ಮಂಗಳವಾರ, ಮೇ 24, 2022
27 °C
ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಉಪನ್ಯಾಸಕಿ

ಮೂವರು ವಿದ್ಯಾರ್ಥಿನಿಯರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪನ್ಯಾಸಕಿಯೊಬ್ಬರು ವಾಹನದ ಬ್ರೇಕ್ ತುಳಿಯುವ ಬದಲು ಆಕ್ಸಲೇಟರ್ ತುಳಿದ ಪರಿಣಾಮ ಅಡ್ಡಾದಿಡ್ಡಿ ಚಲಿಸಿದ ಕಾರು ಮೂವರು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದ ಘಟನೆ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಬುಧವಾರ ನಡೆದಿದೆ.ಘಟನೆಯಲ್ಲಿ ಪಿಯುಸಿ ವಿದ್ಯಾರ್ಥಿನಿಯರಾದ ರಾಗಿ ಸಗ್ಗೆರೆ (16), ಶ್ರೇಯಾ ಪಾಟೀಲ್ (16) ಹಾಗೂ ಪ್ರಥಮ ವರ್ಷದ ಬಿಬಿಎಂ ವಿದ್ಯಾರ್ಥಿನಿ ಅನುಪಮಾ (19) ಗಾಯಗೊಂಡಿದ್ದಾರೆ. ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಕಾಲೇಜಿನ ರಸಾಯನ ವಿಜ್ಞಾನ ವಿಭಾಗದ ಉಪನ್ಯಾಸಕಿ ಚಾರ್ಮನ್ ಜೆರೋಮ್ ಅವರನ್ನು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಚಾರ್ಮನ್ ಅವರು ಬೆಳಿಗ್ಗೆ 8.40ರ ಸುಮಾರಿಗೆ ತಮ್ಮ ಸ್ಯಾಂಟ್ರೊ ಕಾರಿನಲ್ಲಿ ಕಾಲೇಜಿಗೆ ಬರುತ್ತಿದ್ದರು. ಈ ವೇಳೆ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಅವರು, ರಸ್ತೆಯಲ್ಲಿ ಉಬ್ಬು ಇರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಈ ವೇಳೆ ಗೊಂದಲಕ್ಕೀಡಾದ ಅವರು ಬ್ರೇಕ್ ತುಳಿಯುವ ಬದಲು ಆಕ್ಸಲೇಟರ್ ತುಳಿದಿದ್ದಾರೆ. ಪರಿಣಾಮ, ಕಾರು ಮತ್ತಷ್ಟು ವೇಗ ಪಡೆದಿದೆ. ಇದರಿಂದ ದಿಕ್ಕು ತೋಚದಂತಾದ ಚಾರ್ಮನ್, ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿ ಮೊದಲು ಕಾಲೇಜಿನ ತಡೆಗೋಡೆಗೆ ವಾಹನ ಗುದ್ದಿಸಿದ್ದಾರೆ. ಬಳಿಕ ಗೇಟ್ ಬಳಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.`ಎಂದಿನಂತೆ ರಾಗಿ ಸಗ್ಗೆರೆ ಅವರ ತಂದೆಯೇ ನಮ್ಮಿಬ್ಬರನ್ನು ಬೆಳಿಗ್ಗೆ ಕಾಲೇಜಿಗೆ ಡ್ರಾಪ್ ಮಾಡಿದರು. ಕಾರು ಇಳಿದು ಗೇಟ್ ಬಳಿ ನಡೆದು ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಕಾರು (ಕೆಎ 53 ಎಂ 4100) ನಮಗೆ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ನಾನು ಎಡಭಾಗಕ್ಕೆ ಉರುಳಿಬಿದ್ದೆ. ಆದರೆ, ಆ ವಾಹನ ರಾಗಿಯನ್ನು ಸುಮಾರು ದೂರ ಎಳೆದೊಯ್ದಿತು. ಬಳಿಕ ಮುಂದೆ ಹೋಗುತ್ತಿದ್ದ ಮತ್ತೊಬ್ಬಳು ವಿದ್ಯಾರ್ಥಿನಿಗೂ ಡಿಕ್ಕಿ ಹೊಡೆಯಿತು' ಎಂದು ಗಾಯಗೊಂಡಿರುವ ಶ್ರೇಯಾ ಪಾಟೀಲ್ ಘಟನೆಯನ್ನು ವಿವರಿಸಿದರು.`ಘಟನೆ ಸಂಬಂಧ ಚಾರ್ಮನ್ ವಿರುದ್ಧ ಸಾರ್ವಜನಿಕರ ಸುರಕ್ಷತೆಗೆ ಅಡ್ಡಿಪಡಿಸಿದ (ಐಪಿಸಿ 337), ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ (ಐಪಿಸಿ 279) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಹೈಗ್ರೌಂಡ್ಸ್ ಸಂಚಾರ ಪೊಲೀಸರು ಮಾಹಿತಿ ನೀಡಿದರು.ಕಮರಿದ ಭರತನಾಟ್ಯದ ಕನಸು: ಅಪಘಾತದಲ್ಲಿ ಗಾಯಗೊಂಡಿರುವ ರಾಗಿ ಸಗ್ಗೆರೆ, ಕರ್ನಾಟಕ ಫೋಟೊ ನ್ಯೂಸ್‌ನ (ಕೆಪಿಎನ್) ಮಾಲೀಕರಾದ ಸಗ್ಗೆರೆ ರಾಮಸ್ವಾಮಿ ಅವರ ಮಗಳು. ಭರತನಾಟ್ಯ ಪ್ರವೀಣೆಯಾಗಬೇಕು ಎಂದು ಕನಸು ಕಂಡಿದ್ದ ಆಕೆಯ ಕನಸು ಈ ಅನಿರೀಕ್ಷಿತ ಘಟನೆಯಿಂದ ಕಮರಿ ಹೋಗಿದೆ. `ಆಕೆಯ ಕಾಲಿನ ಮೂಳೆ ಮುರಿದಿರುವುದರಿಂದ ನೃತ್ಯಾಭ್ಯಾಸ ಮುಂದುವರಿಸುವುದು ಕಷ್ಟ ಸಾಧ್ಯ' ಎಂದು ವೈದ್ಯರು ಹೇಳಿರುವುದು ಆಕೆಗೆ ಹಾಗೂ ಕುಟುಂಬ ಸದಸ್ಯರಿಗೆ ಆಘಾತ ಉಂಟು ಮಾಡಿದೆ.`ಬಾಲ್ಯದಿಂದಲೂ ಭರತನಾಟ್ಯದಲ್ಲಿ ಆಸಕ್ತಿ ಹೊಂದಿದ್ದ ಮಗಳು, ಆರ್.ಟಿ.ನಗರದ ಡಾ.ಪಿ.ಪ್ರಿಯಾಶ್ರೀ ಎಂಬವರ ಬಳಿ ನಾಟ್ಯ ಕಲಿಯುತ್ತಿದ್ದಳು. ಆದರೆ, ಅಪಘಾತದಲ್ಲಿ ಮಗಳ ಬಲ ತೊಡೆಯ ಮೇಲೆ ಕಾರಿನ ಚಕ್ರ ಹರಿದಿರುವುದರಿಂದ ಮೂಳೆ ಮುರಿದಿದೆ. ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಗೆ ಶಸ್ತ್ರಚಿಕಿತ್ಸೆ ಮಾಡಬೇಕು. ಆದರೆ, ತುಂಬಾ ರಕ್ತ ಹೋಗಿರುವುದರಿಂದ ಗುರುವಾರ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ' ಎಂದು ರಾಮಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.