ಶುಕ್ರವಾರ, ಜೂನ್ 18, 2021
24 °C

ಮುತಾಲಿಕ್‌ ಸೇರ್ಪಡೆ ರದ್ದು: ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ ನಾಗಪುರ/ಹುಬ್ಬಳ್ಳಿ  (ಪಿಟಿಐ): ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರು ಬಿಜೆಪಿಗೆ ಸೇರ್ಪಡೆಗೊಂಡ ಬಗ್ಗೆ ಇತರ ಪಕ್ಷಗಳಿಂದ ಟೀಕೆ–ವಿರೋಧ ವ್ಯಕ್ತವಾದ ಬೆನ್ನಲ್ಲೆ ಅವರ ಸೇರ್ಪಡೆಯನ್ನು ಪಕ್ಷವು  ಕೆಲವೇ ಗಂಟೆಗಳಲ್ಲಿ ರದ್ದು ಪಡಿಸಿದೆ.

2009ರಲ್ಲಿ ಮಂಗಳೂರಿನಲ್ಲಿ ಪಬ್‌ವೊಂದರಲ್ಲಿ ಮಹಿಳೆ ಮೇಲಿನ ದಾಳಿ ಘಟನೆಯೊಂದಿಗೆ ‘ಗುರುತಿಸಿ’ಕೊಂಡಿದ್ದ ಮುತಾಲಿಕ್‌,  ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಶಿ, ಪಕ್ಷದ ಮುಖಂಡರಾದ ಜಗದೀಶ್‌ ಶೆಟ್ಟರ್‌ ಹಾಗೂ ಕೆ.ಎಸ್‌.ಈಶ್ವರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ವಿಧ್ಯುಕ್ತವಾಗಿ ಭಾನುವಾರ ಬೆಳಿಗ್ಗೆಯಷ್ಟೇ ಸೇರ್ಪಡೆಗೊಂಡಿದ್ದರು.

ಆದರೆ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳಿಂದ ಟೀಕೆ ವ್ಯಕ್ತವಾಗುವ ಜೊತೆಗೆ ಬಿಜೆಪಿಯಲ್ಲೂ ಅಪಸ್ವರ ಕೇಳಿಬಂದ ಹಿನ್ನಲೆಯಲ್ಲಿ ಮುತಾಲಿಕ್‌ ಅವರ ಸೇರ್ಪಡೆಯನ್ನು ರದ್ದುಗೊಳಿಸುವಂತೆ ರಾಜ್ಯ ಘಟಕದ ಅಧ್ಯಕ್ಷ ಜೋಶಿ ಅವರಿಗೆ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜನಾಥ್‌ ಸಿಂಗ್‌ ಸೂಚಿಸಿದ್ದಾರೆ.

ಮುತಾಲಿಕ್‌ ಸೇರ್ಪಡೆ ಕುರಿತು ರಾಷ್ಟ್ರೀಯ ನಾಯಕತ್ವದೊಂದಿಗೆ ರಾಜ್ಯ ಘಟಕ ಚರ್ಚಿಸಿರಲಿಲ್ಲ. ಹಾಗೂ ಈ ನಿರ್ಧಾರವನ್ನು ರಾಷ್ಟ್ರೀಯ ಘಟಕವು ಅನುಮೋದಿಸಿರಲಿಲ್ಲ. ‘ಮುತಾಲಿಕ್‌ ಸದಸ್ಯತ್ವವನ್ನು ವಜಾಗೊಳಿಸುವಂತೆ ರಾಜ್ಯ ಬಿಜೆಪಿ ಘಟಕಕ್ಕೆ ಸೂಚಿಸಲಾಗಿದೆ’ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್‌ ನವದೆಹಲಿಯಲ್ಲಿ ತಿಳಿಸಿದ್ದಾರೆ.

ಇನ್ನು, ‘ಹಲವು ಕಾರಣಾಂತರಗಳಿಂದಾಗಿ  ಪಕ್ಷದ ಕೇಂದ್ರೀಯ ನಿರ್ದೇಶನದಂತೆ ಮುತಾಲಿಕ್‌ ಅವರ ಸೇರ್ಪಡೆಯನ್ನು ರಾಜ್ಯ ಘಟಕದ ಅಧ್ಯಕ್ಷ ಜೋಶಿ ಅವರು ರದ್ದು ಪಡಿಸಿದ್ದಾರೆ’ ಎಂದು ಪಕ್ಷದ ಕರ್ನಾಟಕ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಗೊಂದಲದ ಬಗ್ಗೆ ಪ್ರಶ್ನಿಸಿದಾಗ. ‘ಮುತಾಲಿಕ್‌ ಅವರ ಪಕ್ಷ ಸೇರ್ಪಡೆಯನ್ನು ರಾಜ್ಯ ಮಟ್ಟದಲ್ಲಿ ನಿರ್ಧರಿಸಲಾಗಿತ್ತು’ ಎಂದು ಜೋಶಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.