ಬುಧವಾರ, ಮೇ 18, 2022
27 °C

ಮುಕ್ತ ಚಿಂತನೆ ಮತ್ತು ಭಿನ್ನಮತದ ಸೊಗಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಗಳು ಆರಂಭಗೊಂಡಿರುವಂತೆ ಸಮ್ಮೇಳನ ಯಾರಿಂದ ಉದ್ಘಾಟನೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಈ ಭಿನ್ನಮತ ಬೇಕು ಮತ್ತು ಇದೆಲ್ಲ ನಮ್ಮ ಸದಭಿರುಚಿಯ ಹೆಚ್ಚಳಕ್ಕೆ ಪೂರಕವಾಗಿ ನಿಂತಲ್ಲಿ ಮಾತ್ರ ನಾವು ಹೆಮ್ಮೆಪಡಲು ಸಾಧ್ಯ. ಹಾಗಾಗದಿದ್ದರೆ ಸಾರ್ವಜನಿಕ ಸಂಪತ್ತನ್ನು ಬೇಕಾಬಿಟ್ಟಿಯಾಗಿ ಲೂಟಿ ಮಾಡುವ ವಿನಾಶಕಾರಿತನದ ಪರಿಣತರ ಹುಟ್ಟುದಂಧೆ ಇದಾಗುತ್ತದೆ.ಹೊಣೆಯರಿತ ರಾಷ್ಟ್ರದ ಚಿಂತಕರು, ಕವಿಗಳು, ಸಂತರು ಈ ಬಗೆಯ ಚಟುವಟಿಕೆಗಳ ದಾಸಾನುದಾಸರಾಗಿ ದುಡಿಯುತ್ತಲೇ ಜನ್ಮಸಾಫಲ್ಯದ ಸಂತೃಪ್ತಿಯನ್ನು ಕಂಡವರೇ ಆಗಿದ್ದಾರೆ. ಅಂತಹ ಚೇತನಗಳಾದ ನಮ್ಮ ಹಿರಿರ ದಾರಿಯಲ್ಲಿ  ನಾವು ಹೆಜ್ಜೆ ಇಡುತ್ತಿದ್ದೇವೆಯೆ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಲೇ ಸಾಗಬೇಕಾಗುತ್ತದೆ. ಒಂದು ವರ್ಷದ ಹಿಂದೆ ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳಲ್ಲಿ ಶ್ರಮಜೀವಿ ಬಂಧುಗಳು ಪ್ರವಾಹದ ಸೆಳೆತಕ್ಕೆ ಒಳಗಾಗಿ ಮನೆಮಠ ಕಳೆದುಕೊಂಡು ತಬ್ಬಲಿಗಳಾದರು. ಸುಡುಬಿಸಿಲಿನ ಇಕ್ಕಟ್ಟಾದ ತಗಡಿನ ಹಂದಿಗೂಡುಗಳಲ್ಲಿ ಅವರನ್ನು ನರಳಿಸಿದ್ದೇವೆ ಹೊರತು ಕನಿಷ್ಠ ಮೂಲ ಅವಶ್ಯಕತೆಗಳನ್ನು ಪೂರೈಸುವಲ್ಲಿಯೂ ಸಫಲರಾಗಲಿಲ್ಲ. ಇವತ್ತಿಗೂ ರೈತಾಪಿವರ್ಗ ನಿಸ್ಸಹಾಯಕರಾಗಿ ದಿಕ್ಕುಕಾಣದೆ ನೇಣಿಗೆ ಶರಣಾಗುತ್ತಿರುವ ದೃಶ್ಯ ನಮಗೆ ತಾಕುತ್ತಲೇ ಇಲ್ಲ.ಆದರೆ, ಉಂಡುಟ್ಟು ದುಂಡಾಗಿರುವವರ ಪಾದಪೂಜೆ, ಗುರುದಕ್ಷಿಣೆ, ಮಂತ್ರಮಾಟಗಳ ಆಚರಣೆ ಮತ್ತು ಕೋಟಿಗಟ್ಟಲೆ ಹಣಕಾಸಿನ ಯಥೇಚ್ಚ ದೇಣಿಗೆಗಳ ಸುರಿಮಳೆ ಮಾತ್ರ ನಿಂತಿಲ್ಲ. ಇಷ್ಟು ಸ್ಪಷ್ಟ ಪ್ರಕರಣಗಳ ಅರಿವಿಗೆ ಕಾನೂನು, ವಿಶೇಷ ಜ್ಞಾನ, ಕ್ರಾಂತಿಕಾರಕ ಗ್ರಂಥ, ಧರ್ಮ, ತತ್ವಶಾಸ್ತ್ರಗಳ ನೆರವೇನೂ ಬೇಕಾಗಿಲ್ಲ. ಕನಿಷ್ಠ ಸಾಮಾನ್ಯ ತಿಳಿವಳಿಕೆ ಮಾತ್ರ ಸಾಕು. ಇದರ ಹೇರಳ ಕೊರತೆ ಎದ್ದು ಕಾಣುತ್ತದೆ. ಜೊತೆಗೆ ತೋಳಲ್ಲಿ ತಾಯಿತ ಮತ್ತು ಮಣಿಕಟ್ಟಿನಲ್ಲಿ ಮಂತ್ರಿಸಿದ ದಾರವಿಲ್ಲದ ರಾಜಕಾರಣಿ ಮತ್ತು ಧನದಾಹಿ ಪ್ರಚಂಡರುಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ.ಕನ್ನಡದ ಹೆಸರಿನಲ್ಲಿ ಸಂಘಟಿತರಾಗಿ ನಮ್ಮೆಲ್ಲರ ಮುಂದಿನ ಏಳಿಗೆಯ ಸಂಬಂಧದಲ್ಲಿ ಚಿಂತಿಸಿ ಕಾರ್ಯಪ್ರವೃತ್ತರಾಗಲು ಈ ಸಮ್ಮೇಳನ ಪೂರಕವಾಗಿರುತ್ತದೆನ್ನುವ ಆಶಯ ಇದೆ. ಜನತೆ ಮತ್ತು ಜನ ಭಾಷೆಗಳಿಗೆ ನಿಜವಾದ ಆದ್ಯತೆ ದೊರೆತಾಗ ಮಾತ್ರ ಆಯಾಯ ನಾಡಿನ ಕನಸುಗಳು ನನಸಾಗಲು ಸಾಧ್ಯ. ಹಾಗೆಯೇ ತಾಯಿ ಮತ್ತು ತಾಯ್ನಾಡನ್ನು ತುಂಬ ನಿಕೃಷ್ಟವಾಗಿ ಕಂಡು ಅಲಕ್ಷಿಸುವ ಅವಿವೇಕದ ವಿವರಗಳು ನಮ್ಮ ಸುತ್ತಲೂ ಸಾಕಷ್ಟಿವೆ. ಈ ತಾತ್ವಿಕ ಹಿನ್ನೆಲೆಯಲ್ಲಿ ಕನ್ನಡ ಜನಸಮುದಾಯದ ಇಷ್ಟು ದೊಡ್ಡ ಸಮ್ಮೇಳನದ ಉದ್ಘಾಟನೆಯ ಜವಾಬ್ದಾರಿಯನ್ನು ಯಾರ ಹೆಗಲಿಗೆ ಏರಿಸಬೇಕೆನ್ನುವ ಸಮಸ್ಯೆಗೆ ಹೃದಯವಂತಿಕೆಯ ಪರಿಹಾರ ಸಿಗುತ್ತದೆ. ಆದುದರಿಂದ ಸಾಂಕೇತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಸಮಾಜದ ಒಳಿತಿಗೆ ಅರ್ಪಿಸಿಕೊಂಡು ದುಡಿಯುತ್ತಿರುವ ಹತ್ತು ಮಂದಿ ಮಹಿಳೆಯರು ಮತ್ತು ಮಹನೀಯರ ತಂಡವು ಯಾವುದೇ ತರತಮಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಸಾಂಕೇತಿಕವಾಗಿ ದೀಪ ಬೆಳಗುವ ಉದ್ಘಾಟನೆಯ ಕಾರ್ಯಕ್ರಮವು ಹೆಚ್ಚು ಔಚಿತ್ಯಪೂರ್ಣ.ಈ ತಂಡದಲ್ಲಿ ನಮ್ಮ ಜಲಗಾರ, ರೈತ, ನೇಕಾರ, ಕುಂಬಾರ, ಚಮ್ಮಾರ, ಮಾನವಂತ ಉದ್ಯಮಿ, ನಿಷ್ಠಾವಂತ ಜನಪ್ರತಿನಿಧಿ, ಮುಖ್ಯಮಂತ್ರಿ, ಪ್ರಧಾನಿ ಮತ್ತಿತರರು ಸಹ ಇರಲಿ. ಆದರೆ, ಕೇವಲ ದುಡ್ಡು, ಅಧಿಕಾರ ಅಥವಾ ಕಿಲಾಡಿತನದ ಮೂಲಕ ಮೇಲೇರಿ ನಿಂತ ಯಾರೋ ಒಬ್ಬರಿಗೆ ಮಾತ್ರ ಮಣೆಹಾಕುವ ಕಾರ್ಯಕ್ಕೆ ಮಂಗಳ ಹಾಡಬೇಕು.  ಈ ಬಗೆಯ ಸಾಮೂಹಿಕ ಗೆಲುವು ಹಾಗೂ ಚಿಂತನೆಗೆ ಒತ್ತುಕೊಡುವ ಕಾರ್ಯಕ್ರಮಗಳನ್ನು ನಾನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಒಂದು ದಶಕದ ಹಿಂದೆಯೇ ನಂಜನಗೂಡು, ಚಿತ್ರದುರ್ಗ, ಬೀದರ್, ಶಿವಮೊಗ್ಗ, ಮಂಗಳೂರು, ಮಡಿಕೇರಿ ಮತ್ತು ಮುಂಬೈ ನಗರಗಳಲ್ಲಿ ಜನಪದ ಕಲಾವಿದರ ಸಮ್ಮುಖದಲ್ಲಿ ಆತ್ಮೀಯವಾಗಿ ಏರ್ಪಡಿಸಿದಾಗ  ಹಲವಾರು ಮಂದಿ ತುಂಬು ಮನಸ್ಸಿನಿಂದ ಅಭಿನಂದಿಸಿದ್ದರು.ವಿವಿಧ ಜ್ಞಾನಶಿಸ್ತುಗಳ ಹೊಣೆಗಾರ ಚಿಂತಕರು ತಂತಮ್ಮ ತಜ್ಞತೆಯ ಬೆಳಕಿನಲ್ಲಿ ಪ್ರಾಮಾಣಿಕವಾಗಿ ಹೊಸ ಸಾಂಸ್ಕೃತಿಕ ಸಮಾಜದ ಆರೋಗ್ಯಕರ ಬದುಕಿಗೆ ಸ್ಪಂದಿಸಬೇಕೆನ್ನುವುದೇ ಪ್ರಜ್ಞಾವಂತರ ಆಶಯ. ಇವರ ನಡುವೆ ಕೇವಲ ಸಾಹಿತಿ ಮಾತ್ರ ಸರ್ವಜ್ಞ ಎನ್ನುವ ಧಿಮಾಕು ಹೊಂದುವ ಅವಶ್ಯಕತೆ ಯಾರಿಗೂ ಬೇಕಾಗಿಲ್ಲ. ಹೆಚ್ಚಿನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಅನೇಕರು ಮೂಢನಂಬಿಕೆಗಳ ದಾಸರಾಗಿದ್ದು, ಈ ಬದುಕಿನ ಸಹಜ ಸ್ಥಿತಿಗಳಾಗಿರಬೇಕಾಗಿದ್ದ ಸರಳತೆ, ವಿವೇಕ, ಪುನರಾಲೋಚನೆ ಮತ್ತು ಹೃದಯವಂತಿಕೆಗಳನ್ನೇ ದೂರ ತಳ್ಳುತ್ತಿರುವ ದುರಂತಮಯ ಕ್ಷಣಗಳನ್ನು ನಾವು ಕಾಣುತ್ತಿದ್ದೇವೆ.ಇಂಥ ಸಂದರ್ಭಗಳಲ್ಲಿ ಕಾಲಕಾಲಕ್ಕೆ ಸಂವೇದನಾಶೀಲ ಸಾಹಿತಿಗಳು, ವಿಚಾರವಂತರು, ಬುದ್ಧಿಜೀವಿಗಳು ಮತ್ತು ಉದಾರಚರಿತರೇ ನಿಜವಾದ ವೈಜ್ಞಾನಿಕ ಚಿಂತನೆಯ ಬೆಳಕಿಗಾಗಿ ಹಂಬಲಿಸುವ ಹಾಗೂ ಹೋರಾಡುವ ದೃಢವಾದ ಮನೋಬಲವನ್ನು ಹೊಂದಿ ಮುನ್ನುಗ್ಗಿರುವ ದಾಖಲೆಗಳು ನಮ್ಮಲ್ಲಿ ಸಾಕಷ್ಟಿವೆ. ಹೀಗಾಗಿ ವಿವಿಧ ಕಾಲಘಟ್ಟಗಳಲ್ಲಿ ಈ ಬಗ್ಗೆ ಅಸಾಧಾರಣ ಧೈರ್ಯ ಪ್ರಕಟಿಸಿದ ಬುದ್ಧ, ಬಸವ, ಗಾಂಧೀ, ಅಕ್ಕಮಹಾದೇವಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ಮುಂತಾದ ಮಹಾನ್ ಚೇತನಗಳನ್ನು ಈ ಸಮಾಜವು ನೆನೆಯುತ್ತಲೇ ಇದೆ.ಇದೇ ಹಾದಿಯಲ್ಲಿ ನಾವು ಮುನ್ನಡೆಯಬೇಕು: ಮುಕ್ತಚಿಂತನೆಯ ಹರಿಕಾರರಾಗಿ, ಭಿನ್ನಮತದ ಸೊಗಸಿಗೆ ಕಿವಿಗೊಟ್ಟು ಆಲಿಸುವ ಹೃದಯವಂತರಾಗುವ ಮೂಲಕವೇ ನಾವು ಬೆಳೆಯಲು ಸಾಧ್ಯ. ಬೆಳಗಾವಿ ವಿಶ್ವಕನ್ನಡ ಸಮ್ಮೇಳನವು ಸಹ ಈ ಆಶಯಗಳ ಮೂಲಕ ಸಾಗುವಂತೆ ಆಗಬೇಕು. ಆಗ ಮಾತ್ರ ನಾವೆಲ್ಲ  ಸುದೀರ್ಘ ಕನ್ನಡ ಪರಂಪರೆಯ ಹೆಮ್ಮೆಯ ಮೌಲ್ಯಗಳಾದ ಚಿಂತನಶೀಲತೆ ಮತ್ತು ಮಾನವೀಯತೆ ನಿಲುವುಗಳನ್ನು ಗೌರವಿಸಿದಂತೆ ಆಗುತ್ತದೆ.

-


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.