾರೆ.ಹಾಡಹಗಲೇ ಮಹಿಳೆಯರ ಸರ ಕಿತ್ತುಕೊಂಡು ಹೋಗುವುದು, ಹಣ ಸುಲಿಗೆ ಮಾಡುವುದು, ಮನೆಗೆ ನುಗ್ಗಿ ಒಡವೆ ಅಪಹರಣ ಮಾಡುವುದು ಮಾಮೂಲಿ ಕೃತ್ಯಗಳಾಗಿವೆ. ಮಟ್ಕಾ, ಓಸಿ ನಿಯಂತ್ರಣದಲ್ಲಿ ಇಲ್ಲ. ಜಿಲ್ಲೆಯಲ್ಲಿ ಆಗಾಗ್ಗೆ ಕೊಲೆ, ಹೊಡೆದಾಟ ನಡೆಯುತ್ತಲೇ ಇವೆ. ಶಿವಮೊಗ್ಗ ನಗರದ ಸಂಚಾರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಹೀಗೇಕೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮುರುಗನ್ ಅವರನ್ನು ಪ್ರಶ್ನಿಸಿದರೆ, ಅವರದು ಸಿದ್ಧ ಮಾದರಿ ಉತ್ತರ. ಪೊಲೀಸರ ಸಂಖ್ಯೆ ಕಡಿಮೆ ಇದೆ. ಇದರಲ್ಲೇ ಜಿಲ್ಲೆಯ ಹಾಲಿ ಎಲ್ಲಾ ಶಾಸಕರಿಗೂ ಪೊಲೀಸ್ ಸಿಬ್ಬಂದಿ ರಕ್ಷಣೆ ನೀಡಲಾಗಿದೆ. ನಮಗೆ ರಕ್ಷಣೆ ಬೇಕು ಎಂದು ಜನಪ್ರತಿನಿಧಿಗಳೇ ಒತ್ತಡ ತಂದರೆ ಕೊಡದೆ ಇರಲು ಸಾಧ್ಯವೇ? ಪೊಲೀಸ್ ವ್ಯವಸ್ಥೆ ಮೇಲೆ ಇದು ಖಂಡಿತಾ ಪರಿಣಾಮ ಬೀರುತ್ತದೆ. ಇದನ್ನು ಅವರವರೇ ಅರ್ಥಮಾಡಿಕೊಳ್ಳಬೇಕು ಎಂದು ನಕ್ಕು ಸುಮ್ಮನಾಗುತ್ತಾರೆ.ಜೀವ ಬೆದರಿಕೆ ಯಾರಿಗಿದೆ, ಅವರಿಗೆ ಪೊಲೀಸ್ ರಕ್ಷಣೆ ಅಗತ್ಯ. ಆದರೆ, ಶಿವಮೊಗ್ಗದಲ್ಲಿ ಇದು ಪ್ರತಿಷ್ಠೆಗೆ ಬಳಕೆಯಾಗುತ್ತಿರುವುದೇ ಹೆಚ್ಚು.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.