ಶನಿವಾರ, ಜೂಲೈ 11, 2020
28 °C

ಶಬರಿಮಲೆ: 102ಕ್ಕೆ ಏರಿದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಂಡಿಪೆರಿಯಾರ್ (ಕೇರಳ):  ಶಬರಿಮಲೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ ಶನಿವಾರ 102ಕ್ಕೆ ಏರಿದ್ದು, 50 ಮಂದಿ ಗಾಯಗೊಂಡಿದ್ದಾರೆ.ಮೃತರಲ್ಲಿ 70ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಲಾಗಿದೆ. ಇವರಲ್ಲಿ ಕರ್ನಾಟಕದ 33 ಭಕ್ತರು ಸೇರಿದ್ದಾರೆ. ಜೊತೆಗೆ ಶ್ರೀಲಂಕಾದ ಒಬ್ಬ ಮಹಿಳೆ, ತಮಿಳುನಾಡಿನ 31, ಆಂಧ್ರ ಪ್ರದೇಶದ 20 ಮಂದಿ, ಕೇರಳದ ಐವರು ಹಾಗೂ ಪುದುಚೇರಿಯ ಇಬ್ಬರು ನತದೃಷ್ಟರಾಗಿದ್ದಾರೆ.ಮೃತದೇಹಗಳನ್ನು ಮೊದಲು ವಂಡಿಪೆರಿಯಾರ್ ಸರ್ಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ, ಘಟನಾ ಸ್ಥಳದಿಂದ 15 ಕಿ.ಮೀ ದೂರದಲ್ಲಿರುವ ಇಡುಕ್ಕಿ ಜಿಲ್ಲೆಯ ಕುಮಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ 60 ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿತು. ಗಂಭೀರ ಗಾಯಾಳುಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ, ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಕಾಲ್ತುಳಿತ ಘಟನೆಯ ಬಗ್ಗೆ ಶನಿವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.ದಿಢೀರ್ ಬದಲಾದ ಚಿತ್ರಣ: ವಂಡಿಪೆರಿಯಾರ್ ಪಟ್ಟಣದಿಂದ 10 ಕಿ.ಮೀ ದೂರದಲ್ಲಿರುವ ‘ಪುಲ್‌ಮೇಡು’ ಅರಣ್ಯಕ್ಕೆ ಸೇರಿದ ಘಟನಾ ಸ್ಥಳ ಬಹುತೇಕ ಮೈದಾನದಂತಿದ್ದು ‘ಮಕರ ಜ್ಯೋತಿ’ ದರ್ಶನಕ್ಕೆ ಪ್ರಶಸ್ತವಾಗಿದೆ. ದಟ್ಟ ಹುಲ್ಲುಗಾವಲಿನಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಕರಾಳ ರಾತ್ರಿ ಹಿಂದೆಂದೂ ಇಲ್ಲದಷ್ಟು ಸಂಖ್ಯೆಯಲ್ಲಿ ಜನಜಾತ್ರೆ ನೆರೆದಿತ್ತು.ಅಲ್ಲಲ್ಲಿ ಗುಂಪುಗೂಡಿದ್ದ ಭಕ್ತರು ಸಂಜೆ ದೇವರನಾಮ ಜಪಿಸಿ ಕರ್ಪೂರದ ಆರತಿ ಬೆಳಗುತ್ತಾ ಭಾವಪರವಶರಾಗಿದ್ದರು. ಬಳಿಕ ಬಹು ನಿರೀಕ್ಷಿತ ‘ಮಕರ ಜ್ಯೋತಿ’ಯನ್ನು ಕಂಡ ಮೇಲಂತೂ ಅವರ ಭಕ್ತಿಯ ಪರಾಕಾಷ್ಠೆ ಮುಗಿಲುಮುಟ್ಟಿತ್ತು. ಮೂರು ತಿಂಗಳ ಕಟ್ಟುನಿಟ್ಟಿನ ವ್ರತಾಚರಣೆ ‘ಮಕರ ಜ್ಯೋತಿ’ ದರ್ಶನದಿಂದ ಸುಗಮವಾಗಿ ಕೊನೆಗೊಂಡದ್ದರಿಂದ ಪ್ರಸನ್ನಚಿತ್ತವಾಗಿದ್ದ ಭಕ್ತ ಸಮೂಹ ಮರುದಿನದ ‘ಪೊಂಗಲ್’ ಹಬ್ಬಕ್ಕಾಗಿ ಮನೆಗೆ ತೆರಳುವ ಧಾವಂತದಲ್ಲಿತ್ತು.ಆದರೆ ಈ ಧಾರ್ಮಿಕ ಸಂಭ್ರಮಕ್ಕೆಲ್ಲಾ ಖುದ್ದು ಸಾಕ್ಷಿಯಾಗಿದ್ದ ಆ ಪವಿತ್ರ ಸ್ಥಳದಲ್ಲಿ ಎಲ್ಲೋ ಅಡಗಿ ಕುಳಿತಂತಿದ್ದ ಜವರಾಯ ದಿಢೀರನೆ ಅಟ್ಟಹಾಸ ಮೆರೆದಿದ್ದ. ಕೆಲವೇ ಕ್ಷಣಗಳಲ್ಲಿ ಇಡೀ ಚಿತ್ರಣ ಬದಲಾಯಿತು. ನೂಕುನುಗ್ಗಲಿನ ಆರ್ಭಟಕ್ಕೆ ಜನ ದಿಕ್ಕಾಪಾಲಾದರು. ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದವರ ಬಾಯಲ್ಲಿ ಹೊರಟ ‘ಅಯ್ಯಯ್ಯೋ’ ಎಂಬ ಆರ್ತನಾದಕ್ಕೆ ಗಿರಿಯಲ್ಲಿ ಕುಳಿತ ಸ್ವಾಮಿ ಅಯ್ಯಪ್ಪನೂ ಕರಗಲಿಲ್ಲ. ಕ್ಷಣಮಾತ್ರದಲ್ಲಿ ನಲುಗಿಹೋದ ಆ ಸ್ಥಳದಲ್ಲಿ ನಂತರ ಕಂಡದ್ದು ಮಬ್ಬುಗತ್ತಲಿನಲ್ಲಿ ಅನಾಥವಾಗಿ ಬಿದ್ದಿದ್ದ ಶವಗಳು ಮತ್ತು ಕೆಲ ಗಾಯಾಳುಗಳು ಮಾತ್ರ.ಅಯ್ಯಪ್ಪ ಭಕ್ತರನ್ನು ಸಂಕೇತಿಸುವ ಕಪ್ಪು, ನೀಲಿ, ಕೇಸರಿ ಬಣ್ಣದ ವಸ್ತ್ರಗಳು, ಮನೆಗೆ ಕೊಂಡೊಯ್ಯಲು ಬಟ್ಟೆಯ ಚೀಲದಲ್ಲಿ ಅವರು ಇರಿಸಿಕೊಂಡಿದ್ದ ಪ್ರಸಾದ, ಮಣಿಮಾಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಹೃದಯ ಕಲಕುವಂತಿತ್ತು.‘ನನ್ನ ಜೀವನದಲ್ಲಿ ಅಷ್ಟೊಂದು ಜನದಟ್ಟಣೆಯನ್ನು ನಾನು ಕಂಡೇ ಇರಲಿಲ್ಲ’ ಎಂದು ಅರಣ್ಯಕ್ಕೆ ಸಮೀಪದ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ರಾತ್ರಿ 8.15ರಲ್ಲಿ ದುರಂತ ಘಟಿಸಿದ್ದರೂ ಅತ್ಯಂತ ದುರ್ಗಮ ಪ್ರದೇಶವಾದ ಇಲ್ಲಿಂದ ಮೊಬೈಲ್ ಸಂಪರ್ಕ ಸಿಗುವುದು ಸಹ ಸಾಧ್ಯವಿರಲಿಲ್ಲ. ಇದರಿಂದಾಗಿ ಘಟನೆ ನಡೆದು ಎರಡು ಗಂಟೆಗಳ ಬಳಿಕವಷ್ಟೇ ಹೊರಜಗತ್ತಿಗೆ ವಿಷಯ ತಿಳಿಯಿತು. ಹೆಚ್ಚಿನ ಸಂಖ್ಯೆಯ ಭಕ್ತರು ಪಂಪ ಮಾರ್ಗದಲ್ಲಿ ಹಿಂದಿರುಗುವುದರಿಂದ ಇಲ್ಲಿಗಿಂತ ಅಲ್ಲಿ ಭದ್ರತಾ ವ್ಯವಸ್ಥೆಗೆ ಹೆಚ್ಚು ಗಮನ ಕೇಂದ್ರೀಕರಿಸಲಾಗಿತ್ತು. ಈ ಪ್ರದೇಶದಲ್ಲಿದ್ದ ಬೆರಳೆಣಿಕೆಯ ಪೊಲೀಸರಿಗೆ ಜನರನ್ನು ನಿಯಂತ್ರಿಸುವುದು ದುಸ್ಸಾಧ್ಯವಾಯಿತು.ಆಪ್ತೇಷ್ಟರನ್ನು ಹುಡುಕುತ್ತಾ...: ಈ ನಡುವೆ, ಮನೆಗೆ ಹಿಂದಿರುಗದ ಭಕ್ತರ ಸಂಬಂಧಿಕರು ವಿವಿಧ ರಾಜ್ಯಗಳಿಂದ ಬಂದು ತಮ್ಮವರನ್ನು ಅರಸುತ್ತಾ ಮೃತದೇಹಗಳನ್ನು ಇರಿಸಿರುವ ಮತ್ತು ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.   ಮಾಲೆ ಧರಿಸಿದ ದಿನದಿಂದಲೂ ತಮ್ಮೊಂದಿಗೇ ಇದ್ದವರಿಗೆ ಕೊನೇ ಕ್ಷಣದಲ್ಲಿ ಒದಗಿದ ದುರ್ಗತಿಯನ್ನು ಕಂಡು ತಂಡದಲ್ಲಿ ಬಂದಿದ್ದವರು ಕಂಗೆಟ್ಟಿದ್ದಾರೆ. ಇನ್ನು ಕೆಲವರು ತಮ್ಮವರು ಬದುಕುಳಿದಿರುವುದು ಖಚಿತವಾಗುತ್ತಿದ್ದಂತೆಯೇ ನಿಟ್ಟುಸಿರು ಬಿಡುತ್ತಿದ್ದಾರೆ. ಇದೇ ರೀತಿ 23 ವರ್ಷದ ಯುವಕನೊಬ್ಬನನ್ನು ಕಳೆದುಕೊಂಡ ಕರ್ನಾಟಕದ ತಂಡವೊಂದರ ದುಃಖದ ಕಟ್ಟೆಯೂ ಒಡೆದಿತ್ತು.‘ಮಕರ ಜ್ಯೋತಿ ನೋಡಿ ವಾಪಸಾಗುತ್ತಿದ್ದ ನಮಗ್ಯಾರಿಗೂ ದುರ್ವಿಧಿ ನಮ್ಮನ್ನೇ ಹಿಂಬಾಲಿಸಿ ಬರುತ್ತಿದೆ ಎಂಬುದು ತಿಳಿಯಲೇ ಇಲ್ಲ’ ಎನ್ನುತ್ತಾರೆ 38 ವರ್ಷದ ವೆಂಕಪ್ಪ. ಈ ತಂಡ ಸೇತುವೆಯೊಂದರ ಬಳಿ ನಿಂತಿತ್ತು. ಮೊದಲು ಏನೋ ಸ್ವಲ್ಪ ಗದ್ದಲ ನಡೆಯುತ್ತಿದೆ ಎಂದುಕೊಂಡ ಸದಸ್ಯರಿಗೆ ಪರಿಸ್ಥಿತಿ ಕೈಮೀರಿದ್ದು ನಂತರವಷ್ಟೇ ತಿಳಿಯಿತು. ಆದರೆ ಅದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಆಘಾತ ಅವರಿಗಾಗಿ ಕಾಯ್ದಿತ್ತು. ತಂಡದ ಹನುಮಂತ ಗೌಡ ಪಟೇಲ್ (23) ಕೊನೆಯುಸಿರೆಳೆದಿದ್ದರು. ತಮಿಳುನಾಡು ತಂಡವೊಂದರ ಅನುಭವ ಇದಕ್ಕೆ ವ್ಯತಿರಿಕ್ತವಾಗಿತ್ತು. ದುರಂತ ಘಟಿಸಿದಾಗಿನಿಂದ ಕಳೆದುಹೋಗಿದ್ದ 9 ವರ್ಷದ ಬಾಲಕನನ್ನು ಆಸ್ಪತ್ರೆಯಲ್ಲಿ ಕಂಡಾಗ ಸದಸ್ಯರ ಕಣ್ಣಾಲಿಗಳು ತುಂಬಿಬಂದಿದ್ದವು.(ಬಾಲ ಭಕ್ತರನ್ನು ಸ್ವಾಮಿ ಅಯ್ಯಪ್ಪನ ಬಾಲ್ಯದ ಹೆಸರಾದ ‘ಮಣಿಕಂಠ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ) ‘ಸಂಬಂಧಿಕರಿಗೆ ನೆರವಾಗಲು ಮೃತರ ಚಿತ್ರ ಹಾಗೂ ಇತರ ವಿವರಗಳನ್ನು ಒದಗಿಸಲಾಗುತ್ತಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಾಕೊಬ್ ಪುನ್ನೂಸ್ ತಿಳಿಸಿದ್ದಾರೆ. ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಉಮೇಶ್ ಕತ್ತಿ ಇಡುಕ್ಕಿ ಜಿಲ್ಲೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.