ಬುಧವಾರ, ಜೂನ್ 23, 2021
28 °C
ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ರೈಲ್ವೇಸ್‌ಗೆ ನಿರಾಸೆ

ಮಿಜೋರಾಂ ತಂಡಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಲಿಗುರಿ (ಪಿಟಿಐ): ಅದ್ಭುತ ಆಟದ ಪ್ರದರ್ಶನ ನೀಡಿದ ಮಿಜೋರಾಂ ತಂಡ 68ನೇ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು.ಕಾಂಜನಜುಂಗಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಮಿಜೋರಾಂ 3-0 ಗೋಲುಗಳಿಂದ ರೈಲ್ವೇಸ್‌ ತಂಡವನ್ನು ಮಣಿಸಿತು. ಈ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.48 ವರ್ಷಗಳಿಂದ ಪ್ರಶಸ್ತಿಯ ಬರ ಎದುರಿಸುತ್ತಿರುವ ರೈಲ್ವೇಸ್‌ಗೆ ಮತ್ತೊಮ್ಮೆ ನಿರಾಸೆ ಎದುರಾಯಿತು. ಎರಡು ಗೋಲುಗಳನ್ನು ಗಳಿಸಿದ ಜಿಕೊ ಜೊರೆಮ್‌ಸಾಂಗಾ ಅವರು ಮಿಜೋ ರಾಂ ತಂಡದ ಗೆಲುವಿನ ರೂವಾರಿ ಎನಿಸಿದರು. ಮತ್ತೊಂದು ಗೋಲನ್ನು ಎಫ್‌. ಲಾಲ್‌ರಿಂಪುಯಾ ತಂದಿತ್ತರು.ಚಾಂಪಿಯನ್‌ ಮಿಜೋರಾಂ ತಂಡ ಟ್ರೋಫಿಯೊಂದಿಗೆ ₨ 5 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು. ರೈಲ್ವೇಸ್‌ಗೆ ₨ 3 ಲಕ್ಷ ಲಭಿಸಿತು.ಫೈನಲ್‌ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಆದರೆ ಮಿಜೋರಾಂ ನಿಧಾನವಾಗಿ ಹಿಡಿತ ಸಾಧಿಸಿತು. ವಿಮಲ್‌ ಕುಮಾರ್‌ ಮತ್ತು ರಾಜೀವ್‌ ಬೋರೊ ಅವರು ನಿಷೇಧ ಶಿಕ್ಷೆಯ ಕಾರಣ ಪಂದ್ಯದಿಂದ ಹೊರ ಗುಳಿದದ್ದು ರೈಲ್ವೇಸ್‌ಗೆ ಹಿನ್ನಡೆ ಉಂಟುಮಾಡಿತು.44ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಬಂತು. ಲಾಲ್‌ ರಿಂಪುಯಾ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಜಿಕೊ ಅದನ್ನು ಯಶಸ್ವಿಯಾಗಿ ಗುರಿ ಸೇರಿಸಿದರು. ಎರಡನೇ ಅವಧಿಯ ಆರಂಭ ದಿಂದಲೇ ಮಿಜೋರಾಂ ಪೂರ್ಣ ಪ್ರಭುತ್ವ ಮೆರೆಯಿತು. 61ನೇ ನಿಮಿಷದಲ್ಲಿ ಗೋಲು ಗಳಿಸಿದ ಜಿಕೊ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.ಎರಡು ಗೋಲುಗಳ ಹಿನ್ನಡೆ ಅನುಭವಿಸಿದ ರೈಲ್ವೇಸ್‌ ಆಟಗಾರರು ಒತ್ತಡಕ್ಕೆ ಒಳಗಾದರು. ಮತ್ತೊಂದೆಡೆ ಮಿಜೋರಾಂ ತಂಡ ಗೋಲು ಪೆಟ್ಟಿಗೆ ಗುರಿಯಾಗಿಸಿ ಮೇಲಿಂದ ಮೇಲೆ ದಾಳಿ ನಡೆಸಿತು. ಪಂದ್ಯದ ಇಂಜುರಿ ಅವಧಿಯಲ್ಲಿ   ಲಾಲ್‌ರಿಂಪುಯಾ (90+1) ತಂಡದ ಮೂರನೇ ಗೋಲು ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.