ಬುಧವಾರ, ಮೇ 18, 2022
23 °C

ಬಣ್ಣದ ಓಕುಳಿ; ಮೋಜಿನ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಗುಮ್ಮಟಗಿರಿಯ ಜನ ಭಾನುವಾರ ರಂಗಿನಲ್ಲಿ ಮಿಂದೆದ್ದರು. ಹಾಲುಗಲ್ಲದ ಮುದ್ದು ಕಂದಮ್ಮಗಳು ಬೆಳ್ಳಂಬೆಳಿಗ್ಗೆ ಕೈಯಲ್ಲಿ ಬಣ್ಣ ತುಂಬಿದ್ದ ‘ಗನ್’ಗಳನ್ನು ಹಿಡಿದುಕೊಂಡು ಬೀದಿ ಬೀದಿಗಳಲ್ಲಿ ‘ದಂಡೆತ್ತಿ’ ಹೋಗುತ್ತಿದ್ದರು. ಕಂಡ ಕಂಡವರ ಮೇಲೆ ಬಣ್ಣದ ‘ದಾಳಿ’ ನಡೆಸಿ ಸಂಭ್ರಮಿಸಿದರು. ಯುವಕರು ಹಲಗೆ ನುಡಿಸುತ್ತ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ರಂಗಿನಾಟದಲ್ಲಿ ತೊಡಗಿದ್ದರು. ಮನೆಯಲ್ಲಿ ಅಡಗಿ ಕುಳಿತವರನ್ನು ಎಳೆತಂದು ಅವರಿಗೆ ಬಣ್ಣದ ಅಭಿಷೇಕ ಮಾಡಿಸುತ್ತಿದ್ದರು. ನಂತರ ಎಲ್ಲರೂ ಸೇರಿ ಕುಣಿದು ಕುಪ್ಪಳಿಸುತ್ತಿದ್ದರು.ಬೆಳಿಗ್ಗೆ ಬಣ್ಣದ ಓಕುಳಿಯಾದರೆ ಮಧ್ಯಾಹ್ನದ ಹೊತ್ತಿಗೆ ‘ಸೋಗಿನ’ ಮೋಡಿ. ಬಗೆ ಬಗೆಯ ವೇಷ ಧರಿಸಿದ್ದ ಯುವಕರು, ಮನೆ ಮನೆಗಳಿಗೆ ಸಂಚರಿಸಿ ಅಭಿನಯಿಸುತ್ತಿದ್ದರು. ಇನ್ನು ಕೆಲವರು ಅಣುಕು ಶವಯಾತ್ರೆ ನಡೆಸುತ್ತಿದ್ದರು. ಎಲ್ಲರೂ ಸೇರಿ ಹೋಳಿ ಹಬ್ಬದ ‘ಘೋಷಣೆ’ ಹಾಕುತ್ತಿದ್ದರು. ಯುವಕರಿಗೆ ಪೈಪೋಟಿ ನೀಡಿದಂತೆ ಬಾಲಕಿಯರು, ಯುವತಿಯರೂ ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು. ಕೆಲವೆಡೆ ಮಹಿಳೆಯರ ಮುಖಗಳೂ ‘ರಂಗೇರಿದ್ದವು’. ನಗರದ ಎಲ್ಲ ಬಡಾವಣೆಗಳಲ್ಲಿಯೂ ಈ ದೃಶ್ಯ ಸಾಮಾನ್ಯವಾಗಿತ್ತು.ಇಲ್ಲಿಯ ಆನಂದ ನಗರದಲ್ಲಿ ಸಂಸ್ಕೃತ ಪರಿವಾರದವರ ಹೋಳಿ ವಿಶಿಷ್ಟವಾಗಿತ್ತು. ಸ್ತ್ರೀ-ಪುರುಷರು ಒಂದೆಡೆ ಸೇರಿ ಹಬ್ಬ ಆಚರಿಸಿದರು. ತಾವೇ ತಯಾರಿಸಿದ ನೈಸರ್ಗಿಕ ಬಣ್ಣವನ್ನು ರಂಗಿನಾಟಕ್ಕೆ ಬಳಸಿದರು. ಹೋಳಿ ಹುಣ್ಣಿಮೆ ಎಲ್ಲೆಡೆ ಶಾಂತ ರೀತಿಯಿಂದ ನಡೆಯಿತು; ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎಂದು ಪೊಲೀಸರು ನಿಟ್ಟುಸಿರು ಬಿಟ್ಟರು.ತಾಲ್ಲೂಕಿನ ಅರಕೇರಿ ತಾಂಡಾ ನಂ.3ರಲ್ಲಿ ಕರ್ನಾಟಕ ಬಂಜಾರಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ನಾಯಕ ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಇತರರು ಪಾಲ್ಗೊಂಡಿದ್ದರು.ಕಾಮ ದಹನ:

ಶನಿವಾರ ತಡ ರಾತ್ರಿ ಎಲ್ಲೆಡೆ ಕಾಮ ದಹನ ನಡೆಯಿತು. ಶರಣ ಪಡೆ ಮತ್ತು ಲಿಂಗಾಯತ ಜಾಗೃತ ವೇದಿಕೆಯವರು ಕುಳ್ಳು, ಕಟ್ಟಿಗೆಗಳನ್ನು ಸುಟ್ಟು ಹಾಳು ಮಾಡದೆ ಹೋಮ ಕುಂಡದ ಕಟ್ಟೆಯ ಮೇಲೆ ಉರಿಸಿ ಅದರಿಂದ ಮಸಾಲೆ ಅನ್ನ ತಯಾರಿಸಿದರು. ಅನ್ನ ದಾಸೋಹ ನಡೆಸಿದರು. ವೇದಿಕೆಯ ಅಧ್ಯಕ್ಷ ಕೆ.ಆರ್. ಕಡೇಚೂರ, ಆಡಂಬರದ ಆಚರಣೆಗೆ ಹೆಚ್ಚಿನ ಹಣ ವ್ಯಯ ಮಾಡುವ ಬದಲು ತ್ರಿವಿಧ ದಾಸೋಹಕ್ಕೆ ಎಲ್ಲರೂ ಒತ್ತು ನೀಡಬೇಕು ಎಂದು ಮನವಿ ಮಾಡಿದರು.ಅದ್ಧೂರಿ ಬಣ್ಣದಾಟ


ಸಿಂದಗಿ: ಹೋಳಿ ಹಬ್ಬದ ಬಣ್ಣದೋಕುಳಿ ಸಿಂದಗಿಯಲ್ಲಿ ಭಾನುವಾರ ಅತ್ಯಂತ ಅದ್ದೂರಿಯಾಗಿ ನಡೆಯಿತು. ಪಟ್ಟಣದ ವಿವಿಧೆಡೆ ಯುವಕರು, ಮಕ್ಕಳು, ಮಹಿಳೆಯರಾದಿಯಾಗಿ ಹಿರಿಯರು ಬಣ್ಣವಾಡಿ ಖುಷಿ ಪಟ್ಟರು. ಶಾಂತೇಶ್ವರ ರಸ್ತೆಯಲ್ಲಿ ನೀಲಪ್ಪ ಬಳಗಾನೂರ, ಆನಂದ ಜೋಗೂರ, ಅಶೋಕ ಕುಲಕರ್ಣಿ, ಸಂಗೂ ಬಿರಾದಾರ, ಸಿದ್ದಲಿಂಗ ಪತ್ತಾರ, ಸುಬ್ಬಾರೆಡ್ಡಿ, ಅರವಿಂದ ಕೋಳಕೂರ, ಮುತ್ತು ಮಠ, ರಮೇಶ ಜಾವಳಗಿ ಮುಂತಾದವರು ಬಣ್ಣದಲ್ಲಿ ಮುಳುಗಿದ್ದರು. ಅವರು ಹಲಗೆ ತಾಳಿಗೆ ಹೆಜ್ಜೆ ಹಾಕುತ್ತ ಕುಣಿದು ಕುಪ್ಪಳಿಸಿದರು.ಜ್ಯೋತಿ ನಗರದಲ್ಲಿ ಎಂ.ಎನ್.ಕಿರಣರಾಜ್, ಬಿ.ಎಚ್.ಬಿರಾದಾರ, ಬಸವರಾಜ ಶೀಲವಂತ, ಯಶವಂತರಾಯ ರೂಗಿ, ಆರ್.ಎಂ.ಬಿರಾದಾರ, ಕಲಶೆಟ್ಟಿ ಮುಂತಾದ ರಾಜಕೀಯ ದುರೀಣರು, ಪ್ರಾಧ್ಯಾಪಕರು ಬಣ್ಣವಾಡಿದರು. ಬಸವನಗರದಲ್ಲಿ ರಿಯಾನ ಪುಣೇಕರ, ಸಾವಿತ್ರಿ ಉಪ್ಪಾರ, ಮಂಜುಳಾ ಕುಲಕರ್ಣಿ, ಜಯಶ್ರೀ ಕುಲಕರ್ಣಿ, ಮಲ್ಲಮ್ಮ, ಫಾತೀಮಾ ಬಂಥನಾಳ, ರಶ್ಮಿ ದೇಶೆಟ್ಟಿ, ಶಯನಾಜ ಕರ್ಜಗಿ, ರೇಣುಕಾ ಭಾಸಗಿ ಮುಂತಾದವರ ನೇತೃತ್ವದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಪರಸ್ಪರ ಒಬ್ಬರು ಇನ್ನೊಬ್ಬರ ಮುಖಕ್ಕೆ ಬಣ್ಣ ಹಚ್ಚಿ ಸಂತಸ ಪಟ್ಟರು.ಹಲವು ಯುವಕರು ಶವಯಾತ್ರೆ ಪ್ರದರ್ಶಿಸಿದರೆ ಇನ್ನೂ ಕೆಲವು ಯುವಕರು ಗುಂಡು ಹಾಕಿ ಆ ಅಮಲಿನಲ್ಲಿ ಮನರಂಜನೆ ನೀಡುತ್ತಿದ್ದರು. ಹೊಯ್ಕಂಡ ಬಾಯಿಗೆ ಹೋಳಿಗೆ ಎಂಬಂತೆ ಹೋಳಿಗಿ, ತುಪ್ಪ ತಿಂದು ಹೋಳಿ ಆಚರಿಸಿದರು. ಶನಿವಾರ ರಾತ್ರಿ ವಿವಿಧ ಬಡಾವಣೆಗಳಲ್ಲಿ ಕಾಮದಹನ ಕಾರ್ಯಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.