ಶುಕ್ರವಾರ, ಏಪ್ರಿಲ್ 16, 2021
31 °C

ವಸತಿ: 110 ಅರ್ಜಿಗೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ವಾಜಪೇಯಿ ನಗರ ಯೋಜನೆಯಡಿ ಸಲ್ಲಿಸಿದ್ದ 146 ಅರ್ಜಿಗಳ ಪೈಕಿ 36 ಅರ್ಜಿಗಳ ದಾಖಲೆ ಸರಿ ಇಲ್ಲದ ಕಾರಣ 110 ಅರ್ಜಿಗಳನ್ನು ಮಾತ್ರ ನಗರದ ನಗರಸಭೆ ಆವರಣದ್ಲ್ಲಲಿ ಗುರುವಾರ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಅನುಮೋದಿಸಲಾಯಿತು.ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲ ಅರ್ಜಿಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ 36 ಅರ್ಜಿಗಳನ್ನು ತಿರಸ್ಕರಿಸಲಾಯಿತು.ಕೋಲಾರ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರಿಗೆ ಗುಂಪು ವಸತಿ ಯೋಜನೆಯಡಿ ನಿವೇಶನಗಳನ್ನು ನೀಡಲು ನಿರ್ಧರಿಸಿದ ಸಭೆಯು, ಅರ್ಜಿದಾರರಿಂದ ತಲಾ ರೂ 25 ಸಾವಿರ ವಂತಿಕೆಯನ್ನು ಪಡೆದು ನಿವೇಶನಗಳನ್ನು ನೀಡಲು ತೀರ್ಮಾನಿಸಿತು.ನಗರಸಭೆಯ ವ್ಯಾಪ್ತಿಯಲ್ಲಿ ಪೌರ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬಾರಂಡಹಳ್ಳಿಯಲ್ಲಿ ನೀಡಿರುವ ನಿವೇಶನಗಳನ್ನು ಪಡೆಯಲು ವಂತಿಕೆ ನೀಡಿರುವುದನ್ನು ಖಾತ್ರಿ ಪಡಿಸಿದ ನಂತರ ಅರ್ಜಿಗಳನ್ನು ವಿಶೇಷ ಘಟಕ ಯೋಜನೆಯಡಿ ಪರಿಗಣಿಸಿ, ಮನೆ ಕಟ್ಟಿಕೊಳ್ಳಲು ಹಣ ಬಿಡುಗಡೆ ಮಾಡಲು ಸಭೆ ತೀರ್ಮಾನಿಸಿತು.ಸಂಗೊಂಡಹಳ್ಳಿ ಸರ್ವೇ ನಂ.89/2 ಮತ್ತು ಇತರೆ ಸರ್ವೇ ನಂಬರ್‌ಗಳಲ್ಲಿ ಒಟ್ಟು ಇರುವ 12.17 ಗುಂಟೆ ಜಮೀನಿನಲ್ಲಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಅನುಮೋದಿತ ನಕ್ಷೆಯಂತೆ ವಿಂಗಡಿಸಿರುವ 500 ನಿವೇಶನಗಳನ್ನು ಆಟೊ ಚಾಲಕರ ಫಲಾನುಭವಿಗಳಿಗೆ ನೀಡಲು ಸಭೆ ನಿರ್ಧರಿಸಿತು.ಸಾರಿಗೆ ಇಲಾಖೆ ಅಧಿಕಾರಿಗಳು ದೃಢೀಕರಿಸಿದ ಬಳಿಕ ಅರ್ಜಿಗಳನ್ನು ಪರಿಶೀಲಿಸಿ 197 ಆಟೊ ಚಾಲಕರಿಗೆ ನಿವೇಶನ ನೀಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.ಇದೇ ಯೋಜನೆಯಡಿ ಬೀಡಿ ಕಾರ್ಮಿಕರ ಅರ್ಜಿಗಳನ್ನು ಪರಿಶೀಲಿಸಿ ಕಾರ್ಮಿಕ ಇಲಾಖೆಯಿಂದ ಅನುಮೋದನೆಗೊಂಡ 300 ಜನ ಫಲಾನುಭವಿಗೆ ಮನೆ ನಿರ್ಮಿಸಿಕೊಡಲು ಸಭೆಯು ತೀರ್ಮಾನಿಸಿತು.ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ, ಮಾಸಿಕ ರೂ 7,300ಕ್ಕಿಂತ ಕಡಿಮೆ ಆದಾಯ, ಸ್ವಂತ ನಿವೇಶನವುಳ್ಳವರು ವಾಜಪೇಯಿ ನಗರ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸಿದರೆ ಅವರಿಗೆ ಸಹಾಯಧನ ರೂ 75 ಸಾವಿರ, ಬ್ಯಾಂಕ್ ಸಾಲ ರೂ.75 ಸಾವಿರ ನೀಡಲಾಗುವುದು ಎಂಬ ವಿಚಾರವನ್ನು ಹೆಚ್ಚು ಪ್ರಚಾರ ಮಾಡಲು ಸಭೆ ತೀರ್ಮಾನಿಸಿತು.ನಗರಸಭೆ ಅಧ್ಯಕ್ಷೆ ನಾಜೀಯಾ, ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ನಾಸೀತ್ ಖಾನ್, ಶಶಿಕಲಾ, ಆಯುಕ್ತ ಮಹೇಂದ್ರ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.