ಗುರುವಾರ , ಆಗಸ್ಟ್ 6, 2020
27 °C

ವಿದೇಶಿ ನೌಕರಿಗೆ ವಿದಾಯ; ಕೃಷಿಯತ್ತ ಚಿತ್ತ!

ಜಡೇಕುಂಟೆ ಮಂಜುನಾಥ್ Updated:

ಅಕ್ಷರ ಗಾತ್ರ : | |

ವಿದೇಶಿ ನೌಕರಿಗೆ ವಿದಾಯ; ಕೃಷಿಯತ್ತ ಚಿತ್ತ!

ವಿದೇಶದಲ್ಲಿ ಕೈತುಂಬಾ ಸಂಬಳ. ಹೆಸರಾಂತ ಕಂಪೆನಿಗಳಲ್ಲಿ ಕೆಲಸ. ಪ್ರತಿಷ್ಠಿತರ ಪರಿಚಯ, ಸಹಪಾಠಿ ಗಳೊಂದಿಗೆ ಅತ್ಯಂತ ಸೊಗಸಾಗಿ ಜೀವನ ನಿರ್ವಹಣೆ ಮಾಡಬಹುದಾಗಿದ್ದ ಎಲ್ಲಾ ಅವಕಾಶಗಳನ್ನು ತೊರೆದು ತಾನು ಹುಟ್ಟಿ, ಬೆಳೆದ ಗ್ರಾಮೀಣ ಪ್ರದೇಶದ ತನ್ನೂರಿಗೆ ಹಿಂದಿರುಗಿ ಸಂಪೂರ್ಣ ಕೃಷಿಯಲ್ಲಿ ತೊಡಗಿರುವ ದೇವರಮರಿಕುಂಟೆಯ ಎಂಜಿನಿಯರ್ ಎಂ.ಡಿ. ತಿಪ್ಪೇಸ್ವಾಮಿ ಅವರು ನಾಲ್ಕೈದು ದೇಶಗಳಲ್ಲಿ ಕೆಲಸ ಮಾಡಿಬಂದಿದ್ದಾರೆ.ದೇವರಮರಿಕುಂಟೆಯ ಬಡ ಕುಟುಂಬದಲ್ಲಿ ಜನಿಸಿದ ತಿಪ್ಪೇಸ್ವಾಮಿ ಬಾಲ್ಯದಿಂದಲೇ ಓದುವುದರಲ್ಲಿ ಮುಂದಿದ್ದವರು. ಪಿಯು ಹೊತ್ತಿಗೆ ಧರ್ಮಸ್ಥಳ ಹತ್ತಿರದ ಉಜಿರೆಯಲ್ಲಿ ವಿದ್ಯಾಭ್ಯಾಸಕ್ಕೆ ಸೇರಿದ ಅವರು ಚಿತ್ರದುರ್ಗದ ಜೆಎಂಐಟಿಯಲ್ಲಿ ಎಲೆಕ್ಟ್ರಾನಿಕ್ಸ್ ಅ್ಯಂಡ್ ಕಮ್ಯುನಿಕೇಷನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂ.ಟೆಕ್ ಪದವಿ ಪಡೆದು ಅನೇಕ ದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ಜಪಾನ್‌ನ `ಎಪ್‌ಸಾನ್~ ಕಂಪೆನಿಯಲ್ಲಿ 3ವರ್ಷ `ನೆಟ್‌ವರ್ಕ್ ಪ್ರೋಗ್ರಾಮಿಂಗ್~, ಅಮೆರಿಕಾದ ನ್ಯೂಜೆರ್ಸಿಯ `ಮಾರ್‌ಲ್ಯಾಬ್ಸ್~ ಕಂಪೆನಿಯಲ್ಲಿ ಒಂದು ವರ್ಷ ಸೇರಿದಂತೆ ದೇಶದ ನಾನಾ ಮಹಾ ನಗರಗಳಲ್ಲಿ ಕಾರ್ಯ ನಿರ್ವಹಿಸಿ ಕೈತುಂಬಾ ಸಂಬಳ ಪಡೆದು ಉತ್ತಮ ಜೀವನ ನಿರ್ವಹಿಸುತ್ತಿದ್ದರು.ವಿದೇಶದಲ್ಲಿ ದುಡಿಯುವ ಮನೋಸ್ಥಿತಿ ಮಾತ್ರ ಇವರಿಗೆ ಹಿಡಿಸಲೇ ಇಲ್ಲ. ಅಲ್ಲಿ ದುಡಿದ ಹಣದಲ್ಲಿ ತನ್ನೂರಲ್ಲಿ ಒಂದಿಷ್ಟು ಜಮೀನು ಖರೀದಿಸಲು ತಮ್ಮ ತಂದೆಗೆ ಹೇಳಿ ಅದಕ್ಕೆ ಕೊಳವೆಬಾವಿ ಕೊರೆಸಿ ನೀರಾವರಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ಸಮ್ಮತಿಸಿದ ತಂದೆ ಮಗನ ಇಚ್ಛೆಯಂತೆ ಜಮೀನು ಕೊಂಡರು.ನಾಲ್ಕು ವರ್ಷಗಳ ಕಾಲ ವಿದೇಶದ ಜೀವನ ಸಾಕು ಎನ್ನಿಸಿ ತಾನು ಜನಿಸಿ ಊರಿಗೆ ವಾಪಸ್ ಬಂದು, 3 ವರ್ಷಗಳಿಂದ ನೀರಾವರಿ ಜಮೀನಿನಲ್ಲಿ ಶೇಂಗಾ, ರಾಗಿ, ಮೆಕ್ಕೆಜೋಳ ಬೆಳೆ ಬೆಳೆಯುವ ಜತೆಗೆ, ಹೊಸ ಪ್ರಯೋಗಗಳತ್ತ ತಮ್ಮ ಅಲೋಚನಾ ಲಹರಿಯನ್ನು ಹರಿಯ ಬಿಟ್ಟಿದ್ದಾರೆ.ಜಮೀನಿನಲ್ಲಿ ಬೆಳೆದ ಬೆಳೆಯ ತರಗೆಲೆಗಳನ್ನು, ಹೊಂಗೆ ಎಲೆಗಳನ್ನು ಟೆಟ್ರಾಪ್ಯಾಕ್‌ನಲ್ಲಿ ಹಾಕಿಟ್ಟು ಗೊಬ್ಬರ ತಯಾರಿಕೆ, ಜೈವಿಕ ಅನಿಲ ಉತ್ಪಾದನೆಗೆ ಪೂರಕವಾದ ಜತ್ರೋಪ ಸಸಿಗಳನ್ನು ತಂದು ಪೋಷಿಸುತ್ತಿದ್ದಾರೆ. ಇಷ್ಟಲ್ಲದೇ ಸರ್ಕಾರದ ವಿವಿಧ ಯೋಜನೆಗಳಲ್ಲಿ ಗ್ರಾಮೀಣ ರೈತರಿಗೆ ಲಭ್ಯವಾಗುವ ಅನೇಕ ಹೊಸಹೊಸ ಪ್ರಯೋಗಗಳನ್ನು ತಿಳಿದುಕೊಂಡು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಚಿಂತನೆಯಲ್ಲಿದ್ದಾರೆ.ಶೇಂಗಾ ಗಿಡಗಳ ಮಧ್ಯೆ ಇರುವ ಕಳೆ ಹುಲ್ಲನ್ನು ಕೀಳುವುದು, ಈಗಾಗಲೇ ಕಿತ್ತು ಹಾಕಿರುವ ಶೇಂಗಾ ರಕ್ಷಣೆಯಲ್ಲಿ ತೊಡಗಿರುವ ಅವರು ತಮ್ಮ ಜಮೀನಿನಲ್ಲಿ ಏನೆಲ್ಲಾ ಮಾಡಬೇಕು ಎಂಬ ಯೋಚನೆಯಲ್ಲಿ ಮುಳುಗಿದ್ದಾರೆ. ವಿದೇಶದಲ್ಲಿದ್ದು ಬಂದಿರುವ ಅವರಿಗೆ ಈಗಲೂ ಅನೇಕ ಕಂಪೆನಿಗಳಿಂದ ಅವಕಾಶಗಳು ಬರುತ್ತಿವೆಯಾದರೂ ಇನ್ನೂ 3 ವರ್ಷ ಅತ್ತ ಕಡೆಗೆ ಹೋಗುವುದಿಲ್ಲ ಎನ್ನುತ್ತಾರೆ.ವಿವಾಹ ಮಾಡಿಕೊಂಡು, ಜಮೀನು ಅಭಿವೃದ್ಧಿಪಡಿಸಿ ನಂತರ ನೋಡುವ ಎಂದು ನಗುತ್ತಲೇ ಹೇಳುವ ತಿಪ್ಪೇಸ್ವಾಮಿ ಅವರಲ್ಲಿ ಸ್ವಾವಲಂಬಿಯಾಗಿ ಬದುಕುವಲ್ಲಿ ಹೆಚ್ಚು ತೃಪ್ತಿ ಎಂಬುದರಲ್ಲಿ ನಂಬಿಕೆಯಿದೆ. ಸಮಾಜದಲ್ಲಿರುವ ಎಲ್ಲರೂ ಏನಾದರೂ ದುಡಿಮೆ ಮಾಡಬೇಕು. ಯಾರೊಬ್ಬರೂ ಸೋಮಾರಿಗಳಾಗಿ ಬೇರೆಯವರಿಗೆ ಹೊರೆಯಾಗಬಾರದು. ಅದ್ದರಿಂದಲೇ ನಮ್ಮ ದೇಶ ಇದುವರೆಗೂ ಹಿಂದುಳಿಯಲು ಕಾರಣವಾಗಿದೆ ಎನ್ನುತ್ತಾರೆ.ನೊಂದವರ, ಶೋಷಿತರ ಪರವಾಗಿ ಹೋರಾಡಿದ ಮಹಾತ್ಮರ ತತ್ವ, ಆದರ್ಶಗಳು ಮರೆಯಾಗುತ್ತಿರುವುದು ಬೇಸರದ ಸಂಗತಿ. ದಾರ್ಶನಿಕರು ಜಗತ್ತಿಗೆ ಸಾರಿ ಹೋದ ಸಂದೇಶಗಳು ಏನು ಎಂಬುದೇ ಸಾಕಷ್ಟು ಜನರಿಗೆ ತಿಳಿದಿಲ್ಲ. ವಿದೇಶದಲ್ಲಿದ್ದು ಬಂದರೂ ನಾನು ಹುಟ್ಟಿ, ಬೆಳೆದ ಊರಲ್ಲಿ ಇರಲು ನನಗೆ ಯಾವುದೇ ಬೇಸರ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾರೆ ಅವರು.  ಸರ್ಕಾರ ಕೊಡಮಾಡುವ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗುತ್ತಿಲ್ಲ. ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಜನರಿಗೆ ಯೋಜನೆಗಳ ಮಾಹಿತಿ ನೀಡುವುದಿಲ್ಲ. ಗೊತ್ತಿರುವವರು ಹೋಗಿ ಕೇಳಿದರೆ ಸಬೂಬು ಹೇಳುತ್ತಾರೆ ಎಂದು ಬೇಸರದಿಂದ ನುಡಿಯುತ್ತಾರೆ.ತೋಟಗಾರಿಕೆ ಬೆಳೆಗಳಿಗೆ ನೀಡುವ ಸಬ್ಸಿಡಿ, ಕೃಷಿ ಪರಿಕರಗಳ ವಿತರಣೆ ಇಂತಹ ಯಾವುದೇ ಮಾಹಿತಿ ಜನರಿಗೆ ಲಭ್ಯವಾಗುವುದೇ ಇಲ್ಲ ಎನ್ನುತ್ತಾರೆ. ಸೌಲಭ್ಯ ಪಡೆದವರೇ ಮತ್ತೆ ಮತ್ತೆ ಫಲಾನುಭವಿಗಳಾಗುತ್ತಿದ್ದಾರೆ ಎಂಬ ಸತ್ಯವನ್ನೂ ಅವರು ಹೊರಗೆಡವುತ್ತಾರೆ.ಬಯಲುಸೀಮೆಯಲ್ಲಿ ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳ ಕಡೆಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಸರ್ಕಾರ ಹಾಗೂ ಇಲಾಖೆಗಳ ಪ್ರೋತ್ಸಾಹ ಬೇಕು. ಮಳೆ ಇಲ್ಲದೇ ತತ್ತರಿಸಿರುವ ಗ್ರಾಮೀಣ ಜನರಿಗೆ ಸರ್ಕಾರ ಏನಾದರೂ ಪರಿಹಾರ ನೀಡುವ ಯೋಚನೆ ಮಾಡಬೇಕು. ಆ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕು ಎನ್ನುತ್ತಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.