ಮಂಗಳವಾರ, ಏಪ್ರಿಲ್ 13, 2021
25 °C

ಯೋಜನೆ ಕಾರ್ಯಗತವಾಗದಿದ್ದರೆ ನಿವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಹುಣಸಗಿಯಲ್ಲಿ 17 ಸಾವಿರ ಫಲಾನುಭವಿಗಳಿಗೆ ಬಸವ ವಸತಿ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡುತ್ತಿರುವುದು ಚುನಾವಣೆ ಗಿಮಿಕ್. ಇದೆಲ್ಲ ಅಸಾಧ್ಯ. ಮತದಾರರು ಮೋಸ ಹೋಗಬೇಡಿ ಎಂದು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ್ ಯೋಜನೆ ಜಾರಿಯಾದಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ಸವಾಲು ಹಾಕಿದರು.ಸೋಮವಾರ ಇಲ್ಲಿನ ತಮ್ಮ ನಿವಾಸದಲ್ಲಿ ದೆಹಲಿಯಿಂದ ದೂರವಾಣಿ  ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಸಾಧ್ಯವನ್ನು ಸಾಧಿಸುವುದೇ ತಮ್ಮ ಗುರಿ ಮತ್ತು ಛಲ. ಒಂದು ವೇಳೆ ಬಸವ ವಸತಿ ಯೋಜನೆ ಕಾರ್ಯಗತವಾಗದಿದ್ದಲ್ಲಿ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಪ್ರಕಟಿಸಿದರು.ವಸತಿ ಯೋಜನೆಯ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತದೆ. ಇದರಲ್ಲಿ ಯಾವುದೆ ಮೋಸವಿಲ್ಲ. ಎಲ್ಲ 17,426 ಮನೆಗಳನ್ನು ಆರು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು. ಮಾಜಿ ಶಾಸಕರಿಗೆ ಯೋಜನೆಯ ಬಗ್ಗೆ ಅನುಮಾನವಿದ್ದಲ್ಲಿ ಯೋಜನೆಯ ಕುರಿತಾದ ವೆಬ್‌ಸೈಟ್ ನೋಡಿ ಖಾತ್ರಿ ಮಾಡಿಕೊಳ್ಳಲಿ. ನನ್ನ ಅಭಿವೃದ್ಧಿಯನ್ನು ಸಹಿಸದೆ ಹತಾಶೆಯಿಂದ ಮಾತನಾಡುವುದನ್ನು ಬಿಡಲಿ ಎಂದು ಸಲಹೆ ನೀಡಿದರು.ನಾರಾಯಣಪುರ ಎಡದಂಡೆ ನವೀಕರಣ ಕಾಮಗಾರಿ 20 ವರ್ಷಗಳ ಹಿಂದಿನ ಪ್ರಸ್ತಾವನೆ. ತಮ್ಮ ಅಧಿಕಾರವಧಿಯಲ್ಲಿ ಇದಕ್ಕೆ ಸ್ಪಷ್ಟ ರೂಪ ಸಿಕ್ಕಿತು. ಈಗ ಹಣ ಬಿಡುಗಡೆಯಾಗಿದೆ. ಇದು ನನ್ನದೆ ಪ್ರಯತ್ನ ಎಂದು ಬಿಂಬಿಸುತ್ತಿದ್ದೇನೆ ಎಂಬ ಮಾಜಿ ಶಾಸಕರ ಹೇಳಿಕೆ ಹಾಸ್ಯಾಸ್ಪದ. ನಾನು ಒಂದು ವರ್ಷ ಸತತ ಪ್ರಯತ್ನ ಮಾಡಿದ ಫಲವಾಗಿ ನವೀಕರಣ ಕಾಮಗಾರಿಗೆ ಮಂಜೂರಾತಿ ದೊರಕಿತು. ಅತಿ ಶೀಘ್ರದಲ್ಲಿ ಗುಣಮಟ್ಟದ ಕಾಮಗಾರಿ ಮಾಡಿದ ತೃಪ್ತಿ ನನಗಿದೆ ಎಂದು ವಿವರಿಸಿದರು.ಕಾಲುವೆ ನವೀಕರಣ ಕಾಮಗಾರಿಯಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಮಾಜಿ ಶಾಸಕರ ಸಹೋದರರೆ ಭಾರೀ ಪ್ರಮಾಣದಲ್ಲಿ ಸರ್ಕಾರದ ಹಣ ಕೊಳ್ಳೆ ಹೊಡೆದಿದ್ದಾರೆ. ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿದ್ದ ಅವರ ಸಹೋದರ ಈಗ ತಾನೇ ಜಾಮೀನು ಪಡೆದು ಹೊರಬಂದಿರುವುದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಹೇಳಿದರು.ಮಾಜಿ ಶಾಸಕರ ಸುದ್ದಿಗೋಷ್ಠಿಯಲ್ಲಿದ್ದ ಮುಖಂಡರು ಇದಕ್ಕೆ ಹೊರತಾಗಿಲ್ಲ. ಅವರು ತಮ್ಮ ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಜಾಬ್ ಕಾರ್ಡ್ ಪಡೆದುಕೊಂಡಿದ್ದು ಹಣ ಕೊಳ್ಳೆ ಹೊಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ವಿರೋಧ ಪಕ್ಷದವರು ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ಅರಿಯಲಿ ಎಂದು ತಿರುಗೇಟು ನೀಡಿದರು.ನಾನು ಮಾಡಿದ ಅಭಿವೃದ್ಧಿ ಕೆಲಸಗಳು ತಮ್ಮ ಅವಧಿಯಲ್ಲಿ ಮಂಜೂರಿಯಾದವುಗಳಾಗಿವೆ ಎಂದು ಪದೇ ಪದೇ ಹೇಳುತ್ತಿರುವ ರಾಜಾ ವೆಂಕಟಪ್ಪನಾಯಕ್ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು. ಇದು ಮತದಾರರನ್ನು ದಿಕ್ಕು ತಪ್ಪಿಸುವ ತಂತ್ರವಾಗಿದೆ. ಒಂದು ವೇಳೆ ಅವರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳ ಪಟ್ಟಿ ದಾಖಲೆ ಸಮೇತ ನೀಡಿದರೆ ಅವುಗಳನ್ನು ಹೊರತು ಪಡಿಸಿ ಹೊಸ ಕಾಮಗಾರಿ ಮಾಡುವೆ ಎಂದು ಸವಾಲು ಹಾಕಿದರು.ತಾಲ್ಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಟೆಂಡರ್ ಮೂಲಕ ಕಾನೂನಿನ ಚೌಕಟ್ಟಿನಲ್ಲಿಯೇ ನಡೆದಿವೆ. ಇದರಲ್ಲಿ ಗೋಲ್‌ಮಾಲ್ ಎಂಬುದು ಆಧಾರ ರಹಿತ. ಚುನಾವಣೆ ಗಿಮಿಕ್ ಮಾಡುವುದು ನನ್ನ ಜಾಯಮಾನವಲ್ಲ.ಜನತೆಯ ದಾರಿ ತಪ್ಪಿಸುವ ಕೆಲಸ ನಾನೆಂದು ಮಾಡಿಲ್ಲ. ಮಾಡುವುದೂ ಇಲ್ಲ. ಅಭಿವೃದ್ಧಿಯೇ ನನ್ನ ತಾರಕ ಮಂತ್ರ. ಕ್ಷೇತ್ರದ ಮತದಾರರು ನನ್ನ ದೇವರು. ನನ್ನ ದೇವರಿಗೆ ನಾನು ಎಂದೂ ಮೋಸ ಮಾಡಲಾರೆ. ಮತದಾರರ ಪ್ರಭುಗಳಿಗೆ ನನ್ನ ಮೇಲೆ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಹು ನಿರೀಕ್ಷಿತ ಬೋನ್ಹಾಳ ಏತ ನೀರಾವರಿಗೆ ಜನವರಿ 2010 ರಂದು ಮಂಜೂರು ದೊರಕಿ ಕಾಮಗಾರಿ ಕೊನೆಯ ಹಂತದಲ್ಲಿದೆ. ಜುಲೈ ಎರಡನೆ ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.ರಾಜಕೀಯ ಜಂಜಾಟದಲ್ಲಿ ನಾನು ಎಷ್ಟೆ ಒತ್ತಡದಲ್ಲಿದ್ದರೂ ಕ್ಷೇತ್ರದೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ರಾಜಕೀಯ ಏರು ಪೇರುಗಳಿಂದ ನಾನು ಎರಡು ಬಾರಿ ರಾಜೀನಾಮೆ ನೀಡಬೇಕಾಯಿತು. ಇದರಿಂದ ಕ್ಷೇತ್ರದ ಜನತೆಯ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.