ಬುಧವಾರ, ಜೂನ್ 16, 2021
22 °C

ರಾಜಕಾರಣಿಯ ಅಕ್ರಮ ಸಂಬಂಧ ಸಕ್ರಮಕ್ಕೆ ಮಾಧ್ಯಮಗಳ ಉಸಾಬರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ದಿನಗಳ ಹಿಂದಿನವರೆಗೂ ಜೆಡಿಎಸ್ ರಾಜ್ಯಾಧ್ಯಕ್ಷ, ಸಂಸದ, ಮಾಜಿ ಮುಖ್ಯಮಂತ್ರಿಯೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಮತ್ತು ಚಲನಚಿತ್ರ ನಟಿ ರಾಧಿಕಾ ಅವರ ನಡುವಿನ ಸಂಬಂಧ `ತೆರೆದ ರಹಸ್ಯ~ ಎಂಬಂತಿತ್ತು.ಮಾಧ್ಯಮ ಮಂದಿಯಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಅವರಿಬ್ಬರ ವಿಷಯ ಗೊತ್ತಿದ್ದರೂ, ಕೆಲವು ವಾರಪತ್ರಿಕೆಗಳನ್ನು (ಟ್ಯಾಬ್ಲಾಯ್ಡ) ಹೊರತುಪಡಿಸಿದರೆ ಉಳಿದ ಪ್ರಮುಖ ಪತ್ರಿಕೆಗಳ್ಯಾವುವೂ ನೇರವಾಗಿ ಆ ಬಗ್ಗೆ ಯಾವುದೇ ವಿಷಯ ಪ್ರಕಟಿಸಿರಲಿಲ್ಲ.ಆದರೆ, ಇತ್ತೀಚೆಗೆ ಈ ವಿಷಯ ಯಾವುದೇ ಮುಚ್ಚುಮರೆ ಇಲ್ಲದೆ ಮುಖ್ಯವಾಹಿನಿಯ ಪತ್ರಿಕೆಗಳೂ ಸೇರಿದಂತೆ ಎಲ್ಲ ಬಗೆಯ ಮಾಧ್ಯಮಗಳಲ್ಲೂ ರಾಜಾರೋಷವಾಗಿ ಮಾತ್ರವಲ್ಲ, ಅಧಿಕೃತವಾಗಿ ಎಂಬಂತೆ ಪ್ರಕಟಗೊಳ್ಳುತ್ತಿದೆ.ಇಂತಹ ವಿಷಯಗಳನ್ನು, ಅದರಲ್ಲೂ ರಾಜಕಾರಣಿಗಳು- ಚಿತ್ರೋದ್ಯಮದವರ ನಡುವಿನ `ಸಂಬಂಧ~ಗಳನ್ನು ಹೆಚ್ಚು ದಿನ ಮುಚ್ಚಿಡುವುದು ಅಸಾಧ್ಯ. ಹೀಗಾಗಿ ಮಾಧ್ಯಮಗಳಲ್ಲಿ ಅದು ಪ್ರಕಟವಾಗುವುದು ಅಂತಹ ದೊಡ್ಡ ವಿಷಯವೇನೂ ಅಲ್ಲ.ಆದರೆ ಇಲ್ಲಿ ಪ್ರಸ್ತಾಪಿಸಲು ಹೊರಟಿರುವ ಪ್ರಮುಖ ಸಂಗತಿ, ಮಾಧ್ಯಮಗಳು ಅರಿತೋ ಅರಿಯದೆಯೋ ರಾಧಿಕಾ ಅವರಿಗೆ ನೀಡಲು ಹೊರಟಿರುವ ಅಧಿಕೃತ ಸ್ಥಾನಮಾನದ ವಿಷಯ.ಕುಮಾರಸ್ವಾಮಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷವೊಂದರ ನಾಯಕ, ರಾಜ್ಯಘಟಕದ ಅಧ್ಯಕ್ಷ. ಹೀಗಾಗಿ ಅವರ ಮೇಲಿನ ಜನರ ನಿರೀಕ್ಷೆಯೂ ಅಪಾರ. ಆದರೆ ಇಂದಿನ ರಾಜಕಾರಣಿಗಳ ಎಲ್ಲ ಬಗೆಯ ನಡವಳಿಕೆಗಳನ್ನು ದಿನನಿತ್ಯವೂ ಹಸಿಬಿಸಿಯಾಗೇ ಮಾಧ್ಯಮಗಳಲ್ಲಿ ಕಾಣುತ್ತಿರುವ ಜನರಿಗೆ, ರಾಧಿಕಾ- ಕುಮಾರಸ್ವಾಮಿ ಅವರ ವಿಷಯ ಅಂತಹ ದೊಡ್ಡ ಸಂಗತಿಯಾಗೇನೂ ಕಾಣದೆ ಇರಬಹುದು.

 

ಆದರೆ ರಾಧಿಕಾ ಅವರನ್ನು ಕುಮಾರಸ್ವಾಮಿ ಅವರ ಧರ್ಮಪತ್ನಿಯೇನೋ ಎಂಬಂತೆ ಬಿಂಬಿಸುತ್ತಿರುವ ಮಾಧ್ಯಮಗಳ ನೈತಿಕತೆ ಮಾತ್ರ ಇಲ್ಲಿ ಪ್ರಶ್ನಾರ್ಹ. ಕುಮಾರಸ್ವಾಮಿ ಅವರ ಅಧಿಕೃತ ಪತ್ನಿ ಅನಿತಾ.ಅವರಿಗೆ ಈಗಾಗಲೇ ವಯಸ್ಸಿಗೆ ಬಂದಿರುವ ಮಗನೂ ಇದ್ದಾನೆ. ಅಲ್ಲದೆ ಕುಮಾರಸ್ವಾಮಿ ಅವರು ಅನಿತಾ ಅವರಿಗೆ ವಿಚ್ಛೇದನವನ್ನೇನೂ ಕೊಟ್ಟಿಲ್ಲ. ಹಾಗಿದ್ದ ಮೇಲೆ, ಅವರು ಬೇರೆ ಯಾವುದೇ ಮಹಿಳೆ ಜೊತೆ ಹೊಂದಿರಬಹುದಾದ ಸಂಬಂಧ ಅಕ್ರಮ ಅಲ್ಲದೆ ಬೇರೇನೂ ಆಗಿರಲಿಕ್ಕೆ ಸಾಧ್ಯವಿಲ್ಲ.

 

ಹೀಗಿರುವಾಗ `ಅನಿತಾ ಕುಮಾರಸ್ವಾಮಿ~ ಎಂದು ಬರೆಯುವ ರೀತಿಯಲ್ಲೇ `ರಾಧಿಕಾ ಕುಮಾರಸ್ವಾಮಿ~ ಎಂದೇ ಪತ್ರಿಕೆಗಳು ಬರೆಯುವುದು, ಟಿ.ವಿ ವಾಹಿನಿಗಳು ಸಂಬೋಧಿಸುವುದು ಎಷ್ಟು ಸರಿ?`ಅವರದು ಅಕ್ರಮ ಸಂಬಂಧ ಅಲ್ಲ, ಅವರು ಸಾಕ್ಷಾತ್ ದೇವೇಗೌಡರ ಸಮ್ಮುಖದಲ್ಲೇ ತಾಳಿ ಕಟ್ಟಿ ಮದುವೆಯಾಗಿದ್ದಾರೆ~ ಎಂದು ಹೇಳುವವರೂ ಇದ್ದಾರೆ. ಆದರೆ, ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ, ಅದೂ, ಆಕೆ ಬದುಕಿರುವಾಗಲೇ ಮತ್ತೊಂದು ಮದುವೆಯಾಗಲು ಕಾನೂನಿನ ಮಾನ್ಯತೆ ಇದೆಯೇ?

 

ಅಪ್ಪನೇ ಮುಂದೆ ನಿಂತು ತಾಳಿ ಕಟ್ಟಿಸಿದ ಮಾತ್ರಕ್ಕೆ ಇಂತಹ ಮದುವೆ ಕಾನೂನು ಪ್ರಕಾರ ಊರ್ಜಿತವಾಗಿ ಬಿಡುವುದೇ? ಅಥವಾ ಎಂದಾದರೂ ಕುಮಾರಸ್ವಾಮಿ ಅವರು ರಾಧಿಕಾ ಅವರ ಜೊತೆ ಬಹಿರಂಗವಾಗಿ ಕಾಣಿಸಿಕೊಂಡು ಅವರನ್ನು ತಮ್ಮ ಧರ್ಮಪತ್ನಿ ಎಂದು ಹೇಳಿಕೊಂಡಿದ್ದಾರೆಯೇ? ಹಾಗಿಲ್ಲದಿರುವಾಗ ಮಾಧ್ಯಮಗಳಿಗೆ ಅಂತಹ ಉಸಾಬರಿ ಯಾಕೆ ಬೇಕು?ಅಕ್ರಮ ಸಕ್ರಮದ ಬಗ್ಗೆ, ನ್ಯಾಯ ಅನ್ಯಾಯದ ಬಗ್ಗೆ ಹೋರಾಡುವ ದೇವೇಗೌಡರು, ತಮ್ಮ ಸೊಸೆ ಅನಿತಾ ಕುಮಾರಸ್ವಾಮಿ ಅವರಿಗೆ ಆಗಿರಬಹುದಾದ ಈ `ಅನ್ಯಾಯ~ವನ್ನು ಯಾವ ರೀತಿ ಸಮರ್ಥಿಸಿಕೊಳ್ಳುವರು? ಒಂದು ವೇಳೆ, ಅನಿತಾ ಅವರೇ `ಈ ಮದುವೆಗೆ ಒಪ್ಪಿಗೆ ನೀಡಿದ್ದರು~ ಎಂದೇ ಇಟ್ಟುಕೊಳ್ಳೋಣ.

 

ಆದರೆ ಅದರಿಂದ, ವಿಚ್ಛೇದನ ಕೊಡದೇ ಬೇರೊಂದು ಹೆಣ್ಣನ್ನು ಮದುವೆ ಆಗುವುದರಿಂದ ಕೋರ್ಟ್‌ಗೆ ಎಡತಾಕಬೇಕಾದ ಸಂದರ್ಭ ಕುಮಾರಸ್ವಾಮಿ ಅವರಿಗೆ ಬರದಿರಬಹುದು. ಹಾಗೆಂದು ಆ ಮದುವೆಯೇ ಊರ್ಜಿತ ಎಂದು ಸಮರ್ಥಿಸಿಕೊಳ್ಳಲು ಹೊರಡಬಹುದೇ? ಹಾಗೆ ಹೊರಟರೆ, ಒಬ್ಬ ಕೊಲೆಗಡುಕನ ಬಗ್ಗೆ ಯಾರೂ ದೂರು ಕೊಟ್ಟಿಲ್ಲವೆಂದ ಮಾತ್ರಕ್ಕೆ `ಆತ ಅಪರಾಧಿಯೇ ಅಲ್ಲ~ ಎಂದು ವಾದಿಸಿದಂತಾಗುತ್ತದೆಯೇ ಹೊರತು ಬೇರೇನೂ ಅಲ್ಲ.ಇಂತಹ ಸಂಗತಿಗಳು ತೆರೆಮರೆಯಲ್ಲಿ ಕಂಡೂಕಾಣದಂತೆ ನಡೆದರೆ ಯಾರೂ ಅದನ್ನು ಪ್ರಶ್ನೆ ಮಾಡುವ ಗೋಜಿಗೆ ಹೋಗಲಾರರೇನೋ. ಆದರೆ ಇಂತಹ ಕೆಲಸ ಮಾಡಿದವರೇ ಬಹಿರಂಗವಾಗಿ ಒಪ್ಪಿಕೊಳ್ಳಲು ಸಾಧ್ಯವಾಗದ ಸಂಗತಿಗಳಿಗೆ, ಮಾಧ್ಯಮಗಳು ಅಧಿಕೃತ ಮಾನ್ಯತೆ ನೀಡಿ, ಸಮಾಜದಲ್ಲಿ ಇವೆಲ್ಲ ಸಹಜವಾದ ಸಂಗತಿಗಳು, ಮಾತ್ರವಲ್ಲ, ಅವರವರ ವೈಯಕ್ತಿಕ ವಿಷಯಗಳು ಎಂಬಂತೆ ಬಿಂಬಿಸಲು ಹೊರಟಿವೆ. ಇದು ಅನಾರೋಗ್ಯಕರ ಸಮಾಜಕ್ಕೆ ಬುನಾದಿ ಹಾಕಿಕೊಡುತ್ತಿರುವ ಮಾಧ್ಯಮಗಳ ನೈತಿಕ ದಿವಾಳಿತನದ ಸಂಕೇತವೇ ಸರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.