ಸೋಮವಾರ, ಮೇ 16, 2022
28 °C

ಭಾರತ-ಚೀನಾ ಮನಸ್ತಾಪ ಸಣ್ಣದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಐಎಎನ್‌ಎಸ್/ಪಿಟಿಐ):  ಭಾರತದ ಜತೆಗಿನ ಮನಸ್ತಾಪ ಅಲ್ಪ ಪ್ರಮಾಣದ್ದು ಎಂದು ಹೇಳಿರುವ ಚೀನಾ, ಇದು ಎರಡೂ ದೇಶಗಳ ನಡುವಿನ ವ್ಯವಹಾರ ಹಾಗೂ ಸ್ನೇಹಕ್ಕೆ ಅಡ್ಡಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.ಇಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ ಗುರುವಾರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ ಚೀನಾ ವಿದೇಶಾಂಗ ಸಚಿವ ಯಾಂಗ್ ಜೇಚಿ ಈ ಹೇಳಿಕೆ ನೀಡಿದ್ದಾರೆ.ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಚೀನಾ, ಭಾರತದ ಅಭಿವೃದ್ಧಿಯ ಆಶಯಗಳಿಗೆ ಉತ್ತೇಜನ ನೀಡುತ್ತದೆ ಹಾಗೂ `ಸೂಕ್ಷ್ಮ ವಿಷಯ~ಗಳನ್ನು ಜಾಗರೂಕತೆಯಿಂದ ನಿಭಾಯಿಸುತ್ತದೆ ಎಂದು ಅವರು ಹೇಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಜರ್ದಾರಿ, ಕೃಷ್ಣ ಮಾತುಕತೆ

ಬೀಜಿಂಗ್ (ಐಎಎನ್‌ಎಸ್): ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಮತ್ತು ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಗುರುವಾರ ಇಲ್ಲಿ ಆಫ್ಘಾನಿಸ್ತಾನದ ಕುರಿತು ಚರ್ಚೆ ನಡೆಸಿದರು.ಆಫ್ಘಾನಿಸ್ತಾನದಲ್ಲಿ ಭಾರತ ಮಾಡಿರುವ ಹೂಡಿಕೆಯ ಕುರಿತು ಜರ್ದಾರಿ ಪ್ರಶ್ನಿಸಿದರು.ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಯೋಜನೆಗಳಲ್ಲಿ ಭಾರತ ಹಣ ತೊಡಗಿಸಿರುವುದಾಗಿ ಕೃಷ್ಣ ತಿಳಿಸಿದರು. ಇದಕ್ಕೂ ಮುನ್ನ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಮಾತನಾಡಿದ ಕೃಷ್ಣ, ಆಫ್ಘಾನಿಸ್ತಾನದ ಪುನರ್‌ನಿರ್ಮಾಣಕ್ಕಾಗಿ ಭಾರತ 200 ಕೋಟಿ ಡಾಲರ್ ಹಣ ವಿನಿಯೋಗಿಸಿದ್ದಾಗಿ ಹೇಳಿದ್ದರು.ಶಾಂಘೈ ಸಹಕಾರ ಸಂಘಟನೆಯ 12ನೇ ಶೃಂಗಸಭೆಯಲ್ಲಿ ಪಾಲ್ಗೊಂಡ ಕೃಷ್ಣ ಗುರುವಾರ ಭಾರತಕ್ಕೆ ವಾಪಸಾಗುವ ಮುನ್ನ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರನ್ನು ಸಹ ಭೇಟಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.