ಗುರುವಾರ , ಮೇ 6, 2021
31 °C

ಬಿಎಸ್‌ವೈಗೆ ಜಾಮೀನು: ಲೋಕಾಯುಕ್ತಕ್ಕೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದ್ಯಮಿಯೊಬ್ಬರಿಗೆ ದೇವನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿನ 26 ಎಕರೆ ಭೂಮಿ ಹಂಚಿಕೆಯ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನಿನ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಬುಧವಾರ ಲೋಕಾಯುಕ್ತಕ್ಕೆ ನೋಟಿಸ್ ನೀಡಿದೆ.ಉದ್ಯಮಿ ಆಲಂ ಪಾಷಾ ಖಾಸಗಿ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಯಡಿಯೂರಪ್ಪ ಅವರ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರು ಲೋಕಾಯುಕ್ತ ಹಾಗೂ ಇತರರಿಗೆ ನೋಟಿಸ್ ನೀಡಲು ಆದೇಶಿಸಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಕಂಪೆನಿಗೆ ನೀಡಿದ್ದ ಯೋಜನೆಯನ್ನು ವಾಪಸ್ ಪಡೆದಿದ್ದರು ಎಂದು ಆಲಂ ಪಾಷಾ ದೂರು ಸಲ್ಲಿಸಿದ್ದರು.ಸರ್ಕಾರ ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಉತ್ತಮ ಮನೆಗಳನ್ನು ನಿರ್ಮಿಸಲು ಅಂದಾಜು 600 ಕೋಟಿ ಮೊತ್ತದ ಯೋಜನೆಯನ್ನು `ಪಾಷ್ ಸ್ಪೇಸ್ ಇಂಟರ್‌ನ್ಯಾಷನಲ್' ಕಂಪೆನಿಗೆ ವಹಿಸಿತ್ತು. ಈ ಯೋಜನೆಗೆ 26 ಎಕರೆ ಭೂಮಿಯನ್ನು ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೀಡುವಂತೆ 2010ರ ಜುಲೈನಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸರ್ಕಾರ ನಿರ್ದೇಶನ ನೀಡಿತ್ತು.

ಈ ಯೋಜನೆಗೆ ಅನುಮೋದನೆ ನೀಡಿದ ಸಮಿತಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಮುರುಗೇಶ್ ನಿರಾಣಿ, ವಿ.ಪಿ. ಬಳಿಗಾರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು. ಆದರೆ, ಈ ಯೋಜನೆಯನ್ನು ವಾಪಸ್ ಪಡೆಯಲಾಗಿದೆ ಮತ್ತು ಈ ಯೋಜನೆಯನ್ನು ಮತ್ತೊಂದು ಕಂಪೆನಿಗೆ ನೀಡಲಾಗಿದೆ ಎಂದು 2011ರ ಮಾರ್ಚ್ 11ರಂದು ಸರ್ಕಾರ ದಿಢೀರ್ ಆದೇಶ ಹೊರಡಿಸಿತು. ನಂತರ ಬಿ.ಎಸ್. ಯಡಿಯೂರಪ್ಪ,  ಇತರರು ಸೇರಿಕೊಂಡು ತಮ್ಮ ಕಂಪೆನಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮಗೆ ವಂಚನೆ ಮಾಡಿದ್ದಾರೆ ಎಂದು ಪಾಷಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.ತಮ್ಮ ಕಂಪೆನಿ ಈ ಯೋಜನೆ ಆರಂಭಿಸಲು ಆಸಕ್ತಿ ವಹಿಸಿಲ್ಲ ಎಂದು ಈ ನಕಲಿ ದಾಖಲೆಯಲ್ಲಿ ತಿಳಿಸಲಾಗಿತ್ತು. ಈ ಯೋಜನೆಯನ್ನು ರದ್ದುಪಡಿಸುವ ಕುರಿತು 2011 ಜನವರಿ 24ರಂದೇ ಸಭೆ ನಡೆದಿತ್ತು. ಆದರೆ, ತಮ್ಮ ಕಂಪೆನಿ ಗೃಹ ನಿರ್ಮಾಣದ ಯೋಜನೆ ಆರಂಭಿಸಲು ಆಸಕ್ತಿ ವಹಿಸಿಲ್ಲ ಎಂದು ಬರೆದ ಪತ್ರವನ್ನು 2011 ಫೆ.1ರಂದು  ಸ್ವೀಕರಿಸಲಾಯಿತು.

ಮೊದಲು ಯೋಜನೆಯನ್ನು ರದ್ದುಪಡಿಸಿದ ನಂತರವೇ ತಮ್ಮ ಕಂಪೆನಿ ಆಸಕ್ತಿ ವಹಿಸಿಲ್ಲ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದೆ. ಲೋಕಾಯುಕ್ತಕ್ಕೆ ಈ ಬಗ್ಗೆ ದೂರು ಸಲ್ಲಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.