ಶುಕ್ರವಾರ, ಜೂನ್ 25, 2021
30 °C

ಯೋಗೀಶ್ವರ್ ಕೈಬಿಡಲು ಕಾಂಗ್ರೆಸ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೆಗಾಸಿಟಿ ಡೆವಲಪರ್ಸ್ ವಂಚನೆ ಪ್ರಕರಣದಲ್ಲಿ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧ ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್‌ಎಫ್‌ಐಒ) ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಯವರಿಗೆ ಸೂಚನೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್, ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.ಭಾನುವಾರ ಬೆಳಿಗ್ಗೆ ರಾಜಭವನದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದ ನಿಯೋಗ, ಮೆಗಾಸಿಟಿ ಡೆವಲಪರ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಎಫ್‌ಐಒ ತನಿಖಾ ವರದಿ, ಇತ್ತೀಚೆಗೆ ಮೊಕದ್ದಮೆ ದಾಖಲಿಸಿರುವ ವಿವರಗಳು ಮತ್ತು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸುವ ಮನವಿ ಸಲ್ಲಿಸಿದರು.ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, `ಯೋಗೀಶ್ವರ್ ಅವರು 32 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅವರ ವಿರುದ್ಧ ಹಲವು ಮೊಕದ್ದಮೆಗಳು ದಾಖಲಾಗಿವೆ. ಅವರನ್ನು ಸಂಪುಟದಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಯವರಿಗೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ~ ಎಂದರು.ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ನಡೆಸಿದ್ದಾರೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ತನಿಖೆಗೆ ಮುಂದಾಗಿರುವ ಕಾರಣಕ್ಕಾಗಿಯೇ ಯೋಗೀಶ್ವರ್ ವಿರುದ್ಧ ಮನವಿ ಸಲ್ಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಶಿವಕುಮಾರ್ ತಪ್ಪು ಮಾಡಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿ. ಎರಡೂ ಪ್ರಕರಣಗಳಿಗೆ ಂಬಂಧವಿಲ್ಲ~ ಎಂದರು.ಸರ್ಕಾರದ ವೈಫಲ್ಯ:
ಮಾಧ್ಯಮ ಪ್ರತಿನಿಧಿಗಳ ಮೇಲೆ ಶುಕ್ರವಾರ ವಕೀಲರು ಹಲ್ಲೆ ನಡೆಸಿರುವ ಘಟನೆ ಖಂಡನೀಯ. ಗೃಹ ಇಲಾಖೆಯ ವೈಫಲ್ಯದಿಂದಾಗಿಯೇ ಹಲ್ಲೆ ನಡೆದಿದ್ದು, ಘಟನೆಗೆ ಸರ್ಕಾರವೇ ಹೊಣೆ. ಈ ಬಗ್ಗೆಯೂ ರಾಜ್ಯಪಾಲಗೆ ಕಾಂಗ್ರೆಸ್ ನಿಯೋಗ ಮಾಹಿತಿ ನೀಡಿದೆ ಎಂದು ತಿಳಿಸಿದರು.ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ಶಾಸಕ ಆರ್.ದಿನೇಶ್ ಗುಂಡೂರಾವ್ ಮತ್ತಿತರರು ನಿಯೋಗದಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.