ಶುಕ್ರವಾರ, ಮೇ 27, 2022
30 °C

ಲಕ್ಕುಂಡಿ ಉತ್ಸವ: ಕಲೆಗಳ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಲಕ್ಕುಂಡಿಯ ಹಳೆಯ ವೈಭವವನ್ನು ಸ್ವಲ್ಪ ಮಟ್ಟಿಗಾದರೂ ಇಂದಿನ ಪೀಳಿಗೆಗೆ ಮುಟ್ಟಿಸಬೇಕೆನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ‘ಲಕ್ಕುಂಡಿ ಉತ್ಸವ’ ಆಯೋಜಿಸಿದೆ.ಮಾ.6ರಿಂದ ಎರಡು ದಿನಗಳ ಕಾಲ ನನ್ನೇಶ್ವರ ದೇವಾಲಯದ ಸಮೀಪವಿರುವ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ‘ಲಕ್ಕುಂಡಿ ಉತ್ಸವ’ ನಡೆಯಲಿದೆ. ನಾಡಿನ ಜನಪದ, ಸಂಗೀತ, ಸಾಹಿತ್ಯ ಕಲೆಗಳ ಅನಾವರಣಗೊಳ್ಳಲಿದೆ.ಸೇವಂತಿಯ ಘಮಲು, ಮಲ್ಲಿಗೆಯ ಸುವಾಸನೆ, ಕನಕಾಂಬರದ ಕಂಪು ಒಟ್ಟಾಗಿ ಮೇಳೈಸಿ ಹೊಸತೊಂದು ಅನುಭವ ನೀಡುವ ತಾಣವಾಗಿರುವ ಲಕ್ಕುಂಡಿಯ ಆಜು-ಬಾಜು ಹೂವಿನ ತೋಟಗಳಿವೆ. ಪುಷ್ಪ ಉದ್ಯಮದಲ್ಲಿ ಹೆಸರು ಮಾಡಿರುವ ಈ ಗ್ರಾಮ ಒಂದಾನೊಂದು ಕಾಲದಲ್ಲಿ ರಾಜ-ಮಹಾರಾಜರ ರಾಜಧಾನಿ ಆಗಿತ್ತು. ಸರ್ವಧರ್ಮಗಳ ಬೀಡಾಗಿದ್ದ ಲಕ್ಕುಂಡಿಯಲ್ಲಿ ನೂರೊಂದು ಗುಡಿ, ನೂರೊಂದು  ಬಾವಿಗಳು ಇದ್ದವೆಂದು ಇತಿಹಾಸದ ಪುಟ ಹೇಳುತ್ತವೆ. ಆದರೆ ಈಗಿರುವುದು ಬೆರಳಣಿಕೆಯಷ್ಟು ಮಾತ್ರ. ಅವುಗಳಲ್ಲೂ ಕೆಲವು ಶ್ರೀಸಾಮಾನ್ಯನ ನಿತ್ಯಜೀವನದಲ್ಲಿ ಕಲೆತು ಹೋಗಿರುವುದರಿಂದ ನೋಡಿದ ಕ್ಷಣ ಗೋಚರವಾಗುವುದಿಲ್ಲ.ಕಾಶಿವಿಶ್ವೇಶ್ವರ, ಮಲ್ಲಿಕಾರ್ಜುನ, ಹಾಲಗುಂಡಿ ಬಸವಣ್ಣ, ವಿರೂಪಾಕ್ಷ ಲಕ್ಷ್ಮೀನಾರಾಯಣ, ಮಾಣಿಕೇಶ್ವರ, ನನ್ನೇಶ್ವರ, ಸೋಮೇಶ್ವರ, ನೀಲಕಂಠೇಶ್ವರ, ಕುಂಬಾರ ಸಿದ್ಧೇಶ್ವರ, ನಗರದೇವ ವಿಶ್ವನಾಥ ದೇವಾಲಯಗಳು ಪ್ರಮುಖವಾಗಿ ಕಾಣಬರುತ್ತವೆ. ಇವುಗಳು ಒಂದು ರೀತಿ ಬಯಲಿನಲ್ಲಿ ಸ್ಥಾಪನೆಗೊಂಡ ಮ್ಯೂಸಿಯಂ ಆಗಿವೆ. ಇವು ಶಿಲ್ಪ ಕಲಾರಾಧಕರು, ಶಿಲ್ಪಿಗಳಿಗೆ ಪ್ರಾಯೋಗಿಕ ಪಾಠಶಾಲೆಯೇ ಸರಿ. ದಾನ ಚಿಂತಾಮಣಿ ಅತ್ತಿಮಬ್ಬೆ ಕಟ್ಟಿಸಿರುವ ಬ್ರಹ್ಮ ಜಿನಾಲಯ ದೇವಾಲಯಗಳ ಮುಕುಟಕ್ಕೊಂದು ಗರಿಯಾಗಿದೆ.ಜಿಲ್ಲಾ ಕೇಂದ್ರವಾದ ಗದುಗಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಲಕ್ಕುಂಡಿ ಮಧ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗುತ್ತದೆ. ಶಿಲಾಯುಗದಲ್ಲಿ ಬಳಕೆ ಮಾಡುತ್ತಿದ್ದ ಆಯುಧಗಳು ಗ್ರಾಮದಲ್ಲಿ ದೊರೆತಿವೆ. ಪುರಾಣ ಪ್ರಕಾರ ‘ಶಿಬಿ’ ಚಕ್ರವರ್ತಿಯ ರಾಜಧಾನಿಯಾಗಿತ್ತು. ಲಕ್ಷ ಕುಂಡಲ ಯಾಗವನ್ನು ಇದೇ ಸ್ಥಳದಲ್ಲಿ ನೆರವೇರಿಸಿದ ಎನ್ನುವ ಉಲ್ಲೇಖವೂ ಇದೆ.ಕಾಲಾನಂತರದಲ್ಲಿ ಕಲ್ಯಾಣದ ಚಾಲುಕ್ಯರು ಲಕ್ಕುಂಡಿಯಲ್ಲಿ ಆಡಳಿತ ನಡೆಸಿದರು. ಲೊಕ್ಕಿಗದ್ಯಾಣ, ಲೊಕ್ಕಿನಿಷ್ಕ, ಪೊನ್ನ ಗದ್ಯಾಣ ಎಂಬ ಸುವರ್ಣ ನಾಣ್ಯಗಳನ್ನು ಅಚ್ಚು ಹಾಕುವ ಟಂಕಸಾಲೆಯೂ ಇತ್ತು. ಇದರಿಂದಾಗಿಯೇ ಲೋಹ ಗುಂಡಪುರ ಅಥವಾ ಲೊಕ್ಕಿಗುಂಡಿ ಎಂಬ ಹೆಸರನ್ನು ಹೊಂದಿದ್ದ ಊರು ಬರುಬರುತ್ತಾ ಲಕ್ಕುಂಡಿಯಾಗಿದೆ. ಗ್ರಾಮದಲ್ಲಿ ಇರುವ ಬಹುತೇಕ ದೇವಾಲಯಗಳು ಹಾಗೂ ಮುಸಕಿನ ಬಾವಿಗಳು ಒಂದೇ ರೂಪದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿವೆ.ಹಸಿರುಗಪ್ಪು ಬಣ್ಣದ ಶಿಲೆಯಿಂದಲೇ ದೇವಾಲಯಗಳು- ಬಾವಿಗಳು ನಿರ್ಮಾಣವಾಗಿವೆ.ಏಕಕೂಟ, ದ್ವಿಕೂಟ, ತ್ರಿಕೂಟಗಳನ್ನು ಒಳಗೊಂಡ ಗುಡಿಗಳು ಗರ್ಭಗೃಹ, ಸುಖನಾಸಿನಿ, ನವರಂಗ ಹಾಗೂ ಸಭಾಮಂಟಪದಿಂದ ಕೂಡಿವೆ. ಮುಸುಕಿನ ಬಾವಿಗಳು ಅಷ್ಟೆ, ತಮ್ಮ ಕಲಾತ್ಮಕ ಕೆತ್ತನೆಗಳಿಂದ ನೋಡುಗರ ಮನಸ್ಸನ್ನು ಸೆಳೆದುಬಿಡುತ್ತವೆ. ಮಳೆಗಾಲದಲ್ಲಿ ತುಂಬಿ ತುಳುಕುವ ಈ ಬಾವಿಗಳು ಬೇಸಿಗೆಯಲ್ಲೂ ಬತ್ತುವುದಿಲ್ಲ. ಬಿಸಿಲಿನ ಝಳದ ಕಾಲದಲ್ಲಿ ಗ್ರಾಮದ ಯುವಕರು-ಬಾಲಕರು ಇದೇ ಬಾವಿಗಳಲ್ಲಿ ಈಜಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.