ಗುರುವಾರ , ಮೇ 26, 2022
23 °C

ಬ್ರೈಲ್ ಲಿಪಿ ಪಠ್ಯಪುಸ್ತಕಗಳ ಕೊರತೆ

ಎಂ.ರವಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಾಜ್ಯದ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಅಂಧ ವಿದ್ಯಾರ್ಥಿಗಳು ಈಗ ಹಳೆಯ ವಿದ್ಯಾರ್ಥಿಗಳ ಮನೆಯ ಬಾಗಿಲು ತಟ್ಟುತ್ತಿದ್ದಾರೆ. ಯಾಕೆಂದರೆ ಅವರಿಗೆ ಬ್ರೈಲ್ ಲಿಪಿಯಲ್ಲಿರುವ ಪಠ್ಯ ಪುಸ್ತಕಗಳು ಸಿಗುತ್ತಿಲ್ಲ.ಒಂದರಿಂದ ಹತ್ತನೇ ತರಗತಿವರೆಗಿನ ಕನ್ನಡ ಮಾಧ್ಯಮದ ಬ್ರೈಲ್ ಲಿಪಿ ಪಠ್ಯಪುಸ್ತಕಗಳನ್ನು ನಿಗದಿತ ಸಮಯದಲ್ಲಿ ಮುದ್ರಣ ಮಾಡಿ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತೊಂದರೆಗೆ ಸಿಲುಕಿದ್ದಾರೆ.ಪಠ್ಯಪುಸ್ತಗಳು ಮಾರುಕಟ್ಟೆಯಲ್ಲಿ ದೊರಕದಿರುವುದರಿಂದ ಹಳೆಯ ವಿದ್ಯಾರ್ಥಿಗಳ ಮೊರೆ ಹೋಗಿ ಪಠ್ಯಗಳನ್ನು ಕೇಳಿ ಪಡೆಯುತ್ತಿದ್ದಾರೆ. ಬಹುತೇಕ ಮಂದಿಗೆ ಇದೂ ಸಹ ಸಿಗುತ್ತಿಲ್ಲ.ಈಗಾಗಲೇ ಶಾಲೆಗಳು ಆರಂಭವಾಗಿವೆ. ಆದರೆ, ಪಠ್ಯ ಪುಸ್ತಕಗಳು ಇನ್ನೂ ಮುದ್ರಣವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

 

ಪಠ್ಯ ಪುಸ್ತಕಗಳ ಕೊರತೆ ಒಂದೆಡೆಯಾದರೆ, ಕಾಲ ಕಾಲಕ್ಕೆ ಪಠ್ಯಕ್ರಮ ಬದಲಾಗುತ್ತಿರುತ್ತವೆ. ಬದಲಾದ ಪಠ್ಯಪುಸ್ತಕಗಳನ್ನು ಸರಬರಾಜು ಮಾಡದೆ ಹಳೆಯ ಪಠ್ಯಕ್ರಮ ಇರುವ ಪುಸ್ತಕಗಳನ್ನೇ ಸರಬರಾಜು ಮಾಡುತ್ತಿರುವುದೂ ಸಮಸ್ಯೆಯಾಗಿದೆ. 2004ನೇ ಸಾಲಿನಲ್ಲೇ 6 ನೇ ತರಗತಿ ಹಿಂದಿ ಪಠ್ಯಕ್ರಮವನ್ನು ಬದಲಾಯಿಸಲಾಗಿದೆ.ಇಲ್ಲಿವರೆಗೂ ಹೊಸ ಪಠ್ಯಕ್ರಮದ ಪಠ್ಯವನ್ನು ಬ್ರೈಲ್‌ನಲ್ಲಿ ಮುದ್ರಣ ಮಾಡಿಲ್ಲ. ಹಳೆಯ ಪಠ್ಯಪುಸ್ತಕವೇ ಈಗಲೂ ಚಾಲ್ತಿಯಲ್ಲಿದೆ. ಮತ್ತೊಂದೆಡೆ ಆಂಗ್ಲ ಮಾಧ್ಯಮದ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಗಳಲ್ಲಿ ಮುದ್ರಣ ಮಾಡುತ್ತಿಲ್ಲ. ಆಂಗ್ಲ ಶಿಕ್ಷಣ ಸಂಸ್ಥೆ ನಡೆಸುವವರೇ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗಿದೆ.ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುವಂತೆ ಸರ್ಕಾರದ ಮೊರೆ ಹೋಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪದವಿಪೂರ್ವ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುತ್ತಿಲ್ಲ. ಬದಲಿಗೆ ಸರ್ಕಾರ ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ ನೀಡಿ ಕೈ ತೊಳೆದುಕೊಳ್ಳುತ್ತಿದೆ.ಅಂಧರ ಪ್ರೌಢಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳು ಇರುವುದಿಲ್ಲ. ಇದರ ಬದಲಿಗೆ ಭಾರತೀಯ ಅರ್ಥಶಾಸ್ತ್ರ, ಭಾರತೀಯ ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಂಗೀತ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಾಗಿದೆ.1982 ರಿಂದ ಈ ನಾಲ್ಕು ವಿಷಯಗಳ ಪಠ್ಯಕ್ರಮ ಬದಲಾಗಿಲ್ಲ. ಕಾಲಕಾಲಕ್ಕೆ ಪಠ್ಯಕ್ರಮ ಬದಲಿಸಬೇಕಾದ ಸರ್ಕಾರ ಮೈಮರೆತಿದೆ. ಈ ಪಠ್ಯಪುಸ್ತಕಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.

 

ಅಂಧರ ಶಾಲೆಗಳ ನಿರ್ಲಕ್ಷ್ಯ

`ರಾಜ್ಯದಲ್ಲಿ ಒಟ್ಟು 40 ಸರ್ಕಾರಿ ಮತ್ತು ಖಾಸಗಿ ಅಂಧ ಶಾಲೆಗಳು ಇವೆ. ಈ ಪೈಕಿ ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ 4 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಬ್ರೈಲ್ ಲಿಪಿ ಪಠ್ಯಪುಸ್ತಕಗಳು ಸರಿಯಾಗಿ ಸರಬರಾಜು ಆಗುತ್ತಿಲ್ಲ.ಸರ್ವಶಿಕ್ಷಣ ಅಭಿಯಾನಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಅಂಧರ ಶಾಲೆಗಳನ್ನು ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದರಿಂದ ಅಂಧರ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಂಧರ ಶಾಲೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು

-ಎನ್.ಸಿದ್ದರಾಜು, ಅಧ್ಯಕ್ಷರು, ಅಂಧರ ರಾಷ್ಟ್ರೀಯ ಒಕ್ಕೂಟಮೈಸೂರು ಘಟಕ 

ಸಮರ್ಪಕ ಪೂರೈಕೆ

`ಬ್ರೈಲ್ ಲಿಪಿ ಪಠ್ಯಪುಸ್ತಕಗಳ  ಸರಬರಾಜು ವಿಳಂಬ ಆಗಿತ್ತು. ಈಗ ಸರಿಯಾಗಿ ಸರಬರಾಜು ಮಾಡಲಾಗುತ್ತಿದೆ. ಹೊಸ ಪಠ್ಯಕ್ರಮದ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಇನ್ನೂ ಮುದ್ರಣ ಮಾಡಿಲ್ಲ. ಆಂಗ್ಲ ಮಾಧ್ಯಮದ ಬ್ರೈಲ್ ಲಿಪಿ ಪಠ್ಯಪುಸ್ತಕಗಳನ್ನು ಸರ್ಕಾರ ಮುದ್ರಿಸುವುದಿಲ್ಲ.ಆಯಾ ಶಾಲೆಯವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಪಿಯುಸಿ ಅಂಧ ವಿದ್ಯಾರ್ಥಿಗಳಿಗೆ ಟೇಪ್ ರೆಕಾರ್ಡ್‌ರ್ ಮತ್ತು ಕ್ಯಾಸೆಟ್ ನೀಡಲಾಗುತ್ತಿದೆ

-ಚನ್ನಯ್ಯ, ಸಹಾಯಕ ನಿರ್ದೇಶಕರು, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.