ಮಂಗಳವಾರ, ಮೇ 17, 2022
24 °C

ಮಖ್ದೂಮ್ ಬಂಧನಕ್ಕೆ ವಾರೆಂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಪ್ರಧಾನಿ ಸ್ಥಾನದ ಅಭ್ಯರ್ಥಿ, ಮಾಜಿ ಆರೋಗ್ಯ ಸಚಿವ ಮಖ್ದೂಮ್ ಶಹಾಬುದ್ದೀನ್ ಅವರ  ಬಂಧನಕ್ಕೆ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿರುವುದರಿಂದ ಪಾಕಿಸ್ತಾನ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಉಂಟಾಗಿದೆ. ಶಹಾಬುದ್ದೀನ್ ಆರೋಗ್ಯ ಸಚಿವರಾಗಿದ್ದಾಗ ನಿಯಂತ್ರಿತ ಎಫೆಡ್ರೈನ್ ಔಷಧಿಯನ್ನು ಆಮದು ಮಾಡಿಕೊಳ್ಳುವ ವಿಷಯದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾವಲ್ಪಿಂಡಿಯ ಮಾದಕ ವಸ್ತು ನಿಯಂತ್ರಣಕ್ಕೆ ಸಂಬಂಧಿಸಿದ ವಿಶೇಷ ನ್ಯಾಯಾಲಯವು ಬಂಧನದ ವಾರೆಂಟ್ ಹೊರಡಿಸಿದೆ.

 
ಮಖ್ದೂಮ್ ಕೈಬಿಟ್ಟ ಪಿಪಿಪಿ?

ಈ ಮಧ್ಯೆ ಮಖ್ದೂಮ್ ಶಹಾಬುದ್ದೀನ್ ವಿರುದ್ಧ ನ್ಯಾಯಾಲಯವು ಬಂಧನದ ವಾರಂಟ್ ಹೊರಡಿಸಿರುವುದರಿಂದ ಪ್ರಧಾನಿ ಹುದ್ದೆಗೆ ಸಲ್ಲಿಸಿದ್ದ ನಾಮಪತ್ರವನ್ನು ಪಾಕಿಸ್ತಾನ ಪೀಪಲ್ಸ್ ಪಕ್ಷವು ರದ್ದುಪಡಿಸಿದೆ.ಶಹಾಬುದ್ದೀನ್ ಬದಲಿಗೆ ಅಶ್ರಫ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಪಿಪಿಪಿ  ಮೂಲಗಳು ತಿಳಿಸಿವೆ ಎಂದು ಜಿಯೊ ಚಾನೆಲ್ ವರದಿ ಮಾಡಿದೆ.

ಆದರೆ ಈ ಬೆಳವಣಿಗೆಯ ಬಗ್ಗೆ ಪಿಪಿಪಿ ಅಧಿಕೃತವಾಗಿ ಪ್ರಕಟಣೆ ನೀಡಿಲ್ಲ. ಶಹಾಬುದ್ದೀನ್ ಜತೆ ಮಾಜಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ಪುತ್ರ ಅಲಿ ಮುಸಾ ಗಿಲಾನಿ ಬಂಧನಕ್ಕೂ ವಾರೆಂಟ್ ಹೊರಡಿಸಲಾಗಿದೆ.  ಒಂದು ವಾರದ ಒಳಗೆ ಇಬ್ಬರನ್ನೂ ಬಂಧಿಸಿ ತಮ್ಮ ಎದುರು ಹಾಜರುಪಡಿಸುವಂತೆ ನ್ಯಾಯಾಧೀಶ ಶಫಖ್ತುಲ್ಲಾ ಖಾನ್ ಆದೇಶಿಸಿದ್ದಾರೆ.ಪ್ರಧಾನಿ ಹುದ್ದೆಯ ಅಭ್ಯರ್ಥಿ ಮಖ್ದೂಮ್ ಶಹಾಬುದ್ದೀನ್ ಅವರ ವಿರುದ್ಧ ವಾರೆಂಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ತೀವ್ರ ಮುಜುಗರಕ್ಕೆ ಒಳಗಾಗಿರುವ ಪಿಪಿಪಿ ಗುರುವಾರ ಪ್ರಧಾನಿ ಹುದ್ದೆಗೆ ಪಕ್ಷದ ಹಿರಿಯ ಮುಖಂಡ ಕ್ವಾಮರ್ ಜಮಾನ್ ಕೈರಾ ಸೇರಿದಂತೆ ಇಬ್ಬರು ಅಭ್ಯರ್ಥಿಗಳ ನಾಮಪತ್ರವನ್ನು ಸಲ್ಲಿಸಿದೆ.ಯಾವುದಾದರೂ ಕಾರಣಕ್ಕೆ ಕ್ವಾಮರ್ ಅವರ ನಾಮಪತ್ರ ತಿರಸ್ಕೃತವಾದರೆ ಕೊನೆ ಗಳಿಗೆಯಲ್ಲಿ ಪರದಾಟ ಬೇಡ ಎಂಬ ಕಾರಣಕ್ಕೆ  ರಜಾ ಪರ್ವೇಜ್ ಅಶ್ರಫ್ ಅವರಿಂದಲೂ ನಾಮಪತ್ರ ಸಲ್ಲಿಸಲಾಗಿದೆ.ಶಹಾಬುದ್ದೀನ್ ಸಲ್ಲಿಸಿರುವ ನಾಮಪತ್ರವು ವಾರೆಂಟ್ ಹೊರಡಿಸಿರುವ ಕಾರಣಕ್ಕೆ ತಿರಸ್ಕೃತವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಪಿಪಿಪಿಯ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಗಡುವು ಮುಗಿಯುವುದರ ಒಳಗೆ ತರಾತುರಿಯಲ್ಲಿ ನಾಮಪತ್ರ ಸಲ್ಲಿಸಿದರು.ಶಹಾಬುದ್ದೀನ್, ಕ್ವಾಮರ್ ಮತ್ತು ಅಶ್ರಫ್ ಅವರು ಯುಸೂಫ್ ರಜಾ ಗಿಲಾನಿ ಸಂಪುಟದಲ್ಲಿ ಸಚಿವರಾಗಿದ್ದರು.

ಶಹಾಬುದ್ದೀನ್ ಮತ್ತು ಅಶ್ರಫ್ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.  ಔಷಧಿ ಆಮದು ವ್ಯವಹಾರದಲ್ಲಿ ಶಹಾಬುದ್ದೀನ್ ಅವ್ಯವಹಾರವೆಸಗಿದ್ದಾರೆ ಮತ್ತು ಅಶ್ರಫ್ ಅವರು ವಿದ್ಯುತ್ ಸಚಿವರಾಗಿದ್ದಾಗ ಖಾಸಗಿ ಕಂಪೆನಿಗಳಿಗೆ ಪರವಾನಗಿ ನೀಡುವಲ್ಲಿ ಅಕ್ರಮವೆಸಗ್ದ್ದಿದಾರೆ ಎಂದು ಆಪಾದಿಸಿ ಪ್ರಕರಣ ದಾಖಲು ಮಾಡಲಾಗಿದೆ.ಶಹಾಬುದ್ದೀನ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಮಾದಕ ವಸ್ತು ನಿಯಂತ್ರಣ ವಿಭಾಗದ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ನ್ಯಾಯಾಧೀಶರು ಬಂಧನದ ವಾರೆಂಟ್ ಹೊರಡಿಸಿದ್ದಾರೆ.ನಾಮಪತ್ರ ಸಲ್ಲಿಸಿ ಸಂಸತ್ ಭವನದಿಂದ ಹೊರಗೆ ಬಂದ ಶಹಾಬುದ್ದೀನ್ ಅವರು ತಮ್ಮನ್ನು ಪ್ರಧಾನಿ ಹುದ್ದೆಗೆ ಸೂಚಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು.ವಿರೋಧ ಪಕ್ಷಗಳ ಅಭ್ಯರ್ಥಿಗಳು: ವಿರೋಧ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್‌ನ ಸರ್ದಾರ್ ಮೆಹತಾಬ್ ಅಬ್ಬಾಸಿ ಮತ್ತು ಜಮೈತ್ ಉಲೆಮಾ -ಎ-ಇಸ್ಲಾಮ್-ಫಜಲ್ ಪಕ್ಷವು ಮೌಲಾನಾ ಫಜಲುರ್ ರೆಹಮಾನ್ ಅವರನ್ನು ಪ್ರಧಾನಿ ಹುದ್ದೆಯ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿರುವುದರಿಂದ ಒಟ್ಟು ಐವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.