ಗುರುವಾರ , ಮೇ 19, 2022
21 °C

ಮುಳಬಾಗಲು: ಇಂದಿನಿಂದ ಶ್ರೀಪಾದರಾಜರ ಆರಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಪಟ್ಟಣ ಹೊರವಲಯದ ನರಸಿಂಹತೀರ್ಥದ ಶ್ರೀಪಾದರಾಜರ ಮಠದಲ್ಲಿ ಜೂ. 2ರಿಂದ 3 ದಿವಸಗಳ ಕಾಲ ಶ್ರೀಪಾದರಾಜರ ಆರಾಧನೆ ನಡೆಯುತ್ತದೆ. 2ರಂದು ಪೂರ್ವಾರಾಧನೆ, 3ರಂದು ಮಧ್ಯಾರಾಧನೆ, ರಥೋತ್ಸವ ಹಾಗೂ 4ರಂದು ಉತ್ತರಾರಾಧನೆ ನಡೆಯುತ್ತದೆ.ಕನ್ನಡ ದಾಸ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಮಾಡಿ ಸಂಸ್ಕೃತದಲ್ಲಿದ್ದ ದೇವರ ನಾಮಗಳನ್ನು ಕನ್ನಡೀಕರಿಸಿ ಪ್ರತಿಯೊಬ್ಬರಿಗೂ ದೇವರ ನಾಮದ ಮಹತ್ವದ ತಿರುಳನ್ನು ನೀಡಿದವರಲ್ಲಿ ಶ್ರೀಪಾದರಾಜರು ಪ್ರಮುಖರು. ಮಠ ಧರ್ಮಪೀಠ, ಸಾಹಿತ್ಯ ಸಂಸ್ಕೃತಿಗಳ ತವರು ಮನೆಯಿದ್ದಂತೆ. ಶ್ರೀಪಾದರಾಜರು ಅಪ್ರತಿಮ ವಿದ್ಯಾಗುರುಗಳು, ಕ್ಷೇತ್ರವನ್ನು ನರಸಿಂಹತೀರ್ಥವೆಂದು ಪರಿಗಣಿಸಿ ಅಭಿವೃದ್ಧಿ ಪಡಿಸಿದರು. ಅನೇಕ ವೈಷ್ಣವ ವಿದ್ವಾಂಸರನ್ನು ಕಠಿಣ ಧಾರ್ಮಿಕ ವಿದ್ಯಾಭ್ಯಾಸದ ಕ್ರಿಯೆಗೆ ಒಳಪಡಿಸಿದರು.ಕನ್ನಡ ಸಾಹಿತ್ಯ ಪರಂಪರೆ ರನ್ನ, ಪೊನ್ನ, ನಾಗವರ್ಮ, ಹರಿಹರ, ರಾಘವಾಂಕ, ಜನ್ನ ಮುಂತಾದವರಿಂದ ಸಮೃದ್ಧವಾದರೂ ಜನಸಾಮಾನ್ಯರಿಗೆ ಕಾವ್ಯಗಳು ಕೈಗೆಟುಕುವಂತಿರಲಿಲ್ಲ. ಈ ವೇಳೆಗೆ ಮುಳಬಾಗಲಿನಲ್ಲಿ ನಡೆದ ದಾಸಸಾಹಿತ್ಯದ ಕ್ರಾಂತಿ ಚಿರಸ್ಮರಣೀಯವಾದದ್ದು. ಶ್ರೀಪಾದರಾಜರು ಕನ್ನಡದಲ್ಲಿ ದೇವರ ಕುರಿತು ನೂರಾರು ಕೀರ್ತನೆಗಳನ್ನು ರಚಿಸಿದರು. ಶ್ರೀಪಾದರಾಜರು ದಾಸಸಾಹಿತ್ಯವನ್ನು ಬೆಳಗುವ ಮೂಲಕ ಕನ್ನಡ ಸಾಹಿತ್ಯ ದಿಗ್ಗಜರೆನಿಸಿಕೊಂಡಿದ್ದಾರೆ.ಒಂದು ನೂರು ವರ್ಷಗಳ ಕಾಲ ಜೀವಂತವಾಗಿದ್ದು, ಜೀವಂತವಾಗಿ ಬೃಂದಾವನ ಪ್ರವೇಶಿಸಿರುವ ಶ್ರೀಪಾದರಾಜರ ಬೃಂದಾವನ ಅತ್ಯಂತ ವಿಶಿಷ್ಟವಾಗಿದೆ. ಶ್ರೀಪಾದರಾಜರಿಗೆ ಗಂಗಮಾತೆ ಒಲಿದ ನರಸಿಂಹತೀರ್ಥ ಎಂಬ ಪುಷ್ಕರಣಿ ಮಧ್ಯದಲ್ಲಿ ಕಲ್ಲಿನ ತೆಪ್ಪೋತ್ಸವವಿದೆ. ಈ ಪುಷ್ಕರಣಿಯಲ್ಲಿ ಸ್ನಾನ ಮಾಡಿದರೆ ಸಕಲ ರೋಗಗಳು, ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ.ಬಿರು ಬೇಸಿಗೆಯಲ್ಲೂ ಇಲ್ಲಿ ನೀರಿನ ಹರಿವು ಕಡಿಮೆಯಾಗಿದ್ದಿಲ್ಲ. ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಜನ ಪ್ರತಿ ನಿತ್ಯ ಇಲ್ಲಿಗೆ ಭೇಟಿ ನೀಡಿ ಸ್ನಾನ ಮಾಡಿ ಬೃಂದಾವನ ಮತ್ತು ವ್ಯಾಸರಾಜರ ಪ್ರತಿಷ್ಠೆಯ ನರಸಿಂಹ, ಆಂಜನೇಯನ ದರ್ಶನ ಮಾಡುತ್ತಾರೆ. ಇಲ್ಲಿರುವ ಯೋಗಾನರಸಿಂಹ ರೇಖಾ ಚಿತ್ರವನ್ನು  ಕ್ರಿ.ಶ. 13ನೇ ಶತಮಾನದಲ್ಲಿ ರಚಿಸಲಾಗಿದೆ ಎಂಬ ಪ್ರತೀತಿ ಇದೆ.ನರಸಿಂಹ ದೇವಾಲಯದ ಹಿಂಭಾಗದಲ್ಲಿ ವ್ಯಾಸಗುಡಿ ಇದ್ದು, ಒಳಗೆ ವ್ಯಾಸರಾಜರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ನರಸಿಂಹ ದೇವಾಲಯದಲ್ಲಿ ವ್ಯಾಸರಾಜರು ಪ್ರತಿಷ್ಠಾಪಿಸಿರುವ ಸುಂದರ ಆಂಜನೇಯಸ್ವಾಮಿ ಮೂರ್ತಿ ಇದೆ. ಶ್ರೀಪಾದರಾಜರ ಬೃಂದಾವನದಿಂದ ಹೊರಹೊಮ್ಮುತ್ತಿರುವ ತೇಜೋಮಯವಾದ ಆತ್ಮಶಕ್ತಿ ಭಕ್ತರ ಅನಿಷ್ಟಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ.ಪ್ರತಿ ವರ್ಷ ಜೇಷ್ಠ ಮಾಸದ ತ್ರಯೋದಶಿ, ಚತುರ್ದಶಿ ಹಾಗೂ ಪೂರ್ಣಿಮೆಯಂದು ಶ್ರೀಪಾದರಾಜರ ಆರಾಧನೆ ವಿಜೃಂಭಣೆಯಿಂದ ನಡೆಯುತ್ತದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ರಾಜ್ಯದಾದ್ಯಂತ ಸುಮಾರು ಒಂದು ಲಕ್ಷ ಭಕ್ತರು ಆಗಮಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.