ಭಾನುವಾರ, ಆಗಸ್ಟ್ 9, 2020
22 °C

ಶಂಕರ ಭಟ್‌ಗೆ ಪಂಪ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಭಾಷಾ ವಿಜ್ಞಾನಿ  ಡಾ.ಡಿ.ಎನ್‌.  ಶಂಕರ ಭಟ್‌  ಅವರು 2012ನೇ  ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.ಭಾಷಾ ಶಾಸ್ತ್ರಜ್ಞನಿಗೆ ಸಂದ ಗೌರವ (ಸಾಗರ ವರದಿ): ಮೂಲತ ಪುತ್ತೂರು ತಾಲ್ಲೂ ಕಿನ ಬೆಟ್ಟಪಾಡಿ ಗ್ರಾಮದವ ರಾಗಿರುವ 78 ವರ್ಷದ ಶಂಕರ ಭಟ್‌, ತಾಲ್ಲೂಕಿನ ಹಳೆ ಹೆಗ್ಗೋಡು ಗ್ರಾಮದಲ್ಲಿ ನೆಲೆಸಿದ್ದಾರೆ.

ಮಂಗಳೂರಿನ ಸೇಂಟ್‌ ಅಲೋ ಷಿಯಸ್‌ ಕಾಲೇಜಿನಲ್ಲಿ ಇಂಟರ್‌ ಮೀಡಿ ಯಟ್‌ ಮುಗಿಸಿದ ಅವರು ಚೆನ್ನೈನ (ಆಗಿನ ಮದರಾಸು) ವಿವೇಕಾ ನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂ.ಎ ಪದವಿ ಪೂರೈಸಿದರು. ನಂತರ ಪುಣೆಯ ಪೂನಾ ವಿಶ್ವವಿದ್ಯಾ ಲಯದಲ್ಲಿ ಭಾಷಾ ಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿ ಗಳಿಸಿದರು.

‘ಕನ್ನಡ ನುಡಿ ನಡೆದು ಬಂದ ದಾರಿ’, ‘ಕನ್ನಡಕ್ಕೆ ಬೇಕು ಕನ್ನಡ ವ್ಯಾಕರಣ’ ‘ಭಾಷೆಯ ಬಗ್ಗೆ ನೀವೇನು ಬಲ್ಲಿರಿ’ ‘ಕನ್ನಡ ಬರಹವನ್ನು ಸರಿಪಡಿಸೋಣ’, ‘ಮಾತಿನ ಒಳಗುಟ್ಟು’, ‘ಇಂಗ್ಲೀಷ್‌ ಪದಗಳಿಗೆ ಕನ್ನಡದ್ದೆ ಪದಗಳು’,  ‘ಕನ್ನಡ ಬರಹದ ಸೊಲ್ಲರಿಮೆ’ ಸೇರಿದಂತೆ 77ಕ್ಕೂ ಹೆಚ್ಚು ಕೃತಿಗಳನ್ನು ಶಂಕರ ಭಟ್‌ ರಚಿಸಿದ್ದಾರೆ.

ಶಂಕರ ಭಟ್‌ ಅವರ ‘ಪ್ರನೌನ್‌-ಎ ಲಿಂಗ್ವಿಸ್ಟಿಕ್‌ ಸ್ಟಡಿ’ ಎಂಬ ಕೃತಿಯನ್ನು ಆಕ್ಸ್‌ ಪರ್ಡ್‌ ಪ್ರಕಾಶನ ಪ್ರಕಟಿಸಿದೆ. ‘ಗ್ರಮ್ಯಾಟಿಕಲ್‌ ರಿಲೇಷನ್ಸ್‌’ ಎಂಬ ಕೃತಿಯನ್ನು ಲಂಡನ್‌ ಹಾಗೂ ನ್ಯೂಯಾರ್ಕ್‌ನ ಪ್ರಕಾಶನ ಸಂಸ್ಥೆಗಳು ಹೊರ ತಂದಿದ್ದರೆ, ‘ಮಣಿ ಪುರಿ ಗ್ರಾಮರ್‌’ ಕೃತಿಯನ್ನು ಜರ್ಮನಿಯ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಹಾಲೆಂಡ್‌, ಸಿಂಗಪುರಗಳ ಪ್ರಕಾಶನ ಸಂಸ್ಥೆಗಳೂ ಇವರ ಕೃತಿಗಳನ್ನು ಹೊರ ತಂದಿವೆ.

ಮೈಸೂರಿನಲ್ಲಿ ಸ್ವಂತ ಮನೆ ಹೊಂದಿದ್ದರೂ ಬರವಣಿಗೆ ಹಾಗೂ ಸಂಶೋಧನೆಗೆ ಪ್ರಶಾಂತ ವಾತಾವರಣ ಬೇಕು ಎನ್ನುವ ಕಾರಣಕ್ಕೆ ಶಂಕರ ಭಟ್‌, ಕಳೆದ ಹತ್ತು ವರ್ಷ ಗಳಿಗೂ ಹೆಚ್ಚು ಕಾಲದಿಂದ ಹಳೆ ಹೆಗ್ಗೋಡು ಗ್ರಾಮದಲ್ಲಿ ಪತ್ನಿ ಭಾರತಿ ಭಟ್‌ ಅವರೊಂದಿಗೆ ನೆಲೆಸಿದ್ದಾರೆ. ಕೆಲವು ಕಾಲ ಕುಪ್ಪಳ್ಳಿ, ಹುಂಚ, ಆರಗ ಗ್ರಾಮಗಳಲ್ಲಿ ನೆಲೆಸಿದ್ದ ಅವರು ಈಚೆಗೆ ಮತ್ತೆ ಇದೇ ತಾಲ್ಲೂಕಿನ ಮುಂಗರವಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ.

2010ನೇ ಸಾಲಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಶಂಕರ ಭಟ್ ಅವರಿಗೆ ನಾಡೋಜ ಗೌರವ ಪ್ರದಾನ ಮಾಡಿತ್ತು. ಸದ್ಯಕ್ಕೆ ಭಟ್‌ ಅವರು ‘ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟುವ ಬಗೆ’ ಎನ್ನುವ ಕೃತಿ ರಚನೆಯಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.