ಗುರುವಾರ , ಏಪ್ರಿಲ್ 22, 2021
28 °C

ವಿಜಾಪುರ ಜಿಲ್ಲೆಯಲ್ಲಿ ಬಿರುಸು ಮಳೆ: ಡೋಣಿ ನದಿಗೆ ಪ್ರವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ/ತಾಳಿಕೋಟೆ: ಜಿಲ್ಲೆಯ ವಿವಿಧೆಡೆ ಸೋಮವಾರ ಭಾರಿ ಮಳೆ ಸುರಿದ ಪರಿಣಾಮ ಡೋಣಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ತಾಳಿಕೋಟೆ ಸಮೀಪದ ಹಡಗಿನಾಳ ರಸ್ತೆಯ ನೆಲಮಟ್ಟದ ಸೇತುವೆ ಸಂಪೂರ್ಣ ಜಲಾವೃತವಾಯಿತು. ಈ ಮಾರ್ಗದಲ್ಲಿ ವಾಹನ ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿತ್ತು.ಬೆಳಿಗ್ಗೆ ತುಂತುರು, ಸಂಜೆ ಧಾರಾಕಾರ ಮಳೆಯಿಂದ ವಿಜಾಪುರ ನಗರ ದಿನದ ಮಟ್ಟಿಗೆ ಮಲೆನಾಡಿನ ಸ್ವರೂಪ ಪಡೆದುಕೊಂಡಿತ್ತು. ತಾಳಿಕೋಟೆ ಪಟ್ಟಣದಿಂದ ಹಡಗಿನಾಳ ಮಾರ್ಗವಾಗಿ ಮೂಕಿಹಾಳ, ಶಿವಪುರ, ಮುದ್ದೇಬಿಹಾಳಕ್ಕೆ ಹೋಗುವವರು ಮಂಗಳವಾರ ಬೆಳಿಗ್ಗೆ ಪ್ರವಾಹದಿಂದ ತೊಂದರೆಗೆ ಒಳಗಾದರು. ಏಕಾಏಕಿ ಬಂದ ಪ್ರವಾಹದಿಂದ ಎರಡೂ ದಡಗಳಲ್ಲಿ ಪ್ರಯಾಣಿಕರು ಮೂಕಪ್ರೇಕ್ಷಕರಾಗಿ ಪ್ರವಾಹದ ಇಳಿಯುವಿಕೆಗೆ ಕಾಯ್ದು ಕುಳಿತುಕೊಳ್ಳಬೇಕಾಯಿತು. ಬತ್ತಿಹೋಗಿದ್ದ ದೋಣಿ ನದಿಗೆ ತಾಳಿಕೋಟೆ ಹಾಗೂ ಸುತ್ತಮುತ್ತ ಸೋಮವಾರ ಸಂಜೆ ಸುರಿದ ಮಳೆಯಿಂದ  ಮತ್ತೆ ಜೀವಕಳೆ ಬಂದಿದೆ. ಡೋಣಿ ನದಿ ದಂಡೆ ಮೇಲೆ ಕತ್ತರಿಸಿ ಬಿಸಾಡಿದ್ದ ಜಾಲಿಕಂಟಿಗಳ ಪೊದೆಗಳು ಪ್ರವಾಹದ ನೀರಿನಲ್ಲಿ ತೆಪ್ಪದಂತೆ ತೇಲಿ ಹೋದವು.   ಹಡಗಿನಾಳ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿದ್ದರೂ ಅಲ್ಲಿನ ಜನತೆಗೆ ಮತ್ತೆ ದ್ವೀಪವಾಸದ ಭಯ ಕಾಡಿತು.

 

ಗ್ರಾಮಕ್ಕೆ ಡೋಣಿ ನದಿ ಪ್ರವಾಹ ತಪ್ಪಿದ್ದರೂ ಮಂಗಳವಾರ ಪುನರ್ವಸತಿ ಕೇಂದ್ರ-ಪಟ್ಟಣದ ನಡುವಿನ ಸಂಪರ್ಕ ಕಡಿತವಾಗಿತ್ತು. ಅತ್ತ ಸೋಗಲಿ ಹಳ್ಳದಲ್ಲೂ ಪ್ರವಾಹ ಬಂದಿತ್ತು. ಇನ್ನು ಮಿಣಜಗಿ ಗ್ರಾಮ ಬಳಸಿ ಬರಬೇಕೆನ್ನುವವರಿಗೆ ಎರೆಮಣ್ಣಿನ ರಸ್ತೆಯಿದ್ದು, ರಾಡಿಯಿಂದ ಅಲ್ಲೂ ಸಂಚರಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು.ಮಂಗಳವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡ 24 ಗಂಟೆಗಳಲ್ಲಿ ಸಿಂದಗಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ದೇವರ ಹಿಪ್ಪರಗಿಯಲ್ಲಿ ಅತಿ ಹೆಚ್ಚು 110.4 ಮಿ.ಮೀ. ಹಾಗೂ ಹೂವಿನ ಹಿಪ್ಪರಗಿಯಲ್ಲಿ 85.6 ಮಿ.ಮೀ. ಮಳೆಯಾಗಿದೆ.ಸಿಂದಗಿ ವರದಿ: ಸಿಂದಗಿ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಂದೀಚೆಗೆ ರಭಸದ ಮಳೆ ಸುರಿದಿದೆ. ಎಲ್ಲೆಡೆ ಭಾರಿ ಪ್ರಮಾಣದಲ್ಲಿ ನೀರು ಹರಿದಿದೆ. ಈ ಮಳೆಯಿಂದ ಬಿತ್ತನೆಗೆ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಮಂಗಳವಾರ ಸಂಜೆ ಕೂಡ ಸಿಂದಗಿ ಪಟ್ಟಣದಲ್ಲಿ ಮಳೆ ಸುರಿದಿದೆ.ಧಾರವಾಡ ವರದಿ:  ಧಾರವಾಡ ನಗರದಲ್ಲಿ ಮಂಗಳವಾರವೂ ಮಳೆ ಮುಂದುವರಿದಿದೆ. 4.2 ಮಿ.ಮೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹುಬ್ಬಳ್ಳಿಯಲ್ಲಿ ಮುಂಜಾನೆಯಿಂದ ಮೋಡ ಕವಿದ ವಾತಾವರಣವಿತ್ತಾದರೂ ಮಳೆಯಾಗಿಲ್ಲ.ಮಲೆನಾಡಿನಲ್ಲಿ ಚುರುಕುಗೊಂಡ ಮಳೆ

ಶಿವಮೊಗ್ಗ : ಕೆಲ ದಿನಗಳಿಂದ ಮುನಿಸಿಕೊಂಡಿದ್ದ ಮಳೆ ಮಂಗಳವಾರ ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಸುರಿದಿದೆ.ತೀರ್ಥಹಳ್ಳಿ, ಸಾಗರ ಮೋಡ ಮುಚ್ಚಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ. ಹೊಸನಗರದ ರಿಪ್ಪನ್‌ಪೇಟೆಯಲ್ಲಿ ನಿರಂತರವಾಗಿ ಮಳೆಯಾಗಿದೆ. ಹಾಗೆಯೇ, ಶಿವಮೊಗ್ಗ ತಾಲ್ಲೂಕಿನ ಕುಂಸಿ, ಆಯನೂರು ಭಾಗಗಳಲ್ಲಿ ಮಳೆಯಾಗಿದೆ.ದಾವಣಗೆರೆ ವರದಿ: ಜಿಲ್ಲೆಯ ಕೆಲ ಭಾಗಗಳಲ್ಲಿ ಮಂಗಳವಾರ ಸಂಜೆ ತುಂತುರು ಮಳೆಯಾಗಿದೆ. ಆದರೆ, ಬಿತ್ತನೆಗಾಗುವಷ್ಟು ಮಳೆ ಆಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.