ಭಾನುವಾರ, ಮೇ 9, 2021
18 °C

ಪ್ರಶಸ್ತಿ ವಾಪಸ್‌ಗೆ ಸಿದ್ಧ

ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |ಹಿರಿಯ ನಟ ಶಿವರಾಂ ಅವರ ಸಿನಿಮಾ ಸಾಧನೆಗಾಗಿ ಈ ಬಾರಿ ಕನ್ನಡ ಚಿತ್ರರಂಗದ ಅತ್ಯುತ್ತಮ ಗೌರವಗಳಲ್ಲಿ ಒಂದಾದ `ರಾಜಕುಮಾರ್ ಪ್ರಶಸ್ತಿ~ ದೊರೆತಿದೆ. ಇದರೊಂದಿಗೇ ಸಬ್ಸಿಡಿ ಸಮಿತಿಯ ಲಂಚ ಹಗರಣ ಅವರ ಬೆನ್ನು ಹತ್ತಿದೆ.`ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು~ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಬಹುತೇಕ ಮೌನಕ್ಕೆ ಶರಣಾಗಿದ್ದ ಶಿವರಾಂ ಅವರೊಂದಿಗೆ `ಸಿನಿಮಾ ರಂಜನೆ~ ಮಾತಿಗಿಳಿಯಿತು. ಆಗ...

 

ಒಂದೆಡೆ ಚಲನಚಿತ್ರ ಸಬ್ಸಿಡಿ ಸಮಿತಿಯ ಲಂಚ ಹಗರಣ, ಮತ್ತೊಂದೆಡೆ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯದ ಅತ್ಯುನ್ನತ ಗೌರವ ಡಾ.ರಾಜ್‌ಕುಮಾರ್ ಪ್ರಶಸ್ತಿ. ಏನನ್ನಿಸುತ್ತಿದೆ ನಿಮಗೆ?ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಆದರೆ ಈ ಸಂದರ್ಭದಲ್ಲಿ ನನ್ನ ಪಾಲಿಗೆ ಬೇವು ಬೆಲ್ಲ ಎರಡೂ ಸಿಕ್ಕಂತಾಗಿದೆ. ನನಗೆ ಶುಭ ಕೋರುವವರಿಗೂ ಏನೋ ಒಂದು ರೀತಿಯ ಕಸಿವಿಸಿ. ಅಂಥ ಶ್ರೇಷ್ಠ ಪ್ರಶಸ್ತಿಯನ್ನು ಶಿವರಾಂ ಅವರಿಗೆ ಕೊಟ್ಟರೆ ಪ್ರಶಸ್ತಿಗೇ ಅವಮಾನ ಎಂದು ಕೆಲವರು ಮಾತನಾಡಿದ್ದಾರೆ.ಸಬ್ಸಿಡಿ ಸಮಿತಿಯ ಹಗರಣದಲ್ಲಿ ನನ್ನ ಪಾಲು ಏನೂ ಇಲ್ಲದಿದ್ದರೂ ಅದೊಂದು ದೃಷ್ಟಿಬೊಟ್ಟು ಉಳಿದು ಹೋಯಿತು. ಈ ವ್ಯಥೆಯಲ್ಲಿದ್ದಾಗ ರಾಜ್ ಕುಟುಂಬ ತುಂಬಾ ಬೆಂಬಲ ನೀಡಿತು. ಚಿತ್ರರಂಗಕ್ಕೆ ನಾನು ಸಲ್ಲಿಸಿದ ಸೇವೆಯನ್ನು ರಾಜ್ ಕುಟುಂಬದವರು ಸ್ಮರಿಸಿದರು. ಅದು ನನಗೆ ಪ್ರಶಸ್ತಿಗಿಂತಲೂ ಹಿರಿದು.

ಸಬ್ಸಿಡಿ ಸಮಿತಿಯ ಅಧ್ಯಕ್ಷರಿಗೂ ಲಂಚಕೊಡಬೇಕು ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದರಲ್ಲ?

ಒಂದು ರೂಪಾಯಿಯನ್ನೂ ನಾನು ಮುಟ್ಟಿಲ್ಲ. `ಲಾವ್ ಲಾವ್~ ವ್ಯವಹಾರ ನಡೆಯುತ್ತಿದೆ ಎಂದು ಕೆಲವು ಅನಾಮಿಕ ಪತ್ರಗಳು ಬಂದಾಗ ಪರೋಕ್ಷವಾಗಿ ಸಮಿತಿಯ ಸದಸ್ಯರನ್ನು ಎಚ್ಚರಿಸಿದೆ. ಪ್ರಾಮಾಣಿಕವಾಗಿ ಚಿತ್ರ ನಿರ್ಮಿಸಿದವರಿಗೆ ಒಳ್ಳೆಯದು ಮಾಡಬೇಕು ಎಂದು ಕಿವಿಮಾತು ಹೇಳಿದೆ.ಸಮಿತಿಯ ಸದಸ್ಯರ ಶುಲ್ಕವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದೆ. ಕೆಲವರು ನನ್ನ ಬಳಿಯೂ ವ್ಯವಹಾರ ಕುದುರಿಸಲು ಹೊರಟರು. ಆಗ ಈ ಅವ್ಯವಹಾರವೇ ಸಾಕು ನಿಮ್ಮ ಚಿತ್ರವನ್ನು ಅನರ್ಹಗೊಳಿಸಲು ಎಂದು ಖಂಡತುಂಡವಾಗಿ ಹೇಳಿದೆ. ಸಮಿತಿಯ ಸದಸ್ಯ ಸುರೇಶ್ ಮಂಗಳೂರು ನನ್ನ ಮೇಲೆ ಗೂಬೆ ಕೂರಿಸಿದರು.

 

ಹೀಗ್ಯಾಕೆ ಮಾಡಿದಿರಿ ಎಂದು ಅವರ ಬಳಿ ಕಣ್ಣೀರಿಟ್ಟೆ. ಕುಡಿದ ಅಮಲಿನಲ್ಲಿ ಅವರು ನನ್ನ ವಿರುದ್ಧ ಆರೋಪ ಮಾಡಿದರು ಎಂದು ಈ ಹಿಂದೆ ಹೇಳಿದ್ದು ನಿಜ. ಆದರೆ ಅದನ್ನೇ ಮುಂದು ಮಾಡಿಕೊಂಡು ಅವರ ಪರ ಇದ್ದೇನೆ ಎಂದು ಬಿಂಬಿಸಲಾಯಿತು. 2.5 ಲಕ್ಷ ರೂಪಾಯಿ ಸುರೇಶ್ ಅಕೌಂಟ್‌ಗೆ ಸೇರಿ ಹೋಗಿತ್ತು.ನನ್ನಂಥ ಹಿರಿಯ ಕಲಾವಿದನಿಗೇ ಅಷ್ಟು ಅಡ್ವಾನ್ಸ್ ಯಾರೂ ಕೊಡುವುದಿಲ್ಲ, ನಿಮಗೆ ಹ್ಯಾಗೆ ದೊರೆಯಿತು ಎಂದು ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಆತ ಕ್ಷಮಾಪಣೆ ಪತ್ರ ನೀಡಿದರು.

ಇದನ್ನೆಲ್ಲಾ ಪ್ರತಿಭಟಿಸಿ ನೀವು ರಾಜೀನಾಮೆ ಕೊಡಬಹುದಿತ್ತಲ್ಲ? ಕಠಿಣ ಕ್ರಮಕ್ಕೆ ಶಿಫಾರಸು ಮಾಡಬಹುದಿತ್ತಲ್ಲ?ಅನಾಮಿಕ ಪತ್ರಗಳು ಬಂದದ್ದು ಹೊರತುಪಡಿಸಿದರೆ 1.5 ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿದೆ ಎಂದು ಗೊತ್ತಾದದ್ದೇ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ. ಅದು ನನ್ನ ಊಹೆಗೂ ನಿಲುಕದ ವಿಚಾರವಾಗಿತ್ತು. ಮೊದಲೇ ಗೊತ್ತಿದ್ದರೆ ಮುಖ್ಯಮಂತ್ರಿಗಳನ್ನು ಸಂಪರ್ಕಿಸುತ್ತಿದ್ದೆ. ಸರ್ಕಾರಕ್ಕೆ ಪಟ್ಟಿ ಸಲ್ಲಿಸಿದ ಬಳಿಕ ಅದು ಸೋರಿಕೆಯಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದೆ. ಅವರಿಂದಲೂ ಹೇಗೆ ಸೋರಿಕೆಯಾಯಿತು ಎಂಬ ಉತ್ತರವಿಲ್ಲ.

ಹಗರಣ ಬಯಲಾದ ಬಳಿಕವೂ ನಿಮ್ಮ ಮೌನ ಅನೇಕ ಸಂದೇಹಗಳಿಗೆ ಎಡೆ ಮಾಡಿಕೊಟ್ಟಿತಲ್ಲ?ನನ್ನನ್ನು ನೇಮಿಸಿದ್ದು ಸರ್ಕಾರ. ಅದಾಗಲೇ ಸರ್ಕಾರಕ್ಕೆ ಪಟ್ಟಿ ಸಲ್ಲಿಸಿಯಾಗಿತ್ತು. ಹಾಗಾಗಿ ನಾನು ಹೇಳಿಕೆ ನೀಡಿದರೆ ಸರ್ಕಾರದ ಅಸಮಾಧಾನಕ್ಕೆ ತುತ್ತಾಗುವ ಸಂಭವವಿತ್ತು. ಇದಿಷ್ಟೇ ನನ್ನ ಮೌನಕ್ಕೆ ಕಾರಣ.

ಒಂದೆಡೆ ಸಮಿತಿಯ ಪದಾಧಿಕಾರಿಗಳು ಆರೋಪಿ ಸ್ಥಾನದಲ್ಲಿಯೇ ಇದ್ದಾರೆ. ಇದೇ ವೇಳೆ ಮುಖ್ಯಮಂತ್ರಿಗಳು ಪಟ್ಟಿಯನ್ನು ಅಂಗೀಕರಿಸಿದ್ದಾರೆ. ಇದು ಸಮಿತಿಯ ಮೇಲಿನ ಅನುಮಾನವನ್ನು ಇನ್ನಷ್ಟು ಬಲಗೊಳಿಸಿದಂತೆ ಆಯಿತಲ್ಲವೆ?

ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಮುಖ್ಯಮಂತ್ರಿಗಳು ಪಟ್ಟಿಯನ್ನು ಅಂಗೀಕರಿಸಬಾರದು ಎಂದು ಹೇಳಲಾಗದು. ನಾವು ಶ್ರಮಪಟ್ಟು ಪ್ರಾಮಾಣಿಕವಾಗಿ ಪಟ್ಟಿ ತಯಾರಿಸಿದ್ದೇವೆ.

 

ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇವೆ. ಪಟ್ಟಿ ಅಂಗೀಕರಿಸಬಾರದು ಎಂದರೆ ನಮ್ಮ ಬಗ್ಗೆ ನಾವೇ ಸಂಶಯ ಪಟ್ಟುಕೊಂಡಂತಾಗುತ್ತದೆ. ರಾಮಕೃಷ್ಣ ಹಾಗೂ ಶಿವರಾಂ ಬಿಟ್ಟರೆ ಸಮಿತಿಯ ಸದಸ್ಯರ ಪರಿಚಯವೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ ಸಮಿತಿಯಲ್ಲಿ ನಾಡಿನ ಕವಿಗಳೂ ಇದ್ದರು.ಅವರ ಪರಿಚಯವೂ ಇವರಿಗೆ ಇಲ್ಲವೆ? `ಕಾರಂಜಿ~ ಚಿತ್ರ ಹಾಗೂ ಕನ್ನಡದ ತಿರುಳನ್ನು ಬಿಂಬಿಸುವ ಇನ್ನೂ ನಾಲ್ಕು ಚಿತ್ರಗಳಿಗೆ ಸಬ್ಸಿಡಿ ಕೊಡಬಹುದಿತ್ತು. ಆದರೆ 45 ಚಿತ್ರಗಳಿಗೇ ಮಿತಿ ಇದ್ದುದರಿಂದ ಅದೆಲ್ಲಾ ಸಾಧ್ಯವಾಗಲಿಲ್ಲ.

`ನಿರ್ದೋಷಿ~ಯಂಥ ಅಶ್ಲೀಲ ಚಿತ್ರಕ್ಕೆ ಸಬ್ಸಿಡಿ ಕೊಡುವ ಅಗತ್ಯವಿತ್ತೆ? ಪಟ್ಟಿಯಲ್ಲಿ ಕೆಲವು ರಿಮೇಕ್ ಚಿತ್ರಗಳೂ ಇವೆಯಂತಲ್ಲ?ಕನ್ನಡದ ಬೇರೆ ಚಿತ್ರಗಳಲ್ಲಿ ಅದಕ್ಕಿಂತ ಅಶ್ಲೀಲತೆ ಇರುವುದನ್ನು ತೋರಿಸಬಲ್ಲೆ. ಅದೊಂದು ಪ್ರಯೋಗಶೀಲ ಚಿತ್ರ. ವಿಧಾನ ಸೌಧದ ಬ್ಲೂಫಿಲಂ ಪ್ರಕರಣಕ್ಕೆ ಹೋಲಿಸಿದರೆ ಅದು ಕೆಟ್ಟದೇನೂ ಅಲ್ಲ. ಇಷ್ಟಾದರೂ ಕಲಾವಿದರು ಕನ್ನಡದವರಲ್ಲ ಎಂಬ ಕಾರಣಕ್ಕೆ ಚಿತ್ರಕ್ಕೆ ನಾನು ಮತ ಹಾಕಲಿಲ್ಲ.ರಿಮೇಕ್ ಹೌದೇ ಅಲ್ಲವೇ ಎಂದು ಪರಿಗಣಿಸಲು ಸರ್ಕಾರ ಪ್ರತ್ಯೇಕವಾದ ಸಮಿತಿಯನ್ನೇ ರಚಿಸಿದೆ. ಸರ್ಕಾರ ಕೊಟ್ಟ ಚಿತ್ರಗಳ ಪಟ್ಟಿಯನ್ನು ಮಾತ್ರ ನಾವು ಅಂಗೀಕರಿಸಬೇಕು. ಇದರಲ್ಲಿ ಸಮಿತಿಯ ತಪ್ಪೇನೂ ಇಲ್ಲ.

 

ಬೇರೆ ಬೇರೆ ಭಾಷೆಗಳ ಎರಡು ಮೂರು ಕತೆಗಳನ್ನು ಕದ್ದು ತಮ್ಮದೇ ಸ್ವಂತ ಚಿತ್ರ ಎಂದು ಹೇಳುವ ಜಾಣರು ಚಿತ್ರರಂಗದಲ್ಲೇ ಇದ್ದಾರೆ. ಇದಕ್ಕೆ ಏನು ಏಳುವುದು?  ಸಮಿತಿಯ ವಿರುದ್ಧ ಆರೋಪ ಹೊರಿಸಿರುವ ಕೂಡ್ಲು ರಾಮಕೃಷ್ಣ ಅವರ `ಬೆಟ್ಟದಪುರದ ದಿಟ್ಟಮಕ್ಕಳು~ ಮಕ್ಕಳ ಚಿತ್ರವಲ್ಲ.ಸಮಿತಿಯ ಸದಸ್ಯರಿಗೆ ಹಣ ಕೊಡುವ ಬದಲು ಸೆನ್ಸಾರ್ ಮಂಡಳಿಯಲ್ಲೇ ಹೋರಾಟ ನಡೆಸಿ ಅಲ್ಲಿಂದಲೇ `ಸಿ~ ಸರ್ಟಿಫಿಕೇಟ್ ತರಬಹುದಿತ್ತು. ಆದರೆ ಆರೋಪ ಹೊರಿಸುವ ಮೂಲಕ ಸ್ಯಾಡಿಸ್ಟ್ ರೀತಿಯಲ್ಲಿ ಅವರು ವರ್ತಿಸಿದ್ದಾರೆ. ಸುಧಾರಣೆ ಆಗಬೇಕಿರುವುದು ಎಲ್ಲಿ?

ಕೆಲವು ನಿರ್ಮಾಪಕರ ಲಾಭಕೋರತನವೇ ಇಂಥ ಅವ್ಯವಹಾರ ನಡೆಯಲು ಕಾರಣ. ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಕೈಕಟ್ಟಿ ಕುಳಿತುಕೊಂಡಿದೆ. ಪೈರಸಿ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲಿಯೇ ಲಂಚಕೋರತನದ ವಿರುದ್ಧವೂ ಹೋರಾಟ ನಡೆಯಬೇಕು.ನಿರ್ಮಾಪಕರು ಆಮಿಷ ಒಡ್ಡುವುದನ್ನು ಕೈ ಬಿಡಬೇಕು. ತಪ್ಪಿತಸ್ಥರನ್ನು ಹಿಡಿಯಲು ನಾನೂ ಸಹಕರಿಸುತ್ತೇನೆ, ಸಂಬಂಧಪಟ್ಟವರು ಮುಂದಾಗಲಿ. ಅಧಿಕಾರಿಗಳು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು.

ಇತ್ತ ರಾಜ್‌ಕುಮಾರ್ ಪ್ರಶಸ್ತಿ ಬಂತು. ಅದೇ ದಿನ ಮುಖ್ಯಮಂತ್ರಿಗಳಿಂದ ಸಬ್ಸಿಡಿಯ ಬಗ್ಗೆ ಕ್ಲೀನ್‌ಚಿಟ್ ಕೂಡ ದೊರೆಯಿತು. ಶಿವರಾಂ ಅವರಿಗೆ ಡಬಲ್ ಧಮಾಕಾ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ?ಪ್ರಶಸ್ತಿ ಬಂದದ್ದು, ಪಟ್ಟಿಯನ್ನು ಅಂಗೀಕರಿಸಿದ್ದು ಕಾಕತಾಳೀಯವಾಗಿ ನಡೆದಿರಬಹುದು. ಪ್ರಶಸ್ತಿ ಆಯ್ಕೆ ಸಮಿತಿ ಬಯಸಿದರೆ ಈಗಲೂ ಪ್ರಶಸ್ತಿಯನ್ನು ಹಿಂತಿರುಗಿಸಲು ಸಿದ್ಧ. ಕಳಂಕಿತರಿಗೆ ಪ್ರಶಸ್ತಿ ಕೊಡಲಾಗಿದೆ ಎಂದು ಆರೋಪಿಸುತ್ತಿರುವವರಿಗೇ ಅದು ಸಿಗಲಿ.

ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಸ್ನೇಹ-ಸಂಬಂಧಗಳು ಕೆಲಸ ಮಾಡಿವೆ ಎಂಬ ಮಾತುಗಳೂ ಇವೆ...ವಿಷ್ಣುವರ್ಧನ್ ಕುಟುಂಬದ ಸದಸ್ಯರೊಂದಿಗೆ ಸ್ನೇಹ ಹೊಂದಿರುವಂತೆಯೇ ಚಿತ್ರರಂಗದ ಅನೇಕರ ಜತೆ ಒಡನಾಟ ಹೊಂದಿದ್ದೇನೆ. ಚಿತ್ರರಂಗದ ಅಮೃತಮಹೋತ್ಸವದ ಸಂದರ್ಭದಲ್ಲಿಯೇ ಪ್ರಶಸ್ತಿಯೊಂದು ಅರಸಿ ಬಂದಿತ್ತು. ನಾನು ಒಲ್ಲೆ ಎಂದೆ. ಇದೆಲ್ಲಾ ವಿಕೃತ ಮನೋಭಾವದವರು ಮಾಡುವ ಆರೋಪ.

 

ಮುಂದಿನ ನಿಮ್ಮ ಹೆಜ್ಜೆ?

ನಾನೀಗ ಬಹುತೇಕ ಹೊರ ನಡೆಯುತ್ತಿದ್ದೇನೆ. ದೇಹಸ್ಥಿತಿಯೂ ಸರಿ ಇಲ್ಲ. ಕಲಾವಿದರ ಕ್ಷೇಮನಿಧಿ ಸ್ಥಾಪಿಸಬೇಕು. ಅದಕ್ಕಾಗಿ ರಾಜ್ಯದೆಲ್ಲೆಡೆ ನಾಟಕಗಳನ್ನು ಆಡಿಸಿ ನಿಧಿ ಸಂಗ್ರಹಿಸಬೇಕು ಎಂದುಕೊಂಡಿದ್ದೇನೆ. ಇದೇ ವೇಳೆ `ನಿರ್ಮಾಪಕರ ಕೈಪಿಡಿ~ ಹಾಗೂ `ಚಿತ್ರ ನಿರ್ಮಾಣ~ ಎಂಬ ಎರಡು ಪುಸ್ತಕಗಳನ್ನು ಹೊರತರಬೇಕಿದೆ. ಇದು ಚಿತ್ರರಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಲಿದೆ ಎಂಬುದು ನನ್ನ ಭಾವನೆ.

 

`ಕೂಡ್ಲು ರಾಮಕೃಷ್ಣರ `ಬೆಟ್ಟದಪುರದ ದಿಟ್ಟಮಕ್ಕಳು~ ಮಕ್ಕಳ ಚಿತ್ರವಲ್ಲ. ಸಮಿತಿಯ ಸದಸ್ಯರಿಗೆ ಹಣ ಕೊಡುವ ಬದಲು ಸೆನ್ಸಾರ್ ಮಂಡಳಿಯಲ್ಲೇ ಹೋರಾಟ ನಡೆಸಿ ಅಲ್ಲಿಂದಲೇ `ಸಿ~ ಸರ್ಟಿಫಿಕೇಟ್ ತರಬಹುದಿತ್ತು. ಅವರು ಸ್ಯಾಡಿಸ್ಟ್ ರೀತಿ ವರ್ತಿಸಿದ್ದಾರೆ..

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.