ಗುರುವಾರ , ಮೇ 13, 2021
36 °C

ಬಸ್-ಬೈಕ್ ಡಿಕ್ಕಿ: ವಿದ್ಯಾರ್ಥಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೋರಮಂಗಲ 80 ಅಡಿ ರಸ್ತೆಯ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಬಳಿ ಶುಕ್ರವಾರ ಸಂಜೆ ನಡೆದಿದೆ.ಜಯನಗರ 9ನೇ ಹಂತದ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಗೌರವ್ (16) ಮತ್ತು ಅಶ್ವಿನ್ (16) ಮೃತರು. ಕಾಲೇಜು ಮುಗಿದ ನಂತರ ಅವರಿಬ್ಬರೂ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಅಶ್ವಿನ್ ಬೇಗೂರು ವಾಸಿ ರಘುರಾಮ್ ಎಂಬುವರ ಮಗ. ರಘುರಾಮ್ ಅವರು ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧೀಕ್ಷಕರಾಗಿದ್ದಾರೆ. ಗೌರವ್ ಅರಕೆರೆ ಸಮೀಪದ ಎಲ್ ಅಂಡ್ ಟಿ ಸೌತ್ ಸಿಟಿ ಬಡಾವಣೆ ನಿವಾಸಿ ಉದ್ಯಮಿ ನಾರಾಯಣ್ ಎಂಬುವರ ಮಗನೆಂದು ಪೊಲೀಸರು ತಿಳಿಸಿದ್ದಾರೆ. ವಾಹನವನ್ನು ಚಾಲನೆ ಮಾಡುತ್ತಿದ್ದ ಗೌರವ್, ಹಿಂದೆ ಬಸ್ ಬರುತ್ತಿರುವುದನ್ನು ಗಮನಿಸದೆ ಎಡಕ್ಕೆ ವಾಹನ ನುಗ್ಗಿಸಿದರು. ಹಿಂದಿನಿಂದ ವೇಗವಾಗಿ ಬಂದ ಬಸ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ವಾಹನದಿಂದ ಕೆಳಗೆ ಬಿದ್ದ ಅವರಿಬ್ಬರ ಮೇಲೂ ಅದೇ ಬಸ್‌ನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಘಟನೆ ನಂತರ ಬಸ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಶಾಂತಿನಗರ ಎರಡನೇ ಡಿಪೊಗೆ ಸೇರಿದ ಆ ಬಸ್ ಮೆಜೆಸ್ಟಿಕ್‌ನಿಂದ ಸರ್ಜಾಪುರಕ್ಕೆ ಹೋಗುತ್ತಿತ್ತು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗೌರವ್ ಹೆಲ್ಮೆಟ್ ಧರಿಸಿದ್ದರು. ಬಸ್‌ನ ಚಕ್ರ ಹರಿದ ಪರಿಣಾಮ ಅವರ ಹೆಲ್ಮೆಟ್ ಸಂಪೂರ್ಣ ಚೂರು ಚೂರಾಗಿದೆ. ಮೃತರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಒಪ್ಪಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅಪಘಾತ ತಿಳಿದ ಮೃತರ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಆಡುಗೋಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪಘಾತ: ಇಬ್ಬರ ಸಾವು

ಮುಳಬಾಗಲು ವರದಿ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಕಪ್ಪಲಮೊಡಗು ಗ್ರಾಮದ ಬಳಿ ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಗುರುವಾರ ಸಂಭವಿಸಿದ ಡಿಕ್ಕಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ್ವಿಚಕ್ರ ವಾಹನ ಸವಾರರು ಶುಕ್ರವಾರ ಮೃತಪಟ್ಟಿದ್ದಾರೆ.ಇವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಿವಾಸಿಗಳಾದ ನಾರಾಯಣಸ್ವಾಮಿ (30) ಮತ್ತು ಶ್ರೀಧರ್ (32) ಎಂದು ಗುರುತಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.