ಸೋಮವಾರ, ಮೇ 17, 2021
26 °C

ಮಾದರಿ ಕನ್ನಡ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಶಾಲೆಗಳ ಆಸುಪಾಸು ತಲೆ ಎತ್ತುತ್ತಿರುವ ಖಾಸಗಿ ಇಂಗ್ಲಿಷ್ ಶಾಲೆಗಳು ಸರ್ಕಾರಿ ಶಾಲೆಗಳಿಗೆ ಸವಾಲಾಗಿವೆ. ಇಂತಹ ಸನ್ನಿವೇಶದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು  ಶಿಕ್ಷಣಾಸಕ್ತರು  ಹಾಗೂ ಸ್ಥಳೀಯರು ಕೆಲವೆಡೆ ಕಾರ್ಯಪ್ರವೃತ್ತರಾಗಿದ್ದು ಗಮನಾರ್ಹ.ಕರ್ನಾಟಕದಲ್ಲಿ ಒಟ್ಟು ಸರ್ಕಾರಿ ಶಾಲೆಗಳ ಸಂಖ್ಯೆ - ಹಿರಿಯ ಪ್ರಾಥಮಿಕ 22,278. ಕಿರಿಯ ಪ್ರಾಥಮಿಕ 23,370. ಶಿಕ್ಷಕರ ಸಂಖ್ಯೆ 201109. ಇಷ್ಟೊಂದು ಅಗಾಧವಾದ ಭೌತಿಕ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲವನ್ನು ನಮ್ಮ  ಶೈಕ್ಷಣಿಕ ವ್ಯವಸ್ಥೆ ಹೊಂದಿದೆ. ಬದಲಾಗುತ್ತಿರುವ ಸಾಮಾಜಿಕ ಸಂಗತಿಗಳೊಂದಿಗೆ ತಾನು ಹಲವು ಮಾರ್ಪಾಡುಗಳಿಗೆ ತೆರೆದುಕೊಳ್ಳುತ್ತಾ ಸಾಗುತ್ತಿರುವ ನೋಟ ಇಲ್ಲಿ ಸಾಮಾನ್ಯ.

 

ಆದರೆ ಕೆಲವೊಂದು ಬದಲಾವಣೆಗಳು, ಹೊಸ ಯೋಜನೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ದೂರದೃಷ್ಟಿಯುಳ್ಳ ಸಮಾಜದ ನಿರ್ಮಾಣ ಅಭಿವೃದ್ಧಿಗೆ ಇವೆಲ್ಲ ಪೂರಕವೇ ಎಂಬುದು ನಮ್ಮನ್ನು ಕಾಡುವ ಗಂಭೀರ ಪ್ರಶ್ನೆ.ಈ ಎಲ್ಲದರ ಮಧ್ಯೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷ ವರ್ಷ ಕುಸಿಯುತ್ತಲೇ ಸಾಗುತ್ತಿದೆ. ಇದಕ್ಕೆ ಬೆಂಬಲವೊ ಎಂಬಂತೆ ಸರ್ಕಾರದ ನೀತಿಗಳು ಶಿಕ್ಷಣದ ಖಾಸಗೀಕರಣಕ್ಕೆ ಮಣೆ ಹಾಕಿದಂತೆ ಕಾಣಬರುತ್ತಿವೆ.ಸರ್ಕಾರಿ ಶಾಲೆಗಳ ಆಸುಪಾಸಲ್ಲೇ ತಲೆ ಎತ್ತುತ್ತಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಸರ್ಕಾರಿ ಶಾಲೆಗಳಿಗೆ ಸವಾಲಾಗಿ ಪರಿಣಮಿಸಿವೆ. ಈ ಬಗ್ಗೆ ಸರ್ಕಾರದ ಶಿಕ್ಷಣ ಇಲಾಖೆ ಕಣ್ಣುಮುಚ್ಚಿ ಕುಳಿತಂತೆ ವರ್ತಿಸುತ್ತಿದ್ದು ಇದರ ಪರಿಣಾಮ ಗಂಭೀರ. ರಾಜ್ಯದಲ್ಲಿ ನೂರಾರು ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ನಿಂತಿದ್ದು ಇಡೀ ನಮ್ಮ  ಶೈಕ್ಷಣಿಕ ವ್ಯವಸ್ಥೆಯನ್ನೇ ಪುನರಾವಲೋಕನ ಮತ್ತು ಪುನರ್‌ನಿರ್ಮಾಣ ಮಾಡಬೇಕಾದ ಒತ್ತಡದಲ್ಲಿ ನಾವಿದ್ದೇವೆ.2009ರಲ್ಲಿ ಕರ್ನಾಟಕ ಸರ್ಕಾರ 886 ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಹಲವು ಶಾಲೆಗಳನ್ನು ಮುಚ್ಚಬೇಕಾಗಿರುವ ಅನಿವಾರ್ಯತೆ ದಕ್ಷಿಣಕನ್ನಡ, ಉಡುಪಿ, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿವೆ.ಇದನ್ನು ಸರ್ಕಾರದ ಸಮೀಕ್ಷೆಗಳೇ ದೃಢಪಡಿಸಿದ್ದು, ಎಲ್ಲಾ ಕಡೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪರಿಯೇನು ಎಂಬ ಚರ್ಚೆ ನಡೆದಿದೆ. ಈ ಚರ್ಚೆಯಲ್ಲಿ ಸರ್ಕಾರಕ್ಕಿಂತ ಜನಸಾಮಾನ್ಯರೇ ಒಂದು ಹೆಜ್ಜೆ ಮುಂದಿದ್ದಾರೆ.ಪೋಷಕರು, ಶಿಕ್ಷಣಾಸಕ್ತರು ಸ್ಥಳೀಯವಾಗಿ ಈ ಕುರಿತಾಗಿ ಕಾರ್ಯಪ್ರವೃತ್ತರಾಗುತ್ತಿದ್ದು ಇದೊಂದು ಆಶಾದಾಯಕ ಬೆಳವಣಿಗೆ. ನಮ್ಮ ಸರಕಾರಿ ಶಾಲೆಗಳಲ್ಲಿ ಹತ್ತಾರು ಯೋಜನೆಗಳಿವೆ.ಆದರೂ ಶಿಕ್ಷಣದ ಗುಣಮಟ್ಟವನ್ನು ಸಾಧಿಸಲಾಗುತ್ತಿಲ್ಲ ಮಾತ್ರವಲ್ಲ. 2010 ರ ಸರ್ವಶಿಕ್ಷಾ ಅಭಿಯಾನದ ಸಮೀಕ್ಷೆಯಂತೆ 1,11,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.ಜತೆಗೆ ನೂರಾರು ಶಾಲೆಗಳಲ್ಲಿ ಮೂಲವ್ಯವಸ್ಥೆಗಳೇ ಸರಿಯಾಗಿ ಇಲ್ಲ. ಹಾಗಾದರೆ ಸರ್ವ ಶಿಕ್ಷಾ ಅಭಿಯಾನದಡಿ ವಿನಿಯೋಗಿಸಲಾದ ಕೋಟ್ಯಂತರ ಹಣದಿಂದ ಏನನ್ನು ಸಾಧಿಸಲಾಯಿತು.ಭ್ರಷ್ಟಾಚಾರದ ವಾಸನೆ ಶೈಕ್ಷಣಿಕ ವ್ಯವಸ್ಥೆಯಲ್ಲೂ ದಟ್ಟವಾಗಿ ಹರಡಿದೆ. ಇದೆಲ್ಲ ನಮ್ಮ ಸಾಮಾಜಿಕ ವ್ಯವಸ್ಥೆ ಕೊಳೆತು ಹೋಗುತ್ತಿರುವುದರ ಸಂಕೇತ. ಒಂದಂತೂ ಸತ್ಯ. ಮರಳಿನ ಮೇಲೆ ಮನೆ ನಿರ್ಮಾಣ ಅಸಾಧ್ಯ. ಸಮಾಜ ನಿರ್ಮಾಣದ ಕನಸು, ಸಂಸ್ಕೃತಿ, ಜೀವನ ಮೌಲ್ಯ, ಕೌಟುಂಬಿಕತೆಗಳ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವ ಹೊಣೆ ಎಲ್ಲ ಕ್ಷೇತ್ರಗಳಿಗಿಂತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೆಚ್ಚು.ಆಧುನಿಕ ಜಗತ್ತಲ್ಲಿ  ಅದು ಎಲ್ಲದಕ್ಕೂ ತಳಪಾಯ. ತಳಪಾಯವೇ ಕುಸಿದರೆ ಗತಿಯೇನು? ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಳ್ಳಿಗಾಡಿನ ಜನ ಸಾಮಾನ್ಯರ ಮಕ್ಕಳು, ದೀನ ದಲಿತರು, ಬುಡಕಟ್ಟು ಜನಾಂಗದ ಮಕ್ಕಳು ಸರ್ಕಾರಿ ಶಾಲೆಗಳಿಂದಾಗಿಯೇ ಸುಲಭ ಶಿಕ್ಷಣ ಪಡೆಯುತ್ತಿರುವುದು.ವಿವಿಧ ಧರ್ಮ ಜಾತಿ ವರ್ಗ, ಜನಾಂಗದ ಮಕ್ಕಳು ಒಟ್ಟಾಗಿ ಕಲಿಯುತ್ತಿರುವುದೇ ಇಂತಹ ಮಕ್ಕಳಲ್ಲಿ  ಸಮಷ್ಟಿಯ ಬೆಳವಣಿಗೆಗೆ ಕಾರಣವಾಗಿದೆ. ಹಾಗಾಗಿ ಲಕ್ಷಾಂತರ ಮಕ್ಕಳು ಕಲಿಯುತ್ತಿರುವ ಸರ್ಕಾರಿ ಶಾಲೆಗಳನ್ನು ನಾವು ಉಳಿಸಬೇಕು. ಶಿಕ್ಷಣ ದುಬಾರಿ ಆಗಿರುವ ಸಂದರ್ಭದಲ್ಲಿ ಇದು ಅಗತ್ಯ.2007ರ ಯುನೆಸ್ಕೋ ತನ್ನ ವರದಿಯೊಂದರಲ್ಲಿ ಹೀಗೆ ಹೇಳಿದೆ. ಭಾರತದಲ್ಲಿನ ಕುಟುಂಬಗಳು ತಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಹಣ ವ್ಯಯಿಸಬೇಕಾಗಿದೆ ಹಾಗೂ ಇದರಿಂದಾಗಿ ತಳಮಟ್ಟದ ಶಿಕ್ಷಣದ ಮೂಲಭೂತ ಹಕ್ಕನ್ನು ಹೊಂದುವುದು ಬಡವನೊಬ್ಬನಿಗೆ ದೂರದ ಕನಸಾಗಿ ಉಳಿಯಲಿದೆ.

 

ಕುಟುಂಬಗಳು ತಮ್ಮ ಖರ್ಚಿನ ಕಾಲುಭಾಗಕ್ಕಿಂತಲೂ ಅಧಿಕ (ಶೇ. 28) ಮೊತ್ತವನ್ನು ಮಕ್ಕಳ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕಾಗಿ ವ್ಯಯಿಸಬೇಕಾಗಿದೆ.ಬಡಕುಟುಂಬಗಳ ಮಕ್ಕಳಿಗೆ ಅವರ ಕಲಿಕೆಗೆ ಇದೊಂದು ನೈಜ ತೊಡಕಾಗಿದೆ. ಈ ಪರಿಸ್ಥಿತಿಯಲ್ಲಿ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಮೂರು ಕನ್ನಡ ಶಾಲೆಗಳಲ್ಲಿ ಪೋಷಕರು, ಶಿಕ್ಷಣಾಸಕ್ತರು ನಡೆಸಿರುವ ಪ್ರಯತ್ನ ಗಮನಾರ್ಹ.1. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇಮನ ಬಳ್ಳಿ

2. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಸನಡ

3.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಚ್ರಪ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇಮನ ಬಳ್ಳಿ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಚ್ರಪ್ಪಾಡಿ, ತಾಲೂಕು ಕೇಂದ್ರವಾಗಿರುವ ಸುಳ್ಯದಿಂದ 22 ಕಿ.ಮೀ.ದೂರದಲ್ಲಿದೆ. 1954ರಲ್ಲಿ ಪ್ರಾರಂಭವಾದ ಈ ಶಾಲೆ ಆರಂಭದಲ್ಲಿ  ಖಾಸಗಿ ಶಾಲೆಯಾಗಿದ್ದು ಸ್ಥಳೀಯರಾದ ಡಿ.ಎಸ್. ಭೀಮಯ್ಯ ಎಂಬವರು ಅದರ ಸಂಸ್ಥಾಪಕರಾಗಿದ್ದರು.ಒಟ್ಟು 1.55 ಎಕರೆ ಸ್ವಂತ ಜಮೀನು ಹೊಂದಿರುವ ಈ ಶಾಲೆಯಲ್ಲಿ ಆರಂಭದ ದಿನಗಳಲ್ಲಿ 80 ರಿಂದ 100 ರಷ್ಟು ವಿದ್ಯಾರ್ಥಿಗಳಿದ್ದರಂತೆ. ಇಂದು 14 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ.

 

ಶಾಲೆಯಲ್ಲಿ ನುರಿತ ಶಿಕ್ಷಕರು ಕಾರ್ಯಚರಿಸುತ್ತಿದ್ದು ಕುಡಿವ ನೀರಿಗಾಗಿ ಬಾವಿ, ಪಂಪ್‌ಸೆಟ್ ವ್ಯವಸ್ಥೆ, ಆಟದ ಮೈದಾನ, ಶೌಚಾಲಯ, ವಿದ್ಯುತ್ ಸಂಪರ್ಕ ಪಡಕೊಂಡಿದ್ದು ತನ್ನ ಜಮೀನಿನಲ್ಲಿ 25 ಫಲ ಕೊಡುವ ತೆಂಗಿನ ಗಿಡಗಳನ್ನು ಹೊಂದಿದೆ.ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳ ಮುಚ್ಚುವ ನೀತಿ ಶಿಕ್ಷಣ ಇಲಾಖೆಯದ್ದಾಗಿದೆ. ಈ ಶಾಲೆಯಲ್ಲಿ 2010-11 ರಲ್ಲಿ 9 ಮಕ್ಕಳು ಮಾತ್ರ ದಾಖಲಾಗಿದ್ದು ಮುಂದಿನ ವರ್ಷದಲ್ಲಿ ಮುಚ್ಚಬಹುದಾದ ಪರಿಸ್ಥಿತಿ ಬರಬಹುದೆಂಬ ಗಂಭೀರತೆಯ ಅರಿತ ಜನ ತಕ್ಷಣ ಕಾರ್ಯಪ್ರವೃತ್ತರಾದರು.ನೂರಾರು ಮಕ್ಕಳ ವಿದ್ಯೆಗೆ ಕಾರಣವಾದ ತಮ್ಮ ಹಿರಿಯರೇ ಕಟ್ಟಿ ಬೆಳೆಸಿದ ಶಾಲೆಯೊಂದು ಬಾಗಿಲು ಹಾಕುವ ಪರಿಸ್ಥಿತಿಯನ್ನು ಜನ ನೋಡಲು ಸಿದ್ಧರಿರಲಿಲ್ಲ. ಶಾಲೆಯ ಉಳಿವಿಗಾಗಿ ಜನರೇ  ಶಾಲಾ ಹಿತ ರಕ್ಷಣಾ  ಸಮಿತಿರಚಿಸಿಕೊಂಡರು.ಸಂವಾದ ಸಭೆಗಳನ್ನು ನಡೆಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಕರೆಸಿ ಚರ್ಚೆ ನಡೆಸಿದರು. ಶಾಲೆಯಲ್ಲಿ ಶಾಲಾ ದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಶಾಲಾ ಉಳಿವಿಗಾಗಿ ಪ್ರಯತ್ನ ಪಡಬೇಕಾದ ವಿಚಾರವನ್ನು ಜನರ ಮುಂದಿಟ್ಟರು.ನಿರಂತರ ಎಸ್.ಡಿ.ಎಂ.ಸಿ. ಸಭೆಗಳು ಮನೆಭೇಟಿಗಳಿಂದಾಗಿ ಹತ್ತಿರದ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದ 3 ಮಕ್ಕಳನ್ನು ತಮ್ಮ ಶಾಲೆಯಲ್ಲಿ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಯಲ್ಲೆ ಹಳೇ ವಿದ್ಯಾರ್ಥಿ ಸಂಘವನ್ನು ರಚಿಸಲಾಯ್ತು.ಊರ ದಾನಿಗಳ ಸಂಪರ್ಕಿಸಿದ  ಶಾಲಾ ಹಿತರಕ್ಷಣಾ ಸಮಿತಿ  ಒಂದು ನಿರ್ಧಾರಕ್ಕೆ ಬಂದಿತು. ಅದೇನೆಂದರೆ ಈಗಾಗಲೇ ಶಾಲೆಯಲ್ಲಿರುವ ಎಲ್ಲಾ ಮಕ್ಕಳ ಹೆಸರಲ್ಲಿ ರೂ. 1000 ಹಣವನ್ನು ಠೇವಣಿಯಾಗಿ ಇಡುವುದು ಮಾತ್ರವಲ್ಲ ಮುಂದಿನ ವರ್ಷದಿಂದ 1 ನೇ ತರಗತಿಗೆ ಸೇರ್ಪಡೆಗೊಳ್ಳುವ ಎಲ್ಲಾ ವಿದ್ಯಾರ್ಥಿಗಳ ಹೆಸರಲ್ಲಿ ಅಷ್ಟೇ ಮೊತ್ತದ ಹಣವನ್ನು ಠೇವಣಿ ಇಡುವುದು.ವಿದ್ಯಾರ್ಥಿ ಶಾಲೆಗೆ ನಿರಂತರ ಹಾಜರಾಗಿ 5ನೇ ತರಗತಿ ಮುಗಿಸಿದ ತಕ್ಷಣ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸುವುದು. ಈ ನಿರ್ಧಾರದಿಂದಾಗಿ ಶಾಲೆಯ ವ್ಯಾಪ್ತಿಯಿಂದ ಖಾಸಗಿ ಆಂಗ್ಲಮಾಧ್ಯಮ ಶಾಲೆಗೆ ಹೋಗುತ್ತಿದ್ದ ಮೂವರು ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಹಿತರಕ್ಷಣಾ ಸಮಿತಿ ಯಶಸ್ವಿಯಾಯಿತು.ಅಲ್ಲದೇ, ಶಾಲೆಯಲ್ಲಿ 1ನೇ ತರಗತಿಯಿಂದಲೇ ಇಂಗ್ಲಿಷ್ ಭಾಷಾ ಕಲಿಕೆಗಾಗಿ ಯತ್ನಿಸಲಾಗುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳ ಮುಖಾಂತರ ಊರವರು ಹಿರಿಯರು ಕಟ್ಟಿದ ಶಾಲೆಯನ್ನು ಉಳಿಸಿಕೊಂಡಿದ್ದಾರೆ. ಪೋಷಕರು ಮತ್ತು ಸಾರ್ವಜನಿಕರ ಬೆಂಬಲ ವಿಶ್ವಾಸಗಳಿಗೂ ಪಾತ್ರರಾಗಿದ್ದಾರೆ. ಶಾಲೆಯು ಮುಚ್ಚುವ ಭೀತಿಯಿಂದ ಪಾರಾಗಿದೆ.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ  ಹಾಸನಡ್ಕ

ಈ ಶಾಲೆ ತಾಲ್ಲೂಕು ಕೇಂದ್ರವಾಗಿರುವ ಸುಳ್ಯದಿಂದ ಸರಿಸುಮಾರು 18 ಕಿ.ಮೀ ದೂರದಲ್ಲಿದೆ. ಈ ಶಾಲೆಯಲ್ಲಿ ಕಲಿಯುತ್ತಿರುವ ಒಟ್ಟು ಮಕ್ಕಳ ಸಂಖ್ಯೆ 19. ಇಬ್ಬರು ಸರಕಾರಿ ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಸದ್ಯಕ್ಕೆ ಇಲ್ಲಿ ಮಕ್ಕಳ ಕೊರತೆಯಿಂದಾಗಿ ಶಾಲೆ ಮುಚ್ಚುವ ಪರಿಸ್ಥಿತಿಯೇನು ಇಲ್ಲ. ಆದರೆ ಮಕ್ಕಳ ನಿರಂತರ ದಾಖಲೆಗಾಗಿ ಶಾಲೆ ನಡೆಸಿರುವ ಪ್ರಯತ್ನ ರಾಜ್ಯಕ್ಕೆ ಮಾದರಿಯಾಗುವಂತಹದು. 1960 ರಲ್ಲಿ ಆರಂಭವಾಗಿರುವ ಈ ಶಾಲೆ 1.80 ಎಕ್ರೆಯಷ್ಟು ಸ್ವಂತ ಜಮೀನನ್ನು ಹೊಂದಿದೆ.ಕಳೆದ ಎರಡು ವರ್ಷಗಳಿಂದ, 

ದಾಖಲಾತಿ ಪ್ರೋತ್ಸಾಹ ಯೋಜನೆ ಜಾರಿಯಲ್ಲಿದ್ದು ದಾಖಲಾದ ಪ್ರತಿ ಮಗುವಿನ ಹೆಸರಲ್ಲಿ 1000 ಹಣ ಠೇವಣಿ ಇಡಲಾಗುವುದು. ಕಲಿಕೆಯು 5ನೇ ತರಗತಿಗೆ ಪೂರ್ಣಗೊಂಡ ನಂತರ ಬಡ್ಡಿ ಸಮೇತ ಹಣವನ್ನು ಮಗುವಿಗೆ ಹಿಂತಿರುಗಿಸಲಾಗುವುದು.ಹಾಜರಾತಿ ಪ್ರೋತ್ಸಾಹ ಯೋಜನೆ ಜಾರಿಯಲ್ಲಿ ಶೇಕಡಾ 90 ರಷ್ಟು ಹಾಜರಾತಿ ಹೊಂದಿರುವ ಮಗುವಿಗೆ ವರ್ಷಕ್ಕೆ 230 ರೂಪಾಯಿ ಕೊಡುಗೆ ನೀಡುವುದು.ಉಚಿತ ಶೈಕ್ಷಣಿಕ ಪ್ರವಾಸ ಈ ಯೋಜನೆಯಡಿ ಪ್ರತೀ ವರ್ಷ ಮಕ್ಕಳಿಗೆ ಉಚಿತವಾದ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುತ್ತದೆ.ಸರ್ಕಾರಿ ಸಮವಸ್ತ್ರದ ಜತೆಯಲ್ಲಿ ಅದಕ್ಕಿಂತಲೂ ಭಿನ್ನವಾದ ಉಚಿತ ಸಮವಸ್ತ್ರವನ್ನು ಮಕ್ಕಳಿಗೆ ನೀಡಲಾಗುತ್ತದೆ.ಮಕ್ಕಳಿಗಾಗಿ ಕಲಿಕೋದ್ಯಾನವನ್ನು ನಿರ್ಮಿಸಲಾಗಿದ್ದು ಅದರಲ್ಲಿ  ತೂಗೂಯ್ಯೊಲೆ, ತಿರುಗು ಉಯ್ಯೊಲೆ, ಜಾರುಬಂಡಿ ಮತ್ತು ಮಕ್ಕಳ ಗೂಡುಗಳಿವೆ.ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ಮೊದಲೇ ಮಧ್ಯಾಹ್ನದ ಊಟದ ವ್ಯವಸ್ಥೆ ಈ ಶಾಲೆ ಹೊಂದಿದ್ದು ಎಲ್ಲೂ ಕಾಣದ ವಿಶಿಷ್ಟ ಕಾರ್ಯಕ್ರಮ ಇಲ್ಲಿ ಜಾರಿಯಲ್ಲಿದ್ದು ಅದರಂತೆ ಶಾಲಾ ವ್ಯಾಪ್ತಿಗೆ ಒಳಪಟ್ಟ ಪ್ರತಿ ಮನೆಯವರು ತಾವು ಅಡುಗೆ ಮಾಡುವ ಸಂದರ್ಭದಲ್ಲಿ ಅನ್ನಕ್ಕೆ ಅಕ್ಕಿ ಹಾಕುವಾಗ ಒಂದು ಮುಷ್ಠಿ ಅಕ್ಕಿಯನ್ನು ಮಣ್ಣಿನ ಗಡಿಗೆಗೆ ಹಾಕಬೇಕಾಗಿತ್ತು.ಈ ಪಾತ್ರೆಯನ್ನು ಶಾಲಾ ವತಿಯಿಂದಲೇ ಪ್ರತಿ ಮನೆಗೆ ಕೊಡಲಾಗುತ್ತಿತ್ತು. ತಿಂಗಳ ಕೊನೆಯಲ್ಲಿ ಅಕ್ಕಿ ಸಂಗ್ರಹ. ಪ್ರತಿ ಮನೆಯಿಂದಲೂ 1 ರಿಂದ 2 ಕೆ.ಜಿ. ಅಕ್ಕಿ ಶೇಖರಣೆಯಾಗುತ್ತಿತ್ತು.

 

ಅಂದರೆ ಶಾಲೆಗೆ ತಿಂಗಳಿಗೆ 70 ಕೆ.ಜಿ.ಯಷ್ಟು ಅಕ್ಕಿ ದೊರೆಯುತ್ತಿತ್ತು. ಸರಕಾರದ ಅಕ್ಕಿ ಯೋಜನೆಯನ್ನು ಸೇರಿಸಿ ಮಕ್ಕಳಿಗೆ ಊಟ ನೀಡಲಾಗುತ್ತಿತ್ತು. ಈಗ ಶಾಲೆಯ ಊಟದ ಮೆನು ಹೀಗಿದೆ. ಉಪ್ಪಿನಕಾಯಿ, ಸಾಂಬರು, ಪಲ್ಯ, ಮಜ್ಜಿಗೆ ನಿತ್ಯದೂಟದಲ್ಲಿ ಲಭ್ಯ ಹಾಗೆ ವಾರದಲ್ಲಿ ಒಂದು ದಿನ ಉಚಿತ ಹಾಲು.ಶಾಲೆ ಆಟದ ಮೈದಾನ, ಕೈತೋಟ, ನೀರು, ವಿದ್ಯುತ್, ಟಿ.ವಿ., ಕಂಪ್ಯೂಟರ್, ಆವರಣಗೋಡೆ, ಶೌಚಾಲಯ ಸೇರಿದಂತೆ ಉತ್ತಮವಾದ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ.

 

ಹೀಗಾಗಿ ಆಸುಪಾಸಿನ ಪೋಷಕರು ಖಾಸಗಿ ಶಾಲೆಗಳತ್ತ ತಿರುಗಿಯೂ ನೋಡುವುದಿಲ್ಲ. ದಾಖಲಾತಿಗೆ ಇಲ್ಲಿ ಎಂದೂ ಕೊರತೆಯಾಗದು. ಕಳೆದ ವರ್ಷ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದ ಈ ಶಾಲೆ ಇಡೀ ವರ್ಷ ತಿಂಗಳಿಗೆ ಒಂದರಂತೆ 12 ಕಾರ್ಯಕ್ರಮಗಳನ್ನು ನಡೆಸಿ ಊರವರ ಪ್ರೀತಿ ವಿಶ್ವಾಸಗಳಿಗೆ ಪಾತ್ರವಾಗಿದೆ. ಸ.ಕಿ.ಪ್ರಾ.ಶಾಲೆ. ಕೇಮನ ಬಳ್ಳಿ

ಕೇಮನ ಬಳ್ಳಿ ಶಾಲೆಯು ತಾಲೂಕು ಕೇಂದ್ರದಿಂದ 10 ಕಿ.ಮೀ ದೂರದ ಗುಡ್ಡ ಪ್ರದೇಶದಲ್ಲಿದೆ. ಶಾಲೆಯ ಸುತ್ತಮುತ್ತಲು ಅಷ್ಟೊಂದು ಜನವಸತಿ ಇಲ್ಲದ ಕಾರಣ ಮಕ್ಕಳು ದೂರದಿಂದಲೇ ನಡೆದು ಬರಬೇಕು.

 

ಇದರಿಂದಾಗಿ ಮಳೆಗಾಲದಲ್ಲಿ ವಿದ್ಯಾರ್ಥಿಗಳು ತ್ರಾಸ ಪಡುವಂತಾಗುತ್ತದೆ. ಸ್ಥಳೀಯರಾದ ಗೋವಿಂದ ಭಟ್ ಮತ್ತು ಅವರ ಸಹಪಾಠಿ ಮಾಲಿಂಗ ಮಣಿಯಾಣಿ ಎನ್ನುವವರ ನೆರವಿನಲ್ಲಿ 1960 ರಲ್ಲಿ ಈ ಶಾಲೆ ಆರಂಭಗೊಂಡಿದ್ದು, 2 ವರುಷ ತನಕ ಕೊಟ್ಟಿಗೆಯಲ್ಲಿ ಶಾಲೆಯನ್ನು ನಡೆಸಲಾಗಿತ್ತು.ಈ ಶಾಲೆಗೆ 2010-11 ರಲ್ಲಿ ದಾಖಲಾದ ವಿದ್ಯಾರ್ಥಿಗಳು ಕೇವಲ ನಾಲ್ಕು. ಈ ಕಾರಣಕ್ಕಾಗಿ ಶಾಲೆಯನ್ನು ಮುಚ್ಚಿ ಮಕ್ಕಳಿಗೆ ಪ್ರಯಾಣ ವೆಚ್ಚ ನೀಡಿ ಪಕ್ಕದ ಊರಿನ ಶಾಲೆಗೆ ಸೇರಿಸಲಾಯ್ತು. ಈ ವರ್ಷ ಇದೇ ಶಾಲೆಯಲ್ಲಿ ಕಲಿತ ಬಾಲಕಿಯೊಬ್ಬಳಿಗೆ ಪಿ.ಯು.ಸಿ. ತರಗತಿಯಲ್ಲಿ ರಾಜ್ಯ ಪ್ರಶಸ್ತಿ ಬಂದಿರುವುದು ಮುಚ್ಚಿದ್ದ ಶಾಲೆಗೆ ಅದೃಷ್ಟ ಒಲಿದಂತಾಗಿತ್ತು. ರಾಜ್ಯ ಪ್ರಶಸ್ತಿ ಪಡೆದ ವಿದ್ಯಾರ್ಥಿ ಕಲಿತ ಶಾಲೆಯೊಂದು ಮುಚ್ಚುವ ಪರಿಸ್ಥಿತಿಗೆ ಬಂದುದು, ರಾಜ್ಯ ಮಟ್ಟದಲ್ಲಿ ಇದು ಸುದ್ದಿಯಾದುದು ಊರವರ, ಶಿಕ್ಷಣ ಇಲಾಖೆಯವರ, ಜನಪ್ರತಿನಿಧಿಗಳ ಕಣ್ತೆರೆಸಿತು.ಶಾಲೆಯನ್ನು ಮತ್ತೆ ಆರಂಭಿಸುವ ಕುರಿತಾಗಿ ಇಲ್ಲಿ ನಿರಂತರ ಸಂವಾದ ಸಭೆಗಳು ನಡೆದಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು ಪೋಷಕರು ಸಭೆಗಳಲ್ಲಿ ಹಾಜರಿದ್ದು ಸಲಹೆ ಸೂಚನೆಗಳು ನೀಡಿದ್ದಾರೆ.

 

ರಾಜ್ಯಮಟ್ಟದ ಪತ್ರಿಕೆಗಳಲ್ಲೂ ವರದಿಗಳು ಪ್ರಕಟಗೊಂಡಿವೆ. ಶಾಲೆ ತೆರೆಯುವಂತೆ ಇಲಾಖೆಯ ಮೇಲೆ ಒತ್ತಡವನ್ನು ತರಲಾಗಿದೆ. ಇದರ ಪರಿಣಾಮ ಸ್ವಸಹಾಯ ಗುಂಪುಗಳ ಸದಸ್ಯರು, ಧರ್ಮಸ್ಥಳ ಗ್ರಾಮೋದ್ಯೊಗದ ಸದಸ್ಯರು, ಶಿಕ್ಷಣಾಸಕ್ತರು ನಿರಂತರ ಮಕ್ಕಳ ಮನೆಗಳಿಗೆ ಭೇಟಿ ನೀಡಿ 8 ಮಕ್ಕಳು ಶಾಲೆಗೆ ದಾಖಲಾಗುವಂತೆ ನೋಡಿಕೊಂಡಿದ್ದಾರೆ.ಶಾಲೆ ಮತ್ತೆ ತೆರೆದಿದೆ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತಿದ್ದು ಶಾಲೆಯಲ್ಲಿ ಮಕ್ಕಳ ಕಲರವ ಕೇಳಿಸಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಹೊತ್ತಲ್ಲಿ ಅದೇ ಶಾಲೆಗಳಲ್ಲಿ ಕಲಿತವರ ಹೃದಯಗಳು ಶಾಲೆಗಳ ಉಳಿವಿಗಾಗಿ ಚಡಪಡಿಸಿ ತೆಗೆದುಕೊಂಡ ನಿರ್ಧಾರಗಳ ಫಲದಿಂದಾಗಿ ಶಾಲೆಗಳು ಉಳಿದುಕೊಂಡಿವೆ.ಇಲ್ಲಿನ ಪ್ರಯತ್ನಗಳನ್ನು ಸಾರ್ವತ್ರಿಕವಾಗಿ ಎಲ್ಲಾ ಶಾಲೆಗಳಿಗೆ ಅನ್ವುಸಬಹುದೆ ಎಂಬ ಪ್ರಶ್ನೆ ನಮ್ಮ ಎದುರಿಗೆ ಬರುತ್ತದೆ. ಆದೇನೆ ಇರಲಿ ಜನರ ಆಕಾಂಕ್ಷೆ ಸರಕಾರಕ್ಕಿಂತ ಭಿನ್ನವಾಗಿದೆ ಎಂಬುದಂತು ಸತ್ಯ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.