ಭಾನುವಾರ, ಜೂನ್ 20, 2021
20 °C

ಮತ್ತೆ ಕಾಳ್ಗಿಚ್ಚು: ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಮೈಸೂರು: ಉತ್ತರ ಕೊಡಗಿನ ಅತ್ತೂರು ಮೀಸಲು ಅರಣ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಭಾನುವಾರ ಸಂಜೆ  ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಹಾನಿಗೊಳಗಾಗಿದೆ. ಬೆಂಕಿಯ ಕೆನ್ನಾಲಗೆಗೆ ಬೆಲೆ ಬಾಳುವ ಮರಗಳು ಹಾಗೂ ವನ್ಯಜೀವಿಗಳು ಆಹುತಿಯಾಗಿವೆ.ಉತ್ತರ ಕೊಡಗಿನ ಅತ್ತೂರು ಮೀಸಲು ಅರಣ್ಯದಲ್ಲಿ 400 ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಯಿಂದ ಹಾನಿಗೊಳಗಾಗಿದೆ ಎಂದು ಅಂದಾಜಿಸಲಾಗಿದೆ.ಕುಶಾಲನಗರ ಹೋಬಳಿಯ ಗುಡ್ಡೆಹೊಸೂರು ಬಳಿಯ ಅತ್ತೂರು, ಬಳ್ಳೂರು ಅರಣ್ಯದಲ್ಲಿ ಮಧ್ಯಾಹ್ನದ ನಂತರ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಹಾರಂಗಿ ಜಲಾಶಯಕ್ಕೆ ಹೊಂದಿಕೊಂಡಿರುವ ಆನೆಕಾಡು ಅರಣ್ಯಕ್ಕೂ ವ್ಯಾಪಿಸಿದೆ.ದಿಢೀರ್ ಕಾಣಿಸಿಕೊಂಡ ಬೆಂಕಿಗೆ ಬಿದಿರು, ಒಣಗಿದ ಮರಗಳು ಭಸ್ಮವಾಗಿವೆ. ಜ್ವಾಲೆಯಿಂದ ದಿಕ್ಕೆಟ್ಟ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಓಡುತ್ತಿದ್ದದ್ದು ಗೋಚರಿಸಿತು. ಕಾಡಿಗೆ ಬೆಂಕಿ ಬಿದ್ದ ವಿಷಯ ತಿಳಿದ ಸೋಮವಾರಪೇಟೆ ಉಪ ವಿಭಾಗದ ಎಸಿಎಫ್ ಪ್ರಸನ್ನಕುಮಾರ್, ಕುಶಾಲನಗರ ಆರ್‌ಎಫ್‌ಒ ಎಂ.ಎಂ. ಅಚ್ಚಪ್ಪ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ತೆರಳಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಕಾಡಂಚಿನಲ್ಲಿ ಸಂಜೆ 7ರ ವೇಳೆಗೆ ಬೆಂಕಿಯ ಪ್ರಮಾಣ ಕ್ಷೀಣಿಸಿದರೂ ಒಳಭಾಗದಲ್ಲಿ ಗಾಳಿಯ ರಭಸಕ್ಕೆ ಹೆಚ್ಚಾಗಿತ್ತು.ಯಳಂದೂರು ವರದಿ: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡ ಬೆಂಕಿಗೆ ನೂರಾರು ಎಕರೆ ಅರಣ್ಯ ನಾಶವಾಗಿದೆ.ಬೆಳಿಗ್ಗೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಸಂಜೆ ಹೊತ್ತಿಗೆ ಅಕ್ಕಪಕ್ಕದಲ್ಲಿನ ಕಾಡು, ಗವಿಬೋರೆ, ಜೇನುಬೋರೆ, ಸಾಲುಗುಡ್ಡೆ, ಕೃಷ್ಣಯ್ಯನಕಟ್ಟೆ,  ಮಲ್ಕಿಬೆಟ್ಟ, ಹೊಸಪೋಡು ಹಾಗೂ ಮುರಟಿಪಾಳ್ಯ ಪ್ರದೇಶಗಳಿಗೂ ಕೆನ್ನಾಲಿಗೆ ಚಾಚಿತು. ಈ ಅವಘಡದಲ್ಲಿ ನೂರಾರು ಎಕರೆ ಅರಣ್ಯ ಸುಟ್ಟು  ಕರಕಲಾಗಿದೆ. ಪಕ್ಕದ ಗುಂಬಳ್ಳಿ ಗ್ರಾಮದ ತನಕವೂ ದಟ್ಟ ಹೊಗೆ ವ್ಯಾಪಿಸಿದೆ.ಜಿಂಕೆ, ಕಡವೆ, ನವಿಲು, ಹದ್ದು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳು ದಿಕ್ಕೆಟ್ಟು ಓಡಿವೆ. ಗುಂಬಳ್ಳಿ, ವಡಗೆರೆ ಸನಿಹದಲ್ಲಿರುವ ಕುರುಚಲು ಕಾಡು  ಭಸ್ಮವಾಗಿದೆ. ಶನಿವಾರವೂ ಹಾವರಾಣಿಗುಡ್ಡ, ಮುತ್ತಗದಗದ್ದೆ ಪೋಡು, ಗಂಗಾಧರೇಶ್ವರ ಸುತ್ತ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಬೆಂಕಿ ನಂದಿಸಲಾಗಿತ್ತು.~ಅರಣ್ಯ ಸಿಬ್ಬಂದಿ ಜತೆ ಫೈರ್ ವಾಚರ್ ಹಾಗೂ ಸ್ಥಳೀಯ ಪುರಾಣಿಪೋಡು, ಮುತ್ತುಗದಗದ್ದೆ ಪೋಡಿನಿಂದ 50 ಜನರ ತಂಡದೊಂದಿಗೆ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ರಾತ್ರಿ ವೇಳೆಗೆ ತಹಬಂದಿಗೆ ಬಂದಿದೆ~ ಎಂದು         ಆರ್‌ಎಫ್‌ಒ ನಾಗರಾಜು ತಿಳಿಸಿದರು.600 ಹೆಕ್ಟೇರ್ ಅರಣ್ಯ ನಾಶ: ಫೆಬ್ರುವರಿಯಲ್ಲಿ ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿ ಕಾಣಿಸಿಕೊಂಡು 600 ಹೆಕ್ಟೇರ್ ಪ್ರದೇಶ ಅರಣ್ಯ ಆಹುತಿಯಾಗಿತ್ತು. ಇದರಿಂದ ಬೆಲೆಬಾಳುವ ಮರಗಳು, ಅಮೂಲ್ಯವಾದ ಜೀವ ವೈವಿಧ್ಯ ನಾಶವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡ ಭಾರೀ ಪ್ರಮಾಣದ ಕಾಳ್ಗಿಚ್ಚು ಆಗಿತ್ತು.ಉಪ್ಪಿನಂಗಡಿ ವರದಿ: ಶಿರಾಡಿ ರಕ್ಷಿತಾರಣ್ಯದಲ್ಲಿ ಮೂರು ದಿನಗಳಿಂದ ಕಾಣಿಸಿಕೊಂಡಿದ್ದ ಬೆಂಕಿ ಭಾನುವಾರ ಸಂಜೆಯ ಹೊತ್ತಿಗೆ ನಿಯಂತ್ರಣಕ್ಕೆ ಬಂದಿದ್ದು, ಸುಮಾರು 200 ಎಕರೆ ಅರಣ್ಯ ನಾಶವಾಗಿದೆ.ಸಕಲೇಶಪುರ ವ್ಯಾಪ್ತಿಗೊಳಪಟ್ಟ ಮುಗಿಲುಬೆಟ್ಟದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಗೆ ಗುಂಡ್ಯದವರೆಗೂ ವ್ಯಾಪಿಸಿತು. ಬಿದಿರು, ಕುರುಚಲು ಗಿಡಗಳು ಭಸ್ಮವಾಗಿವೆ. ಉಪ್ಪಿನಂಗಡಿ ವಿಭಾಗದ ಅರಣ್ಯ ಸಿಬ್ಬಂದಿ ಭಾನುವಾರ ಬೆಂಕಿ ಆರಿಸುವಲ್ಲಿ ಸಫಲರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.