ಶುಕ್ರವಾರ, ಮೇ 14, 2021
31 °C
ಉಪಚುನಾವಣೆ ಫಲಿತಾಂಶ: ನಿತೀಶ್‌ಗೆ ಹಿನ್ನಡೆ

ಮೋದಿ ವರ್ಚಸ್ಸು ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ವರ್ಚಸ್ಸು ವೃದ್ಧಿ

ನವದೆಹಲಿ (ಪಿಟಿಐ): ದೇಶದ ವಿವಿಧ ರಾಜ್ಯಗಳ ನಾಲ್ಕು ಲೋಕಸಭೆ ಹಾಗೂ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು ಕಾಂಗ್ರೆಸ್ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಗುಜರಾತ್‌ನಲ್ಲಿ ಈ ಹಿಂದೆ ಕಾಂಗ್ರೆಸ್ ವಶದಲ್ಲಿದ್ದ ಎಲ್ಲ ಆರು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.ಗುಜರಾತ್‌ನಲ್ಲಿಯ ಪೋರಬಂದರ್ ಹಾಗೂ ಬನಸ್ಕಾಂತ ಲೋಕಸಭಾ ಕ್ಷೇತ್ರಗಳ ಜತೆಯಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಭಾರಿ ಅಂತರದಿಂದ ಜಯ ಸಾಧಿಸಿದ್ದು, ಕಾಂಗ್ರೆಸ್ ಈ ಎಲ್ಲಾ ಸ್ಥಾನಗಳನ್ನು ಕಳೆದುಕೊಂಡಿದೆ. ಪಶ್ಚಿಮ ಬಂಗಾಳದ ಹೌರಾ ಲೋಕಸಭಾ ಕ್ಷೇತ್ರವನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಉಳಿಸಿಕೊಂಡಿದೆ. ಇಲ್ಲಿ ಸಿಪಿಎಂ ಪ್ರಬಲ ಸ್ಪರ್ಧೆ ನೀಡಿದ್ದು ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಸಮಾಧಾನಪಡಬೇಕಾಗಿದೆ.ಬಿಹಾರದ ಮಹಾರಾಜಗಂಜ್ ಲೋಕಸಭಾ ಕ್ಷೇತ್ರದಲ್ಲಿ ಲಾಲೂ ಪ್ರಸಾದ್ ನೇತೃತ್ವದ ಆರ್‌ಜೆಡಿ ಅಭ್ಯರ್ಥಿ 1.37 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದರೆ ಆಡಳಿತಾರೂಢ ಜೆಡಿ(ಯು) ಇಲ್ಲಿ ಸೋಲು ಕಂಡಿದ್ದು ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಹಿನ್ನಡೆ ಉಂಟಾಗಿದೆ.ಮಹಾರಾಷ್ಟ್ರದ ಯವತ್‌ಮಾಲ್ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದು, ಇಲ್ಲಿ ಬಿಜೆಪಿ ಸೋಲು ಕಂಡಿದೆ. ಉತ್ತರ ಪ್ರದೇಶದ ಹಂದಿಯಾ ವಿಧಾನಸಭೆ ಕ್ಷೇತ್ರವನ್ನು ಆಡಳಿತಾರೂಢ ಎಸ್‌ಪಿ ಉಳಿಸಿ ಕೊಂಡಿದೆ.ಮೋದಿಗೆ ಇನ್ನಷ್ಟು ಬಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವರ್ಚಸ್ಸು ವೃದ್ಧಿಗೆ ಪೂರಕ ಎನ್ನುವಂತೆ ಅಲ್ಲಿ ನಡೆದಿರುವ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮೋದಿ ಸ್ಪರ್ಧೆಯನ್ನು ಬಲವಾಗಿ ವಿರೋಧಿಸುತ್ತಿರುವ ನಿತಿಶ್ ಕುಮಾರ್ ತಮ್ಮ ರಾಜ್ಯದ ಮಹಾರಾಜಗಂಜ್ ಲೋಕಸಭಾ ಕ್ಷೇತ್ರವನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ.ರಾಜನಾಥ್, ಅಡ್ವಾಣಿ ಭೇಟಿಯಾದ ಮೋದಿ : ಉಪಚುನಾವಣೆ ಫಲಿತಾಂಶದಿಂದ ಉತ್ಸಾಹದ ಅಲೆಯ ಮೇಲೆ ತೇಲಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಗೋವಾದಲ್ಲಿ ನಡೆಯಲಿರುವ ಪಕ್ಷದ  ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿಯವರನ್ನು ಮುಂಬರುವ ಲೋಕಸಭಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಬಹುದೆಂಬ ವದಂತಿಯ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.ಮುಖ್ಯಮಂತ್ರಿಗಳಿಗಾಗಿ ಆಯೋಜಿಸಿರುವ ಆಂತರಿಕ ಭದ್ರತಾ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಮೋದಿ ಅವರು, ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು. ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಪ್ರಚಾರ ಸಮಿತಿ ರಚನೆ ಸೇರಿದಂತೆ ವಿವಿಧ ವಿಚಾರಗಳನ್ನು ಕುರಿತು ಅವರೊಂದಿಗೆ ಚರ್ಚಿಸಿದರು.

ಉಪಚುನಾವಣೆಯಲ್ಲಿನ ಗೆಲುವಿಗಾಗಿ ಮೋದಿಯವರನ್ನು ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅಭಿನಂದಿಸಿದರು.ಮುಖ ನೋಡದ ಮೋದಿ- ನಿತೀಶ್

ಒಂದೇ ಸಭೆಗೆ ಹಾಜರಾಗಿದ್ದರೂ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ನಿತೀಶ ಕುಮಾರ್ ಪರಸ್ಪರ ಕುಶಲೋಪರಿ ವಿಚಾರಿಸಲಿಲ್ಲ!

ನರೇಂದ್ರ ಮೋದಿ ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ, ಛಾಯಾಗ್ರಾಹಕರು ಅವರತ್ತ ತಮ್ಮ ಕ್ಯಾಮೆರಾಗಳನ್ನು ಕೇಂದ್ರೀಕರಿಸಿದರು. ತಮ್ಮ ಭಿನ್ನ ಅಭಿಪ್ರಾಯಗಳ ಹೊರತಾಗಿಯೂ ಕಳೆದ ವರ್ಷ ಇಬ್ಬರೂ ಕೈಕುಲುಕಿದ್ದರು. ಈ ಸಲ ಕೂಡ ಇದು ಪುನರಾವರ್ತನೆ ಆಗಬಹುದು ಎಂದು ಛಾಯಾಗ್ರಾಹಕರು ನಿರೀಕ್ಷಿಸಿದ್ದರು. ಆದರೆ ಅವರನ್ನು ಉದ್ದೇಶಿಸಿ `ರಸ್ತಾ ದೇ ದೋ ಭಾಯಿ' (ಜಾಗ ಬಿಡಿ ಅಣ್ಣಾ) ಎಂದು ಹೇಳುತ್ತ ಮೋದಿ ಮುಂದೆ ಸಾಗಿದರು. ನಿತೀಶ್ ಕುಮಾರ್ ಅವರತ್ತ ತಿರುಗಿ ನೋಡದ ಮೋದಿ, ತಮ್ಮ ಆಸನದಲ್ಲಿ ಕುಳಿತರು.ಭಿನ್ನಮತ ಇಲ್ಲ:ರಾಜನಾಥ್ ಸಿಂಗ್

ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ, `ಎಲ್ಲವೂ ಸರಿ ಇದೆ' ಎಂದು ಬಿಜೆಪಿ ಅಧ್ಯಕ್ಷ ರಾಜ್‌ನಾಥ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.ಮುಖ್ಯಮಂತ್ರಿಗಳಾದ ಗುಜರಾತ್‌ನ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಅವರ ಸಾಧನೆಯ ಬಗ್ಗೆ ಎಲ್.ಕೆ. ಅಡ್ವಾಣಿ ನೀಡಿದ ವಿಶ್ಲೇಷಣಾತ್ಮಕ ಹೇಳಿಕೆಯಿಂದ ಉಂಟಾಗಿರುವ ಗೊಂದಲ ದೂರಗೊಳಿಸಲು ಈ ವಿವರಣೆ ನೀಡಲಾಗಿದೆ.ಗ್ವಾಲಿಯರ್‌ನಲ್ಲಿ ಕಳೆದ ಶನಿವಾರ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ಅಡ್ವಾಣಿ, “ಚೌಹಾಣ್ ಅವರು `ಹಿಂದುಳಿದ ರಾಜ್ಯ'ವಾದ ಮಧ್ಯಪ್ರದೇಶವನ್ನು ಅಭಿವೃದ್ಧಿ ದಾರಿಗೆ ತಂದಿದ್ದರೆ, ಇದೇ ಸ್ಥಿತಿಯಲ್ಲಿರುವ ಛತ್ತೀಸಗಡವನ್ನು ರಮಣ್ ಸಿಂಗ್ ಅತ್ಯುತ್ತಮವಾಗಿ ಕಾರ್ಯನಿರ್ವಹಣೆಯ ಬಲದಿಂದ ಅಭಿವೃದ್ಧಿ ಪಥಕ್ಕೆ ರಾಜ್ಯವನ್ನು ಕೊಂಡೊಯ್ದಿದ್ದಾರೆ.ಈ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ `ಉತ್ತಮ ಸ್ಥಿತಿ'ಯಲ್ಲಿರುವ ರಾಜ್ಯವಾಗಿದೆ. ಅದನ್ನು ಮೋದಿ ಅವರು `ಅತ್ಯುತ್ತಮ ಮಟ್ಟ'ಕ್ಕೆ ಏರಿಸಿದ್ದಾರೆ” ಎಂದು ಹೇಳಿದ್ದು ಪಕ್ಷದ ವಲಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು. `ಬಿಜೆಪಿ ಆಡಳಿತ ಇರುವ ಮಧ್ಯಪ್ರದೇಶ ಹಾಗೂ ಛತ್ತೀಸಡ ರಾಜ್ಯಗಳು ಅದ್ಭುತ ಪ್ರಗತಿ ಸಾಧಿಸುವ ಮೂಲಕ ಹೊರದೇಶಗಳಲ್ಲೂ ಗಮನಸೆಳೆದಿವೆ' ಎಂಬ ಹೇಳಿಕೆ ಮೂಲಕ ಮೋದಿ ಅವರನ್ನು ಅಡ್ವಾಣಿ ಅವರು ಕಡೆಗಣಿಸಿದ್ದು ಪಕ್ಷದ ವಲಯದಲ್ಲಿ ಸಂಚಲನ ಎಬ್ಬಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.