ಶನಿವಾರ, ಮೇ 28, 2022
29 °C

ಬಿಜೆಪಿ ಶಾಸಕರ ಅನರ್ಹತೆ: ತೀರ್ಪು ಕಾಯ್ದಿರಿಸಿದ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕರ್ನಾಟಕ ವಿಧಾನಸಭೆ ಸ್ಪೀಕರ್ ನಿರ್ಣಯವನ್ನು ಎತ್ತಿ ಹಿಡಿದ ಹೈಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕದ 11 ಮಂದಿ ಬಿಜೆಪಿ ಅನರ್ಹ ಶಾಸಕರ ಪೈಕಿ ನಾಲ್ವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಕುರಿತ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.

ನಾಲ್ವರು ಶಾಸಕರಾದ ಗೋಪಾಲಕೃಷ್ಣ ಬೇಳೂರು, ಶಿವನಗೌಡ ನಾಯಕ್, ಶಂಕರಲಿಂಗೇಗೌಡ ಮತ್ತು ಎಸ್.ಕೆ. ಬೆಳ್ಳುಬ್ಬಿ ಪರ ವಕೀಲರು ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಧಾಸಭೆ ಸ್ಪೀಕರ್ ಪರ ವಕೀಲರ ವಾದವನ್ನು ದೀರ್ಘ ಅವಧಿವರೆಗೆ ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಮತ್ತು ಸಿರಿಯಾಕ್ ಜೋಸೆಫ್ ಅವರನ್ನು ಒಳಗೊಂಡ ಪೀಠವು ತೀರ್ಪನ್ನು  ಕಾಯ್ದಿರಿಸಿತು.

ತಮ್ಮ ಅನರ್ಹತೆಯು ಸಾರ್ವಜನಿಕ ಮಹತ್ವ ಇರುವ ಸಂವಿಧಾನಾತ್ಮಕವಾದ ಮತ್ತು ಆಡಳಿತಾತ್ಮಕವಾದ ಅನೇಕ ಮುಖ್ಯ ಪ್ರಶ್ನೆಗಳನ್ನು ಎತ್ತಿದೆ ಎಂದು ವಿಶೇಷ ಮೇಲ್ಮನವಿಯಲ್ಲಿ ಶಾಸಕರು ಹೇಳಿದ್ದಾರೆ.

ಬಿಜೆಪಿಯನ್ನು ಅಥವಾ ಬಿಜೆಪಿ ಶಾಸಕಾಂಗ ಪಕ್ಷದ ಸದಸ್ಯತ್ವವನ್ನು ತ್ಯಜಿಸುವ ಉದ್ದೇಶವೇ ತಮಗೆ ಇರಲಿಲ್ಲ. ‘ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರನ್ನು ತೆಗೆಯುವ ಮೂಲಕ ಪಕ್ಷದ ವರ್ಚಸ್ಸನ್ನು ನಿಷ್ಕಳಂಕಗೊಳಿಸುವುದು’  ರಾಜ್ಯಪಾಲರಿಗೆ ತಾವು ಬರೆದ ಪತ್ರದ ಗುರಿ ಆಗಿತ್ತು ಎಂದು ಸ್ಪೀಕರ್ ಅವರು ನೀಡಿದ ಷೋಕಾಸ್ ನೋಟಿಸಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿರುವುದಾಗಿ ಈ ಶಾಸಕರು ತಿಳಿಸಿದ್ದಾರೆ.

ಪಕ್ಷವನ್ನು ತೊರೆಯುವ ಯಾವುದೇ ಉದ್ದೇಶವಿಲ್ಲದ ಆದರೆ ‘ಭ್ರಷ್ಟ’ ಮುಖ್ಯಮಂತ್ರಿಯನ್ನು ತೆಗೆದು ಹಾಕುವ ಮೂಲಕ ಪಕ್ಷದ ವರ್ಚಸ್ಸು ಮತ್ತು ಕೀರ್ತಿ ಉಳಿಸುವ ನಂಬಿಕೆಯ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯವನ್ನು ಪಕ್ಷದ ಸದಸ್ಯತ್ವವನ್ನು ಸ್ವತಃ ತೊರೆಯುವ ಕ್ರಮ ಎಂದು ಪರಿಗಣಿಸಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬಿಜೆಪಿ ಸದಸ್ಯತ್ವನ್ನು ಸ್ವತಃ ತೊರೆದಿದ್ದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಮತ ಹಾಕಬಹುದೆಂದು ಗ್ರಹಿಸಿ ಮತ ಯಾಚನೆಗೆ ಮೊದಲೇ  ತಮ್ಮನ್ನು ಅನರ್ಹಗೊಳಿಸಲಾಯಿತು ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

ಅಕ್ಟೋಬರ್ 29ರಂದು ಕರ್ನಾಟಕ ಹೈಕೋರ್ಟ್‌ನ ಮೂರನೇ ನ್ಯಾಯಾಧೀಶರು ಮುಖ್ಯನ್ಯಾಯಮೂರ್ತಿಯವರ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ ಬಿಜೆಪಿಯ 11 ಮಂದಿ ಬಂಡುಕೋರ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.