ಶುಕ್ರವಾರ, ಮೇ 14, 2021
25 °C

ವಿವಾಹ ನೋಂದಣಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರ್ ಧರ್ಮೀಯ ವಿವಾಹಗಳಿಗೆ ಕಾನೂನಿನ ರಕ್ಷಣೆ ನೀಡಲು ಮತ್ತು ಎಲ್ಲ ವಿವಾಹಗಳ ನೋಂದಣಿಯನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 1969ರ ಜನನ, ಮರಣ ಕಾಯಿದೆಯ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

 

ಇದು ಅತ್ಯಂತ ಮಹತ್ವದ ತೀರ್ಮಾನ. ತಿದ್ದುಪಡಿ ಮಸೂದೆ ಸದ್ಯವೇ ಸಂಸತ್ತಿನ ಮುಂದೆ ಮಂಡನೆಯಾಗಲಿದೆ. ಮಸೂದೆಗೆ ಒಪ್ಪಿಗೆ ಸಿಕ್ಕ ನಂತರ ದೇಶದಲ್ಲಿ ನಡೆಯುವ ಎಲ್ಲ ವಿವಾಹಗಳ ನೋಂದಣಿ ಕಡ್ಡಾಯವಾಗಲಿದೆ.

 

ವಿವಾಹಗಳು ನೋಂದಣಿಯಾದರೆ ಅವು ಕಾನೂನಿನ ಪ್ರಕಾರ ಊರ್ಜಿತವಾದಂತೆ. ಕುಟುಂಬದ ಚೌಕಟ್ಟಿನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಕಾನೂನು ಬಳಸಿ ತಡೆಯಲು ಹೆಚ್ಚಿನ ಅವಕಾಶ ಸಿಗಲಿದೆ.ವಿವಾಹ, ವಿಚ್ಛೇದನದಲ್ಲಿ ಪರ್ಯವಸಾನವಾದರೂ ಕಾನೂನು ಪ್ರಕಾರ ಮಹಿಳೆ ತನ್ನ ಗಂಡನಿಂದ ಪರಿಹಾರ ಪಡೆಯುವುದು ಸುಲಭವಾಗುತ್ತದೆ. ಈ ದೃಷ್ಟಿಯಿಂದ ತಿದ್ದುಪಡಿ ಮಸೂದೆ ಅತ್ಯಂತ ಪ್ರಗತಿಪರವಾದದ್ದು. ದೇಶದ ಧಾರ್ಮಿಕ ಅಲ್ಪ ಸಂಖ್ಯಾತರು `ಧರ್ಮ ತಟಸ್ಥ~ ವಿವಾಹ ನೋಂದಣಿಗಾಗಿ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದರು.ಇನ್ನುಮುಂದೆ ಅವರು ನೋಂದಣಿಗಾಗಿ ಸಲ್ಲಿಸುವ ಅರ್ಜಿಯಲ್ಲಿ ಧರ್ಮದ ಹೆಸರನ್ನು ದಾಖಲಿಸುವ ಅಗತ್ಯವಿಲ್ಲ. ಅರ್ಜಿ ಫಾರಂನಲ್ಲಿ ಧರ್ಮದ ಕಾಲಂ ಇರುವುದಿಲ್ಲ. ಎಲ್ಲ ಬಗೆಯ ವಿವಾಹಗಳ ನೋಂದಣಿ ಕಡ್ಡಾಯವಾದರೆ ದೇಶದಲ್ಲಿ ನಡೆಯುವ ಒಟ್ಟಾರೆ ವಿವಾಹಗಳ ಸಂಖ್ಯೆ ಎಷ್ಟು ಎಂಬ ಲೆಕ್ಕವೂ ಸರ್ಕಾರಕ್ಕೆ ಸಿಗಲಿದೆ.ತಿದ್ದುಪಡಿ ಮಸೂದೆಯ ಅನುಕೂಲಗಳು ಏನೇ ಇರಲಿ, ಅಂತರ್‌ಧರ್ಮೀಯರೂ ಸೇರಿದಂತೆ ಎಲ್ಲ ಮಹಿಳೆಯರಿಗೆ ಕಾನೂನಿನ ರಕ್ಷಣೆ ನೀಡುವ ದೃಷ್ಟಿಯಲ್ಲಿ ಈ ತಿದ್ದುಪಡಿ ಅತ್ಯಂತ ಸ್ವಾಗತಾರ್ಹ.ದೇಶದಲ್ಲಿ ನಡೆಯುವ ಎಲ್ಲ ವಿವಾಹಗಳನ್ನು ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ 2006ರಲ್ಲಿಯೇ ಆದೇಶ ನೀಡಿತ್ತು. ಆದರೆ ಅಂತರ್‌ಧರ್ಮೀಯರ ನಡುವೆ ವಿವಾಹಗಳನ್ನು ನೋಂದಣಿ ಮಾಡಲು ಈಗಿನ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈ ವಿವಾಹಗಳನ್ನೂ ಹಿಂದೂ ವಿವಾಹ ಕಾಯಿದೆ ಅಡಿಯಲ್ಲಿ ಮಾತ್ರವೇ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮುಂದುವರಿದಿತ್ತು.

 

ಹಿಂದೂ ವಿವಾಹ ಕಾಯಿದೆ ಅಡಿಯಲ್ಲಿ ನೋಂದಣಿ ಆದ ಅಂತರ್‌ಧರ್ಮೀಯರ  ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ವಯಸ್ಸಿನ ನಿರ್ಧಾರ ಮತ್ತಿತರ ವಿಷಯಗಳ ಇತ್ಯರ್ಥಕ್ಕೆ ಹಲವಾರು ಅಡಚಣೆಗಳಿದ್ದವು. ತಿದ್ದುಪಡಿಯ ನಂತರ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಸರ್ಕಾರ ವಿವಾಹ ನೋಂದಣಿ ಕಡ್ಡಾಯಗೊಳಿಸುವ ಕಾನೂನು ರೂಪಿಸಿದರೆ ಸಾಲದು. ಅದನ್ನು ಜಾರಿಯಲ್ಲಿ ತರುವುದು ಬಹಳ ಮುಖ್ಯ.

 

ವಿವಾಹ ನೋಂದಣಿ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಮಹಿಳಾ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಸರ್ಕಾರದ ಜತೆಯಲ್ಲಿ ಕೈಜೋಡಿಸಬೇಕು.ಕುಟುಂಬ ದೌರ್ಜನ್ಯಗಳು ಹಾಗೂ ವಿಚ್ಛೇದನ ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಾಗ `ವಿವಾಹ ಆಗಿಯೇ ಇಲ್ಲ~ ಎಂದು ಹೇಳಿ ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳುವ ಪ್ರಯತ್ನಗಳಿಂದ ಮಹಿಳೆಯರಿಗೆ ಅನ್ಯಾಯವಾಗುತ್ತಿತ್ತು. ಇನ್ನು ಮುಂದೆ ಅದಕ್ಕೆ ಅವಕಾಶ ಇರುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.