ಸೋಮವಾರ, ಮೇ 16, 2022
28 °C

ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಶಿಶು ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶರಾವತಿ ವಾರ್ಡ್‌ನಲ್ಲಿ ಶುಶ್ರೂಷಕಿಯರ ಆರೈಕೆಯಲ್ಲಿದ್ದ ನವಜಾತ ಗಂಡು ಶಿಶು ನಿಗೂಢ ರೀತಿಯಲ್ಲಿ ಕಣ್ಮರೆಯಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಪೋಷಕರು ರಾತ್ರಿಯೇ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದು, ತಡರಾತ್ರಿಯೇ ಪೊಲೀಸರು ಆಸ್ಪತ್ರೆಗೆ ಆಗಮಿಸಿ ತನಿಖೆ, ನಡೆಸಿದ್ದಾರೆ. ಆದರೆ, ಶಿಶುವಿನ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ನಡುವೆ ಕರ್ತವ್ಯದಲ್ಲಿದ್ದ ಶುಶ್ರೂಷಕಿಯರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಮಗು ಕಳೆದುಕೊಂಡವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಬಸವಪಟ್ಟಣದ ಬೆಳಲ್‌ಕೆರೆ ಗ್ರಾಮದ ಯೋಗೇಶ್-ವಿದ್ಯಾ ದಂಪತಿ. ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರು.

ವಿದ್ಯಾ ಅವರ ಚೊಚ್ಚಲ ಹೆರಿಗೆ ಇದಾಗಿದ್ದು, ಜೂನ್ 6ರಂದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಮೂರೂವರೆ ಕೆ.ಜಿ. ತೂಕವಿದ್ದ ಮಗುವಿಗೆ, ಎರಡು ದಿನಗಳ ಹಿಂದೆ ಜ್ವರ ಬಂದಿತ್ತು. ಹಾಗಾಗಿ, ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ಆಗಾಗ್ಗೆ ಎದೆಹಾಲು ಕುಡಿಸಲು ಮಗುವನ್ನು ನೀಡುತ್ತಿದ್ದ ಆಸ್ಪತ್ರೆ ಸಿಬ್ಬಂದಿಗಳು, ನಂತರ ಮತ್ತೆ ವೆಂಟಿಲೇಟರ್‌ನಲ್ಲಿ ಇಡುತ್ತಿದ್ದರು. ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಮಗುವನ್ನು ನೀಡಿದ್ದರು. ನಂತರ ಮತ್ತೆ ನೀಡಿಲ್ಲ. ಸಂಜೆ 4.30ರ ವೇಳೆಗೆ ಶುಶ್ರೂಷಕಿಯರನ್ನು ವಿಚಾರಿಸಿದಾಗ ಮಗುವಿಗೆ ಗ್ಲೂಕೋಸ್ ನೀಡಲಾಗಿದೆ ಎಂದು ಹೇಳಿದ್ದರು. ಮಧ್ಯರಾತ್ರಿ 12.30ರ ವೇಳೆಗೆ ಶಶ್ರೂಷಕಿಯರು ಬಂದು ಎದೆಹಾಲು ಕುಡಿಸಲು ನೀಡಿದ್ದ ಮಗುವನ್ನು ಹಿಂದಕ್ಕೆ ಕೊಡುವಂತೆ ತಾಯಿ ವಿದ್ಯಾ ಅವರನ್ನು ಕೇಳಿದ್ದಾರೆ. ಆದರೆ, ಮಗುವನ್ನು ತಾಯಿಗೆ ನೀಡೇ ಇಲ್ಲ ಎಂದು ವಿದ್ಯಾ ಅವರ ಕಡೆಯವರು ಹೇಳಿದರು. ತಕ್ಷಣ ಮಗುವಿಗೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. 

`ಮಂಗಳವಾರ ರಾತ್ರಿ 8ಗಂಟೆಯವರೆಗೂ ಮಗು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದಲೂ ಪೊಲೀಸರಿಗೆ ದೂರು ನೀಡಲಾಗಿದೆ. ಯಾವುದೋ ಹೆಂಗಸು ಸೋಮವಾರ ಸಂಜೆ 4ಕ್ಕೆ ಸುಮಾರಿಗೆ ಆಸ್ಪತ್ರೆಯಲ್ಲಿ ಓಡಾಡುತ್ತಿದ್ದರು ಎಂಬ ಮಾಹಿತಿ ಇದೆ. ತನಿಖೆ ನಂತರವೇ ಎಲ್ಲವೂ ತಿಳಿಯಲಿದೆ~ ಎಂದು ಮೆಗ್ಗಾನ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಯೋಗಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.