ಶುಕ್ರವಾರ, ಮೇ 14, 2021
29 °C

ಮಳೆನೀರು ಸಂಗ್ರಹ: ಜಲಮಂಡಳಿಯಿಂದ ಮನೆ ಮಾಲೀಕರಿಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಗಳಲ್ಲಿ ಮಳೆನೀರು ಸಂಗ್ರಹ ಪದ್ದತಿ ಅಳವಡಿಸಿಕೊಳ್ಳಲು ಮುಂದಾಗದ ಮನೆ ಮಾಲಿಕರಿಗೆ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಲು ಬೆಂಗಳೂರು ಜಲಮಂಡಲಿ ಸಜ್ಜಾಗಿದೆ. ನಗರದಲ್ಲಿನ 60/40 ಚದರ ವಿಸ್ತೀರ್ಣ ಹೊಂದಿರುವ ಕಟ್ಟಡಗಳು ಹಾಗೂ ಹೊಸದಾಗಿ ನಿರ್ಮಿಸಲಾಗುತ್ತಿರುವ 30/40 ಚದರ ಅಡಿ ವಿಸ್ತೀರ್ಣದ 55 ಸಾವಿರ ನಿವೇಶನಗಳ ಪೈಕಿ ಕೇವಲ 28,173 ಮನೆಗಳಲ್ಲಿ ಮಾತ್ರ ಪದ್ದತಿ ಅಳವಡಿಸಲಾಗಿದೆ.ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆಗೆ ಡಿಸೆಂಬರ್ 31 ಅಂತಿಮ ದಿನವಾಗಿದ್ದು ಅಷ್ಟರೊಳಗೆ  ಸಾರ್ವಜನಿಕರಲ್ಲಿ ಮನವೊಲಿಸುವ ತರಾತುರಿಯಲ್ಲಿದೆ ಜಲಮಂಡಲಿ. ಮೊದಲಿನಂತೆ ಮಳೆ ನೀರು ಸಂಗ್ರಹಕ್ಕೆ ಉತ್ಸಾಹ ತೋರದ ಜನರಿಗೆ ನೋಟಿಸ್ ನೀಡುವ ಬದಲು ಪ್ರತಿ ಮನೆಗೆ ಖುದ್ದಾಗಿ ಭೇಟಿ ನೀಡಿ ಯೋಜನೆಯ ಮಹತ್ವ ತಿಳಿಸಲು ಮುಂದಾಗಿದೆ ಎಂದು ಜಲಮಂಡಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.`ಪ್ರತಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಳೆ ನೀರು ಸಂಗ್ರಹ ವಿಧಾನದ ಮಾಹಿತಿ ಹೊಂದಿರುವ ಪುಸ್ತಕವನ್ನು ನೀಡಲಾಗುವುದು~ ಎಂದು ಅವರು ಹೇಳಿದ್ದಾರೆ. ಯೋಜನೆಯ ಪ್ರಯೋಜನ ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇರುವುದೇ ಯೋಜನೆ ಸಫಲಗೊಳ್ಳದೇ ಇರಲು ಮುಖ್ಯ ಕಾರಣ ಎನ್ನಲಾಗುತ್ತಿದೆ.

 

ಜಲಮಂಡಲಿಯು ಬ್ಯಾಂಕ್‌ಗಳೊಂದಿಗೆ ಸಾಲ ನೀಡುವ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 60 ಕಂತುಗಳಲ್ಲಿ ಸಾಲ ಮರುಪಾವತಿ ಮಾಡುವ ಸೌಲಭ್ಯ ನೀಡಿದ್ದರೂ ಯಾರೊಬ್ಬರೂ ಕೂಡ ಮುಂದೆ ಬಂದಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.ಮಳೆ ನೀರು ಸಂಗ್ರಹದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಯನಗರದಲ್ಲಿ ಥೀಮ್‌ಪಾರ್ಕ್ ನಿರ್ಮಿಸಲಾಗಿದ್ದರೂ ಶಾಲಾ ಮಕ್ಕಳು ಸೇರಿದಂತೆ ಈವರೆಗೆ ಅಲ್ಲಿಗೆ ಭೇಟಿ ನೀಡಿರುವವರ ಸಂಖ್ಯೆ ಸುಮಾರು 900. ಅಲ್ಲದೆ ಈಗಾಗಲೇ ಈ ಬಗ್ಗೆ ಜಾಗೃತಿ ಮೂಡಿಸಲು 30ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಒಂದು ಸಾವಿರ ಕೊಳಾಯಿ ಕೆಲಸಗಾರರಿಗೆ ವಿಧಾನ ಅಳವಡಿಕೆಯ ತರಬೇತಿ ನೀಡಲಾಗಿದೆ. ಇಷ್ಟಾದರೂ ಜನ ಉತ್ಸಾಹ ತೋರುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಗೆ 2500 ಸರ್ಕಾರಿ ಕಟ್ಟಡಗಳನ್ನು ಗುರುತಿಸಲಾಗಿದ್ದರೂ ಈವರೆಗೆ ಕೇವಲ 100 ಕಟ್ಟಡಗಳಿಗೆ ಮಾತ್ರ ಅಳವಡಿಕೆ ಕಾರ್ಯ ನಡೆದಿದೆ. ಈ ಕುರಿತು ಮುಖ್ಯಮಂತ್ರಿಗಳು ಹಮ್ಮಿಕೊಂಡಿದ್ದ ಅಭಿಯಾನ ಕೂಡ ಫಲಪ್ರದವಾಗಿಲ್ಲ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ `ಮಳೆನೀರು ಸಂಗ್ರಹ ಅಳವಡಿಕೆಗೆ ಡಿಸೆಂಬರ್ 31 ಕೊನೆಯ ದಿನ. ಈ ಅವಧಿಯೊಳಗೆ ಅಳವಡಿಕೆ ಕಾರ್ಯ ನಡೆಯದಿದ್ದಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲಾಗುವುದು~ ಎಂದು ಎಚ್ಚರಿಕೆ ನೀಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.