ಮಂಗಳವಾರ, ಜೂನ್ 15, 2021
27 °C
ನೆಲದ ನಂಟು

ಬ್ಯಾಂಕ್ ಬಿಟ್ಟು ಕೃಷಿಯತ್ತ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

‘ಮನಸ್ಸು ಮಾಡಿದರೆ ಹತ್ತಾರು ಜನರಿಗೆ ಉದ್ಯೋಗ ಕೊಡುವ ಬಲ ನನ್ನಲ್ಲಿಯೇ ಇರುವಾಗ ಇನ್ನೊಬ್ಬರ ಅಡಿಯಾಳಾಗಿ ಕೆಲಸ ಮಾಡುವುದೇಕೆ’ ಎಂದು ಆಲೋಚಿಸಿದ್ದ ಯುವಕನೊಬ್ಬ, ಕೈಯಲ್ಲಿದ್ದ ‘ಬ್ಯಾಂಕ್‌ ಮ್ಯಾನೇಜರ್‌’ ಕೆಲಸಕ್ಕೆ ರಾಜೀನಾಮೆ ನೀಡಿ ತಾವು ಅಂದುಕೊಂಡಂತೆ ನಡೆದು ತೋರಿಸಿದ್ದಾರೆ!ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ಈ ಯುವಕ, ಆಯ್ದುಕೊಂಡಿದ್ದು ವ್ಯಾಪಾರ, ವ್ಯವಹಾರದ ಕ್ಷೇತ್ರವನ್ನಲ್ಲ. ಬದಲಿಗೆ, ಕೃಷಿಯಲ್ಲಿ ಭವಿಷ್ಯವಿಲ್ಲ ಎಂದು ಅನೇಕ ಯುವಕರು ಅಂದುಕೊಂಡಿರುವ ಕೃಷಿ ಕ್ಷೇತ್ರವನ್ನು. ಈ ಕ್ಷೇತ್ರದಲ್ಲಿಯೇ ಮೂರು ದಶಕಗಳಿಂದ ಯಶ ಸಾಧಿಸಿ ಎಲ್ಲರೂ ಹುಬ್ಬೇರಿಸು­ವಂತೆ ಮಾಡಿದ್ದಾರೆ. ಇವರೇ ಶಿವಪುತ್ರಪ್ಪ ಎತ್ತಿನಮನಿ.ಬಿಎಸ್ಸಿ, ಎಲ್‌ಎಲ್‌ಬಿ ಓದಿರುವ ಶಿವಪುತ್ರಪ್ಪ ಅವರಿಗೆ ಹಗರಿ ಬೊಮ್ಮನಹಳ್ಳಿಯಲ್ಲಿರುವ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿ ಸೇವೆ ದಕ್ಕಿತು. ಅದು 1983ರ ಸಮಯ. ಒಂದು ಸಂಜೆ ಮನೆಗೆ ಬಂದು ‘ಕೃಷಿ ಮಾಡುವ ಉದ್ದೇಶದಿಂದ ನಾನು ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಪತ್ನಿ ಪ್ರಮೀಳಾ ಅವರೆದುರು ಹೇಳಿದಾಗ ಪ್ರಮೀಳಾ ಅವರಿಗೆ ಮೊದಲು ದಿಗಿಲಾಯಿತು. ‘ಕೈ ತುಂಬ ಸಂಬಳದ ನೌಕರಿ ಇರುವ ಗಂಡನೇ ಬೇಕು’ ಎಂಬ ಕನಸು ಕಾಣುವ ಅದೆಷ್ಟೋ ಯುವತಿಯರಂತೆ ಪ್ರಮೀಳಾ ಅವರೂ ಕನಸು ಕಂಡು, ಅದನ್ನು ನನಸಾಗಿಸಿಕೊಂಡು, ಹೊಸ ಜೀವನಕ್ಕೆ ಅಡಿ ಇರಿಸಿದ್ದರು.ಕೆಲವೇ ದಿನಗಳಲ್ಲಿ ಗಂಡನ ಕನಸು ಏನು ಎಂಬುದೂ ಇವರಿಗೆ ಮನವರಿಕೆಯಾಗಿತ್ತು. ಅದಕ್ಕೆಂದೇ ಇವರು ಪತಿ ಕೆಲಸ ಬಿಡುತ್ತೇನೆ ಅಂತ ತಿಳಿಸುತ್ತಿದ್ದಂತೆಯೇ ತಮ್ಮ ಸಮ್ಮತಿ ಸೂಚಿಸಿ, ‘ಆಯಿತು ನಿಮ್ಮ ಇಚ್ಛೆ’ ಎಂದಷ್ಟೇ ಹೇಳದೆ, ‘ನಿಮ್ಮ ಕನಸನ್ನು ನನಸಾಗಿಸುವುದಕ್ಕೆ ನಾನೂ ಕೈ ಜೋಡಿಸುತ್ತೇನೆ’ ಎಂಬ ಭರವಸೆಯನ್ನೂ ನೀಡಿದರು.ಕೃಷಿಯ ಕನಸು, ಪತ್ನಿಯ ಬೆಂಬಲ ಇದರಿಂದ ಹಗರಿ­ಬೊಮ್ಮನ­­­ಹಳ್ಳಿಯಲ್ಲಿನ ಶಿವಾನಂದ ನಗರ ಗ್ರಾಮದ ಹೊರ ವಲಯ­ದಲ್ಲಿರುವ 5 ಎಕರೆ ಜಮೀನು ಖರೀದಿಸಿ ಕೃಷಿಯಲ್ಲಿ ತೊಡಗಿದರು ಶಿವ­ಪುತ್ರಪ್ಪ. ಪ್ರಮೀಳಾ ಅವರೂ ಪತಿಯೊಂದಿಗೆ ಕೈ ಜೋಡಿಸಿರುವ ಕಾರಣ ಈ ಮೂರು ದಶಕಗಳಲ್ಲಿ ಇವರ ಕುಟುಂಬ ಕೃಷಿಯಲ್ಲೂ ಅದ್ಭುತ  ಸಾಧನೆ ಮಾಡಿದೆ.ಕೃಷಿಗೆ ಪ್ರೇರಣೆ

ಆಂಧ್ರದ ರೈತರು ಹಗರಿ ಬೊಮ್ಮನಹಳ್ಳಿ ಸುತ್ತಮುತ್ತ ವಲಸೆ ಬಂದು, ಕೃಷಿಯಲ್ಲೇ ಲಾಭ ಗಳಿಸಿದ್ದು ಶಿವಪುತ್ರಪ್ಪ ಅವರಿಗೆ ಪ್ರೇರಣೆ. ‘ನೆರೆಯ ರಾಜ್ಯಗಳವರು ಇಲ್ಲಿಗೆ ಬಂದು ಯಶ ಗಳಿಸಿರುವಾಗ ಇಲ್ಲಿಯವರೇ ಆದ ನಾವೇಕೆ ಅವರಂತೆ ಯಶಸ್ಸನ್ನು ಸಾಧಿಸಬಾರದು ಎಂಬ ಆಲೋಚನೆ ಬಂದಿತು. ಇದರ ಪರಿಣಾಮವಾಗಿ ಬ್ಯಾಂಕ್‌ ಉದ್ಯೋಗ ತೊರೆದು, ಕೃಷಿಯತ್ತ ಮುಖ ಮಾಡಿದೆ’ ಎನ್ನುತ್ತಾರೆ ಶಿವಪುತ್ರಪ್ಪ.

ದಾಳಿಂಬೆ, ತೆಂಗು, ಪೇರಲ, ಸಪೋಟಾ, ತಾಳೆ, ಹೆಬ್ಬೇವು, ಮಲ್ಲಿಗೆ, ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಯತ್ತಿರುವ ಶಿವ­ಪುತ್ರಪ್ಪ, ತೆರೆದ ಬಾವಿ, ಕೊಳವೆಬಾವಿ ನೀರಾವರಿ ಅವಲಂಬಿ­ಸಿದ್ದು, ಬರಡು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಚೆಕ್‌ಡ್ಯಾಂ, ಕೃಷಿ ಹೊಂಡ­ಗ­ಳ ಮೂಲಕ ಜಲ ಮರುಪೂರಣಕ್ಕೆ ಆದ್ಯತೆ ನೀಡಿದ್ದಾರೆ.‘30ವರ್ಷಗಳಿಂದ ತೋಟದ ಮನೆಯಲ್ಲೇ ನಮ್ಮ ವಾಸ. ಗಿಡ, ಮರ, ಪ್ರಾಣಿ, ಪಕ್ಷಿಗಳೊಂದಿಗಿನ ಒಡನಾಟವೇ ನಮ್ಮ ಬದುಕು. ಕೃಷಿಯಲ್ಲಿ ತೊಡಗಿರುವುದರಿಂದ ಶುದ್ಧ ಗಾಳಿ, ಶುದ್ಧ ಆಹಾರ, ಶುಭ್ರ ವಾತಾವರಣ, ಉತ್ತಮ ಆರೋಗ್ಯ ದೊರೆತಿದೆ. ಇನ್ನೊಬ್ಬರ ಕೈ ಕೆಳಗೆ, ಅವರ ಆಣತಿಯಂತೆ ಕೆಲಸ ಮಾಡದೆ, ನಿತ್ಯವೂ 15ರಿಂದ 20 ಜನರಿಗೆ ಕಾಯಂ ಕೆಲಸ ನೀಡುತ್ತಿದ್ದಾರೆ. ಸುಗ್ಗಿಯ ಕಾಲದಲ್ಲಿ, ಮಲ್ಲಿಗೆ ಮೊಗ್ಗು ಬಿಡಿಸುವ ಸಂದರ್ಭ ನಮ್ಮ ತೋಟದಲ್ಲಿ ಏನಿಲ್ಲವೆಂದರೂ ಕನಿಷ್ಠ 200 ಜನ ಕೆಲಸ ಮಾಡುತ್ತಾರೆ. ಇಂಥ ಸೌಭಾಗ್ಯ ಕೃಷಿಯಿಂದ ದೊರೆತಿದೆ’ ಎಂದು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.‘ಕೃಷಿಯೆಂದರೆ ಮೂಗು ಮುರಿಯುವವರು ಒಮ್ಮೆ ಅದರತ್ತ ಒಲವು ತೋರಿ, ಶ್ರಮದಿಂದ ದುಡಿಯಲು ಶುರು ಮಾಡಿದರೆ ಭೂಮಿತಾಯಿ ಕೈ ಬಿಡುವುದಿಲ್ಲ. ಎಲ್ಲವನ್ನೂ ಕ್ರಮಬದ್ಧವಾಗಿ ಮಾಡಬೇಕು. ಸಾಂಪ್ರದಾಯಿಕವಾಗಿ ಕೃಷಿಯಲ್ಲಿ ತೊಡಗಿದರೆ ನಷ್ಟದ ಮಾತೇ ಇಲ್ಲ. ನಾವು ದಿನದ 24 ಗಂಟೆಯಲ್ಲಿ ಹೆಚ್ಚು ಹೊತ್ತು ಕೆಲಸದಲ್ಲೇ ನಿರತರಾಗಿರುತ್ತೇವೆ. ಕೃಷಿಯಂದಿಗೇ ನಮ್ಮ ಬದುಕು ಸಾಗುತ್ತಿದೆ. ಅದರಿಂದಾಗಿಯೇ ಯಶಸ್ಸನ್ನು ಗಳಿಸಿದ್ದೇವೆ’ ಎಂದು ಅವರು ತಿಳಿಸುತ್ತಾರೆ.‘ಆರೋಗ್ಯದಾಯಕ ಆಹಾರ ಉತ್ಪಾದನೆಗೆ ಒತ್ತು ನೀಡುತ್ತ, ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಕಡಿಮೆ ಮಾಡು­ವತ್ತ ಆಲೋಚಿಸಿ, ಶೇ 100ರಷ್ಟು ಶ್ರಮ­ದಿಂದ ಸಂತಸದ ಜೀವನ ನಡೆಸುವಂತಾಗಿದೆ’ ಎನ್ನುತ್ತಾರೆ ಪತ್ನಿ ಪ್ರಮೀಳಾ. ಇವರ ಸಾಧನೆಗೆ ಸರ್ಕಾರ 2005ರಲ್ಲಿ ‘ಕೃಷಿ ಪಂಡಿತ’ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಘ– ಸಂಸ್ಥೆಗಳು, ಧಾರವಾಡ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯಗಳು ಪ್ರಶಸ್ತಿ ನೀಡಿವೆ.‘ಇಬ್ಬರು ಮಕ್ಕಳಲ್ಲಿ ಹಿರಿಯವನಾದ ಶರಣಬಸವ, ಎಂ.ಎ, ಎಲ್‌ಎಲ್‌ಬಿ ಓದಿದರೂ ತೋಟಗಾರಿಕೆಯಲ್ಲೇ ತೊಡಗಿದ್ದು, 2013ನೇ ಸಾಲಿನಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ಕಿರಿಯ ಮಗ ಆನಂದ ಭೌತಶಾಸ್ತ್ರ ವಿಷಯದಲ್ಲಿ ಎಂ.ಎಸ್‌ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ. ಕೃಷಿಕರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಪಿ.ಎಚ್‌ಡಿ ಮಾಡುವ ಇರಾದೆ ಹೊಂದಿದ್ದು, ಆತನಿಗೂ ತೋಟಗಾರಿಕೆಯಲ್ಲೇ ಆಸಕ್ತಿ ಇದೆ. ಇಬ್ಬರಿಗೂ ಬೇರೆಡೆ ಕೆಲಸಕ್ಕೆ ಹೋಗಲು ಸಾಕಷ್ಟು ಅವಕಾಶಗಳಿದ್ದರೂ ಹೋಗಿಲ್ಲ. ಒಂದರ್ಥದಲ್ಲಿ ಇಡೀ ಕುಟುಂಬ ಕೃಷಿಗೇ ಜೀವನ ಮುಡಿಪಾಗಿಸಿದೆ. ಎರೆ ಹುಳು ಗೊಬ್ಬರ ತಯಾರಿಕೆಗೂ ಆದ್ಯತೆ ನೀಡುವ ಮೂಲಕ ಕೃಷಿಯಲ್ಲೇ ಸಂತೃಪ್ತಿ ಹೊಂದಿದ್ದೇವೆ’ ಎಂದು ಅವರು ತಮ್ಮ ಯಶಸ್ಸಿನ ಕಥೆಯನ್ನು ಬಿಚ್ಚಿಟ್ಟರು.ಕೂಲಿಕಾರರ ಸಮಸ್ಯೆ ಇದೆ ಎಂದೆಲ್ಲ ತಿಳಿಸುತ್ತ ಕೃಷಿಯಿಂದ ವಿಮುಖರಾಗುವವರು, ಕೂಲಿಕಾರರನ್ನು ತಮ್ಮ ಕುಟುಂಬದ ಸದಸ್ಯರೆಂದೇ ಪರಿಗಣಿಸಿ, ಅವರ ಕಷ್ಟ– ಸುಖಕ್ಕೆ ಸ್ಪಂದಿಸಿದರೆ, ಅವರು ನಮ್ಮನ್ನು ಕೈಬಿಡುವುದಿಲ್ಲ. ದುಂದು ವೆಚ್ಚ, ನಿಯಂತ್ರಣರಹಿತ ಖರ್ಚು, ಕ್ರಮಬದ್ಧವಲ್ಲದ ಜೀವನ ಶೈಲಿ ರೈತರನ್ನು ನಷ್ಟಕ್ಕೆ ಈಡು ಮಾಡುತ್ತಿವೆ. ಇವಲ್ಲವುಗಳಿಂದ ಆಚೆ ಬಂದು, ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲೇ ತೊಡಗಿಕೊಂಡರೆ ಯಶಸ್ಸನ್ನು ಗಳಿಸಬಹುದು. 4 ಎಕರೆ ಭೂಮಿ ಇದ್ದರೆ ಸಾಕು. ಅದರಲ್ಲೇ ದುಡಿದು ಇತರರಿಗೂ ಕೆಲಸ ಕೊಡಬಹುದಾಗಿದೆ. ಯುವ ಜನತೆ ಇದನ್ನು ಅರಿಯುವ ಮೂಲಕ, ಯಶಸ್ವಿ ಕೃಷಿಕರ ಕುರಿತ ಲೇಖನಗಳನ್ನು ಓದಿ ಅವರು ಸಾಗಿದ ಮಾರ್ಗದಲ್ಲೇ ಮುನ್ನಡೆಯಬೇಕಿದೆ ಎಂದೂ ಅವರು ಸಲಹೆ ನೀಡುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.