ಭದ್ರತಾ ಅಧಿಕಾರಿ ಕೈಯಿಂದ ಚಪ್ಪಲಿ ಹಾಕಿಸಿಕೊಂಡ ಒಡಿಶಾ ಸಚಿವ

ಭುವನೇಶ್ವರ್: ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಒಡಿಶಾದ ಸಚಿವ ಜೋಗೇಂದ್ರ ಬೆಹೆರಾ ಚಪ್ಪಲಿಯ ಸ್ಟ್ರಾಪ್ ಹಾಕುವಂತೆ ವೈಯಕ್ತಿಕ ಭದ್ರತಾ ಅಧಿಕಾರಿಗೆ ಆದೇಶಿಸಿ ಅಧಿಕಾರಿಯ ಕೈಯಿಂದಲೇ ಚಪ್ಪಲಿ ಹಾಕಿಸಿಕೊಂಡ ಘಟನೆಯೀಗ ವಿವಾದಕ್ಕೀಡಾಗಿದೆ.
ಸಣ್ಣ ಹಾಗು ಮಧ್ಯಮ ಉದ್ಯಮಗಳ ಸಚಿವರಾಗಿರುವ ಬೆಹರಾ ಅಗಸ್ಟ್ 15 ರಂದು ಕಿಯೊಂಜಹಾರ್ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಧ್ವಜಾರೋಹಣದ ನಂತರ ವೇದಿಕೆಗೆ ಬಂದ ಸಚಿವರು ತನ್ನ ಚಪ್ಪಲಿಯ ಸ್ಟ್ರಾಪ್ ಬಿಗಿ ಮಾಡುವಂತೆ ಭದ್ರತಾ ಅಧಿಕಾರಿಗೆ ಆದೇಶಿಸಿದ್ದರು.
ವೇದಿಕೆಯಲ್ಲಿಯೇ ಭದ್ರತಾ ಅಧಿಕಾರಿಯಿಂದ ಚಪ್ಪಲಿ ಸರಿಮಾಡುವಂತೆ ಹೇಳಿ ದರ್ಪ ಮೆರೆದ ಸಚಿವರ ನಡೆ ಪತ್ರಕರ್ತರ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಬೆಹೆರಾ ವಿರುದ್ಧ ಟೀಕಾ ಪ್ರಹಾರ ನಡೆದಿದೆ.
ನಾನೊಬ್ಬ ವಿಐಪಿ. ನಾನು ಧ್ವಜಾರೋಹಣ ಮಾಡಿದ್ದೇನೆ. ಈತ ( ಭದ್ರತಾ ಅಧಿಕಾರಿ) ಅದಕ್ಕೆ ಈ ಕೆಲಸ ಮಾಡಿದ್ದಾನೆ (ಚಪ್ಪಲಿಯ ಸ್ಟ್ರಾಪ್ ಬಿಗಿ ಮಾಡಿದ್ದು) ಎಂದು ಈ ಘಟನೆ ಬಗ್ಗೆ ಬೆಹರಾ ಪ್ರತಿಕ್ರಿಯೆ ನೀಡಿದ್ದರು. ಅವರ ಈ ಉದ್ದಟತನದ ಹೇಳಿಕೆಯೂ ವಿವಾದಕ್ಕೀಡಾಗುತ್ತಿದ್ದಂತೆ ಎಚ್ಚೆತ್ತ ಸಚಿವರು ತನಗೆ ಮಂಡಿ ನೋವು ಇದೆ. ಆದ್ದರಿಂದ ಬಗ್ಗಲು ಸಾಧ್ಯವಿಲ್ಲ. ಅದಕ್ಕಾಗಿ ಭದ್ರತಾ ಅಧಿಕಾರಿಯ ಸಹಾಯ ಬೇಡಿದೆ ಎಂದಿದ್ದಾರೆ.
ಏತನ್ಮಧ್ಯೆ, ಬೆಹೆರಾ ಅವರ ನಡೆಯನ್ನು ಖಂಡಿಸಿರುವ ವಿಪಕ್ಷಗಳು ಸಚಿವರು ಆದಷ್ಟು ಬೇಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿಡಿಯೊ
#WATCH: Odisha Minister Yogendra Behera makes PSO tie his sandal straps in public in Kendujhar, says 'I am a VIP'https://t.co/yB0ZUslWxt
— ANI (@ANI_news) August 16, 2016
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.