ಸೋಮವಾರ, ಮೇ 17, 2021
27 °C

ವಾಲ್ಮೀಕಿ ಸಮುದಾಯ: ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಕೋಟೆಯಲ್ಲಿರುವ ಬಂಡಿ ಮಾಂಕಾಳಮ್ಮ ದೇಗುಲ ಮತ್ತು ಸಮುದಾಯ ಭವನ ಕಬಳಿಸಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ವಾಲ್ಮೀಕಿ ಸಮು ದಾಯದ ಒಂದು ಗುಂಪು ಮತ್ತು ಮಾಲಿಕತ್ವವನ್ನು ಪ್ರತಿಪಾದಿಸಿದ ಮತ್ತೊಂದು ಗುಂಪಿನ ನಡುವೆ ವಾಗ್ವಾದ ನಡೆದು ಉದ್ವಿಗ್ನ ಸನ್ನಿವೇಶ ನಿರ್ಮಾಣವಾದ ಘಟನೆ ಸೋಮವಾರ ನಡೆದಿದೆ.   ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಹಾಗೂ ಜಿಲ್ಲಾ ವಾಲ್ಮೀಕಿ ನಾಯಕ ಮಹಾ ಸಂಘದ ನಡುವಿನ ವಿವಾದವೇ ಈ ಘಟನೆಗೆ ಮೂಲ ಎನ್ನಲಾಗಿದೆ.ಘಟನೆ ವಿವರ: ಕಿಡಿಗೇಡಿಗಳಿಂದ ಸಮುದಾಯ ಭವನವನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ವಾಲ್ಮೀಕಿ ನಾಯಕ ಮಹಾ ಸಂಘದ ಸದಸ್ಯರು ಶಿವಾನಂದ್, ಆಂಜಿನಪ್ಪ, ಮುನಿರಾಜು, ಮುನಿಯಪ್ಪ, ವೆಂಕಟೇಶಪ್ಪ, ವೆಂಕಟಸ್ವಾಮಿ, ಕೃಷ್ಣಪ್ಪ, ಮುನಿಚೆನ್ನಪ್ಪ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಹಮ್ಮಿಕೊಂಡಿದ್ದರು. ಮಾರ್ಗಮಧ್ಯದಲ್ಲೆ ಇರುವ ಬಂಡಿಮಾಂಕಾಳಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಈ ಗುಂಪು ತೆರಳಿದ ಸಂದರ್ಭದಲ್ಲಿ, ಅಲ್ಲಿದ್ದ ಮತ್ತೊಂದು ಗುಂಪನ್ನು ಪೊಲೀಸರು ಸ್ಥಳಾಂತರಿಸಿದರು.ಪೂಜೆ ಬಳಿಕ ಪಕ್ಕದಲ್ಲೆ ಇದ್ದ ಸಮುದಾಯ ಭವನವನ್ನು ಪ್ರವೇಶಿಸಿದ ಗುಂಪು ಅಲ್ಲಿದ್ದ ಕ್ರೀಡಾ ಸಾಮಗ್ರಿಗಳನ್ನು ಧ್ವಂಸಗೊಳಿಸಿ ನಿರ್ಗಮಿಸಿದರು ಎಂಬ ಸಂಗತಿ ಸನ್ನಿವೇಶ ಪ್ರಕ್ಷುಬ್ದಗೊಳ್ಳಲು ಕಾರಣವಾಯಿತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಗುಂಪಿನ ಯತ್ನವನ್ನು ತಡೆದು ಜನರನ್ನು ಚದುರಿಸಿದರು.ನಂತರ ಸ್ಥಳಕ್ಕೆ ಬಂದ ಬಾಲಗೋವಿಂದ, ಮಂಜುನಾಥ, ಆನಂದ್, ರಾಜಣ್ಣ, ಪುರುಷೋತ್ತಂ, ನಾಗೇಶ್, ಬಾಬು, ಗೋವಿಂದಪ್ಪ ನೇತೃತ್ವದ ಮತ್ತೊಂದು ಗುಂಪಿನ ಸದಸ್ಯರು ಈ ಘಟನೆಯಿಂದ ಆಕ್ರೋಶಗೊಂಡಿತು. ಧ್ವಂಸಗೊಂಡ ಕ್ರೀಡಾ ಸಾಮಗ್ರಿಗಳನ್ನು ಬಾಲಕರ ಕಾಲೇಜು ವೃತ್ತಕ್ಕೆ ತಂದು ಹಾಕಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು. ಅದನ್ನು ತಡೆಯಲು ಬಂದ ಪೊಲೀಸರ ಜೊತೆಗೂ ವಾಗ್ವಾದ ನಡೆಸಿದರು. ನಂತರ, ದೂರು ನೀಡಲು ನಿರ್ಧರಿಸಿ ಧರಣಿಯನ್ನು ವಾಪಸ್ ಪಡೆದರು.ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್, ಎರಡೂ ಗುಂಪಿನ ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿದರು. ದೇವಾಲಯ ಮತ್ತು ಸಮುದಾಯ ಭವನವನ್ನು ವಿವಾದವಿಲ್ಲದೆ ನಿರ್ವಹಿಸಲು ಉಸ್ತುವಾರಿ ಸಮಿತಿಯೊಂದನ್ನು ರಚಿಸಿಕೊಳ್ಳಿ, ಒಂದೇ ಸಮುದಾಯ ದವರು ಹೀಗೆ ಪರಸ್ಪರ ಕಲಹದಲ್ಲಿ ಪಾಲ್ಗೊಳ್ಳುವುದು ಮನಸ್ತಾಪಕ್ಕೆ ದಾರಿ ಮಾಡುತ್ತದೆ. ಸಮುದಾಯದ ಏಳ್ಗೆಗೆ ತೊಂದರೆಯಾಗುತ್ತದೆ ಎಂದು ಸಲಹೆ ನೀಡಿದರು. ತಾತ್ಕಾಲಿಕವಾಗಿ ಭವನಕ್ಕೆ ರಕ್ಷಣೆ ನೀಡುವಂತೆ ಅವರು ಕಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ನಂತರ, ಕ್ರೀಡಾಸಾಮಗ್ರಿಗಳ ಧ್ವಂಸ ಘಟನೆಯಿಂದ ಬೇಸತ್ತಿದ್ದ ಗುಂಪು ಮತ್ತು ವಾಲ್ಮೀಕಿ ಬಂಡಿ ಮಾಂಕಾಳಮ್ಮ ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಒಟ್ಟಾಗಿ ಸಂಜೆ ವೇಳೆಗೆ ನಗರ ಠಾಣೆಗೆ ಬಂದು ದೂರು ಸಲ್ಲಿಸಿದರು.ಎಂ.ಡಿ.ಶಿವಾನಂದ, ಆಂಜಿನಪ್ಪ, ಮುನಿಯಪ್ಪ, ಮುನಯ್ಯ, ನರಸಿಂಹ, ಗೋವಿಂದಪ್ಪ, ನಾಗರಾಜ್, ಶ್ಯಾಮನಾಯಕ್ ಮತ್ತಿತರ ಕಿಡಿಗೇಡಿಗಳ ವಿರುದ್ಧ ಮತ್ತು ಅವರ ಕೃತ್ಯಕ್ಕೆ ಸಹಕರಿಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.