ಭಾನುವಾರ, ಜೂನ್ 20, 2021
24 °C

ಮೋದಿ ಅಲೆ ಎಲ್ಲಿಯೂ ಕಂಡಿಲ್ಲ: ಸಚಿವ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳಗಿ: ‘ಕೇವಲ ಮಾಧ್ಯಮಗಳ ಸೃಷ್ಟಿಯಾಗಿರುವ ನರೇಂದ್ರ ಮೋದಿ ಅಲೆಯನ್ನು ನಾನಂತೂ ಎಲ್ಲಿಯೂ ಕಂಡಿಲ್ಲ’  ಸಚಿವ ಎಸ್.ಆರ್. ಪಾಟೀಲ ಹೇಳಿದರು.ತಾಲ್ಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದ ಸಮುದಾಯ ಭವನದಲ್ಲಿ ಭಾನುವಾರ ಬೀಳಗಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.‘ಹತ್ತು ವರ್ಷಗಳ ಯು.ಪಿ.ಎ. ಸರಕಾರದ ಸಾಧನೆಗಳು, ಹತ್ತು ತಿಂಗಳಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯದಲ್ಲಿಯ ಕಾಂಗ್ರೆಸ್ ಸಾಧನೆಗಳ ಬಿರುಗಾಳಿಯೇ ಮೋದಿ ಅಲೆಗೆ ತಕ್ಕ ಉತ್ತರ ನೀಡಿ ರಾಜ್ಯದಲ್ಲಿ ಕಾಂಗ್ರೆಸ್ ಅಬ್ಯರ್ಥಿಗಳೇ ಲೋಕಸಭೆಗೆ ಚುನಾಯಿತರಾಗುವರು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಎಂದು ಹೇಳುತ್ತಿರುವವರಿಗೆ ತಿರುಗೇಟು ನೀಡಿದ ಸಚಿವರು, ಕಾಂಗ್ರೆಸ್ ಪಕ್ಷ ಅಧಿಕಾರದ ಲಾಲಸೆಗಾಗಿ ಹುಟ್ಟಿಕೊಂಡ ಪಕ್ಷವಲ್ಲ. ಈ ದೇಶವನ್ನು ಪರಕೀಯರಿಂದ ಮುಕ್ತಗೊಳಿಸಲು ಹುಟ್ಟಿಕೊಂಡದ್ದು. ಬಹು ದೊಡ್ಡ ತ್ಯಾಗ, ಬಲಿದಾನ ಮಾಡಿದ ಪಕ್ಷವಾಗಿದೆ. ಲಾಠಿ ಏಟು, ಬೂಟಿನೇಟು ತಿಂದು ಗಲ್ಲಿಗೇರಿದವರು ಕಾಂಗ್ರೆಸ್ ಮುಖಂಡರು. ಕಾಂಗ್ರೆಸ್ ಇತಿಹಾಸವೆಂದರೆ ದೇಶದ ಇತಿಹಾಸ, ದೇಶದ ಇತಿಹಾಸವೆಂದರೆ ಕಾಂಗ್ರೆಸ್ ಇತಿಹಾಸವಾಗಿದೆ. ಅಧಿಕಾರದ ಲಾಲಸೆಗಾಗಿ ಇತ್ತೀಚೆಗೆ ಹುಟ್ಟಿಕೊಂಡ ಪಕ್ಷಗಳು ಕಾಂಗ್ರೆಸ್ ಮುಕ್ತ ಭಾರತವೆಂದು ಹೇಳುತ್ತಿರುವುದು ಅತ್ಯಂತ ನಗೆಪಾಟಲಿನ ಸಂಗತಿ ಎಂದು ಅವರು ಗೇಲಿ ಮಾಡಿದರು.ಜಾತಿ, ಮತ,ಧರ್ಮಗಳ ಮಧ್ಯೆ ಗೋಡೆ ಕಟ್ಟುವವರನ್ನು ತಿರಸ್ಕರಿಸಿ ಭಾರತೀಯರೆಲ್ಲರೂ ಒಂದೇ ತಾಯಿಯ ಮಕ್ಕಳೆಂಬ ಸಿದ್ಧಾಂತವನ್ನು ಒಪ್ಪಿಕೊಂಡಿರುವ, ಜಾತ್ಯತೀತ ರಾಷ್ಟ್ರ ನಿರ್ಮಾಣದ ಹೊಂಗನಸು ಹೊತ್ತಿರುವ, ದೇಶದ ಅಖಂಡತೆ, ಭದ್ರತೆ, ಸಾರ್ವಭೌಮತೆಯನ್ನು ಕಾಪಾಡಲು ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಬ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಹಾವೇರಿಯಲ್ಲಿ ರೈತರ ಎದೆಗೆ ಗುಂಡಿಟ್ಟರು. ಕಾಂಗ್ರೆಸ್ ಐವತ್ತು ವರ್ಷಗಳಿಂದ ಮಾಡದ್ದನ್ನು ನಾವು ಐದೇ ವರ್ಷಗಳಲ್ಲಿ ಮಾಡುತ್ತೇವೆಂದು ಹೇಳಿದವರು, ತಾವು  ಮಾಡಿದ ಸಾಧನೆಯಿಂದ ಜೈಲುಪಾಲಾದರು ಎಂದು ನಗೆಗಡಲ ಮಧ್ಯದಲ್ಲಿ ಹೇಳಿದರು.ಸಿದ್ದರಾಮಯ್ಯನವರ ನಾಯಕತ್ವದ ಸರಕಾರ ಚುನಾವಣೆಗೂ ಮುನ್ನ ನೀಡಿದ್ದ 165 ಭರವಸೆಗಳಲ್ಲಿ ಕೇವಲ 10ತಿಂಗಳ ಅವಧಿಯಲ್ಲಿ 95 ಭರವಸೆಗಳನ್ನು ಈಡೇರಿಸಿದೆ. ನಮ್ಮದು ಮಾತಿಗೆ ತಪ್ಪದ ಸರಕಾರ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಲೋಕಸಭಾ ಅಬ್ಯರ್ಥಿ ಅಜಯಕುಮಾರ ಸರನಾಯಕ, ಶಾಸಕರಾದ ಜೆ.ಟಿ. ಪಾಟೀಲ, ಎಚ್.ವೈ.ಮೇಟಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಡಿಯಪ್ಪ ಕರಿಗಾರ, ಹಿಂದಿನ ಶಾಸಕರಾದ ಪಿ.ಎಚ್.ಪೂಜಾರ, ಎಸ್.ಜಿ.ನಂಜಯ್ಯನಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಸೌದಾಗರ, ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಯಮನಪ್ಪ ರೊಳ್ಳಿ, ಎಂ.ಎಲ್. ಕೆಂಪಲಿಂಗಣ್ಣವರ, ಮುಖಂಡರಾದ ಬಿ.ಎ.ಮೋಕಾಶಿ. ಎಂ.ಎಂ.ಖಾಜಿ, ಪ್ರವೀಣ ಪಾಟೀಲ ಹಾಜರಿದ್ದರು.

ಶ್ರೀಶೈಲ ಅಂಟಿನ ಸ್ವಾಗತಿಸಿದರು. ಎ.ಆರ್. ಪ್ಯಾಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ.ನಿಂಬಾಳಕರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.