ಭಾನುವಾರ, ಏಪ್ರಿಲ್ 18, 2021
28 °C

ಬಾಂದಾರ ಕಾಮಗಾರಿ ಕಳಪೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ತಾಲ್ಲೂಕಿನ ಗಡಿಯನ್ನು ದಾಟಿ ಬಾಂದಾರ ನಿರ್ಮಿಸುತ್ತಿರುವುದ ಲ್ಲದೇ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಕಾಮಗಾರಿ ಸ್ಥಗಿತಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಇಲ್ಲಿನ ಕೊಡಗಾರ ಗ್ರಾಮದ ಹಳ್ಳದಲ್ಲಿ ನಡೆಯಿತು.ಕೊಡಗಾನೂರ ಗ್ರಾಮವು ರೋಣ ತಾಲ್ಲೂಕಿನ ವ್ಯಾಪ್ತಿಗೆ ಬರುತ್ತದೆ. ಆದರೆ ಗ್ರಾಮದ ಹಳ್ಳದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಯಲಬುರ್ಗಾ ತಾಲ್ಲೂಕು ಆಡಳಿತ ಇಲ್ಲಿನ ಹಳ್ಳದಲ್ಲಿ ಬಾಂದಾರ ನಿರ್ಮಿಸುತ್ತಿದೆ.

ಇದರಿಂದ ಊರಿಗೆ ಹೊಂದಿಕೊಂಡಿರುವ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಅಪಾಯವನ್ನುಂಟು ಮಾಡುವ ಸಂಭವವಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮಳೆಗಾಲದಲ್ಲಿ ಹಳ್ಳದ ನೀರು ಗ್ರಾಮದೊಳಗೆ ನುಗ್ಗುತ್ತದೆ. ಹೀಗಿದ್ದೂ ಇಲ್ಲಿ ಬಾಂದಾರ ನಿರ್ಮಿಸಿದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಗ್ರಾಮದೊಳಗೆ ನುಗ್ಗಿ ಇನ್ನಿಲ್ಲದ ತೊಂದರೆಯುಂಟು ಮಾಡಲಿದೆ. ಜೊತೆಗೆ ಇಲ್ಲಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಗ್ರಾ,ಪಂ.ನಿಂದ ಯಾವುದೇ ಪರವಾನಿಗೆಯನ್ನು ತೆಗೆದುಕೊಂಡಿಲ್ಲ ಮತ್ತು ಕಾಮಗಾರಿ ಯೋಜನೆ ಕುರಿತು ಯಾವುದೇ ಮಾಹಿತಿಯನ್ನು ಕೊಡುತ್ತಿಲ್ಲ. ಹೀಗಾಗಿ ತಕ್ಷಣವೇ ಕಾಮಗಾರಿಯನ್ನು ನಿಲ್ಲಿಸಿ’ ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.

 

ನಂಜುಂಡಪ್ಪ ವರದಿಯಂತೆ ಹಿಂದುಳಿದ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಇಲ್ಲಿ ಅಂದಾಜು ರೂ.17 ಲಕ್ಷ  ವೆಚ್ಚದಲ್ಲಿ ಎರಡು ಮೀಟರ್ ಎತ್ತರ ಹಾಗೂ 14 ಮೀಟರ್ ಉದ್ದದ ಬಾಂದಾರ ನಿರ್ಮಿಸಲಾಗುತ್ತಿದೆ. ಕಾಮಗಾರಿಗೆ ಗ್ರಾಮದ ಹಿರಿಯರು ಒಪ್ಪಿಗೆ ಕೊಟ್ಟ ನಂತರ ಕಾಮಗಾರಿ ಆರಂಭಿಸಲಾಗು ತ್ತಿದೆ. ಇನ್ನು ಕಾಮಗಾರಿ ಗುಣಮಟ್ಟದ ಕುರಿತು ಸೋಮವಾರ ಸ್ಥಳಕ್ಕೆ ಎಂಜಿನಿಯರ್ ಭೇಟಿ ನೀಡಲಿದ್ದಾರೆ. ಹೀಗಾಗಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಬೇಕೆಂದು ಗುತ್ತಿಗೆದಾರರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡರು.

 

ಇದಕ್ಕೆ ಒಪ್ಪದ ಪ್ರತಿಭಟನಾಕಾರರು  ಯಲಬುರ್ಗಾ ತಾಲ್ಲೂಕಿನ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿ ಮತ್ತು ಯೋಜನೆ ಕುರಿತು ಸಂಪೂರ್ಣ ಮಾಹಿತಿ ನೀಡುವವರೆಗೂ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ರೇಣುಕಯ್ಯ ಅಂಗಡಿ, ರಾಚಯ್ಯ ಬಾಳೆಕಾಯಿಮಠ, ಬಾಲಚಂದ್ರ ವಾಲ್ಮೀಕಿ, ಪ್ರಭುಲಿಂಗಯ್ಯ, ವಿರೇಶ, ಭರಮಪ್ಪ ಹರಿಜನ, ಶರಣಪ್ಪ ಹೂಗಾರ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.