ಗುರುವಾರ , ಮೇ 6, 2021
33 °C

ರಾಜ್ಯದಲ್ಲಿ ಐ.ಎ.ಎಸ್ ಅಧಿಕಾರಿಗಳಿಗೂ ಬರ!

ಪ್ರಜಾವಾಣಿ ವಾರ್ತೆ ಬಿ.ಎನ್.ಶ್ರೀಧರ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಈಗ ಐ.ಎ.ಎಸ್ ಅಧಿಕಾರಿಗಳಿಗೂ `ಬರ~ ಬಂದಿದೆ. ಇದು ಆಶ್ಚರ್ಯ ಎನಿಸಿದರೂ ಸತ್ಯ.ಒಟ್ಟು 299 ಮಂದಿ ಐಎಎಸ್ ಅಧಿಕಾರಿಗಳು ಇರಬೇಕಿದ್ದ ರಾಜ್ಯದಲ್ಲಿ ಈಗ ಇರುವುದು ಕೇವಲ 245 ಮಂದಿ! ಅಂದರೆ 54 ಮಂದಿಯ ಕೊರತೆ.ಇದಕ್ಕೆ ಕಾರಣ ಏನಿರಬಹುದು?: ಕೇಂದ್ರ ಸರ್ಕಾರ ಹಲವು ವರ್ಷಗಳ ಹಿಂದೆಯೇ ರಾಜ್ಯದ ಐಎಎಸ್ ಅಧಿಕಾರಿಗಳ (ಕೇಡರ್ ಸಾಮರ್ಥ್ಯ) ಸಂಖ್ಯೆಯನ್ನು 299ಕ್ಕೆ ಏರಿಸಿತು. ಆದರೆ, ಇದಕ್ಕೆ ಪೂರಕವಾಗಿ ಪ್ರತಿವರ್ಷ ನೇರ ನೇಮಕಾತಿ ಮೂಲಕ ಆಯ್ಕೆಯಾಗುವ ಐಎಎಸ್ ಅಧಿಕಾರಿಗಳನ್ನು ರಾಜ್ಯಕ್ಕೆ ಹೆಚ್ಚಾಗಿ ಹಂಚಿಕೆ ಮಾಡಲಿಲ್ಲ. ಹೀಗಾಗಿ ಐಎಎಸ್ ಅಧಿಕಾರಿಗಳ ಅಭಾವ ಎದುರಾಗಿದೆ.ಕೇಂದ್ರ ಸರ್ಕಾರ ಪ್ರತಿ ವರ್ಷ ಕೇವಲ ಏಳೆಂಟು ಮಂದಿ ಐಎಎಸ್ ಅಧಿಕಾರಿಗಳನ್ನು ಮಾತ್ರ ಹೊಸದಾಗಿ ರಾಜ್ಯಕ್ಕೆ ಹಂಚಿಕೆ ಮಾಡುತ್ತಿದೆ. ಇದೇ ರೀತಿ ಮಾಡಿದರೆ ಇನ್ನೂ 7-8 ವರ್ಷಗಳಾದರೂ ಕೇಡರ್ ಸಾಮರ್ಥ್ಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಅಧಿಕಾರಿಗಳ ಸಂಖ್ಯೆ ಹೆಚ್ಚುವುದಿಲ್ಲ. ಹೀಗಾಗಿ ವರ್ಷಕ್ಕೆ ಕನಿಷ್ಠ 10ರಿಂದ 12 ಮಂದಿ ಅಧಿಕಾರಿಗಳನ್ನಾದರೂ ನೇಮಕ ಮಾಡಿ ಎನ್ನುವ ಬೇಡಿಕೆಯನ್ನು ರಾಜ್ಯ ಸರ್ಕಾರ, ಕೇಂದ್ರಕ್ಕೆ ಸಲ್ಲಿಸಿದೆ.ಈ ಸಂಬಂಧ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ. ಎರಡು- ಮೂರು ವರ್ಷದಿಂದ ಈ ರೀತಿಯ ಪತ್ರಗಳನ್ನು ಬರೆಯುತ್ತಿದ್ದರೂ ಕೇಂದ್ರ ಮಾತ್ರ ಅಧಿಕಾರಿಗಳ ಹಂಚಿಕೆ ಪ್ರಮಾಣವನ್ನು ಹೆಚ್ಚು ಮಾಡುವ ಕಡೆಗೆ ಗಮನ ನೀಡುತ್ತಿಲ್ಲ. ಹೀಗಾಗಿ ಇತ್ತೀಚೆಗೆ ಮತ್ತೊಂದು ಪತ್ರವನ್ನೂ ರಾಜ್ಯ ಸರ್ಕಾರ ಬರೆದಿದ್ದು, ಮುಂದಿನ ವರ್ಷದಿಂದಲಾದರೂ ಈ ಸಮಸ್ಯೆ ಬಗೆಹರಿಸಬೇಕು ಎನ್ನುವ ಕೋರಿಕೆ ಸಲ್ಲಿಸಿದೆ.`ಕೇಡರ್ ಸಾಮರ್ಥ್ಯ ಹೆಚ್ಚು ಮಾಡಿ, ಅದಕ್ಕೆ ಪೂರಕವಾಗಿ ಅಧಿಕಾರಿಗಳನ್ನು ಹಂಚಿಕೆ ಮಾಡದಿದ್ದರೆ ಕರ್ತವ್ಯ ನಿರ್ವಹಿಸುವುದು ಕಷ್ಟ~ ಎನ್ನುವ ಅಭಿಪ್ರಾಯವನ್ನು ರಾಜ್ಯ ಸರ್ಕಾರ ತನ್ನ ಪತ್ರದಲ್ಲಿ ವ್ಯಕ್ತಪಡಿಸಿದೆ.ಈಗಿರುವ ಅಧಿಕಾರಿಗಳ ಸಂಖ್ಯೆ ಪ್ರಕಾರ ಒಟ್ಟು 60 ಮಂದಿ ಐಎಎಸ್ ಅಧಿಕಾರಿಗಳನ್ನು ಎರವಲು ಮೇಲೆ ಕೇಂದ್ರ ಸರ್ಕಾರದ ಸೇವೆಗೆ ಕಳುಹಿಸಲು ನಿಯಮಗಳಲ್ಲಿ ಅವಕಾಶ ಇದೆ. ಆದರೆ, ಒಟ್ಟು ಅಧಿಕಾರಿಗಳ ಸಂಖ್ಯೆಯೇ ಕಡಿಮೆ ಇರುವ ಕಾರಣಕ್ಕೆ ಪ್ರಸ್ತುತ 30 ಅಧಿಕಾರಿಗಳು ಮಾತ್ರ ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಿದ್ದಾರೆ.ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆಯಾಗುವುದರಿಂದ ರಾಜ್ಯದ ಕೆಲಸಗಳು ಕೇಂದ್ರದಲ್ಲಿ ಸುಗಮವಾಗಿ ಆಗುತ್ತವೆ ಎನ್ನುವ ನಂಬಿಕೆ ಕೂಡ ಇದೆ. ಆದರೆ, ಅಧಿಕಾರಿಗಳ ಒಟ್ಟು ಸಂಖ್ಯೆಯೇ ಕಡಿಮೆ ಇರುವುದರಿಂದ ಕೇಂದ್ರ ಸೇವೆಗೆ ಹೋಗುವವರ ಸಂಖ್ಯೆ ಕೂಡ ಸಹಜವಾಗಿಯೇ ಕಡಿಮೆ ಇದೆ ಎನ್ನುತ್ತವೆ ಸಚಿವಾಲಯದ ಮೂಲಗಳು.100 ಮಂದಿ ನಿವೃತ್ತಿ!: ಅಧಿಕಾರಿಗಳ ಸಂಖ್ಯೆ ಕಡಿಮೆ ಇರುವ ಸಮಸ್ಯೆ ಜತೆಗೆ ಮತ್ತೊಂದು `ಪೆಟ್ಟು~ ಕಾದಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿನ ಸುಮಾರು 100 ಮಂದಿ ಐಎಎಸ್ ಅಧಿಕಾರಿಗಳು ನಿವೃತ್ತಿಯಾಗಲಿದ್ದಾರೆ. ಅಂದರೆ ಮೂರನೇ ಒಂದರಷ್ಟು ಮಂದಿ ನಿವೃತ್ತಿಯಾಗುತ್ತಿದ್ದು, ಇವರಿಂದ ತೆರವಾಗುವ ಸ್ಥಾನಗಳಿಗೂ ಅಧಿಕಾರಿಗಳನ್ನು ತುಂಬುವ ಕೆಲಸ ನಡೆಯಬೇಕಾಗಿದೆ.`ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡೂ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಈ ವರ್ಷ ಒಟ್ಟು 17 ಮಂದಿ ನಿವೃತ್ತಿಯಾಗಲಿದ್ದಾರೆ. ಜನವರಿಯಿಂದ ಇದುವರೆಗೆ ಶಮೀಮ್ ಬಾನು ಸೇರಿದಂತೆ ನಾಲ್ಕು ಮಂದಿ ನಿವೃತ್ತಿಯಾಗಿದ್ದಾರೆ. ಈ ತಿಂಗಳು ಜಿ.ವಿ.ಕೊಂಗವಾಡ ನಿವೃತ್ತಿಯಾಗುತ್ತಿದ್ದಾರೆ. ಮೇ ತಿಂಗಳಲ್ಲಿ ಕೆ.ಜೈರಾಜ್, ಕೆ.ಜ್ಯೋತಿರಾಮಲಿಂಗಂ, ಡಾ.ಎಸ್.ಎಂ.ಜಾಮದಾರ್, ಡಾ.ಬಾಬುರಾವ್ ಮುಡಬಿ ನಿವೃತ್ತರಾಗಲಿದ್ದಾರೆ. ಹೀಗೆ ಮುಂದಿನ ಐದು ವರ್ಷಗಳಲ್ಲಿ ನಿವೃತ್ತಿಯಾಗುವವರ ಸಂಖ್ಯೆ 100 ದಾಟಲಿದೆ~ ಎನ್ನುತ್ತವೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಗಳು.ಈಗಿರುವ ಅಧಿಕಾರಿಗಳ ಪೈಕಿ ಕೆ.ಎ.ಎಸ್ ಮತ್ತು ಕೆ.ಎ.ಎಸ್.ಯೇತರ ಕೋಟಾದಿಂದ ಐಎಎಸ್‌ಗೆ ಬಡ್ತಿ ಪಡೆದವರ ಕೇಡರ್ ಸಾಮರ್ಥ್ಯ 72 ಇದೆ. ಈ ಶ್ರೇಣಿಯ ಅಧಿಕಾರಿಗಳನ್ನು ಐಎಎಸ್‌ಗೆ ಬಡ್ತಿ ನೀಡುವಲ್ಲಿ ಸದ್ಯಕ್ಕೆ ಯಾವುದೇ ವಿಳಂಬವಾಗುತ್ತಿಲ್ಲ.ನಿಯಮದ ಪ್ರಕಾರ ಬಡ್ತಿ ಪ್ರಕ್ರಿಯೆ ನಡೆಯುತ್ತಿದ್ದು, ಕಳೆದ ಸಾಲಿಗೆ ಸಂಬಂಧಿಸಿದಂತೆ ಆರು ಮಂದಿಗೆ ಐಎಎಸ್ ನೀಡಲು ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟ ತಕ್ಷಣವೇ ಕೇಂದ್ರ ಲೋಕಸೇವಾ ಆಯೋಗ ನೇಮಕದ ಪ್ರಕ್ರಿಯೆಯನ್ನು ಅಂತಿಮಗೊಳಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.