ಶನಿವಾರ, ಮಾರ್ಚ್ 6, 2021
32 °C
ಮಹಿಳೆಯರ, ಕೂಲಿ ಕಾರ್ಮಿಕರ ಸಮಾವೇಶ

ಮಹಿಳಾ ಗ್ರಾಮಸಭೆ: ಸಚಿವೆ ಉಮಾಶ್ರೀ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಗ್ರಾಮಸಭೆ: ಸಚಿವೆ ಉಮಾಶ್ರೀ ಭರವಸೆ

ದಾವಣಗೆರೆ: ಮಹಿಳೆಯರ ಪ್ರತ್ಯೇಕ ಗ್ರಾಮಸಭೆ ನಡೆಸುವಂತೆ ಮಹಿಳೆಯರಿಂದ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಮೂಲಕ ಗ್ರಾಮಾಭಿವೃದ್ಧಿ ಸಚಿವರೊಂದಿಗೆ ಸಮಾಲೋಚಿಸಿ ‘ಮಹಿಳಾ ಗ್ರಾಮಸಭೆ’ ಜಾರಿಗೆ ಪ್ರಯತ್ನಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಭರವಸೆ ನೀಡಿದರು.ಸ್ಫರ್ತಿ ಸಂಂಸ್ಥೆ, ಕೂಲಿ ಕಾರ್ಮಿಕರ ಸಂಘಟನೆ, ಭೂತಾಯಿ ಸ್ವ–ಸಹಾಯ ಸಂಘಗಳ ಒಕ್ಕೂಟ ಆಶ್ರದಯಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳೆಯರ ಮತ್ತು ಕೂಲಿ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಗ್ರಾಮ ಸಭೆಗಳಲ್ಲಿ ಮಹಿಳೆಯರಿಗೆ ಅವಕಾಶ ಸಿಗುತ್ತಿಲ್ಲ. ಪುರುಷರೇ ಪಾರಮ್ಯ ಮೆರೆಯುತ್ತಿದ್ದಾರೆ. ಗ್ರಾಮ ಸಭೆಗಳಲ್ಲಿ ಮಹಿಳಾ ಹಕ್ಕುಗಳಿಗೆ, ಅಭಿಪ್ರಾಯ ಮಂಡನೆಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಹಾಗಾಗಿ, ಗ್ರಾಮ ಪಂಚಾಯ್ತಿ ಆಡಳಿತದಲ್ಲಿ ಮಹಿಳೆಯರಿಗೆ ಸೂಕ್ತಸ್ಥಾನಮಾನ ದೊರೆತಿಲ್ಲ.ಇದರಿಂದಾಗಿ, ಗ್ರಾಮ ಪಂಚಾಯ್ತಿ ಯಿಂದ ಮಹಿಳೆಯರು ದೂರ ಉಳಿದಿದ್ದಾರೆ. ಮಹಿಳೆಯರನ್ನು ಗ್ರಾಮಾಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಡುವ ಸಲುವಾಗಿ ‘ಮಹಿಳಾ ಗ್ರಾಮ ಸಭೆ’ಯ ಅಗತ್ಯವಿದೆ’ ಎಂದು ಹೇಳಿದರು.‘ದುಡಿಯುವ ಕೈಗಳಿಗೆ ಮತ್ತು ಗ್ರಾಮದ ಅಭಿವೃದ್ಧಿಯ ಪರಿಕಲ್ಪನೆ ಇಟ್ಟುಕೊಂಡು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ನರೇಗಾ’ ಯೋಜನೆಯನ್ನು ಪಟ್ಟಭದ್ರರು ಮತ್ತು ಅಧಿಕಾರಿಗಳು ಶಾಮೀಲಾಗಿ ನುಂಗಿ ಹಾಕಿದ್ದಾರೆ. ಅವ್ಯವಹಾರ, ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿಯಿಂದಾಗಿ ಯೋಜನೆ ಫಲಾನುಭವಿಗಳಿಗೆ ದಕ್ಕುತ್ತಿಲ್ಲ. ಕರ್ನಾಟಕದಲ್ಲಿ ನರೇಗಾ ಯೋಜನೆ ಅಡಿ ₨600 ಕೋಟಿ ದುರ್ಬಳಕೆಯಾಗಿದೆ.

ಉದ್ಯೋಗ ಖಾತ್ರಿ ಕೂಲಿಕಾರ್ಮಿಕರ ಪಟ್ಟಿಯಲ್ಲಿ ಉಳ್ಳವರಿದ್ದಾರೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಖಾತ್ರಿ ಪಟ್ಟಿಯಲ್ಲಿ ಉಳ್ಳವರ ಹೆಸರು ಕಂಡುಬಂದೊಡನೆ ಅಂತಹವರ ಹೆಸರನ್ನು ಬಡ ಕೂಲಿಕಾರ್ಮಿಕರು ಬಹಿರಂಗಪಡಿಸುವ ಮೂಲಕ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ‘ಕಮ್ಯುನಿಸ್ಟ್‌ರ ಹಾಗೂ ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ನರೇಗಾದಂತಹ ಯೋಜನೆ ಜಾರಿಯಾಗಿದೆ. ಆದರೆ, ಅದು ಬಡವರಿಗೆ ತಲುಪುತ್ತಿಲ್ಲ ಎಂಬುದು ಬೆಳಕಿನಷ್ಟೇ ಸತ್ಯ. ಮಹಿಳೆಯರ ಕಣ್ಣೀರು ಒರೆಸುವ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿಲ್ಲ.ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳು ಸಹ ಮಹಿಳೆಯರು ಸದುಪಯೋಗ ಪಡಿಸಿಕೊಂಡಿಲ್ಲ. ಈಚೆಗೆ ಮಹಿಳೆಯರು ಸಂಘಟಿತರಾಗುತ್ತಿದ್ದಾರೆ. ಹೋರಾಟ ಹಾದಿ ತುಳಿಯುವ ಮೂಲಕ ತಮ್ಮ ಹಕ್ಕೊತ್ತಾಯ ಮಂಡಿಸಿ ಸೌಲಭ್ಯ ಪಡೆದುಕೊಳ್ಳಬೇಕು. ರಾಜ್ಯದ ಮಹಿಳೆಯರನ್ನು ಪ್ರತಿನಿಧಿಸುವ ಸಚಿವೆ ಉಮಾಶ್ರೀ ಅವರು ಮಹಿಳೆಯರಿಗೆ ಬೆಂಬಲ ನೀಡಬೇಕು’ ಎಂದು ಹೇಳಿದರು.

ಗದಗ, ಹಾವೇರಿ, ಬಾಗಲಕೋಟೆ, ದಾವಣಗೆರೆ ಜಿಲ್ಲೆಗಳ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು.ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ.ಹೇಮಚಂದ್ರ, ಜಿಲ್ಲಾ ಕೂಲಿ ಕಾರ್ಮಿಕರ ಸಂಘಟನೆ ಅಧ್ಯಕ್ಷ ಗುಡದಯ್ಯ, ಸ್ಫೂರ್ತಿ ಸಂಸ್ಥೆ ಅಧ್ಯಕ್ಷ ಎನ್.ಎಸ್.ಜಯಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಾಸುದೇವ, ಲಕ್ಷ್ಮೀ, ರೂಪಾನಾಯ್ಕ, ಎಂ.ರೇಣುಕಾ ಇತರರು ಉಪಸ್ಥಿತರಿದ್ದರು.

‘ತುತ್ತು ಅನ್ನ; ಗೇಣು ಬಟ್ಟೆ ಬೇಕು’

‘ನಮಗೆ ಮನೆ, ಬಂಗಾರ, ಮೃಷ್ಟಾನ್ನ ಭೋಜನ ಬೇಕಿಲ್ಲ... ಬೇಕಿರುವುದು ತುತ್ತು ಅನ್ನ; ಗೇಣುದ್ದ ಬಟ್ಟೆ... ಅದನ್ನು ನೀವು ನಮಗೆ ನೀಡಬೇಕಿಲ್ಲ... ಖಾತ್ರಿ ಕೆಲಸ ನೀಡಿ... ವಾರಕ್ಕೊಮ್ಮೆ ಕೂಲಿ ಹಣ ಕೊಡಿ... ಇಷ್ಟೇ ಸಾಕು...’

ಕೂಲಿಕಾರ್ಮಿಕ ಮಹಿಳೆ ನೇತ್ರಾವತಿ ಶುಕ್ರವಾರ ಕೂಲಿಕಾರ್ಮಿಕರ ಸಮಾವೇಶದಲ್ಲಿ ಸಚಿವೆ ಉಮಾಶ್ರೀ ಅವರ ಮುಂದೆ ಮೊರೆ

ಇಟ್ಟರು.ಜಾಬ್‌ಕಾರ್ಡ್ ಸಿಗುತ್ತಿಲ್ಲ; ಸಿಕ್ಕರೂ ಕೆಲಸ ನೀಡುತ್ತಿಲ್ಲ, ಕೆಲಸ ಸಿಕ್ಕರೆ ಕೂಲಿ ನೀಡುತ್ತಿಲ್ಲ. ನರೇಗಾ ಕಡು ಬಡವರಿಗೆ ತಲುಪಿಲ್ಲ. ಮಧ್ಯವರ್ತಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿ ಖಾತ್ರಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಬಿಮಾ  ಸ್ವಾಸ್ಥ್ಯ ಯೋಜನೆ, ವಿಮೆ ಯೋಜನೆಗಳು ಖಾತ್ರಿ ಕೂಲಿ ಕಾರ್ಮಿಕರಿಗೆ ಇಲ್ಲ. ಗ್ರಾಮ ಪಂಚಾಯ್ತಿಗಳಲ್ಲಿ ಹಲವು ದಂಧೆಗಳು ನಡೆಯುತ್ತಿವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಟೀಕಿಸಿದರು.‘ಕೂಲಿ ಕಾರ್ಮಿಕರಿಗೆ ಪೌಷ್ಟಿಕಾಂಶ ಆಹಾರ ಸಿಗುತ್ತಿಲ್ಲ. ಕನಿಷ್ಠ ಖಾತ್ರಿ ಕೆಲಸ ಮತ್ತು ಕೂಲಿ ಸಿಕ್ಕರೆ ಅಪೌಷ್ಟಿಕ ಆಹಾರನಾದ್ರೂ ಸಿಗುತ್ತೆ ಅಂದ್ರೆ ಅದೂ ಇಲ್ಲ. ಕಟ್ಟಡ ಕಾರ್ಮಿಕರಿಗೆ ಒದಗಿಸುವ ಸೌಲಭ್ಯಗಳನ್ನು ಖಾತ್ರಿ ಕಾರ್ಮಿಕರಿಗೂ ವಿಸ್ತರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.