ಸೋಮವಾರ, ಮಾರ್ಚ್ 1, 2021
24 °C
ನಾ ಕಂಡ ಬೆಂಗಳೂರು

ಬದುಕಿಗೊಂದು ಭಾಷ್ಯ ಬರೆದ ಊರು

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಬದುಕಿಗೊಂದು ಭಾಷ್ಯ ಬರೆದ ಊರು

‘ಬೆಂಗಳೂರು’ ಎಂದರೆ ಏನೆಂದು ಹೇಳಲಿ? ಯಾವುದನ್ನು ನೆನಪಿಸಲಿ, ಹೇಗೆ ಶುರು ಮಾಡಲಿ, ಯಾವುದರಿಂದ ಆರಂಭಿಸಲಿ...

ಬದುಕು–ಭವಿಷ್ಯ ಎರಡನ್ನೂ ಕಟ್ಟಿಕೊಟ್ಟ, ನಾನೇನು ಎನ್ನುವುದನ್ನು ನನಗೇ ತಿಳಿಸಿಕೊಟ್ಟ ಅಪರೂಪದ ಊರಿದು. ಹೆಸರಿಗೆ ‘ಗಂಡನ ಊರು’ ಆದರೆ ನನ್ನೆದೆಯಲ್ಲಿ ತವರಿಗಿಂತ ಹೆಚ್ಚು ಆಪ್ತವಾದ ಊರು. ಎದೆಗೂಡಲ್ಲಿ ಬೆಚ್ಚನೆಯ ಭಾವಗಳನ್ನು ಮೀಟಿದ ಬೆಂಗಳೂರಿನ ಬಗ್ಗೆ ಏಷ್ಟು ಹೇಳಿದರೂ ಕಡಿಮೆಯೇ.ಜೀವನ ಎಷ್ಟು ಸುಂದರ ಎನ್ನುವುದನ್ನು ತೋರಿಸಿಕೊಟ್ಟು, ಖುಷಿಗೆ ಎಷ್ಟೊಂದು ಕಾರಣಗಳುಂಟು ಎನ್ನುವುದನ್ನು ತಿಳಿಸಿಕೊಟ್ಟು, ನನ್ನ ಮನದೊಳಗಿನ ಝೇಂಕಾರ, ಸಂಗೀತ ಪ್ರಿಯರ ಕಿವಿಗಪ್ಪಳಿಸುವಂತೆ ಮಾಡಲು ನೂರಾರು ಅವಕಾಶಗಳ ಬಾಗಿಲು ತೆರೆದಿಟ್ಟ ಊರಿದು. ನನ್ನ ಮೂಲ ಅಸ್ತಿತ್ವವೇ ಇಲ್ಲಿದೆ ಎಂದರೂ ತಪ್ಪಿಲ್ಲ.

* * *

ಸುಮಾರು ನಾಲ್ಕು ದಶಕಗಳ ಹಿಂದಿನ ಮಾತದು. ಮದುವೆಯಾಗಿ ಪತಿ ಬಿ.ಎಸ್‌. ವಿಶ್ವನಾಥ್‌ ಅವರ ಕೈ ಹಿಡಿದು ಬೆಂಗಳೂರಿಗೆ ಅಡಿ ಇಟ್ಟಾಗ ಕೇವಲ 20ರ ಹರೆಯ.  ಚಿಕ್ಕಮಗಳೂರಿನಿಂದ ಆಚೆ ಇರುವುದೆಲ್ಲ ನನ್ನ ಕಣ್ಣಿಗೆ ಸಂಪೂರ್ಣ ಹೊಸದೇ ಜಗತ್ತು. ಬೆಂಗಳೂರಿಗೆ ಬಂದ ಮೇಲಿಂದ ಹನುಮಂತನಗರದಲ್ಲಿಯೇ ನಮ್ಮ ವಾಸ್ತವ್ಯ. ‘ಬೆಂಗಳೂರು ಎಷ್ಟು ಚಂದದ ಊರು!’ ಎನ್ನುವ ಅಚ್ಚರಿ ಕಣ್ಣತುಂಬ. ಹನುಮಂತನಗರ ಎನ್ನುವ ಆ ಸ್ಥಳವೇ ಇಡಿ ಒಂದು ಜಗತ್ತಿನ ತೂಕದಂತೆ ಕಂಡಿತ್ತು ಆಗ.ಒಂದಲ್ಲ ಎರಡಲ್ಲ, ಬರೋಬ್ಬರಿ ಮೂರು ದಶಕಗಳನ್ನು ಹನುಮಂತನಗರದಲ್ಲಿಯೇ ಕಳೆದಿದ್ದು. ವಿಶಾಲವಾದ ರಸ್ತೆಗಳು, ಗುಡಿ–ಗುಂಡಾರಗಳು. ಭಕ್ತಿ–ಭಾವಕ್ಕಾಗಿ ರಾಮಾಂಜನೇಯ ದೇವಸ್ಥಾನ, ವಿಹಾರಕ್ಕಾಗಿ ವಿಶಾಲವಾದ ಉದ್ಯಾನಗಳು, ಬೇಕೆಂದಿದ್ದೆಲ್ಲ ಕೈ ಚಾಚಿದರೆ ಸಿಗುವಂತಹ ವಾತಾವರಣ, ಈಗಿನ ಮಾಲ್‌ಗಳೂ ನಾಚುವಂತಹ ವಾಣಿಜ್ಯ ಮಳಿಗೆಗೆಳು, ಅಂಗಡಿ–ಮುಂಗಟ್ಟುಗಳು... ರಸ್ತೆಗೊಬ್ಬರಂತೆ ಕಲಾವಿದರ ಮನೆಗಳನ್ನು ಹೊಂದಿರುವ ಅಪರೂಪದ ಕಲಾವಿದರ ಕಾಲೋನಿ ಅದು. ಗಾಯಕಿಯರಾದ ಛಾಯಾ, ಉಷಾ ಗಣೇಶ್‌, ಕಸ್ತೂರಿ ಶಂಕರ್‌, ಬಿ.ಕೆ. ಸುಮಿತ್ರಾ ಎಲ್ಲರ ಮನೆಗಳೂ ಅಲ್ಲಿಯೇ ಹತ್ತಿರ ಹತ್ತಿರ...ಹನುಮಂತನಗರ ಎಂದೊಡನೆ ಕಣ್ಮುಂದೆ ಬರುವ ಚಿತ್ರಣಗಳಿವು. ಯಾವುದಕ್ಕೂ ಆ ವಲಯ ದಾಟಿ ದೂರ ಹೋಗುವ ಪ್ರಸಂಗವೇ ಇರಲಿಲ್ಲ. ಎಲ್ಲವೂ ಅಲ್ಲಿಯೇ ಸಿಗುತ್ತಿತ್ತು. ಇನ್ನು ಇಡೀ ಬೆಂಗಳೂರಿನ ಬಗ್ಗೆ ಹೇಳುವುದಾದರೂ ಅಷ್ಟೇ. ಪ್ರಶಾಂತವಾದ ವಾತಾವರಣ, ಹಕ್ಕಿ–ಪಿಕ್ಕಿಗಳೆಲ್ಲ ಕಾಣುತ್ತಿದ್ದವು. ರಸ್ತೆಯ ಮೇಲೆ ಉಸಿರಾಡುವಂತಹ ವಾತಾವರಣವಿತ್ತು. ಮೂಗು, ಬಾಯಿ, ಮುಖ, ಮೂತಿಯನ್ನೆಲ್ಲ ಮುಚ್ಚಿಕೊಂಡು ಹೋಗಬೇಕಾದ ಪ್ರಮೇಯ ಏನೂ ಇರಲಿಲ್ಲ.ಹನುಮಂತನಗರದಿಂದ ರಾಜಭವನ ರಸ್ತೆಯಲ್ಲಿರುವ ಆಕಾಶವಾಣಿ ಕೇಂದ್ರವನ್ನು ನಾನು ಫಿಯೆಟ್‌ ಕಾರಿನಲ್ಲಿ ಕೇವಲ 12 ನಿಮಿಷದಲ್ಲಿ ತಲುಪುತ್ತಿದ್ದೆ. ಆ ರಸ್ತೆಯಲ್ಲಿ ಕಾರು ಓಡಿಸುವ ಖುಷಿಯೇ ಬೇರೆ. ಈಗ ಆ ಖುಷಿ ಬೆಂಗಳೂರಿನ ಯಾವ ಮೂಲೆಗೆ ಹೋದರೂ ಸಿಗದೇನೊ. ಆಕಾಶವಾಣಿ ಎನ್ನುವ ಅಂಬರ 

ನನ್ನ ಬದುಕಿನಲ್ಲಿ ಅಷ್ಟೇ ಮುಖ್ಯವಾದ ಪಾತ್ರ ವಹಿಸಿದ್ದು ಆಕಾಶವಾಣಿ ಕೇಂದ್ರ. ನಿಜಕ್ಕೂ ಅಂಬರದಷ್ಟು ವಿಶಾಲವೂ, ವಿಶಿಷ್ಟವೂ ಆದ ಬೇರೆಯದೇ ಲೋಕವದು. ಅಲ್ಲಿ ಮಿಂಚುವ ನಕ್ಷತ್ರಗಳು ಸಾವಿರ ಸಾವಿರ. ಅದೆಷ್ಟೊ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿಗೆ ಅದು ಮಿನುಗುವ ಶಕ್ತಿ ನೀಡಿದೆ.ನನ್ನ ಮಡಿಲಿಗೆ ನಾನು ಎಣಿಸಿರದ, ಬಯಸಿರದ ಭವಿಷ್ಯವನ್ನು ತಂದು ಹಾಕಿದ ಕಲ್ಪವೃಕ್ಷ. ಆಕಾಶವಾಣಿಯನ್ನು ನೋಡುವತನಕ ನನಗೆ ನನ್ನ ಶಕ್ತಿ–ಸಾಮರ್ಥ್ಯ, ನನ್ನ ಗುರಿ–ಉದ್ದೇಶ ಯಾವುದೂ ಸ್ಪಷ್ಟವಾಗಿರಲಿಲ್ಲ. ನನ್ನ ದನಿ ಹೀಗೆ ಸಮಸ್ತ ಕನ್ನಡಿಗರ ಮನಮುಟ್ಟಬಹುದು ಎನ್ನುವ ಕಲ್ಪನೆಯೂ ಇರಲಿಲ್ಲ. ಅದನ್ನೆಲ್ಲ ಸಾಕಾರಗೊಳಿಸಿದ ಹಿರಿಮೆ ಆಕಾಶವಾಣಿಗೆ ಸೇರಬೇಕು.ಮದುವೆಯಾಗಿ ಬಂದ ವರ್ಷ, ಅಂದರೆ 1976–77ರಲ್ಲಿ ಸುಮ್ಮನೇ ಕೂರಲಾಗದೇ ಆದರ್ಶ ಇನ್‌ಸ್ಟಿಟ್ಯೂಟ್‌ನಲ್ಲಿ ಹಿನ್ನೆಲೆ ಸಂಗೀತದ ತರಬೇತಿಗೆ ಸೇರಿಕೊಂಡೆ. ಅಲ್ಲಿಂದಲೇ ಆಕಾಶವಾಣಿ ಸಂಪರ್ಕ ಬೆಳೆದಿದ್ದು. ಸಾಲು ಸಾಲು ಅವಕಾಶಗಳನ್ನು  ನೀಡುವ ಮೂಲಕ ಭವಿಷ್ಯಕ್ಕೊಂದು ಭಾಷ್ಯ ಬರೆಯಿತು. ಅಷ್ಟೇ ಅಲ್ಲ, ಅದಕ್ಕೂ ಮುಖ್ಯವಾಗಿ ಎಂದೆಂದಿಗೂ ನನ್ನೊಂದಿಗೆ ನಿಲ್ಲುವಂತಹ ಗಟ್ಟಿಯಾದ ಗೆಳೆತನದ ವಲಯವನ್ನೂ ಅದು ನನಗೆ ಧಾರೆ ಎರೆಯಿತು.ರತ್ನಮಾಲಾ ಪ್ರಕಾಶ್, ಛಾಯಾ, ಬಿ.ಕೆ.ಸುಮಿತ್ರಾ, ಮಾಲತಿ ಶರ್ಮಾ, ಕಸ್ತೂರಿ ಶಂಕರ್‌... ಹೀಗೆ ಅನೇಕ ಕಲಾವಿದರ ಸ್ನೇಹವಲಯ ನನ್ನದಾಯಿತು. ಅವರೆಲ್ಲ ಅದಾಗಲೇ ಹಾಡಿ ಹೆಸರಾದವರು. ಅವರ ದನಿಗಳನ್ನು ಕೇಳಿ ಖುಷಿ ಪಡುತ್ತಿದ್ದ ನನಗೆ ಅವರೆಲ್ಲರ ಸ್ನೇಹಕೂಟ ದೊರೆತಿದ್ದು ಆಕಾಶವಾಣಿಯಿಂದಲೇ. ನನಗಿಂತ ಹಿರಿಯರೇ ಆದರೂ ನಮ್ಮ ನಡುವೆ ಯಾವತ್ತೂ ಹಿರಿ–ಕಿರಿಯರೆನ್ನುವ ಅಂತರ ಮೂಡಲಿಲ್ಲ. ಸಾಹಿತ್ಯ, ಸಂಗೀತದ ಒಲವು ಹೆಚ್ಚಿದ್ದು ಈ ಸತ್ಸಂಗದಲ್ಲಿಯೇ. ಅಶ್ವತ್ಥ್‌, ಪದ್ಮಚರಣ್, ಎಚ್‌.ಕೆ. ನಾರಾಯಣ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರು ಆಕಾಶವಾಣಿಗೆ ಬರುತ್ತಿದ್ದರು. ಅವರೆಲ್ಲರ ಒಡನಾಟ ಹೊಸದೊಂದು ಲೋಕದ ಪರಿಚಯ ಮಾಡಿಸಿಕೊಟ್ಟಿತು. ಅಲ್ಲಿಂದ ದೂರದರ್ಶನದ ಅವಕಾಶಗಳು ಬಂದವು. ಸಾಕಷ್ಟು ಕಾರ್ಯಕ್ರಮಗಳಿಗೂ ಆಹ್ವಾನ ಬರುತ್ತಿತ್ತು. ನಿಜಕ್ಕೂ ನನಗೊಂದು ಅರ್ಥಪೂರ್ಣ ಬದುಕು ಕಟ್ಟಿಕೊಟ್ಟ ಕೀರ್ತಿ ಆಕಾಶವಾಣಿಗೇ ಸಲ್ಲಬೇಕು.ಶಾಪಿಂಗ್‌ ಎನ್ನುವ ಪರಿಕಲ್ಪನೆ ಆಗೆಲ್ಲ ಇಷ್ಟು ಆಳವಾಗಿ ಬೇರೂರಿರಲಿಲ್ಲ. ಬೇಕಿರುವುದೆಲ್ಲ ಹನುಮಂತನಗರದಲ್ಲಿಯೇ ಸಿಗುತ್ತಿತ್ತು. ಅಷ್ಟಕ್ಕೂ ಹೋಗಬೇಕು ಎನಿಸಿದರೆ ಕಮರ್ಷಿಯಲ್‌ ಸ್ಟ್ರೀಟ್‌, ಗಾಂಧಿ ಬಜಾರ್‌ಗೆ ಹೋಗುವುದಿತ್ತು. ಕಳೆದ ಹತ್ತು ವರ್ಷಗಳಿಂದ ಗಿರಿನಗರದಲ್ಲಿಯೇ ವಾಸವಾಗಿದ್ದೇವೆ. ಆದರೂ ಮನಸ್ಸು ಮಾತ್ರ ಹನುಮಂತನಗರದಿಂದ ದೂರ ಸರಿದಿಲ್ಲ. ಇದೆಲ್ಲದರ ನಡುವೆಯೇ ನನ್ನ ಸಂಸಾರ ಬಂಡಿಯೂ ಸುಗಮವಾಗಿಯೇ ಸಾಗಿಕೊಂಡು ಬಂದಿದೆ.ಮಗ ಪೃಥ್ವಿ ಹಾಗೂ ಮಗಳು ಸಿರಿ ಹುಟ್ಟಿದ ಮೇಲೆ ಸಂಸಾರ ದೊಡ್ಡದಾಯಿತು. ಜವಾಬ್ದಾರಿಗಳೂ ಹೆಚ್ಚಿದವು. ಆದರೂ ಹಾಡುವ ಖುಷಿ ಕಡಿಮೆ ಏನೂ ಆಗಲಿಲ್ಲ.  ಮಗ–ಮಗಳು ಇಬ್ಬರೂ ಅವರವರ ಸಂಸಾರಗಳಲ್ಲಿ ಮುಳುಗಿದ್ದಾರೆ. ಮಗ ಪೃಥ್ವಿ ಸಹ ಈಗ ರೇಡಿಯೊ ಒನ್‌ನಲ್ಲಿ ಆರ್‌ಜೆ ಆಗಿ ಕೆಲಸ ಮಾಡುತ್ತಿದ್ದಾನೆ. ಸಮಯ ಸಿಕ್ಕರೆ ಇಬ್ಬರು ಮುದ್ದಾದ ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಬಯಸುತ್ತೇನೆ.ಆದಾಗ್ಯೂ ವಿಶ್ರಾಂತಿಯ ಹಂಬಲ ಸದ್ಯಕ್ಕಿಲ್ಲ. ಇನ್ನೂ ಹೊಸ ಹೊಸ ವಲಯಗಳಲ್ಲಿ ಕೆಲಸ ಮಾಡುವ ಹಂಬಲವಿದೆ. ನೂರಾರು ಸೀಡಿಗಳಿಗೆ ಹಾಡಿದ್ದೇನೆ, ಜಾಹೀರಾತು, ಧಾರಾವಾಹಿಗಳಿಗೆ, ಸಾಕ್ಷ್ಯಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಆದರೆ ಹೊಸಬರ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡುವ ಆಶಯ ಇನ್ನೂ ಉತ್ಕಟವಾಗಿದೆ.ಏನೇ ಮಾಡಿದರೂ ಇಲ್ಲಿಯೇ ದುಡಿಯುವ, ಇಲ್ಲಿಗೇ ನೀಡುವ, ಇಲ್ಲಿಂದಲೇ ಪಡೆದುಕೊಳ್ಳುವ ಬಯಕೆ ನನ್ನದು. ಇಷ್ಟು ದಿನಗಳಲ್ಲಿ ಅನೇಕ ದೇಶಗಳನ್ನು ಸುತ್ತಿ ಬಂದಿದ್ದೇನೆ. ಯುರೋಪ್‌, ಮಲೇಷ್ಯಾ, ಜೋರ್ಡಾನ್‌, ಬಾಲಿ, ಜಪಾನ್‌, ಸಿಂಗಾಪುರ  ಸೇರಿದಂತೆ ಹಲವಾರು ದೇಶಗಳನ್ನು ನೋಡಿ ಬಂದಿದ್ದೇನೆ. ಕೊನೆಗೂ ಮನಸ್ಸಿಗೆ ಸಮಾಧಾನ ಎನಿಸುವುದು ನನ್ನೂರು ತಲುಪಿದ ಮೇಲೆಯೇ. ಏನಿದ್ದರೂ ಈ ಊರೇ ಚಂದ ಅಲ್ಲವೇ?  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.